ಪಂಚತೀರ್ಥ

ಚಿಕ್ಕಮಗಳೂರು ಜಿಲ್ಲೆ ಕಳಸದಿಂದ 3 ಕಿ.ಮೀ. ಅಂತರದಲ್ಲಿರುವ ಭದ್ರಾ ತೀರದ ಅಂಬುತೀರ್ಥ ಮನಮೋಹಕ, ರಮಣೀಯ ತಾಣ. ಹೊರನಾಡು, ಶೃಂಗೇರಿಗಳಿಗೆ ಭೇಟಿ ನೀಡಿ ಕಳಸೇಶ್ವರಸ್ವಾಮಿ ದರ್ಶನ ಮಾಡುವ ಭಕ್ತರು ಸಮೀಪವೇ ಇರುವ ಈ ಪಂಚತೀರ್ಥಕ್ಕೆ ಭೇಟಿ ನೀಡದಿದ್ದರೆ ಪವಿತ್ರ ಕ್ಷೇತ್ರ ದರ್ಶನದಿಂದ ವಂಚಿತರಾಗುವುದಂತೂ ದಿಟ.
ಸುಮಾರು 5 ಸಾವಿರ ವರ್ಷಗಳ ಹಿನ್ನೆಲೆಯಿರುವ ಕಳಸ ಕ್ಷೇತ್ರ ಮಹಾಮುನಿ ಅಗಸ್ತ್ಯ ಕ್ಷೇತ್ರವೆನಿಸಿದೆ. ಸ್ವಯಂಭು ಕಳಸೇಶ್ವರಸ್ವಾಮಿ ದೇಗುಲ ಹೊಂದಿದ ಖ್ಯಾತಿ. ಕುದುರೆಮುಖ ಬಳಿಯ ಗಂಗಾಮೂಲವೆಂಬ ಪವಿತ್ರ ತಾಣದಲ್ಲಿ ತುಂಗಾ, ಭದ್ರಾ ಹಾಗೂ ನೇತ್ರಾವತಿ ನದಿಗಳು ಉಗಮವಾಗುತ್ತವೆ. ತುಂಗೆಯು ಮುಂದೆ ಸಾಗಿ ಹನುಮನಗುಂಡಿ, ಸುತನಬ್ಬಿ ಜಲಪಾತಗಳನ್ನು ಸೃಷ್ಟಿಸಿ ಶೃಂಗೇರಿಯತ್ತ ಸಾಗಿದರೆ, ನೇತ್ರಾವತಿ ನದಿಯು ಕಾರ್ಕಳದತ್ತ ಮುಖತೋರಿ ಧರ್ಮಸ್ಥಳದತ್ತ ಸಾಗುತ್ತಾಳೆ. ಭದ್ರಾ ನದಿಯು ಕುದುರೆಮುಖ, ಕಳಸ ಹಾದಿಯ ಸಹ್ಯಾದ್ರಿ ಪರ್ವತ ಪ್ರದೇಶಗಳ ಕಣಿವೆಗಳಲ್ಲಿ ಸಾಗುತ್ತಾಳೆ.
ಹೀಗೆ ಕಳಸದ ಬಳಿ ಸಾಗುವಾಗ ಅಂಬುತೀರ್ಥ (ಅಂಬಾತೀರ್ಥ ಹಾಗೂ ಮಾತೃಕಾತೀರ್ಥವೆಂದೂ ಹೇಳುತ್ತಾರೆ), ರುದ್ರತೀರ್ಥ, ಕೋಟಿತೀರ್ಥ, ನಾಗತೀರ್ಥ ಹಾಗೂ ವಸಿಷ್ಠ ತೀರ್ಥಗಳಾಗಿ ಹರಿಯುತ್ತಾಳೆ. ಈ ಪಂಚತೀರ್ಥಗಳಲ್ಲಿ ಅಂಬುತೀರ್ಥವು ಪರಶುರಾಮ ಕ್ಷೇತ್ರವಾಗಿರುವುದರಿಂದ ಐತಿಹಾಸಿಕ ವಿಶಿಷ್ಟ ಸ್ಥಾನ ಹೊಂದಿದೆ. ಇನ್ನು ಭದ್ರೆ ಹರಿಯುವೆಡೆಯಲ್ಲೂ ನಿಸರ್ಗ ಸೌಂದರ್ಯ ಮನ ಸೆಳೆಯುತ್ತದೆ. ಬೃಹತ್ ಬಂಡೆಗಳಲ್ಲಿನ ರಂಧ್ರಗಳು ವಿಸ್ಮಯ ಮೂಡಿಸುವಂಥವು. ರಾಮಾಯಣ ಮತ್ತು ಮಹಾಭಾರತದ ಕಥೆಗಳಿಂದಲೂ ಈ ತಾಣ ಕುತೂಹಲವೆನಿಸುತ್ತದೆ.
ಇನ್ನು ಮಧ್ವಾಚಾರ್ಯರು ಇಲ್ಲಿನ ಗೋಳಾಕೃತಿಯ ಬಂಡೆಯಲ್ಲಿ ಶಾಸನವೊಂದನ್ನು ರಚಿಸಿದ್ದಾರೆ. ಅಲ್ಲದೆ, ಇಲ್ಲಿಯ ಹಾಸು ಬಂಡೆಗಳಲ್ಲಿ ಭಕ್ತರು ಶಿರಸಾಷ್ಟಾಂಗ ಮಾಡುತ್ತಿರುವ ಕೆತ್ತನೆಯೂ ಕಾಣಬಹುದು. ಹೊರನಾಡು, ಶೃಂಗೇರಿಗೆ ಭೇಟಿ ನೀಡುವ ಭಕ್ತರು ಕಳಸೇಶ್ವರ ಸನ್ನಿಧಿ, ಭದ್ರಾತೀರದ ಅಂಬುತೀರ್ಥಕ್ಕೆ ಭೇಟಿ ನೀಡದಿದ್ದರೆ ಪ್ರವಾಸ ಅಪೂರ್ಣವೆನಿಸದೆ ಇರದು. ಅಂಥ ಮಹತ್ವ ಹಾಗೂ ರಮಣೀಯ ತಾಣ ಅಂಬಾತೀರ್ಥ. ಅಕ್ಟೋಬರ್‌ನಿಂದ ಏಪ್ರಿಲ್‌ವರೆಗೂ ಇಲ್ಲಿ ಪ್ರಾಕೃತಿಕ ಸೊಬಗು ಸವಿಯಲು ಸಕಾಲ.
ಹೀಗೆ ಬನ್ನಿ
ಮೂಡಿಗೆರೆ ತಾಲೂಕಿನ ಕುದುರೆಮುಖದಿಂದ 20 ಕಿ.ಮೀ. ಕಳಸದಿಂದ ಹೊರನಾಡಿಗೆ 8 ಕಿ.ಮೀ. ಕಳಸದಿಂದ ಹೊರನಾಡಿಗೆ ಹೋಗುವ ಹಾದಿಯಲ್ಲಿ 2 ಕಿ.ಮೀ. ಕ್ರಮಿಸಿದರೆ ಎಡಕ್ಕೆ ಅಂಬಾತೀರ್ಥಕ್ಕೆ ದಾರಿ ಎಂಬ ನಾಮಫಲಕ ಕಾಣುತ್ತದೆ. ಪುನಃ ಇಲ್ಲಿನ ಕಚ್ಚಾ ರಸ್ತೆಯಲ್ಲಿ 1 ಕಿ.ಮೀ. ಕ್ರಮಿಸಿದರೆ ಭದ್ರಾತೀರದ ಮಾತೃಕಾತೀರ್ಥವನ್ನು ಸಮೀಪಿಸಬಹುದು.
ಚಿತ್ರ-ಲೇಖನ: ವಿ.ಎಸ್. ಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


