ಟಾಟಾ ವಿಸ್ತಾ ನಯಾ ರಸ್ತಾ

ಇತ್ತೀಚೆಗೆ ವಿಸ್ತಾ ಡಿ-90 ಮಾಡೆಲ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಟಾಟಾ, ವಿಸ್ತಾ ಎಕ್ಸ್‌ಟ್ರೀಮ್ ಕಾರಿನ ಕಾನ್ಸೆಪ್ಟ್ ಅನ್ನೂ ಮುಂದಿಟ್ಟಿದೆ. ಅಲ್ಲಿಗೆ ತನ್ನ ಯಶಸ್ವಿ ವಿಸ್ತಾ ಬ್ರಾಂಡನ್ನು ಮತ್ತಷ್ಟು ವರ್ಷಗಳ ಕಾಲ ಮುಂದುವರಿಸುವ ಸ್ಪಷ್ಟ ಸೂಚನೆ ನೀಡಿದೆ.
ನಶೆ ಏರಿಸಿಕೊಂಡು ಟಾಟಾ ವಿಸ್ತಾ ಕಾರು ಹೊಸ ರೂಪದಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಒಳ ಹಾಗೂ ಹೊರ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಮೂಲಕ ವಿಸ್ತಾ ಶ್ರೇಣಿಯ 4ನೇ ಹಂತದ ಕಾರು ಕಳೆದ ವಾರ ಮಾರುಕಟ್ಟೆಗೆ ಬಂದಿದೆ.
ಇಂಡಿಕಾ ವಿ-2 ಯಶಸ್ಸಿನ ಬಳಿಕ 2008ರಲ್ಲಿ ವಿಸ್ತಾ ಕಾರು ಮಾರುಕಟ್ಟೆಗೆ ಬಂದಿತ್ತು. ಇಂಡಿಕಾ ವಿ-2 ಕಾರು ಮಾರುಕಟ್ಟೆಯಲ್ಲಿ ಗದ್ದಲ ಎಬ್ಬಿಸಿದ್ದರೂ ಐಷಾರಾಮಿ ಸೌಕರ್ಯಗಳು ಕಡಿಮೆಯಿದ್ದವು. ಆಗ ಜಗತ್ತಿನ ಶ್ರೇಷ್ಠ ಎಂಜಿನ್ ಎಂಬ ಖ್ಯಾತಿಗೆ ಒಳಗಾದ ಫಿಯೆಟ್ ಟರ್ಬೋ ಎಂಜಿನ್ ಮೂಲಕ ವಿಸ್ತಾ ಶ್ರೇಣಿಯ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು. ಅವತ್ತಿನಿಂದ ಇಂದಿನವರೆಗೆ ವಿಸ್ತಾ, ವಿಸ್ತಾ ಇವಿ, ವಿಸ್ತಾ ಕ್ವಾಡ್ರಾಜೆಟ್ ಹಾಗೂ ಈಗ ವಿಸ್ತಾ ಡಿ-90 ಮಾದರಿಯ ಕಾರುಗಳು ಮಾರುಕಟ್ಟೆಗೆ ಬಂದಿವೆ. ಇನ್ನೊಂದು ಹೆಜ್ಜೆ ಮುಂದೆ ಹೋಗಿ ವಿಸ್ತಾ ಎಕ್ಸ್‌ಟ್ರೀಮ್ ಕಾರಿನ ಕಾನ್ಸೆಪ್ಟ್ ಕೂಡ ಪ್ರದರ್ಶನವಾಗಿದೆ. ಇದರೊಂದಿಗೆ ತನ್ನ ಯಶಸ್ವಿ ವಿಸ್ತಾ ಬ್ರಾಂಡನ್ನು ಟಾಟಾ ಕಂಪನಿಯು ಮತ್ತಷ್ಟು ವರ್ಷಗಳ ಕಾಲ ಮುಂದುವರಿಸುವ ಸ್ಪಷ್ಟ ಸೂಚನೆ ನೀಡಿದೆ.
ತನ್ನ ಹಳೆಯ ವಿಸ್ತಾ ಕಾರಿನ ಅದೇ ಫಿಯೆಟ್ ಎಂಜಿನ್‌ನೊಂದಿಗೆ ಸಣ್ಣಪುಟ್ಟ ಬದಲಾವಣೆ ಮಾಡುತ್ತ ಗ್ರಾಹಕರನ್ನು ಸೆಳೆಯಲು ತಂತ್ರ ರೂಪಿಸುತ್ತಿದೆ.
ಕಳೆದ ವಾರ ಮಾರುಕಟ್ಟೆಗೆ ಬಂದಿರುವ ವಿಸ್ತಾ ಡಿ-90ಯ ಎಂಜಿನ್ ಶಕ್ತಿಯನ್ನು 90 ಬಿಎಚ್‌ಪಿಗೆ ಏರಿಸಿದ್ದರೆ, ವಿಸ್ತಾ ಎಕ್ಸ್‌ಟ್ರೀಮ್‌ನಲ್ಲಿ ಇದು 105 ಬಿಎಚ್‌ಪಿಯ ಆಸುಪಾಸಿನಲ್ಲಿರುವ ಸಾಧ್ಯತೆಯಿದೆ. ಗಾಡಿಯ ಶಕ್ತಿಯನ್ನು ವೃದ್ಧಿಸಿ, ಮತ್ತೊಂದೆಡೆ ಕೆಲ ಐಷಾರಾಮಿ ಲುಕ್‌ನಿಂದ ಗ್ರಾಹಕರನ್ನು ಸೆಳೆಯುವ ಕೆಲಸಕ್ಕೆ ಟಾಟಾ ಕೈಹಾಕಿದೆ. ಈಗಾಗಲೇ ಫಿಯೆಟ್ ಪುಂಟೋ 90 ಕೂಡ ಮಾರುಕಟ್ಟೆಯಲ್ಲಿದೆ.
ಇನ್ನೊಂದು ವರ್ಷದಲ್ಲಿ ವಿಸ್ತಾ ಎಕ್ಸ್‌ಟ್ರೀಮ್ ಕಾರು ಮಾರುಕಟ್ಟೆಗೆ ಬರಬಹುದು, ಆದರೆ ಅದರ ದರ ಇನ್ನು ತಿಳಿದುಬಂದಿಲ್ಲ. ಆದರೆ ಮೇಲ್ನೋಟಕ್ಕೆ ಎಸ್‌ಯುವಿ ಟಚ್‌ನಲ್ಲಿ ಕಾಣುತ್ತದೆ.
ವಿಸ್ತಾ ಡಿ-90ಯ ವಿಶೇಷತೆಯೇನು?
ವಿಸ್ತಾ ಡಿ-90 ಹಾಗೂ ಕ್ವಾಡ್ರಾಜೆಟ್‌ಗೆ ಹೊರ ವಿನ್ಯಾಸದಲ್ಲಿ ಬಂಪರ್ ಸೇರಿದಂತೆ ಕೆಲ ಸಣ್ಣಪುಟ್ಟ ಬದಲಾವಣೆ ಮಾಡಲಾಗಿದೆಯಷ್ಟೆ. ಎಂಜಿನ್ ಶಕ್ತಿ ಮತ್ತು ಒಳ ವಿನ್ಯಾಸದಲ್ಲಿ ಹೊಸತನವಿದೆ. ಈ ಹಿಂದಿನ ವಿಸ್ತಾ ಕಾರುಗಳ ಎಂಜಿನ್ ಶಕ್ತಿ 75 ಬಿಎಚ್‌ಪಿ ಇದ್ದರೆ, ಈ ಕಾರು 90 ಬಿಎಚ್‌ಪಿ ಹೊಂದಿದೆ. ಆದರೆ ಅದೇ ಫಿಯೇಟ್ ಟರ್ಬೋ ಮಲ್ಟಿಜೆಟ್ ಎಂಜಿನ್ ಉಳಿಸಿಕೊಳ್ಳಲಾಗಿದೆ. ಸ್ವಿಫ್ಟ್ ಕಾರು ಕೂಡ ಫಿಯೆಟ್ ಎಂಜಿನ್ ಹೊಂದಿದ್ದು, ಎಂಜಿನ್ ಶಕ್ತ್ತಿ ಇರುವುದು 75 ಬಿಎಚ್‌ಪಿ ಮಾತ್ರ. ಇದೇ ಕಾರಣದಿಂದ ಟಾಟಾ ಕಂಪನಿಯು ವಿಸ್ತಾ ಡಿ-90 ಮೇಲೆ ವಿಶೇಷ ನಿರೀಕ್ಷೆ ಹೊಂದಿದೆ.
ಎಂಜಿನ್ ಹೊರತಾಗಿ ಟಚ್‌ಸ್ಕ್ರೀನ್ ಮೀಡಿಯಾ ಪ್ಲೇಯರ್ ಹಾಗೂ ಸ್ವಯಂ ಚಾಲಿತ ಹವಾನಿಯಂತ್ರಕವು ಇದರಲ್ಲಿ ಇದೆ. ಈ ಹಿಂದಿನ ವಿಸ್ತಾ ಕಾರ್‌ಗಳಲ್ಲಿ ಮೀಡಿಯಾ ಪ್ಲೇಯರ್‌ಗಳು ಡಿಜಿಟಲೈಸ್ ಆಗಿದ್ದರೂ ಟಚ್‌ಸ್ಕ್ರೀನ್ ಸೌಲಭ್ಯ ಹೊಂದಿರಲಿಲ್ಲ. ಇದರ ಜತೆಗೆ ಚಾಲನಾ ಮಾಹಿತಿ ದರ್ಶಕ(ಗೇಜ್)ವನ್ನು ಮತ್ತೆ ಚಾಲಕನ ಎದುರಿಗೆ ತರಲಾಗಿದೆ.
ಡಿ-90ಯ ಮತ್ತೊಂದು ವಿಶೇಷವೆಂದರೆ ಇದೇ ಮೊದಲ ಬಾರಿಗೆ ಏರ್‌ಬ್ಯಾಗ್ ಸೌಲಭ್ಯವನ್ನು ಒದಗಿಸಲಾಗಿದೆ. ಹೈಯರ್ ಎಂಡ್ ಕಾರಿನಲ್ಲಿ 2 ಏರ್‌ಬ್ಯಾಗ್ ನೀಡಲಾಗುತ್ತಿದೆ. ಟಾಟಾದ ಐಷಾರಾಮಿ ಕಾರು ಮಾಂಝಾದ ಕೆಲ ಅಂಶಗನ್ನು ಈ ಮೂಲಕ ವಿಸ್ತಾದಲ್ಲಿ ಸೇರಿಸಲಾಗಿದೆ. ಎಂದಿನಂತೆ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಕಾರುಗಳು ಲಭ್ಯವಿದ್ದು, 5.99 ಲಕ್ಷದಿಂದ 6.83 ಲಕ್ಷ ದರ ನಿಗದಿ ಮಾಡಲಾಗಿದೆ.
ವಿಸ್ತಾ ಕಾನ್ಸೆಪ್ಟ್ ಕಾರು
ವಿಸ್ತಾ ಡಿ-90 ಬಿಡುಗಡೆಯ ಮರುದಿನವೇ ವಿಸ್ತಾದ ಮುಂದಿನ ಮಾದರಿಯ ಕಾರಿನ ಕಾನ್ಸೆಪ್ಟ್ ಪ್ರದರ್ಶಿಸಲಾಗಿದೆ. 5 ಸೀಟಿನ ಪಕ್ಕಾ ಮಿನಿ ಎಸ್‌ಯುವಿ ಸ್ಪರ್ಶವನ್ನು ನೀಡುವ ಪ್ರಯತ್ನ ಮಾಡಲಾಗಿದೆ. ಚಕ್ರದ ಗಾತ್ರ 16 ಇಂಚಿಗೆ ಏರಿದರೆ, ಗಾಡಿಯ ಎತ್ತರವೂ ಸುಮಾರು 25 ಮಿ.ಮೀ ಹೆಚ್ಚಾಗುವ ಸಾಧ್ಯತೆಯಿದೆ. ಮತ್ತೊಂದೆಡೆ ಎಂಜಿನ್ ಸಾಮರ್ಥ್ಯವನ್ನೂ 105 ಬಿಎಚ್‌ಪಿಗೆ ಏರಿಸುವುದಾಗಿ ಕಂಪನಿ ಹೇಳಿಕೊಂಡಿದೆ. ಕಾನ್ಸೆಪ್ಟ್ ಕಾರು ಪ್ರದರ್ಶನದಲ್ಲಿ ಆಕರ್ಷಕವಾಗಿದೆ. ಮೊದಲ ನೋಟಕ್ಕೇನೋ ಇಷ್ಟವಾಗುವಂತಿದೆ. ಆದರೆ ಮಾರುಕಟ್ಟೆಗೆ ಬರುವಾಗ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ. ಏಕೆಂದರೆ ಈಗಾಗಲೇ ಮಿನಿ ಎಸ್‌ಯುವಿಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಇದಕ್ಕಿಂತ ಭಿನ್ನವಾಗಿ ಹೇಗಿರುತ್ತದೆ ಎಂದು ಮಾರುಕಟ್ಟೆಗೆ ಬಂದ ಮೇಲೆಯೇ ತಿಳಿಯುತ್ತದೆ. ಆದರೆ ಈಗಿನ ವಿಸ್ತಾ ಕಾರಿನ ದರ ಪಟ್ಟಿಯಲ್ಲೇ ಈ ಕಾನ್ಸೆಪ್ಟ್ ಕಾರು ಕೂಡ ರೂಪಗೊಳ್ಳಲಿದೆ ಎಂದು ಕಂಪನಿ ಹೇಳಿಕೊಂಡಿದೆ.
-ರಾಧೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


