ಅಪ್ಸರಕೊಂಡದ ಅಪ್ಸರೆ

ಉತ್ತರ ಕನ್ನಡದ ಕರಾವಳಿ ತನ್ನದೇ ಆದ ವಿಶಿಷ್ಟ ಸೊಬಗು, ಸೌಂದರ್ಯ ಹೊಂದಿರುವ ಬಿನ್ನಾಣಗಿತ್ತಿ. ನದಿ, ಸಮುದ್ರಗಳು, ಕಣ್ಣು ಕುಕ್ಕಿಸುವ ಹಸಿರು ಎಂಥವರನ್ನಾದರೂ ಆಕರ್ಷಿಸದೇ ಇರದು. ಅದರಲ್ಲೂ ಹೊನ್ನಾವರ ತಾಲ್ಲೂಕಿನ ಕರಾವಳಿ ಪ್ರದೇಶವು ಶರಾವತಿ ನದಿ ಮತ್ತು ಅರಬ್ಬೀ ಸಮುದ್ರದ ಸಂಗಮ.
ಹೊನ್ನಾವರದಿಂದ ರಾಷ್ಟ್ರೀಯ ಹೆದ್ದಾರಿ 17 ರ ಮೂಲಕ ಸಾಗಿದರೆ ಕಾಸರಗೋಡು ಎಂಬ ಊರು ಇದೆ. ಅಲ್ಲಿದೆ ಚಿತ್ತ ಸೆಳೆಯುವ ಅಪ್ಸರೆಯಂಥ ಅಪ್ಸರಕೊಂಡ ಜಲಪಾತ.
ಅಪ್ಸರಕೊಂಡ ಎಂದರೆ ಪುರಾಣದಲ್ಲಿ ಬಿಂಬಿತವಾಗುವಂತೆ ಮತ್ತು ಸ್ಥಳೀಕರ ಊಹೆಯ ಪ್ರಕಾರ ಅಪ್ಸರೆಯರು ಈ ಸುಂದರವಾದ ಪ್ರದೇಶದಲ್ಲಿ ನರ್ತನ ಮಾಡುತ್ತಿದ್ದರಂತೆ. ಆದ್ದರಿಂದ ಇದಕ್ಕೆ ಈ ಹೆಸರು ಬಂದಿದೆ. ನಿಜಕ್ಕೂ ಇದು ಅಪ್ಸರೆಯರ ಕೊಳವೇ (ಕೊಂಡ) ಆಗಿದ್ದೀತು.
ಅಪ್ಸರಕೊಂಡ ಪ್ರದೇಶದಲ್ಲಿ ನಿಮ್ಮನ್ನು ಎದುರುಗೊಳ್ಳುವುದು ರಾಮಚಂದ್ರಾಪುರ ಮಠದ ಅಧೀನಕ್ಕೆ ಒಳಪಟ್ಟಿರುವ ಉಮಾಂಬಾ ಮಹಾಗಣಪತಿ ಮತ್ತು ಉಗ್ರನರಸಿಂಹ ದೇವಸ್ಥಾನ. ದರ್ಶನ ಪಡೆದು, ದೇವಸ್ಥಾನದ ಹಿಂಭಾಗದಲ್ಲಿರುವ ಪುಟ್ಟ ಕಾಲು ಹಾದಿ.ಲ್ಲಿ ಐದು ನಿಮಿಷ ನಡೆದರೆ ಸಿಗುವುದೇ ನಿಸರ್ಗವೇ ನಿರ್ಮಿಸಿಕೊಂಡಿರುವ ಅದ್ಭುತ, ವರ್ಣನಾತೀತ, ನಯನ ಮನೋಹರವಾದ ಜಲಪಾತ. ಅದುವೇ ಅಪ್ಸರಕೊಂಡ. ದೇವಸ್ಥಾನದಿಂದ ಹಿಂಭಾಗದಿಂದ ನೀರು ಎತ್ತರದಿಂದ ಧುಮುಕುವ ದೃಶ್ಯ ವರ್ಣನಾತೀತ. ತಂಪಾಗಿ ಬೀಸುವ ಗಾಳಿ, ಸಮುದ್ರದ ಭೋರ್ಗರೆತ, ಹಸಿರು ಕಾಡು ಒಂದು ಕ್ಷಣ ನಮ್ಮನ್ನು ತನ್ನ ಲೋಕಕ್ಕೆ ಕರೆದೊಯ್ಯುತ್ತದೆ. ಜಲಪಾತದ ಬಳಿ ಮೆಟ್ಟಿಲುಗಳಿವೆ. ವರ್ಷದ 365 ದಿನವೂ ಇಲ್ಲಿ ಜಲಧಾರೆ ಧುಮ್ಮಿಕ್ಕುತ್ತದೆ.
ಅಲ್ಲೇ ಮೈಮರೆತು ಬಿಡಬೇಡಿ. ಇಲ್ಲಿನ ಬೆಟ್ಟ ಏರಿದರೆ ಮರಳುವ ಮನಸ್ಸೇ ಬಾರದು. ಪ್ರವಾಸೋದ್ಯಮ ಇಲಾಖೆ ಸುಂದರ ಉದ್ಯಾನವನ್ನು ಅಭಿವೃದ್ಧಿಪಡಿಸುತ್ತಿದೆ. ವ್ಯೂ ಪಾಯಿಂಟ್‌ಗಳಿವೆ. ಅಲ್ಲಿಂದ ಅರಬ್ಬೀ ಸಮುದ್ರ, ಗುಡ್ಡ ಮತ್ತು ಸಮುದ್ರದ ನಡುವಿನ ಜಾಗದಲ್ಲಿ ಬತ್ತದ ಗದ್ದೆಗಳು, ಅಲ್ಲಿ ನಡೆಯುವ ಕೃಷಿ ಚಟುವಟಿಕೆಗಳು ಎಲ್ಲವನ್ನೂ ಆನಂದಿಸಬಹುದು. ಗುಡ್ಡದ ಕೆಳಗಿರುವ ಕೊಳದಲ್ಲಿ ಬೋಟಿಂಗ್‌ಗೂ ಅವಕಾಶವಿದೆ.
ಉತ್ತರ ಕನ್ನಡದ ಕರಾವಳಿ ತೀರಕ್ಕೆ ಪ್ರವಾಸ ಕೈಗೊಂಡಾಗ ನಿಮ್ಮ ಪಟ್ಟಿಯಲ್ಲಿ ಅಪ್ಸರಕೊಂಡದ ಹೆಸರು ಸೇರಿಸಿಕೊಳ್ಳಲು ಮರೆಯಬೇಡಿ. ಕನಿಷ್ಠ ಅರ್ಧ ದಿನವನ್ನಾದರೂ ಈ ತಾಣಕ್ಕಾಗಿ ಮೀಸಲಿಟ್ಟರೆ ಒಳ್ಳೆಯದು.
ಹೀಗೆ ಬನ್ನಿ
ಇದು ರಾಜಧಾನಿ ಬೆಂಗಳೂರಿನಿಂದ 420 ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ ಹೊನ್ನಾವರಕ್ಕೆ ರಾಜ್ಯ ರಸ್ತೆ ಸಾರಿಗೆ ಬಸ್, ಖಾಸಗಿ ಬಸ್‌ಗಳು ಬೇಕಾದಷ್ಟಿವೆ. ಬೆಂಗಳೂರು - ಕಾರವಾರ ರೈಲ್ವೆ ಸೌಕರ್ಯವೂ ಇದೆ. ಹೊನ್ನಾವರಕ್ಕೆ ಬಂದರೆ ಅಲ್ಲಿಂದ 5 ಕಿ.ಮೀ ದೂರದಲ್ಲಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಅಪ್ಸರಕೊಂಡ.
ಅಪ್ಸರಕೊಂಡ ಅರಬ್ಬೀ ಸಮುದ್ರದ ದಡದಲ್ಲಿರುವ ರಮ್ಯ ರಮಣೀಯ ತಾಣ. ಇಲ್ಲಿ ಯಾವುದೇ ರೀತಿಯ ವಸತಿ ಸೌಲಭ್ಯ ಇರುವುದಿಲ್ಲ. ಆಹಾರ ಬೇಕಾದರೆ ಚಿಕ್ಕ ಪುಟ್ಟ ಅಂಗಡಿಗಳಿವೆ. ಆದರೆ ಇಲ್ಲಿಯೇ ಹತ್ತಿರವಿರುವ ಹೊನ್ನಾವರದಲ್ಲಿ ಊಟ ವಸತಿ ಸೌಲಭ್ಯ ದೊರೆಯುತ್ತದೆ. ಮಳೆಗಾಲ ಹೊರತುಪಡಿಸಿ ಉಳಿದ ಅವಧಿ ಭೇಟಿಗೆ ಸೂಕ್ತ.
- ಬಳಕೂರು ವಿ.ಎಸ್. ನಾಯಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


