ಕಲ್ಲಿನ ಮೇಳ
ಗ್ರಾಮೀಣ ಬದುಕಿನ ಚಿತ್ರಣವನ್ನು ನೆನಪಿಸುತ್ತದೆ ಗೋಟಗೋಡಿಯ ಉತ್ಸವ ರಾಕ್‌ಗಾರ್ಡನ್...

ಒಂದು ತಲೆಮಾರಿನ ಸಂಪೂರ್ಣ ಚಿತ್ರಣವನ್ನು ಅದ್ಭುತ ಕಲೆಯ ಮೂಲಕ ಒಂದೇ ಸ್ಥಳದಲ್ಲಿ ಹಿಡಿದಿಟ್ಟು, ಭೇಟಿ ನೀಡಿದ ಪ್ರತಿಯೊಬ್ಬರಿಗೂ ತಮ್ಮ ಬಾಲ್ಯ, ಅವರ ಗ್ರಾಮೀಣ ಬದುಕಿನ ಚಿತ್ರಣವನ್ನು ನೆನಪಿಸುತ್ತದೆ ಗೋಟಗೋಡಿಯ ಉತ್ಸವ ರಾಕ್‌ಗಾರ್ಡನ್.
ಗಾರ್ಡನ್‌ನಲ್ಲಿ ಕಲೆ ಮತ್ತು ನಿಸರ್ಗಗಳು ಒಂದರಲ್ಲೊಂದು ಬೆರೆತಿರುವಂತೆ ಜೋಡಿಸಲಾಗಿದೆ. ಒಂದೊಂದೂ ಜೀವಂತ ಕೃತಿಯಂತೆ ಭಾಸವಾಗುತ್ತವೆ. ನೋಡುಗರನ್ನು ಹೊಸದೊಂದು ಲೋಕಕ್ಕೆ ಕೊಂಡೊಯ್ಯುತ್ತದೆ.
ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಶಿಗ್ಗಾಂವ ತಾಲೂಕಿನ ಪುಟ್ಟ ಹಳ್ಳಿಯೇ ಗೋಟಗೋಡಿ. ಹೆದ್ದಾರಿಗೆ ಹೊಂದಿಕೊಂಡಿರುವ 42 ಎಕೆರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ರಾಕ್‌ಗಾರ್ಡ್‌ನ್ ಕೇವಲ ಪ್ರವಾಸಿ ತಾಣ ಮಾತ್ರವಲ್ಲ, ಶೈಕ್ಷಣಿಕ ಅಧ್ಯಯನ ಕೇಂದ್ರವೂ ಆಗಿದೆ. 180ಕ್ಕೂ ಹೆಚ್ಚು ಕಲಾವಿದರ ನಿರಂತರ ಪರಿಶ್ರಮದಿಂದ ನಿರ್ಮಾಣವಾದದ್ದು. ಇಲ್ಲಿಗೆ ಪ್ರವೇಶಿಸುತ್ತಿದ್ದಂತೆ ನಾಡಿನ ದಾರ್ಶನಿಕರ ಪ್ರತಿನಿಧಿಯಾಗಿ ಡಾ.ರಾಜ್ ಎದುರುಗೊಳ್ಳುತ್ತಾರೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡುಗಳ 15 ನಮೂನೆಯ ಬಾಗಿಲುಗಳು ನಮ್ಮನ್ನು ಗ್ರಾಮೀಣ ಪ್ರಪಂಚದಲ್ಲಿ ನಿಲ್ಲಿಸುತ್ತವೆ. ಅಲ್ಲಿ ರೂಪುಗೊಂಡಿರುವುದು ಅಪ್ಪಟ ಗ್ರಾಮೀಣ ಬದುಕಿನ ಚಿತ್ರಣ. ಬಾವಿಯಿಂದ ನೀರು ತುರುವುದು, ಧಾನ್ಯ ಕುಟ್ಟುವ ಮಹಿಳೆಯರು, ಗ್ರಾಮದಲ್ಲಿರುವ ದಿನಸಿ ಅಂಗಡಿ, ಅಕ್ಕಸಾಲಿಗ, ಕಟ್ಟೆಯ ಮೇಲೆ ಕುಳಿತ ಕ್ಷೌರಿಕ, ಸಿಂಪಿಗ, ಅಗಸರು, ಕಮ್ಮಾರ, ಕುಂಬಾರ, ಚಮ್ಮಾರ, ಬಡಿಗೇರ ಹೀಗೆ ರೈತನ ಬದುಕಿನಲ್ಲಿ ಹಾಸುಹೊಕ್ಕಾದ ಪ್ರತಿಯೊಂದು ವಸ್ತು ವಿಷಯ ಕಲೆಯ ಮೂಲಕ ನೋಡುಗನ ಮುಂದೆ ಅನಾವರಣವಾಗುತ್ತದೆ.
ಇಲ್ಲಿ ಚಿತ್ರಕಲೆಗೆಗೂ ಆದ್ಯತೆ ನೀಡಿದ್ದರೂ ಅದು ಕೂಡಾ ಗ್ರಾಮೀಣ ಬದುಕು ಆಧರಿಸಿಯೇ ನಿರ್ಮಿತವಾಗಿದೆ. ಕಳೆದ ಒಂದು ಶತಮಾನದಲ್ಲಿ ಮಾನವರ ಜೀವನ ಶೈಲಿಯಲ್ಲಾದ ಬದಲಾವಣೆಗಳನ್ನು ಪ್ರತಿಯೊಂದು ಕಲಾಕೃತಿಯೂ ಎಳೆಎಳೆಯಾಗಿ ಬಿಡಿಸಿ ಹೇಳುತ್ತದೆ.
ಸಮಾಜದಲ್ಲಿ ವಿಐಪಿ ಎಂದು ಗುರುತಿಸುವ ವ್ಯಕ್ತಿಯಿಂದ ಕಟ್ಟಕಡೆಯ ವ್ಯಕ್ತಿಯೂ ಒಂದೇ ವೇದಿಕೆಯಲ್ಲಿಯೇ ಖುಷಿ ಅನುಭವಿಸಿ, ಕಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ರೀತಿಯಲ್ಲಿ ಈ ರಾಕ್‌ಗಾರ್ಡನ್ ರೂಪಿತವಾಗಿದೆ. ಸಂಪೂರ್ಣ ಸುತ್ತಿ ಆಚೆ ಬಂದಾಗ ಕಲೆ ನಮ್ಮನ್ನು ಆವರಿಸಿಕೊಂಡ ಅನುಭವ. ಈ ರಾಕ್‌ಗಾರ್ಡನ್ ಮತ್ತೊಮ್ಮೆ ಗ್ರಾಮೀಣ ಬದುಕು ಕಟ್ಟುವ ಕೆಲಸದಲ್ಲಿ ಯಶಸ್ವಿಯಾಗಿದೆ ಎಂದರೆ ತಪ್ಪಾಗಲಾರದು. ಇದರೊಟ್ಟಿಗೆ ಮನರಂಜನೆಗಾಗಿ ಬೋಟಿಂಗ್ ವ್ಯವಸ್ಥೆಯೂ ಇದೆ.
ಹೀಗೆ ಬನ್ನಿ
ಪ್ರಕಾಶ ದಾಸನೂರ ಅವರ ಮಾಲೀಕತ್ವದ ದಾಸನೂರ ಗ್ರುಪ್ ಆಫ್ ಕಂಪನೀಸ್ ಮೂಲಕ ಸ್ಥಾಪಿತವಾಗಿರುವ ಈ ಉತ್ಸವ ರಾಕ್‌ಗಾರ್ಡನ್ ಅನ್ನು ಈ ರೀತಿಯ ಗಾರ್ಡನ್‌ಗಳ ನಿರ್ಮಾಣದಲ್ಲಿ ದೇಶದಲ್ಲಿಯೇ ಹೆಸರು ಮಾಡಿರುವ ಟಿ.ಬಿ. ಸೊಲಬಕ್ಕನವರ ಹಾಗೂ ತಂಡ ನಿರ್ಮಿಸಿದೆ. ವಿಳಾಸ: ಉತ್ಸವ್ ರಾಕ್ ಗಾರ್ಡನ್, ಪೂನಾ-ಬೆಂಗಳೂರ ರಸ್ತೆ, ಗೋಟಗೋಡಿ. ತಾ. ಶಿಗ್ಗಾಂವ, ಜಿಲ್ಲಾ ಹಾವೇರಿ. ಸಾರ್ವಜನಿಕ ಸಂಪರ್ಕ ವಿಭಾಗದ ಮೊ. 9886123365. ವೆಬ್‌ಸೈಟ್ www.utsavrock.com.
- ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


