ಸ್ನೇಕ್ ಗುರು

ಬರೀ ಡಾಕ್ಟರ್, ಎಂಜಿನಿಯರ್ ಕೆಲಸಗಳೇ ಬೇಕೆನ್ನುವ ಇಂದಿನ ಯುವುಕರಲ್ಲಿ ಸಮಾಜ ಸೇವೆ, ಸಂಶೋಧನೆಗಳ ಮೇಲೆ ಆಸಕ್ತಿ ಬಹಳ ಕಡಿಮೆ. ಆದರೆ, ಇದಕ್ಕೆ ತದ್ವಿರುದ್ಧ ಎಂಬಂತಿದ್ದಾರೆ ಗುಲ್ಬರ್ಗದ 'ಸ್ನೇಕ್ ಗುರು' ಅಲಿಯಾಸ್ ಗುರುಪ್ರಸಾದ್.
ಇವರು ಎಂಜಿನಿಯರಿಂಗ್ (ಎಲೆಕ್ಟ್ರಾನಿಕ್ಸ್) ಪದವಿಯ ಅಂತಿಮ ವರ್ಷದ ವಿದ್ಯಾರ್ಥಿ. ವಿಷಪೂರಿತ ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವುದು ಇವರ ಹವ್ಯಾಸ. ಗುರು ಇದುವರೆಗೆ 1 ಕಾಳಿಂಗ ಸರ್ಪ ಸೇರಿದಂತೆ 30 ಜಾತಿಯ ಸುಮಾರು 3600 ಹಾವುಗಳನ್ನು ಹಿಡಿದಿದ್ದಾರೆ. ಇದಕ್ಕಾಗಿ ಅವರು ಯಾರ ಬಳಿಯೂ ಒಂದು ಪೈಸೆಯನ್ನೂ ತೆಗೆದುಕೊಳ್ಳಲಿಲ್ಲ.
ಅಲ್ಲಿಂದ ಆರಂಭ
'ಒಂದು ದಿನ ಹಾವನ್ನು ಹೊಡೆಯುತ್ತಿರುವ ದೃಶ್ಯ ಕಂಡು ಸಹಿಸಲಾಗದೆ ನಾನು ಹಾವುಗಳ ರಕ್ಷಣೆಗೆ ಮುಂದಾದೆ. ಡಿಸ್ಕವರಿ ಚಾನೆಲ್ ನೋಡಿ ಮತ್ತು ಹಾವುಗಳ ಬಗೆಗಿನ ಅಧ್ಯಯನ ಮಾಡಿ ಈ ಕಾರ್ಯಕ್ಕೆ ಅಣಿಯಾದೆ' ಎನ್ನುವ ಗುರುಪ್ರಸಾದ್ ಸಮಾಜಸೇವೆಯನ್ನೇ ಮುಖ್ಯ ಗುರಿಯನ್ನಾಗಿಸಿಕೊಂಡವರು.
ಇವರ ಈ ಸಾಧನೆಯನ್ನು ಕಂಡು ಗುಲ್ಬರ್ಗ ಎಸ್‌ಪಿ ಕಾಶಿನಾಥ್, ಮಧ್ಯರಾತ್ರಿ ತಿರುಗಾಡುವ, ಬೈಕ್ ಮೇಲೆ ತ್ರಿಬಲ್ ರೈಡ್ ಹೋಗುವ ಲೈಸೆನ್ಸನ್ನು ನೀಡಿದ್ದಾರೆ. ಅಲ್ಲದೆ, ಗುರುಪ್ರಸಾದ್ ಈ ವಿದ್ಯೆಯನ್ನು ಇಚ್ಛೆಯುಳ್ಳವರಿಗೆ ಕಲಿಸುತ್ತಿದ್ದು,ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ಕಲಿಸಲೂ ಮುಂದಾಗಿದ್ದಾರೆ.
ಹಾಗಂತ ಗುರುಪ್ರಸಾದ್‌ರ ಕಾರ್ಯಕ್ಷೇತ್ರ ಇಷ್ಟಕ್ಕೇ ಸೀಮಿತವಾಗಿಲ್ಲ. ರಹಸ್ಯ ಲಿಕ್ವಿಡ್ ಬಳಸಿದ ಮೊಬೈಲ್ ನೀರಿಗೆ ಬಿದ್ದರೂ ಹಾಳಾಗದಂಥ ನೂತನ ತಂತ್ರಜ್ಞಾನ ಕಂಡುಹಿಡಿದಿದ್ದಾರೆ. ಅಲ್ಲದೆ, ಮೊಬೈಲ್‌ಗೆ ವಿಶಿಷ್ಟ ಐ.ಸಿ. ಒಂದನ್ನು ಅಳವಡಿಸಿವುದರ ಮೂಲಕ ವಿದ್ಯುತ್‌ನ ನೆರವಿಲ್ಲದೆ ಕೇವಲ ಒಂದು ಮೊಬೈಲ್‌ನಿಂದ ಇನ್ನೊಂದು ಮೊಬೈಲ್ ಚಾರ್ಜ್ ಆಗುವ ನೂತನ ತಂತ್ರವನ್ನೂ ಇವರು ಕಂಡುಕೊಂಡಿದ್ದಾರೆ. ಈ ಎರಡೂ ಆವಿಷ್ಕಾರಗಳನ್ನು ಗಮನಿಸಿದ ಮೊಬೈಲ್ ಕಂಪನಿಯೊಂದು ಇವುಗಳ ಪೇಟೆಂಟ್‌ಗಾಗಿ ಅಪಾರ ಹಣದ ಆಮಿಷವೊಡ್ಡಿದರೂ ಗುರುಪ್ರಸಾದ್ ಕಾರಣಾಂತರಗಳಿಂದ ಪೇಟೆಂಟ್ ಕೊಟ್ಟಿಲ್ಲವಂತೆ. ಮುಂದೆ ರೋಬೋ ಕಂಡು ಹಿಡಿಯುವ ಗುರಿಯನ್ನೂ ಇವರು ಹೊಂದಿದ್ದಾರೆ.
ಇಪ್ಪತ್ತೇಳು ವರ್ಷದ ಗುರುಪ್ರಸಾದ್ ತಮ್ಮ ಪ್ರತೀ ಹುಟ್ಟುಹಬ್ಬದಂದು 100 ಮರಗಳನ್ನು ನೆಟ್ಟು, ರಕ್ತದಾನ ಶಿಬಿರವನ್ನು ಏರ್ಪಡಿಸಿ ವಿಶಿಷ್ಟತೆ ಮೆರೆಯುತ್ತಾರೆ. 'ಜೀವನದಲ್ಲಿ ಹಣ, ಐಶ್ವರ್ಯಕ್ಕಿಂತ ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡುವುದು, ಹೆಸರು ಗಳಿಸುವುದೇ ನನ್ನ ಪರಮ ಗುರಿ' ಎನ್ನುವುದು ಅವರ ಪಾಲಿಸಿ. ಅವರಿಗೆ ನೀವೂ ವಿಶ್ ಮಾಡಿ, ಮೊ. 9741617143.
- ಬಿ. ಸೋಮಶೇಖರ್ ಸುರಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


