ಮಲೆನಾಡ ಮಂದಾರ

ಮಲೆನಾಡಿನ ತವರೂರೆಂದೇ ಪ್ರಖ್ಯಾತವಾಗಿದೆ ಚಿಕ್ಕಮಗಳೂರು ಜಿಲ್ಲೆ. ಪ್ರವಾಸಿಗರು ಇಷ್ಟಪಡುವ ಅಸಂಖ್ಯಾತ ತಾಣಗಳು ಜಿಲ್ಲೆಯಲ್ಲಿವೆ. ಹಸಿರು ಸಿರಿಯಿಂದ ತುಂಬಿರುವ 'ಕಾಫಿ ಜಿಲ್ಲೆ'ಯಲ್ಲಿ ಧಾರ್ಮಿಕ ಕ್ಷೇತ್ರಗಳೂ ಅಸಂಖ್ಯಾತ. ನರಸಿಂಹರಾಜಪುರದ ಸಿಂಹನಗದ್ದೆ ಬಸ್ತಿಮಠ ಕೂಡ ಅಂಥ ಶಕ್ತಿಕ್ಷೇತ್ರಗಳಲ್ಲಿ ಒಂದು.
ಸಿಂಹನಗದ್ದೆ ಮೂಲತಃ ಜೈನ ಕ್ಷೇತ್ರ. ಬಸದಿಗಳ ಬೀಡು. ಸಾವಿರ ವರ್ಷ ಹಿಂದೆ ಪ್ರತಿಷ್ಠಾಪಿಸಲಾದ ಶಾಂತಿನಾಥ ಸ್ವಾಮಿ, ನಿತ್ಯಪೂಜೆಗೊಳ್ಳುವ ಚಂದ್ರನಾಥ ಸ್ವಾಮಿ, ಪಾರ್ಶ್ವನಾಥ ಸ್ವಾಮಿ ಬಸದಿ, ಬ್ರಹ್ಮದೇವರ ಬಸದಿ, ಬಾಹುಬಲಿಸ್ವಾಮಿ ಬಸದಿಗಳಿವೆ. ಆದರೆ ವಿಶೇಷವಾಗಿ ಗಮನ ಸೆಳೆಯುತ್ತಿರುವುದು 'ಯಕ್ಷಿ' ಜ್ವಾಲಾಮಾಲಿನಿ ದೇವಸ್ಥಾನ. ಇದು ಕೂಡ ಜೈನ ಮಠದ ನಿರ್ವಹಣೆಗೆ ಒಳಪಟ್ಟಿದೆ.
ಹಿಂದೆ ರಾಜಮನೆತನಗಳಲ್ಲಿ ಯಕ್ಷಿಯವರನ್ನು ಪೂಜಿಸುವ ಪದ್ಧತಿಯೊಂದು ಗಾಢ ಪ್ರಭಾವ ಬೀರಿದೆ. ಅದರಲ್ಲಿಯೂ ವಿಶೇಷವಾಗಿ ಜ್ವಾಲಾಮಾಲಿನಿ, ಅಂಬಿಕಾ, ಪದ್ಮಾವತಿ, ಚಾಮುಂಡಾ ಯಕ್ಷಿಯರ ಪ್ರಭಾವ ಹಲವು ರಾಜಕುಲದಲ್ಲಿ ಇದ್ದುದಾಗಿ ಶಾಸನಗಳಿಂದ ತಿಳಿದುಬರುತ್ತದೆ. ಜ್ವಾಲಾಮಾಲಿನಿ ದೇವಿಯು ಎಂಟನೆಯ ತೀರ್ಥಂಕರರಾದ ಚಂದ್ರನಾಥರ ಶಾಸನದೇವಿಯಾಗಿದ್ದಳು ಎನ್ನುವುದು ಇತಿಹಾಸದಿಂದ ತಿಳಿದುಬರುತ್ತದೆ.
ಜ್ವಾಲಾಮಾಲಿನಿ ದೇವಸ್ಥಾನದ ವಿಶೇಷ ಎಂದರೆ ಭಕ್ತಾದಿಗಳ ಅಭೀಷ್ಟ ಪೂರೈಕೆಯಾಗುತ್ತದಯೋ ಇಲ್ಲವೋ ಎಂಬ ಖಚಿತ ಮಾಹಿತಿ ದೇವಿಯ ಅನುಗ್ರಹದಿಂದ ದೊರಕುತ್ತದೆ. ದೇವಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸಿ, ತಮ್ಮ ಮನಸ್ಸಿನ ಅಹವಾಲನ್ನು ಆಕೆಯ ಮುಂದಿಟ್ಟರೆ, ಆ ಕಾರ್ಯ ಸಫಲವಾಗುವುದಾದರೆ, ದೇವಿಯ ಬಲಭಾಗದಿಂದ ಹೂವಿನ ಪ್ರಸಾದವಾಗುತ್ತದೆ. ಪ್ರಸಾದ ಕೇಳಲೆಂದೇ ವಿವಿಧ ಭಾಗಗಳಿಂದ ಭಕ್ತರು ಬರುತ್ತಾರೆ.
ದೇವಸ್ಥಾನದ ವಾಸ್ತುಶಿಲ್ಪದಂತೆ ಚಂದ್ರಶಾಲೆಯೂ ವಿಶಿಷ್ಟ. ಆಯತಾಕಾರವಾಗಿ ನಿರ್ಮಿಸಿರುವ ಚಂದ್ರಶಾಲೆಯು ಮನಮೋಹಕವಾಗಿದ್ದು ತಂಪಾದ ವಾತಾವರಣದಿಂದ ಕೂಡಿದೆ.
ಸಿಂಹ, ಎತ್ತು ಜತೆಯಾಗಿದ್ದವು!
ಜ್ವಾಲಾಮಾಲಿನಿ ದೇವಿಯು ಮೂಲತಃ ಉತ್ತರ ಕನ್ನಡದ ಗೇರುಸೊಪ್ಪೆ ಕ್ಷೇತ್ರದವಳು. ಹಿಂದೆ ಅಲ್ಲಿ ಸಮಂತಭದ್ರ ಸ್ವಾಮಿಗಳು ಜ್ವಾಲಾಮಾಲಿನಿ ದೇವಿಯ ಆರಾಧಕರಾಗಿದ್ದು, ಮಠ ಸ್ಥಾಪಿಸಿದ್ದರು. ಒಂದು ದಿನ ದೇವಿಯು, ಸ್ವಾಮಿಗಳಿಗೆ ಸ್ವಪ್ನದಲ್ಲಿ ಪ್ರತ್ಯಕ್ಷವಾಗಿ, 'ಈ ಕ್ಷೇತ್ರವು ಕ್ಷೀಣದೆಸೆಯನ್ನು ಹೊಂದುವ ಸಂಭವವಿರುವುದರಿಂದ ನನ್ನನ್ನು ಬೇರೆಡೆಗೆ ಸಾಗಿಸು. ಅದಕ್ಕಾಗಿ ನನ್ನನ್ನು ಎತ್ತಿನ ಬಂಡಿಯಲ್ಲಿ ಕೂಡಿಸಿಕೊಂಡು ಹೋಗು. ಹೋಗುತ್ತಿರುವಾಗ ಯಾವ ಸ್ಥಳದಲ್ಲಿ ಬದ್ಧ ವೈರಿಗಳಾದ ಸಿಂಹ ಮತ್ತು ದನಗಳು ತಮ್ಮ ವೈರತ್ವವನ್ನು ಮರೆತು ಅನ್ಯೋನ್ಯವಾಗಿ ಆಡುತ್ತಿರುತ್ತವೆಯೋ, ಅಂತಹ ಸ್ಥಳದಲ್ಲಿ ನನ್ನನ್ನು ಪ್ರತಿಷ್ಠಾಪಿಸು' ಎಂಬುದಾಗಿ ಆಜ್ಞೆಯಿತ್ತಳು. ಅದರಂತೆ ಸಮಂತಭದ್ರ ಸ್ವಾಮಿಯವರು ದೇವಿಯು ಕನಸಿನಲ್ಲಿ ತೋರಿದಂತಹ ಸ್ಥಳವನ್ನು ಆನ್ವೇಷಣೆ ಮಾಡುತ್ತ ಈ ಕ್ಷೇತ್ರದ ಬಳಿ ಬಂದಾಗ ಮನಸ್ಸಿಗೆ ಒಂದು ರೀತಿಯ ಆಹ್ಲಾದ ಉಂಟಾಯಿತು. ಅನತಿ ದೂರ ಸಾಗುತ್ತಿರುವಾಗಲೇ, ಒಂದು ಗದ್ದೆಯಲ್ಲಿ ದನಗಳು ಮೇಯುತ್ತಿದ್ದವು. ಆ ಗುಂಪಿನ ಮಧ್ಯದಲ್ಲಿ ಒಂದು ಸಿಂಹವು ಕರುಗಳೊಡನೆ ಆಟವಾಡುತ್ತಿತ್ತು. ಇದನ್ನು ಕಂಡ ಸ್ವಾಮಿಗಳು ಆನಂದದಿಂದ ಪುಳಕಿತರಾಗಿ, 'ದೇವಿಯು ಅನುಗ್ರಹದಿಂದ ಇಂತಹ ಸನ್ನಿವೇಶವು ಪ್ರಾಪ್ತವಾಯಿತು' ಎಂದುಕೊಂಡು, ಆ ಗದ್ದೆಯಲ್ಲಿಯೇ, ಒಂದು ಶುಭ ಮುಹೂರ್ತದಲ್ಲಿ ಅಮ್ಮನವರನ್ನು ಸ್ಥಾಪನೆ ಮಾಡಿ, ಈ ಸ್ಥಳಕ್ಕೆ ಸಿಂಹನಗದ್ದೆ ಎಂದು ಹೆಸರಿಟ್ಟರು. ಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯರು ಸಿಂಹಹನಗದ್ದುಗೆ ಅತಿಶಯ ಕ್ಷೇತ್ರದ ಹಾಲಿ ಜೈನ ಪೀಠಾಧೀಶ್ವರರು. ಶ್ರೀ ಮಠವು ಜ್ವಾಲಾಮಾಲಿನಿ ಬಾಲಿಕಾ ಪ್ರೌಢಶಾಲೆಯನ್ನು ನಡೆಸುತ್ತಿದೆ.
ಹೀಗೆ ಬನ್ನಿ
ಶಿವಮೊಗ್ಗದಿಂದ ಉಂಬ್ಳೆಬೈಲು- ಮುತ್ತಿನಕೊಪ್ಪ ಮಾರ್ಗವಾಗಿ 55 ಕಿಮೀ. ಸಾಗಿ ಬಂದರೆ, ನರಸಿಂಹರಾಜಪುರದ ಮುಖ್ಯ ರಸ್ತೆಯ ಪಕ್ಕದಲ್ಲೇ ಜ್ವಾಲಾಮಾಲಿನಿ ದೇವಸ್ಥಾನವಿದೆ. ಚಿಕ್ಕಮಗಳೂರು ಮಾರ್ಗವಾಗಿ ಬರುವುದಾದರೆ, ಬಾಳೆಹೊನ್ನೂರು ಮುಖಾಂತರ ಸಾಗಿ ನರಸಿಂಹರಾಜಪುರವನ್ನು ತಲುಪಬಹುದು. ಬೆಂಗಳೂರಿನಿಂದ 308 ಕಿ.ಮೀ. ಎಲ್ಲಾ ಭಾಗಗಳಿಂದಲೂ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್‌ಗಳು ಸಾಕಷ್ಟಿವೆ. ಭಕ್ತಾದಿಗಳಿಗೆ ನಿತ್ಯವೂ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ಸಂಜೆಯ ಭೋಜನ ವ್ಯವಸ್ಥೆ, ಉಚಿತ ವಸತಿ ಸೌಲಭ್ಯ ಮಠದಿಂದ ಇದೆ.
- ಭಾಗ್ಯ ನಂಜುಂಡಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


