ಮೇಡ್ ಇನ್ ಇಂಡಿಯಾ!

ಒಂದು ಕಾಲವಿತ್ತು ಮೇಡ್ ಇನ್ ಜಪಾನ್, ಅಮೆರಿಕಾ ಎಂದರೆ ಜನರು ಬಾಯಿ ಚಪ್ಪರಿಸಿ ಖರೀದಿಸುತ್ತಿದ್ದರು. ಈಗ ನಾವು ಭಾರತೀಯರು ಹೆಮ್ಮೆ ಪಡುವ ಕಾಲ ಬಂದಿದೆ. ಮೇಡ್ ಇನ್ ಇಂಡಿಯಾದ ಉತ್ಪನ್ನಗಳು ವಿದೇಶಗಳಿಗೆ ರಫ್ತಾಗುತ್ತಿವೆ. ಆ ಪಟ್ಟಿಗೆ ಈಗ ಕಾರುಗಳು ಸೇರಿಕೊಂಡಿವೆ. ವಿದೇಶಿ ಕಂಪನಿ ಕಾರುಗಳಾದರೂ ಭಾರತದಲ್ಲಿಯೆ ತಯಾರಾಗಿ ದಕ್ಷಿಣ ಆಫ್ರಿಕಾ ಹಾಗೂ ನೇಪಾಳಕ್ಕೆ ರಫ್ತಾಗುತ್ತಿದೆ.
ಪ್ರಾರಂಭಿಕ ಹಂತದಲ್ಲಿ ಇವೆರಡು ದೇಶದ ಮಾರುಕಟ್ಟೆಯನ್ನು ಹುಡುಕಿಕೊಳ್ಳಲು ಫೋರ್ಡ್, ಟೋಯೊಟಾ, ರೆನೊ ಹಾಗೂ ಮಹೀಂದ್ರಾ ಕಂಪನಿಗಳು ಯಶಸ್ವಿಯಾಗಿವೆ.
ಫೋರ್ಡ್ ಇಕೋಸ್ಪೋರ್ಟ್, ರೆನೊ ಡಸ್ಟರ್, ಮಹೀಂದ್ರಾ ಇ2ಒ ಹಾಗೂ ಟೋಯೊಟಾ ಇನೋವಾ ಕಾರುಗಳು ದಕ್ಷಿಣ ಆಫ್ರಿಕಾ ಮತ್ತು ನೇಪಾಳಕ್ಕೆ ರಫ್ತಾಗುತ್ತಿವೆ. ಮಹೀಂದ್ರಾ ಇ2ಒ ಹೊರತುಪಡಿಸಿ ಉಳಿದೆಲ್ಲ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿವೆ. ಎಸ್‌ಯುವಿ ಮಾರುಕಟ್ಟೆಯಲ್ಲಿ ಹೊಸ ಶಕೆಯನ್ನು ಪ್ರಾರಂಭಿಸಿರುವ ಕಾರುಗಳಿವು. ಆದರೆ ಭಾರತೀಯ ಗ್ರಾಹಕರ ಬೇಡಿಕೆಯನ್ನೇ ಈಡೇರಿಸಲಾಗದ ಸಂದರ್ಭದಲ್ಲಿ ವಿದೇಶಕ್ಕೆ ರಫ್ತು ಮಾಡಲು ಮುಂದಾಗಿರುವುದು ಆಶ್ಚರ್ಯಮೂಡಿಸಿದೆ.
ಆಫ್ರಿಕಾದಲ್ಲಿ ಡಸ್ಟರ್!
ಚೆನ್ನೈ ಉತ್ಪಾದನಾ ಘಟಕದಿಂದ ಮುಂದಿನ ತಿಂಗಳು ಡಸ್ಟರ್ ಕಾರು ದಕ್ಷಿಣ ಆಫ್ರಿಕಾಕ್ಕೆ ರಫ್ತಾಗುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ ಬುಕಿಂಗ್ ಹಾಗೂ ಟೆಸ್ಟ್ ಡ್ರೈವ್ ಪ್ರಕ್ರಿಯೆ ಆರಂಭವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಧೂಳೆಬ್ಬಿಸಿರುವ ಡಸ್ಟರ್ ಅಲ್ಲೂ ಸದ್ದು ಮಾಡುವ ಮುನ್ಸೂಚನೆ ನೀಡಿದೆ. ದಕ್ಷಿಣ ಆಫ್ರಿಕಾದ ರೆನೊ ಅಧಿಕಾರಿಗಳು ಹೇಳುವ ಪ್ರಕಾರ, ಆ ದೇಶದ ಯುವಜನತೆ ಡಸ್ಟರ್‌ಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.
ಚೆನ್ನೈನಿಂದಲೆ ಆಫ್ರಿಕಾದ ಇನ್ನು ಕೆಲ ದೇಶಗಳಿಗೆ ರಫ್ತುಮಾಡುವ ಬಗ್ಗೆ ಡಸ್ಟರ್ ಚಿಂತೆ ನಡೆಸಿದೆ. ಈತನ್ಮಧ್ಯೆ ಡಸ್ಟರ್‌ನ ಸುಧಾರಿತ ಮಾದರಿ ಡಾಸಿಯಾ ಕೂಡ ಸಧ್ಯದಲ್ಲಿಯೇ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಬರುವ ಸಪ್ಟೆಂಬರ್‌ನಲ್ಲಿ ಯುರೋಪ್ ಕಾರು ಮೇಳದಲ್ಲಿ ಇದು ಅನಾವರಣಗೊಳ್ಳಲಿದೆ. ಫೋರ್ಡ್ ಇಕೋಸ್ಪೋರ್ಟ್‌ಗೆ ಸ್ಪರ್ಧೆ ನೀಡುವ ನಿಟ್ಟಿನಿಂದ ಡಾಸಿಯಾ ತರಲಾಗುತ್ತಿದೆ ಎಂಬ ಸುದ್ದಿಯಿದೆ.
ಕಳೆದ 8 ತಿಂಗಳಿಂದ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಡಸ್ಟರ್‌ನ ಮಾರಾಟ ಇತರ ಕಂಪನಿಗಳಿಗೆ ಹೊಟ್ಟೆ ಉರಿಸಿತ್ತು. ಆದರೆ ಫೋರ್ಡ್ ಇಕೋಸ್ಪೋರ್ಟ್‌ನ ದಾಳಿಯ ಬಳಿಕ ಡಸ್ಟರ್‌ಗೆ ನಿದ್ದೆಗೆಡಲಾರಂಭಿಸಿದೆ. ಡಸ್ಟರ್ ಬುಕ್ ಮಾಡಿದ್ದ ಗ್ರಾಹಕರು ಇಕೋಸ್ಪೋರ್ಟ್‌ನತ್ತ ಮುಖಮಾಡುತ್ತಿದ್ದಾರೆ.
ಡಸ್ಟರ್‌ಗೆ ಭಾರಿ ಪೆಟ್ಟು ನೀಡುತ್ತಿರುವ ಇಕೋಸ್ಪೋರ್ಟ್ ದಕ್ಷಿಣ ಆಫ್ರಿಕಾ ಮಾರುಕಟ್ಟೆಯಲ್ಲೂ ತಲೆನೋವು ನೀಡಲು ಮುಂದಾಗಿದೆ. ಈ ತಿಂಗಳ ಪ್ರಾರಂಭದಿಂದಲೇ ದಕ್ಷಿಣ ಆಫ್ರಿಕಾಕ್ಕೆ ಕಾರು ರಫ್ತು ಮಾಡಲು ಫೋರ್ಡ್ ನಿರ್ಧರಿಸಿದೆ. ಚೆನ್ನೈನಲ್ಲಿರುವ ಉತ್ಪಾದನಾ ಘಟಕದಿಂದಲೇ ದಕ್ಷಿಣ ಆಫ್ರಿಕಾಕ್ಕೆ ರಫ್ತುಮಾಡಲಾಗುತ್ತಿದೆ.
ಅಂದಹಾಗೆ ಇವೆರಡು ವಿರೋಧಿ ಕಾರುಗಳ ದರಪಟ್ಟಿ ಮಾತ್ರ ಭಾರತೀಯ ಮಾರುಕಟ್ಟೆಗೆ ವೈರುಧ್ಯವಾಗಿದೆ. ಭಾರತದಲ್ಲಿ ಇಕೋಸ್ಪೋರ್ಟ್ ಕಡಿಮೆ ದರದಲ್ಲಿ ದೊರೆತರೆ, ದಕ್ಷಿಣ ಆಫ್ರಿಕಾದಲ್ಲಿ ಡಸ್ಟರ್ ಕಡಿಮೆ ದರದಲ್ಲಿ ಸಿಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಎಲ್ಲ ಮಾದರಿಯ ಕಾರುಗಳು ದಕ್ಷಿಣ ಆಫ್ರಿಕಾದಲ್ಲಿ ಸಿಗುತ್ತಿದೆ. ಫೋರ್ಡ್ ಇಕೋಸ್ಪೋರ್ಟ್ ಕಳೆದ ತಿಂಗಳೇ ನೇಪಾಳ ಮಾರುಕಟ್ಟೆಯಲ್ಲೂ ಲಭ್ಯವಾಗಿತ್ತು. ಚೆನ್ನೌ ಉತ್ಪಾದನಾ ಘಟಕದಿಂದಲೇ ಸುಮಾರು 68 ದೇಶಗಳಿಗೆ ರಫ್ತು ಮಾಡಲು ಫೋರ್ಡ್ ನಿರ್ಧರಿಸಿದೆ. ಆದರೆ ಇದಕ್ಕೆ 2017ರ ಗುರಿ ಇರಿಸಿಕೊಳ್ಳಲಾಗಿದೆ.
ಇದಲ್ಲದೇ ಯೋಯೊಟಾ ಇನೋವಾ ಕೂಡ ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ ತಮ್ಮ ಮಾರಾಟ ಆರಂಭಿಸಿದೆ. ಒಟ್ಟಿನಲ್ಲಿ ಭಾರತೀಯ ಕಾರು ಉತ್ಪಾದಕರಿಗೆ ಆಫ್ರಿಕಾ ಮಾರುಕಟ್ಟೆಗೆ ಮುದನೀಡುತ್ತಿದೆ.
ಮತ್ತೊಂದೆಡೆ ಭಾರತೀಯ ಕಾರು ಉತ್ಪಾದನಾ ಕಂಪನಿಯಾದ ಮಹೀಂದ್ರಾ ಮತ್ತು ಮಹೀಂದ್ರಾ ಕೂಡ ವಿದೇಶದತ್ತ ಮುಖಮಾಡಿದೆ. ತನ್ನ ಮೊದಲ ಹಂತವಾಗಿ ನೇಪಾಳದಲ್ಲಿ ಇ2ಒ ಕಾರಿನ ಮಾರಾಟ ಆರಂಭಿಸಿದೆ. ದೇಶದಲ್ಲಿನ ಉತ್ಪಾದನಾ ಘಟಕದ ಸಾಮರ್ಥ್ಯ ಹೆಚ್ಚಿಸಿಕೊಂಡು ಯಶಸ್ನಿ ಎಸ್‌ಯುವಿಗಳನ್ನು ವಿದೇಶಿ ಮಾರುಕಟ್ಟೆಗೆ ಕೊಂಡೊಯ್ಯಲು ಮಹೀಂದ್ರಾ ಆಸಕ್ತಿ ತೋರಿದೆ.
- ರಾಧೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


