ಪ್ರಭೋ ವಿಠ್ಠಲ
ವಿಠೋಬ ಹೆಸರಿನಿಂದ ಕರೆಯುವ ಶ್ರೀಕೃಷ್ಣನ ಈ ಗುಡಿ, ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ...

ವಿಠೋಬ ಹೆಸರಿನಿಂದ ಕರೆಯುವ ಶ್ರೀಕೃಷ್ಣನ ಈ ಗುಡಿ, ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ ಎಂದರೆ, ಈ ಕ್ಷೇತ್ರದ ಮಹಿಮೆ ಅರ್ಥವಾಗದಿರದು. ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗದ ಈ ಕ್ಷೇತ್ರಕ್ಕೆ ಹರಿ (ವಿಷ್ಣು) ಭಕ್ತ ಪಂಡರಿಯ ಹೆಸರನ್ನೇ ಇಟ್ಟಿರುವುದು ವಿಶೇಷ.
13ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯ ಪುರಾತನ ದೇಗುಲಗಳಲ್ಲಿ ಒಂದು. ಭೀಮಾನದಿ ತಟದಲ್ಲಿದೆ. ಭೀಮಾನದಿಯ ಇನ್ನೊಂದು ಹೆಸರು ಚಂದ್ರಭಾಗಾ. ಈ ನದಿ ಅರ್ಧಚಂದ್ರಾಕಾರದಲ್ಲಿ ಹರಿಯುವುದರಿಂದ ಚಂದ್ರಭಾಗಾ ಎನ್ನಲಾಗುತ್ತದೆ. ಇಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆಂಬ ನಂಬಿಕೆ.
ಮನಸೆಳೆವ ಮೂರ್ತಿಗಳು
ಕಪ್ಪುಶಿಲೆಯಲ್ಲಿ ಕೆತ್ತಿದ ಪಾಂಡುರಂಗನ ವಿಗ್ರಹ 3 ಅಡಿ 9 ಅಂಗುಲ ಎತ್ತರವಿದೆ. ತಲೆ ಮೇಲೆ ಕಿರೀಟ, ಕತ್ತಿನಲ್ಲಿ ತುಳಸೀಮಾಲೆ, ಉದ್ದನೆಯ ನಿಲುವಂಗಿ ಧರಿಸಿರುವ ಪಾಂಡುರಂಗನ ವಿಗ್ರಹ ನಯಮನೋಹರ. ವಿಷ್ಣುವಿನ ಅವತಾರವೆಂದು ನಂಬಿರುವ ಭಕ್ತರು ಈತನನ್ನು ಪಂಡರೀನಾಥ, ವಿಠ್ಠಲ ಎಂದೂ ಹೊಗಳುತ್ತಾರೆ. ಪಾಂಡುರಂಗನ ಎಡಬದಿಯಲ್ಲಿ ಅವನ ಧರ್ಮಪತ್ನಿ ರುಖ್ಮಾಯಿ ಅಂದರೆ, ರುಕ್ಮಿಣಿ ವಿಗ್ರಹವಿದೆ. ಈ ವಿಗ್ರಹ ಕೂಡ ಒಂದು ಇಟ್ಟಿಗೆಯ ಮೇಲೆ, ಎರಡೂ ಕೈಗಳನ್ನು ಸೊಂಟದ ಮೇಲಿರಿಸಿ, ನಿಂತಿರುವಂತಿದೆ. ರುಕ್ಮಿಣಿಗೆ ಪ್ರತ್ಯೇಕ ಗೋಪುರದಿಂದ ಕೂಡಿದ ದೇಗುಲ ನಿರ್ಮಿಸಿರುವುದು ವಿಶೇಷ.
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದ ಈ ಕ್ಷೇತ್ರದ ಪಂಢರಿನಾಥನನ್ನು ಸಂತರಾದ ದಾನಿಶ್ವರ, ಏಕನಾಥ, ನಾಮದೇವ, ತುಕಾರಾಮ, ಪುರಂದರದಾಸ, ವಿಜಯದಾಸ, ಗೋಪಾಲದಾಸ, ಜಗನ್ನಾಥದಾಸ ಮುಂತಾದವರು ಆರಾಧಿಸುತ್ತಾ ಬಂದಿದ್ದಾರೆ. ದೇಗುಲದ ಮೊದಲ ಮೆಟ್ಟಿಲಿಗೆ 'ನಾಮ್ದೇವ್ ಚಿ ಪಯರಿ' (ನಾಮದೇವನ ಮೆಟ್ಟಿಲು) ಎಂದು ಕರೆಯಲಾಗುತ್ತದೆ. ಕಾರಣ, ನಾಮದೇವ ಚಿಕ್ಕವನಿದ್ದಾಗ ಅವರ ತಾಯಿ ಮನೆಯಲ್ಲಿ ಸಿಹಿ ತಿಂಡಿ ಮಾಡಿ ಮೊದಲು ಪಾಂಡುರಂಗನಿಗೆ ನೈವೇದ್ಯ ಮಾಡಿ ನಂತರ ಸೇವಿಸಬೇಕು ಎಂದು ಹೇಳಿದರು. ಹುಡುಗನಾಗಿದ್ದ ನಾಮದೇವ ಸಿಹಿಯನ್ನು ತೆಗೆದುಕೊಂಡು ಹೋಗಿ ದೇವರ ಮುಂದೆ ಇಟ್ಟು ಕುಳಿತುಕೊಂಡ. ಎಷ್ಟು ಸಮಯವಾದರೂ ದೇವರು ನೈವೇದ್ಯ ಸ್ವೀಕರಿಸಲು ಬರಲೇ ಇಲ್ಲ. ಎದೆಗುಂದದ ಈ ಬಾಲಕ ಪ್ರಾರ್ಥನೆ ಮಾಡಿ ತನ್ನ ತಲೆಯನ್ನು ಈ ಮೆಟ್ಟಿಲಿಗೆ ಚಚ್ಚಿಕೊಳ್ಳತೊಡಗಿದ. ಮಗುವಿನ ಮುಗ್ಧತೆ ಕಂಡ ಪಾಂಡುರಂಗ ಪ್ರತ್ಯಕ್ಷನಾಗಿ ನೈವೇದ್ಯ ಸ್ವೀಕರಿಸಿದನಂತೆ. ಆದ್ದರಿಂದ ಈ ಮೆಟ್ಟಿಲಿಗೆ ನಾಮದೇವನ ಹೆಸರು.
ಆಷಾಢ ಮಾಸ ಪ್ರಾರಂಭವಾಗುತ್ತಿದ್ದಂತೆ ವಿಠ್ಠಲನ ಭಕ್ತರು ದಂಡಿಯಾತ್ರೆ ಅಥವಾ ರಥಯಾತ್ರೆ ಪ್ರಾರಂಭಿಸುತ್ತಾರೆ. ಇಂದ್ರಾಣಿ ನದಿ ತಟದ ಆಳಂದಿ ಗ್ರಾಮದಂದ ಸಂತ ಜ್ಞಾನೇಶ್ವರರ ಪಾದುಕೆಗಳನ್ನು ಹೂವಿನ ಪಲ್ಲಕ್ಕಿಯಲ್ಲಿ ಎತ್ತಿನ ಬಂಡಿಯಲ್ಲಿರಿಸಿ ಯಾತ್ರೆ ಪ್ರಾರಂಭಿಸಲಾಗುತ್ತದೆ. ಆಷಾಢ ಏಕಾದಶಿಯ 15 ದಿನ ಮುಂಚೆ ಪ್ರಾರಂಭವಾಗುವ ದಂಡಿಯಾತ್ರೆಯಲ್ಲಿ ಸಾವಿರಾರು ಭಕ್ತರು ಕಾಲ್ನಡಿಗೆಯ ಯಾತ್ರೆ ಕೈಗೊಳ್ಳುತ್ತಾರೆ. ಪಾಂಡುರಂಗನ ನಾಮಸ್ಮರಣೆ ಮಾಡುತ್ತಾ, ಹಾಡುತ್ತಾ, ಕುಣಿಯುತ್ತಾ ಸಾಗುತ್ತಾರೆ. ಆಷಾಢ ಏಕಾದಶಿಯನ್ನು ಪಂಢರಪುರದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. 'ಆಷಾಢಿ ಉತ್ಸವ'ದಲ್ಲಿ 5 ಲಕ್ಷಕ್ಕೂ ಅಧಿಕ ಭಕ್ತರು ಸೇರುತ್ತಾರೆ.
ಇನ್ನಿತರೆ ದೇಗುಲಗಳು
ಪಂಢರಾಪುರದಲ್ಲಿರುವ ಇನ್ನಿತರ ಪ್ರಮುಖ ದೇಗುಲಗಳೆಂದರೆ, ಪದ್ಮಾವತಿ ದೇಗುಲ, ಅಂಬಾಭವಾನಿ ದೇವಸ್ಥಾನ, ನದಿ ಮಧ್ಯದ ಪುಂಡಲೀಕ ದೇವಳ, ವಿಷ್ಣುಪೇಡಾ ಗುಡಿ. ತುಳಜಾಪುರದ ತುಳಜಾಭವಾನಿ ದೇಗುಲ, ಅಕ್ಕಲಕೋಟದ ದತ್ತಾತ್ರೇಯ ಅವತಾರವಾದ ಸ್ವಾಮಿ ಸಮರ್ಥ ದೇವಸ್ಥಾನ, ಗಾಣಗಾಪುರದ ದತ್ತಾತ್ರೇಯ ದೇವಳಗಳು ಪಂಢರಾಪುರದ ಹತ್ತಿರದಲ್ಲಿವೆ.
ಹೀಗೆ ಬನ್ನಿ
ಮಹಾರಾಷ್ಟ್ರದ ಜಿಲ್ಲಾ ಕೇಂದ್ರ ಸೊಲ್ಲಾಪುರದಿಂದ ಪಂಢರಾಪುರ ಕ್ಷೇತ್ರ 62 ಕಿ.ಮೀ. ಹತ್ತಿರದ ರೈಲು ನಿಲ್ದಾಣಗಳೆಂದರೆ, ಕುರ್ಡುವಾಡಿ (50 ಕಿ.ಮೀ.), ಸೋಲ್ಲಾಪುರ (70 ಕಿ.ಮೀ.) ಮತ್ತು ಮೀರಜ್ (110 ಕಿ.ಮೀ.) ಮಹಾರಾಷ್ಟ್ರದ ಮೂಲೆ ಮೂಲೆಗಳಿಂದ ಕ್ಷೇತ್ರಕ್ಕೆ ಬಸ್ ಇದೆ. ಪೂನಾ (215), ಸೊಲ್ಲಾಪುರ (75), ಕರಡ್ (160) ಹತ್ತಿರದ ಏರ್‌ಪೋರ್ಟ್‌ಗಳು.
ದೇವರನ್ನೇ ಕಾಯಿಸಿದ ಭಕ್ತ
ಪುರಾಣದ ಪ್ರಕಾರ ಈ ಹರಿಭಕ್ತ ಪಂಡರಿ ತನ್ನ ತಂದೆ- ತಾಯಿಗಳ ಸೇವೆಯಲ್ಲಿ ನಿರತರಾಗಿದ್ದಾಗ ಸ್ವತಃ ಹರಿಯೇ ಮನೆಗೆ ಬಂದು ಬಾಗಿಲು ತಟ್ಟಿದನಂತೆ. ಮೊದಲು ತಂದೆ-ತಾಯಿ ಸೇವೆ, ನಂತರವೇ ಅತಿಥಿಗಳ ಸೇವೆ ಎಂದು ನಂಬಿದ್ದ ಪಂಡರಿ ಬಾಗಿಲನ್ನೇ ತೆರೆಯಲಿಲ್ಲ. ಮನೆಯ ಮುಂದೆ ಕಾಯಲಿ ಎಂದು ಒಂದು ಇಟ್ಟಿಗೆಯನ್ನು ಒಗೆದ. ಪಾಂಡುರಂಗ ಅದರ ಮೇಲೇ ಎರಡೂ ಕೈಗಳನ್ನು ಸೊಂಟದ ಮೇಲಿಟ್ಟು ಕಾಯುತ್ತಾ ನಿಂತಿದ್ದನು. ನಂತರ ಪಂಢರಿಗೆ ಹಾಗೇ ದರ್ಶನ ನೀಡಿ, ಅಂತೆಯೇ ನೆಲೆಸಿದನು ಎಂದು ಕತೆ.
- ಚಿತ್ರ-ಲೇಖನ: ಆಶಾ ಎಸ್. ಕುಲಕರ್ಣಿ
kulkarni.asha3@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


