ವಾಹನ

ಕತ್ತಲೆಕಾಡಿನ ನೀರೆಯರು

ಕತ್ತಲೆಕಾಡಿನ ನೀರೆಯರು
Published On :

ಕರ್ನಾಟಕದ ಸ್ಕಾಟ್ಲೆಂಡ್ ಖ್ಯಾತಿಯ ಕೊಡಗು ಸರ್ವಕಾಲಕ್ಕೂ ಪ್ರವಾಸಕ್ಕೆ ಯೋಗ್ಯ ಜಿಲ್ಲೆ. ಇಲ್ಲಿನ ತಂಪು ತಂಪು ವಾತಾವರಣ, ಪಶ್ಚಿಮಘಟ್ಟಗಳು ಕಾಲ್ಮುರಿದು ಬಿದ್ದುಕೊಂಡಿವೆಯೇನೋ ಎಂಬಂತೆ ನಿತ್ಯಹರಿದ್ವರ್ಣದ ಗಿರಿಶೃಂಗಗಳು, ರೆಸಾರ್ಟ್‌ಗಳು, ವಿಭಿನ್ನ ಸಂಸ್ಕೃತಿ, ಜಲಪಾತಗಳು ಮತ್ತು ಜಲಸಾಹಸಗಳು ಹೀಗೆ... ಈ ಜಿಲ್ಲೆಯನ್ನು ಜನ ಇನ್ನಿಲ್ಲದಂತೆ ಪ್ರೀತಿಸುವಂತೆ ಮಾಡಿವೆ.
ಈ ಜಿಲ್ಲೆಯಲ್ಲಿ ಒಂದಕ್ಕೊಂದು ಪೈಪೋಟಿ ನೀಡುವಂತೆ ಅನನ್ಯ ಚೆಲುವಿನ ಜಲಪಾತಗಳು ಧುಮ್ಮಿಕ್ಕುತ್ತವೆ. ಅಬ್ಬಿ, ಚೇಲಾವರ, ಮಲ್ಲಳ್ಳಿ, ಇರ್ಪು, ಅಷ್ಟೇ ಏಕೆ, ಲೆಕ್ಕಕ್ಕೆ ಸಿಗುವ 30ಕ್ಕೂ ಹೆಚ್ಚು ಜಲಪಾತಗಳನ್ನು ಹೊಂದಿರುವ ಹಾಗೂ 'ಜಲಪಾತಗಳ ಮಾರ್ಗ' ಎಂದೇ ಪ್ರಸಿದ್ಧಿಯಾಗಿರುವ ಭಾಗಮಂಡಲ- ಕರಿಕೆ ಮಾರ್ಗ. ನಾಲ್ಕೈದು ಝರಿಗಳು ಧುಮ್ಮಿಕ್ಕುವ ಇನ್ನೊಂದು ರಮಣೀಯ ತಾಣವಿದೆ. ಅದೇ ಮಡಿಕೇರಿಯ ಕತ್ತಲೆಕಾಡು- ಚೆಟ್ಟಳ್ಳಿ ಮಾರ್ಗ. ಚೆಟ್ಟಳ್ಳಿಯಲ್ಲಿ ಕಾಫಿ ರಿಸರ್ಚ್ ಸೆಂಟರ್ ಇರುವುದರಿಂದ ಚಿಕ್ಕ ಊರಾದರೂ ಹೆಸರು ಪ್ರಸಿದ್ಧ.
ಮಡಿಕೇರಿಯಿಂದ ಚೆಟ್ಟಳ್ಳಿ ಮಾರ್ಗವಾಗಿ ಸಾಗುವುದೇ ಒಂದು ರೋಚಕ ಅನುಭವ. ಇಲ್ಲಿನ ಕತ್ತಲೆಕಾಡು ಗ್ರಾಮದಿಂದ ಆರಂಭವಾಗುವ ಐದಾರು ಕಿ.ಮೀ. ಘಾಟ್ ಸೆಕ್ಷನ್ ಕಡಿದಾಗಿದೆ. ರಸ್ತೆ ಬದಿಯಲ್ಲೇ ಸುಮಾರು ನಾಲ್ಕೈದು ಜಲಪಾತಗಳು ವೀಕ್ಷಣೆಗೆ ಸಿಗುತ್ತವೆ. ಅಬ್ಯಾಲ ಎಂದೇ ಕರೆಯಲಾಗುವ ಫಾಲ್ (ಮಡಿಕೇರಿಯಿಂದ 13 ಕಿ.ಮೀ.) ಕರಿಯ ಬಂಡೆಗಳ ಮಧ್ಯೆ ಸುಮಾರು 60 ಅಡಿಗಳಿಂದ ಧುಮ್ಮಿಕ್ಕುವುದು ನೋಡುವುದೇ ಚಂದ. ಅಬ್ಯಾಲದ ಜಲಧಾರೆ ಕೆಲವೇ ವರ್ಷ ಹಿಂದಿನವರೆಗೂ ರಸ್ತೆ ಬದಿಯ ಜಲಪಾತವಾಗಿತ್ತು. ಆದರೆ ಇದರ ರಮಣೀಯತೆ ಇಂದು ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಮಡಿಕೇರಿಯ ಚೆಟ್ಟಳ್ಳಿ ಮಾರ್ಗದಲ್ಲಿ ಬಸ್, ಲಾರಿಗಳಂಥ ಬೃಹತ್ ವಾಹನಗಳ ಸಂಚಾರಕ್ಕೆ ನಿಷೇಧವಿದೆ. ಆದರೂ ಪ್ರವಾಸಿಗರು ಖಾಸಗಿ ವಾಹನಗಳಲ್ಲಿ ಧಾವಿಸುತ್ತಾರೆ. ಮಳೆಗಾಲದಲ್ಲಿ ಗುಡ್ಡ ಕುಸಿತ ಎದುರಾಗುವ ಸಾಧ್ಯತೆಗಳಿವೆ. ರಾಜ್ಯ ಹೆದ್ದಾರಿ ಆಗಿಂದಾಗ್ಗೆ ಬಂದ್ ಆಗುವಾಗ ಎಲ್ಲರೂ ಸುಂಟಿಕೊಪ್ಪ ಮಾರ್ಗಕ್ಕೆ ಸೇರಲು ಚೆಟ್ಟಳ್ಳಿ ರಸ್ತೆಯಲ್ಲಿಯೇ ಸಾಗುತ್ತಾರೆ. ಇದರಿಂದಾಗಿಯೂ ಅಬ್ಯಾಲ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ.

ಹೀಗೆ ಬನ್ನಿ

ಮಡಿಕೇರಿಯಿಂದ ಸಿದ್ದಾಪುರ ಮಾರ್ಗದಲ್ಲಿ 16 ಕಿ.ಮೀ. ಸಾಗಿ ಚೆಟ್ಟಳ್ಳಿ ತಲುಪಬಹುದು. ಮೈಸೂರು ಮಾರ್ಗವಾಗಿ ಬರುವವರು ಸುಂಟಿಕೊಪ್ಪದಿಂದ 14 ಕಿ.ಮೀ. ಸಾಗಿಯೂ ಚೆಟ್ಟಳ್ಳಿ ಸಮೀಪಿಸಬಹುದು.

- ಪುತ್ತರೀರ ಕರುಣ್ ಕಾಳಯ್ಯ, ಚೆಟ್ಟಳ್ಳಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.