ವಾಹನ

ಒನಕೆ ಅಬ್ಬಿ

ಒನಕೆ ಅಬ್ಬಿ
Published On :

ಕಲ್ಲು ಬಂಡೆಯ ಮಗ್ಗುಲಿನ ಸ್ವಲ್ಪ ಹಾಸುಗಲ್ಲಿನ ಮೇಲೆ ಬೋರಲು ಮಲಗಿ, ಪಕ್ಕದಲ್ಲಿರುವ ಮರದ ಗಟ್ಟಿ ಬೇರನ್ನು ಬಿಗಿಹಿಡಿದು, ಪ್ರಪಾತವನ್ನು ಬಗ್ಗಿ ನೋಡಿದಾಗ ಮಾತ್ರ ಕಾಣುವ ಹನಿ ಹನಿ ನೀರ ಸಿಂಚನದ ದೃಶ್ಯ ವೈಭವ.  ಅಬ್ಬಾ, ಇದೇನು ಜಲಪಾತವೋ... ನೀರ ಒನಕೆಯೋ ಎಂಬ ಕುತೂಹಲ ತರಿಸದಿರದು.
ಹೌದು. ಇದರ ಹೆಸರೇ ಒನಕೆ ಅಬ್ಬಿ.
ಹೀಗೆ ಬಗ್ಗಿ ಒನಕೆ ಅಬ್ಬಿಯ ನೀರಿನ ಮುತ್ತಿನ ಮಣಿಗಳು ಪ್ರಪಾತಕ್ಕೆ ಬೀಳುವ ದೃಶ್ಯಕಾವ್ಯ ಪೂರ್ಣ ಪ್ರಮಾಣದಲ್ಲಿ ಕಣ್ಣ ಕ್ಯಾಮರಾಕ್ಕೆ ಸಿಗದಿದ್ದರೂ, ಎರಡು ಹಂತದಲ್ಲಿ ಕೆಳಗಿನ ಹೊಂಡಕ್ಕೆ ಬೀಳುವ ಅಪರೂಪದ ದೃಶ್ಯವನ್ನು ಮನದಲ್ಲಿ ತುಂಬಿಸಿಕೊಳ್ಳಲು ಎಂಥವನಿಗೂ ಎಂಟೆದೆ ಬೇಕೇಬೇಕು.
ಪಶ್ಚಿಮಘಟ್ಟದ ಆಗುಂಬೆ ಭಾಗದಲ್ಲಿ ಈಗಲೂ ಜನಸಾಮಾನ್ಯರಿಂದ ಕೊಂಚ ದೂರವಿರುವ ಒನಕೆ ಅಬ್ಬಿಯ ನಿಸರ್ಗದತ್ತ ವೈಭವವೇ ಅಂಥದ್ದು. ಆಗುಂಬೆ ಎಂದಾಕ್ಷಣ ದಕ್ಷಿಣದ ಚಿರಾಪುಂಜಿ ಈಗ ಪುಟಾಣಿಗಳ ಪಠ್ಯದ ವಸ್ತುವಷ್ಟೇ. ಅದು ಬಿಟ್ಟರೆ ಸೂರ್ಯಾಸ್ತಮಾನ. ಹೆಚ್ಚು ಮಳೆ ಬೀಳುವ ದಕ್ಷಿಣದ ಚಿರಾಪುಂಜಿ ಎಂಬ ಪದವನ್ನು ಆಗುಂಬೆ ಹಲವು ವರ್ಷಗಳಿಂದೀಚೆಗೆ ಕಳೆದುಕೊಂಡಿದೆ. ಸೂರ್ಯಾಸ್ತಮಾನ ವೀಕ್ಷಿಸುವ ಸಂದರ್ಭ ವರ್ಷದಲ್ಲಿ ಕೇವಲ 3-4 ತಿಂಗಳು ಮಾತ್ರ. ಇಂಥ ವಿಶೇಷತೆಗಳಲ್ಲಿ ವಿಭಿನ್ನವಾಗಿರುವುದು ಒನಕೆ ಜಲಪಾತ.
ವರ್ಷವಿಡೀ ಧುಮ್ಮಿಕ್ಕುವ ಈ ಒನಕೆ ಅಬ್ಬಿ ಜಲಪಾತ ಸುಮಾರು 400 ಅಡಿ ಪ್ರಪಾತಕ್ಕೆ ವರ್ಷವಿಡೀ  ವಯ್ಯಾರದಿಂದ ಸುರಿಯುತ್ತದೆ. ಬಳಿಕ ಘಟ್ಟದ ಕೆಳಗಿಳಿದು ಸೀತಾನದಿಯಲ್ಲಿ ಬೆರೆತು ಅರಬ್ಬೀ ಸಮುದ್ರ ಸಂಗಮವಾಗುತ್ತದೆ. ಮೇಲಿನಿಂದ ಕೆಳಗೆ ಒನಕೆಯಂತೆ ನೇರವಾಗಿ ಕೆಳಗೆ ಬಿದ್ದರೂ, ಪ್ರಕೃತಿಯ ಮಡಿಲ ತನ್ನ  ಸೊಬಗನ್ನು ಹೆಚ್ಚಿಸಿಕೊಂಡಿದೆ. ಈ ಜಲಪಾತದ ರುದ್ರ ರಮಣೀಯತೆ ಮಾತ್ರ ಅಕ್ಷರಗಳಲ್ಲಿ ವರ್ಣನೆಗೆ ಸಿಗುವುದೇ ಇಲ್ಲ. ಕಣ್ಣಾರೆ ನೋಡಿಯೇ ಅನುಭವಿಸಬೇಕು.

ಅಬ್ಬಿಯ ಮೂಲ
ಆಗುಂಬೆಯ ಪ್ರವಾಸಿ ಮಂದಿರದ ಸನಿಹದಲ್ಲೇ ಇರುವ ಅಬ್ಬಿಯ ಮೊದಲ ಹೆಸರೇ ಜಿಡ್ಡಿತಜ್ಜಿ ಹಳ್ಳ. ಘಾಟಿ ಬದಿಯಲ್ಲೇ ಚಿಕ್ಕ ತೊರೆಯಾಗಿ ಹರಿದು ಎರಡೂವರೆ ಕಿ.ಮೀ. ಕ್ರಮಿಸಿ ಜಲಪಾತದ ಸಮೀಪಕ್ಕೆ ಬರುವಾಗಲೂ ತನ್ನ ಹಳ್ಳದ ಸ್ವರೂಪ ಬದಲಿಸಿಕೊಳ್ಳದೇ ಹಾಗೆಯೇ ನೇರವಾಗಿ, ಜಲಪಾತವಾಗಿ ಮೈದಳೆಯುತ್ತದೆ ಈ ಹಳ್ಳ. ಮುಂದೆ ಒನಕೆ ಅಬ್ಬಿಯಾಗಿ ಮರುಸೃಷ್ಟಿಯಾಗಿಬಿಡುತ್ತದೆ.
ಆಗುಂಬೆ ಘಾಟಿಗೆ ಹೋಗುವ ಮಾರ್ಗ ಮಧ್ಯೆ ರಕ್ಷಿತ ಗಿಡಮೂಲಿಕಾ ವನದೊಳಗೆ ಪ್ರವೇಶ ಮಾಡಿ ಒನಕೆ ಅಬ್ಬಿ ನೋಡಲು ಚಿಕ್ಕ ಚಾರಣ ನಡೆಸಬೇಕು. ಗಿಡಮೂಲಿಕಾ ವನದೊಳಗೆ ಪ್ರವೇಶಿಸಲು ಅನುಮತಿ ಪಡೆಯಬೇಕು. ಚಾರಣಿಗರ ಜೊತೆ ಅರಣ್ಯ ಇಲಾಖೆಯ ವನಪಾಲಕರೂ ದಾರಿತೋರಿಸಲು ಬರುತ್ತಾರೆ.

ಹೀಗೆ ಬನ್ನಿ...

ಶಿವಮೊಗ್ಗದಿಂದ ತೀರ್ಥಹಳ್ಳಿ ಮಾರ್ಗವಾಗಿ ಆಗುಂಬೆಗೆ 90 ಕಿ.ಮೀ. ಪ್ರಯಾಣ. ಆಗುಂಬೆ ಪಟ್ಟಣದಿಂದ 3 ಕಿ.ಮೀ. ದೂರ. ಚಾರಣದ ಸಮಯದಲ್ಲಿ ಉಳಿದುಕೊಳ್ಳಲು ಆಗುಂಬೆಯಲ್ಲಿ ಉತ್ತಮ ಹೋಂ ಸ್ಟೇಗಳೂ ಇವೆ. ಮನೆಯ ವಾತಾವರಣದಲ್ಲಿ ಮಲೆನಾಡಿನ ತಿನಿಸುಗಳನ್ನು ಸವಿಯಬಹುದು.

-ಚಿತ್ರ-ಲೇಖನ: ಜಿ.ಆರ್. ಸತ್ಯನಾರಾಯಣ ,
grstth4521@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.