ಜೈನಯಾತ್ರೆ
ಅಹಿಂಸಾ ತತ್ವವನ್ನೇ ಜಿನಧ್ಯಾನ ಎಂಬುದು ಜೈನಧರ್ಮದ ಧ್ಯೇಯವಾಕ್ಯ.

ಸಮ್ಮೇದ ಶಿಖರ್ಜಿ ದರ್ಶನವೆಂದರೇ ಹತ್ತಾರು ಬೆಟ್ಟಗಳಲ್ಲಿ ಹತ್ತಿ ಇಳಿದು ತೀರ್ಥಂಕರರು ಮೋಕ್ಷಗೊಂಡ ತಾಣ, ಅವರ ಚರಣಗಳನ್ನು ಸಂದರ್ಶಿಸುವುದಾಗಿದೆ...
ಅಹಿಂಸಾ ತತ್ವವನ್ನೇ ಜಿನಧ್ಯಾನ ಎಂಬುದು ಜೈನಧರ್ಮದ ಧ್ಯೇಯವಾಕ್ಯ. ಜೈನಧರ್ಮಕ್ಕೆ ಭದ್ರ ಬುನಾದಿ ಹಾಕಿದವರು ಒಬ್ಬಿಬ್ಬರು ತೀರ್ಥಂಕರರಲ್ಲ. 24 ತೀರ್ಥಂಕರರು. ಸಾವಿರಾರು ಜೈನ ಬಸದಿಗಳು, ಪವಿತ್ರ ಚರಣಗಳು, ಮೂರ್ತಿಗಳು ಅವರು ಹೋದಲ್ಲೆಲ್ಲ ನಿರ್ಮಾಣಗೊಂಡಿವೆ. ಅಂಥವುಗಳಲ್ಲೊಂದು ಜಾರ್ಖಂಡ್‌ನ ಗಿರಿಡಿ ಜಿಲ್ಲೆಯ ಪಾರಸನಾಥಬೆಟ್ಟ ಅಥವಾ ಸಮ್ಮೇದ ಶಿಖರ್ಜಿ ಕ್ಷೇತ್ರವೂ ಒಂದು.
ಕರ್ನಾಟಕದಲ್ಲೂ ಜೈನಧರ್ಮ ಹೆಚ್ಚು ಪ್ರಸಿದ್ಧಿ ಪಡೆದಿತ್ತು ಎಂಬುದಕ್ಕೆ ಹಲವು ಬಸದಿಗಳು ಸಾಕ್ಷಿಯಾಗುತ್ತವೆ. ಶಿವಮೊಗ್ಗ ಜಿಲ್ಲೆಯ ಶ್ರೀಹೊಂಬುಜ ಕ್ಷೇತ್ರ, ಉಡುಪಿಯ ಕಾರ್ಕಳ, ಮೂಡಬಿದ್ರೆ, ಹಾಸದ ಶ್ರವಣಬೆಳಗೊಳ ಮೊದಲಾದ ಕ್ಷೇತ್ರಗಳು ಜೈನರ ಪವಿತ್ರ ತೀರ್ಥಕ್ಷೇತ್ರಗಳು. ಇವುಗಳನ್ನು ಅತಿಶಯ ಕ್ಷೇತ್ರಗಳೆನ್ನಲಾಗಿದೆ. ಅಂತೆಯೇ ಸಿದ್ಧಕ್ಷೇತ್ರಗಳೆಂದು ಇನ್ನೊಂದು ಭೇದದಲ್ಲಿ ಪ್ರಕೃತ ಶ್ರೀಸಮ್ಮೇದ ಶಿಖರ್ಜಿ ತೀರ್ಥಕ್ಷೇತ್ರ, ಕೈಲಾಸಗಿರಿ, ಚಂಪಾಪುರಿ, ಗಿರಿನಾರಜೀ, ಪಾವಾಪುರಿಗಳು ಪವಿತ್ರ ಸಿದ್ಧಕ್ಷೇತ್ರಗಳಾಗಿವೆ. ಇವುಗಳಲ್ಲಿ ಸಮ್ಮೇದ ಶಿಖರ್ಜಿ ಸಿದ್ಧಕ್ಷೇತ್ರವನ್ನು ಜೈನರು ಶಾಶ್ವತ ತೀರ್ಥಕ್ಷೇತ್ರವೆಂದೂ ಗೌರವಿಸುತ್ತಾರೆ.
ಕಾಲಚಕ್ರದ ಪ್ರತೀ ಪರ್ವಕಾಲದಲ್ಲಿ ಅಘಾತಿ ಕರ್ಮಗಳನ್ನು ಗೆದ್ದು ಪರಮಸಿದ್ಧ ಪದವಿಗೆ ಹೋದರೆ, ಈ ವರ್ತಮಾನದ ಕಾಲದ ಚತುರ್ವಿಂಶತಿ ತೀರ್ಥಂಕರರ ಪೈಕಿ 20ನೇ ತೀರ್ಥಂಕರರಾದ ಭಗವಾನ್ ಶ್ರೀ ವೃಷಭನಾಥಸ್ವಾಮಿ ಕೈಲಾಸಗಿರಿ, ಭಗವಾನ್ ಶ್ರೀವಾಸುಪೂಜ್ಯಸ್ವಾಮಿ ಶ್ರೀಚಂಪಾಪುರಿ, ಭಗವಾನ್ ಶ್ರೀನೇಮಿನಾಥಸ್ವಾಮಿ ಶ್ರೀಗಿರಿನಾರ್ ಕ್ಷೇತ್ರದಲ್ಲಿ ಮತ್ತು ಭಗವಾನ್ ಶ್ರೀಮಹಾವೀರಸ್ವಾಮಿ ಶ್ರೀಪಾವಾಪುರಿ ಕ್ಷೇತ್ರದಲ್ಲಿ ಮೋಕ್ಷ ಹೊಂದಿದ್ದಾರೆ.
ಸಮ್ಮೇದ (ಸಮೂಹ) ಶಿಖರ್ಜಿ ದರ್ಶನವೆಂದರೇ ಹತ್ತಾರು ಬೆಟ್ಟಗಳಲ್ಲಿ ಹತ್ತಿ ಇಳಿದು ತೀರ್ಥಂಕರರು ಮೋಕ್ಷಗೊಂಡ ತಾಣ, ಅವರ ಚರಣಗಳನ್ನು ಸಂದರ್ಶಿಸುವುದಾಗಿದೆ. ಜೈನರ ವಿವಿಧ ಸಂಘಟನೆಗಳು ಭಕ್ತರ ಸುರಕ್ಷೆ ದೃಷ್ಟಿಯಿಂದ ಸಿಮೆಂಟ್ ರಸ್ತೆಗಳು, ಕಾಲುದಾರಿಗಳನ್ನು ನಿರ್ಮಿಸಿದ್ದಾರೆ. ಹಚ್ಚಹಸಿರು ಗಿರಿಶ್ರೇಣಿಗಳನ್ನೇರಿ ದರ್ಶನ ಪಡೆಯುವುದು ಇಲ್ಲಿನ ವಿಶೇಷ. ದಾರಿಯುದ್ದಕ್ಕೂ ಮಂತ್ರ ಪಠಿಸುತ್ತಾ ಜಯಘೋಷ ಹಾಕುತ್ತಾ ಭಕ್ತರು ಸಾಗುತ್ತಿರುತ್ತಾರೆ. ಬೆಟ್ಟ ಹತ್ತುವಾಗ ಅಕ್ಷತೆ, ಫಲ, ಟಾರ್ಚ್ ಲಾಠಿ (ಕೋಲು) ಪಯಣಕ್ಕೆ ಸಿದ್ಧಪಡಿಸಿಕೊಳ್ಳಬೇಕು. ಬೆಟ್ಟ ಹತ್ತಲು ಆಗದವರು ಮುಖ್ಯದ್ವಾರದಲ್ಲೇ ಜಮೇದಾರರಿಗೆ ಚೀಟಿ ತೋರಿಸಿದರೆ ಡೋಲಿ ವ್ಯವಸ್ಥೆ ಮಾಡುತ್ತಾರೆ. ಮುಂಜಾನೆ 4ರಿಂದಲೇ ಧರ್ಮಶಾಲೆಯ ಮುಖ್ಯದ್ವಾರ ತೆರೆದಿರುತ್ತದೆ.
ದಾರಿಯುದ್ದಕ್ಕೂ ತೀರ್ಥಂಕರರ ಕೂಟ ಸಮೂಹ ಮಂದಿರ, ಸಮವಸರಣ ಮಂದಿರ, ಬೀಸ್-ತೀಸ್ ಚವ್ವೀಸಿ ಮಂದಿರಗಳು ಯಾತ್ರಿಗಳನ್ನು ಸೆಲೆಯುತ್ತವೆ. ಇಲ್ಲಿನ ಮಧುವನದಿಂದ 4 ಕಿ.ಮೀ. ಅಂತರದಲ್ಲಿ 'ಗಂಧರ್ವನಾಲಾ', 'ಸೀತಾನಾಲಾ' ಹೆಸರಿನ ಅಪಾಯವಿಲ್ಲದ ಕಿರು ನದಿಗಳನ್ನು ದಾಟಿ ಸಾಗಬೇಕಿದೆ. ಕಡಿದಾದ ಮಾರ್ಗ, ಮೆಟ್ಟಿಲು ಹತ್ತಿಯೂ ಸಾಗಬೇಕಿದೆ. ದಾರಿಯುದ್ದಕ್ಕೂ ಗಿಡ- ಮರಗಳ ತಂಪು ಮೋಹಕ. ದಾರಿಯ ಅಲ್ಲಲ್ಲಿ ಆದಿವಾಸಿಗಳು ಗಿಡಮೂಲಿಕೆಗಳನ್ನು ಮಾರುತ್ತಾರೆ. ಇಲ್ಲಿನ ಛೋಪಡಾ ಕುಂಡ ಎಂಬಲ್ಲಿ ಭಗವಾನ್ ಪಾರ್ಶ್ವನಾಥರ ಪದ್ಮಾಸನ ಮೂರ್ತಿ, ಖಡ್ಗಾಸನದಲ್ಲಿರುವ ಚಂದ್ರಪ್ರಭರ ಮೂರ್ತಿ, ಬಾಹುಬಲಿಸ್ವಾಮಿ ಮೂರ್ತಿ ಇದೆ. ಇಲ್ಲಿ ಉಚಿತವಾಗಿ 'ಕಾಡಾ' (ಕಷಾಯ), ಟೀ, ನೀರು ನೀಡಲಾಗುತ್ತದೆ. ದಿಗಂಬರ ಜೈನ ಸಂಪ್ರದಾಯದ ಪ್ರಕಾರ ಇಲ್ಲಿ ಒಟ್ಟು 25 ಕೂಟಗಳಿವೆ. ಪ್ರತಿಯೊಂದು ಕೂಟಗಳಲ್ಲಿಯೂ ಆಯಾ ತೀರ್ಥಂಕರರ ಚರಣ ಪ್ರತಿಷ್ಠಾಪಿಸಲಾಗಿದೆ.
ಮಧುವನದಿಂದ 38 ಕಿ.ಮೀ. ಪಯಣಿಸಿದರೆ ನಿಮಿಯಾ ಘಾಟ್ ಎಂಬಲ್ಲಿ ವಿಶ್ರಾಂತಿ ಪಡೆಯಬಹುದು. ಶ್ರೀ ಸಮ್ಮೇದ ಶಿಖರ್ಜಿ ಪರ್ವತ ಪ್ರದಕ್ಷಿಣೆಗೆ ಹೋಗುವವರು 25- 50 ಜನರ ಗುಂಪಿದ್ದರೆ ಕ್ಷೇಮ. ಈ 48 ಕಿ.ಮೀ. ದಾರಿಯುದ್ದಕ್ಕೂ ಅನೇಕ ಹಳ್ಳಿಗಳಲ್ಲಿ ಆದಿವಾಸಿಗಳ ಗ್ರಾಮಗಳು, ಹೊಲ- ಗದ್ದೆ, ಕಾಡು- ಮೇಡು, ನದಿಗಳನ್ನು ದಾಟಬೇಕಾಗುತ್ತದೆ. ಮಧುವನದಲ್ಲಿ ಹತ್ತಾರು ಧರ್ಮ ಶಾಲೆಗಳು, ಜಿನ ಮಂದಿರಗಳು, ಮ್ಯೂಸಿಯಂ, ಆಸ್ಪತ್ರೆಗಳಿರುವುದು ಪ್ರವಾಸಕ್ಕೆ ಮನಸಾಗುತ್ತದೆ.
ಹೀಗೆ ಬನ್ನಿ...
ರೈಲಿನಲ್ಲಿ ಬರುವವರು ಗಯಾ- ಧನಬಾದ್ ರೈಲು ಮಾರ್ಗದ ಪಾರಸನಾಥ್ ರೇಲ್ವೆ ಸ್ಟೇಷನ್‌ನಲ್ಲಿ ಇಳಿಯಬೇಕು. ಇದು 'ಇಸರೀ ಬಜಾರ್' ಹಳ್ಳಿಯಲ್ಲಿದೆ. ಇಲ್ಲಿಂದ ಖಾಸಗಿ ವಾಹನಗಳ (22 ಕಿ.ಮೀ.) ಮೂಲಕ ಮಧುವನ ತಲುಪಬಹುದು. ಜಿಲ್ಲಾ ಕೇಂದ್ರ ಗಿರಡಿಯಿಂದ ಮಧುವನಕ್ಕೆ 32 ಕಿ.ಮೀ.
ಬೆಂಗಳೂರಿನಿಂದ (ಯಶವಂತಪುರ) ಹೌರಾ ಮೂಲಕ ಇಸರಿಯ ಪಾರಸನಾಥ ರೇಲ್ವೆ ಸ್ಟೇಷನ್ ತಲುಪಿ ಬೆಂಗಳೂರಿನಿಂದ (ಯಶವಂತಪುರ) ಭುವನೇಶ್ವರ ಮಾರ್ಗವಾಗಿಯೂ ತಲುಪಬಹುದು. ಹುಬ್ಬಳ್ಳಿಯಿಂದ ವಿಜಯವಾಡ- ಹೌರಾ- ಪಾರಸನಾಥ ಮಾರ್ಗ ಮೂಲಕವೂ ತಲುಪಬಹುದು.
- ಶಿವಮೊಗ್ಗ ಗಿರಿಧರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


