ವೀಲ್ ಫಾಲ್

ಹಚ್ಚಹಸುರಿನ ದಟ್ಟ ಕಾಡು, ಬೃಹದಾಕಾರದ ಸಾಲು ಸಾಲು ಮರಗಳು, ಹೆಬ್ಬಂಡೆಗಳ ನಡುವೆ ಹರಿಯುವ ನೀರ ಝರಿ ಚಕ್ರಾ ಜಲಪಾತ. ಪಶ್ಚಿಮಘಟ್ಟದ ನಿತ್ಯಹರಿದ್ವರ್ಣ ಕಾಡಿನ ನಡುವೆ ಕಂಡುಬರುವ, ಹಂತ ಹಂತವಾಗಿ ಧುಮ್ಮಿಕ್ಕುವ ಈ ಜಲಪಾತ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಗರ ಹೋಬಳಿಯ ಚಕ್ರಾ ಡ್ಯಾಂ ಸಮೀಪ ಅಡವಿಯಲ್ಲಿದೆ. ನೋಡುಗರ ಮೈ ನವಿರೇಳಿಸುವ ಈ ಫಾಲ್‌ಗೆ ತೆರಳುವುದು ಕಠಿಣಾತಿಕಠಿಣ. ಸೂಕ್ತ ಮಾರ್ಗ ಇಲ್ಲಿಲ್ಲ. ಮಳೆಗಾಲದಲ್ಲಿ ಚಾರಣ ಕಷ್ಟ.
ಚಕ್ರಾ ಜಲಾಶಯಕ್ಕೆ ಹೋಗುವ ಮಾರ್ಗದಿಂದ ಅಡ್ಡಲಾಗಿ ಸುಮಾರು 2 ಕಿ.ಮೀ. ದೂರದಲ್ಲಿ ಈ ಜಲಪಾತ. ವನವಾಸಿಗಳಿರಲಿ ಸುತ್ತಮುತ್ತ ನಿವಾಸಿಗಳು ಸೇರಿದಂತೆ ಈ ಜಲಾಧಾರೆಯನ್ನು ನೋಡದವರ ಸಂಖ್ಯೆ ಹೆಚ್ಚಿರಲಿಕ್ಕಿಲ್ಲ. ಸುಮಾರು 75 ರಿಂದ 100 ಅಡಿ ಎತ್ತರದಿಂದ ಧುಮುಕುವ ಈ ಫಾಲ್‌ನ ಭೋರ್ಗರೆತ ಕಾಡಿನ ಮೂಲೆ ಮೂಲೆಯಲ್ಲೂ ಪ್ರತಿಧ್ವನಿಸುತ್ತದೆ. ಆದರೆ, ಈ ಜಲಪಾತ ಎಲ್ಲಿದೆ ಎಂಬುದು ದಟ್ಟ ಕಾಡಿನಲ್ಲಿ ಕಂಡುಹಿಡಿಯುವುದು ಕಷ್ಟಸಾಧ್ಯ. ಗೂಗಲ್ ಅರ್ತ್‌ನಲ್ಲಿ ಕಂಡುಬರುವ ಈ ಪ್ರದೇಶಕ್ಕೆ ತಲುಪುವುದು ಅಂದುಕೊಂಡಷ್ಟು ಸುಲಭವಲ್ಲ.
ಬೇಸಗೆಯಲ್ಲಿ ನೀರಿನ ಹರಿವು ಕಡಿಮೆ ಇದ್ದರೂ ಕೂಡ ಸುತ್ತಲೂ ಸಮೃದ್ಧ ಪ್ರಕೃತಿಯ ನಡುವೆ ಈ ಜಲಧಾರೆ ತನ್ನದೇ ಆದ ವೈಶಿಷ್ಟ್ಯದ ಸೊಬಗು ಮೂಡಿಸುವಲ್ಲಿ ಅನುಮಾನವಿಲ್ಲ. ಚಕ್ರಾ ಜಲಾಶಯದ ನಂತರ ಸಾಗುವ ಚಕ್ರಾ, ಗಿರಿಕಂದರಗಳನ್ನು ಸೀಳಿಕೊಂಡು ಮುನ್ನುಗ್ಗುತ್ತ ಮೂರು ಹಂತದಲ್ಲಿ ಧುಮ್ಮಿಕ್ಕುತ್ತದೆ. ಅಲ್ಲದೆ, ಅಂತಿಮವಾಗಿ ಧುಮ್ಮಿಕ್ಕುವ ಜಲಧಾರೆಯ ಕೆಳಭಾಗದಲ್ಲಿ ನೀರೊಳಗೆ ಚಕ್ರಾಕೃತಿಯ ಕವಲೊಂದು ಗಮನ ಸೆಳೆಯುತ್ತದೆ.
ಚಕ್ರಾ ಡ್ಯಾಂಗೆ ಸಾಗುವ ಹೆದ್ದಾರಿಯಿಂದ ತುಸು ದೂರದಲ್ಲಿರುವ ಜಲಧಾರೆಗೆ ಕಾನನದೊಳಗೆ ನಡೆದೇ ಸಾಗಬೇಕು. ಸಂಜೆಯ ಮಬ್ಬು ಆವರಿಸುವುದರೊಳಗೆ ಇಲ್ಲಿಂದ ವಾಪಾಸಾಗಬೇಕು. ಇಲ್ಲವಾದಲ್ಲಿ ದಟ್ಟ ಕಾಡಿನಲ್ಲೆ ಹಾದಿ ತಪ್ಪಬಹುದು. ಮಳೆ ಆರಂಭವಾಗುತ್ತಿದ್ದಂತೆ ಇಂಬಳ ಕಾಟ. ಅದೇನೇ ಪ್ರಯಾಸವಾದರೂ ಜಲಧಾರೆಯ ಸ್ಪರ್ಶವಾಗುತ್ತಿದ್ದಂತೆಯೇ ಮನಸ್ಸು ಹಗುರವಾಗುವುದರಲ್ಲಿ ಅನುಮಾನ ಬೇಡ. ಕೈಯಳತೆಗೆ ಸಿಗದ ಬುಡದ ಬೃಹತ್ ಮರಗಳು, ಚಿತ್ರ-ವಿಚಿತ್ರವಾಗಿ ಕಣ್ಣು ಕೋರೈಸುವ ಹೆಬ್ಬಂಡೆಗಳು, ಜಲಸೆರೆಯ ಸೊಬಗಿಗೆ ಕಳಶವಿಟ್ಟಂತೆ ಗೋಚರವಾಗುತ್ತವೆ.
ಈಗಾಗಲೇ ಚಕ್ರಾ ನಗರಕ್ಕೆ ವನ್ಯಜೀವಿ ಸಂಶೋಧನಾ ಕೇಂದ್ರ ಮಂಜೂರಾಗಿದ್ದು, ಆರಂಭಿಕ ಹಂತದ ಕಾಮಗಾರಿ ನಡೆಯುತ್ತಿದೆ. ಈ ಪ್ರದೇಶಕ್ಕೆ ಹೊಂದಿಕೊಂಡಂತೆ ಅರಣ್ಯದಲ್ಲೇ ಸುಮಾರು 20 ಹೆಕ್ಟೇರ್ ಪ್ರದೇಶದಲ್ಲಿ ನೈಸರ್ಗಿಕ ಗಿಡ ಬೆಳೆಸಲು ಸಂಶೋಧನಾ ಕೇಂದ್ರ ಸಿದ್ಧತೆ ನಡೆಸಿದೆ. ಈ ಅಭಯಾರಣ್ಯದಲ್ಲಿ ಕಿರಾಲ್ ಭೋಗಿ, ಗುಳುಮಾವು, ರಾಮಪತ್ರೆ, ಸುರಹೊನ್ನೆ, ಸಾಗುವಾನಿ ಸೇರಿದಂತೆ ಬೆಲೆ ಬಾಳುವ ಸಸ್ಯಗಳನ್ನು ಬೆಳೆಸುವ ಮನಸ್ಸು ಮಾಡಿರುವುದು ನೈಜ ಕಾಡಿನ ವಾತಾವರಣಕ್ಕೆ ಪೂರಕವಾಗಲಿದೆ. ಕಾಮಗಾರಿ ಸಂದರ್ಭದಲ್ಲಿ ಈ ಫಾಲ್ಸ್‌ಗೆ ಸಾಗುವ ದಾರಿಯನ್ನು ಕೊಂಚ ಖುಲ್ಲಾ ಮಾಡಿದೆ. ಹೆಚ್ಚು ಬೆಳಕಿಗೆ ಬಾರದ ಈ ಚಕ್ರಾ ಫಾಲ್ ಪ್ರದೇಶ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ತಾಣವಾಗಿ ರೂಪಿಸಬೇಕಿದೆ.
ಹೀಗೆ ಬನ್ನಿ
ಶಿವಮೊಗ್ಗದಿಂದ ಹೊಸನಗರ ಮಾರ್ಗವಾಗಿ ನಗರ ಹೋಬಳಿ ತಲುಪಿ ಚಕ್ರಾ ಡಾಂ ತಲುಪಬೇಕು. ಚಕ್ರಾ ನಗರದಿಂದ ಚಕ್ರಾ ಡ್ಯಾಂ 6 ಕಿ.ಮೀ., ಇಲ್ಲಿಂದ ಕಾಡಿನಲ್ಲಿ 2 ಕಿ.ಮೀ. ಸಾಗಬೇಕು.
-ಚಿತ್ರ-ಲೇಖನ: ರವಿ ಬಿದನೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


