ಅಂತರಗಂಗೆ

ಶತಶೃಂಗ ಪರ್ವತಗಳ ಸಾಲಿನ ಅಂತರಗಂಗೆ ಬೆಟ್ಟ ಕೋಲಾರ ಜಿಲ್ಲೆಯ ಸೊಬಗನ್ನು ಹೆಚ್ಚಿಸಿದೆ. ಈ ಬೆಟ್ಟದಲ್ಲಿ ಸುಮಾರು 700-800 ವರ್ಷಗಳ ಹಿಂದೆ ಜಮದಗ್ನಿ ಮಹಾಋಷಿಗಳು ಸ್ಥಾಪಿಸಿದ್ದಾರೆಂದು ಹೇಳುವ ಶ್ರೀವಿಶ್ವನಾಥ ಸ್ವಾಮಿ ಮೂರ್ತಿ ಇದೆ. ಇತಿಹಾಸ ಪ್ರಸಿದ್ಧ ಅಂತರಗಂಗೆ ಬೆಟ್ಟ ದಕ್ಷಿಣ ಕಾಶಿ ಎಂದು ಹೆಸರಾಗಿದ್ದು, ಕರ್ನಾಟಕದಲ್ಲಿ ಪವಿತ್ರ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸೋದ್ಯಮ ಕ್ಷೇತ್ರವಾಗಿಯೂ ಅಭಿವೃದ್ಧಿಯಾಗುತ್ತಿದೆ.
ದೇವಸ್ಥಾನದ ಕೆಳಭಾಗದಲ್ಲಿ ಅನೇಕ ವರ್ಷಗಳಿಂದ ಬಸವನ ಬಾಯಿಂದ ಪವಿತ್ರ ಗಂಗೆ ಹರಿಯುತ್ತಿದೆ. ಈ ನೀರು ಹರಿಯುವ ಮೂಲ ಇದುವರೆಗೂ ಪತ್ತೆಯಾಗಿಲ್ಲ. ಈ ಜಾಗದ ಪಾವಿತ್ರ್ಯ ಕಾಪಾಡಲು ಮಂಟಪ, ಕಲ್ಯಾಣಿ ನಿರ್ಮಿಸಲಾಗಿದೆ. ನೈಸರ್ಗಿಕ ಕೊಡುಗೆಯಾಗಿರುವ ಈ ಗಂಗೆ ಪ್ರವಾಸಿಗರು ಮಾತ್ರವಲ್ಲದೆ ಪ್ರತಿನಿತ್ಯ ಬೆಟ್ಟಕ್ಕೆ ದೇವರ ಪೂಜೆ, ವಾಯು ವಿಹಾರ, ಟ್ರೆಕ್ಕಿಂಗ್ ಹಾಗೂ ಪ್ರಕೃತಿಯ ಸೊಬಗು ಸವಿಯಲು ಬರುವ ಜನತೆಗೆ ಜೀವಜಲ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟದಿಂದ ಅಂತರಗಂಗೆ ಬೆಟ್ಟಕ್ಕೆ ನೀರು ಹರಿಯುತ್ತದೆ ಎಂದು ಕೆಲವರು ಹೇಳುತ್ತಾರೆ. ವರ್ಷದ 365 ದಿನಗಳಲ್ಲಿ ಕೋಲಾರ ಜಿಲ್ಲೆಗೆ ಮಳೆಗಾಲದ ದಿನಗಳು ಲಭ್ಯವಿರುವುದು ಕೇವಲ 44 ದಿನ ಮಾತ್ರ. ಬಾಕಿ ದಿನಗಳು ಒಣ ದಿನ. ಆದರೆ, ಅಂತರಗಂಗೆ ಬೆಟ್ಟದಲ್ಲಿ ಮಾತ್ರ ನಿರಂತರ ಒಂದಿಷ್ಟು ನೀರು ಕುಡಿಯಲು ಸಿಗುತ್ತದೆ. ಈ ನೀರು ತಡೆದಿಟ್ಟುಕೊಳ್ಳಲು ಸಾಧ್ಯವಾಗದಿರುವುದರಿಂದ ವ್ಯರ್ಥವೂ ಆಗುತ್ತಿದೆ. ಬೇಸಿಗೆ ಕಾಲದಲ್ಲಿ ಅನೇಕರು ಕ್ಯಾನ್‌ಗಳಲ್ಲಿ ಅಂತರಗಂಗೆ ನೀರು ಶೇಖರಣೆ ಮಾಡಿ ಅದನ್ನು ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.
ಅಂತರಗಂಗೆ ಬೆಟ್ಟದಲ್ಲಿ ಕೆಲವು ವರ್ಷಗಳ ಹಿಂದೆ ನರಿ, ತೋಳ, ಜಿಂಕೆ, ಕಾಡು ಹಂದಿ, ನವಿಲು, ಸಾರಂಗಿ ಮುಂತಾದ ವನ್ಯ ಜೀವಿಗಳಿದ್ದವು. ಮಾನವ ಪ್ರಕೃತಿಯ ಮೇಲೆ ದಬ್ಬಾಳಿಕೆ ನಡೆಸುತ್ತಾ ವನ್ಯ ಜೀವಿಗಳು ಮಾಯವಾಗುವಂತೆ ಮಾಡಿರುವುದರಿಂದ ಕಾಡು ಪ್ರಾಣಿಗಳನ್ನು ನೋಡುವ ಅವಕಾಶ ಕಳೆದುಕೊಂಡಂತಾಗಿದೆ. ಅಂತರಗಂಗೆ ಬೆಟ್ಟದಲ್ಲಿ ದೇವವನ ನಿರ್ಮಿಸಲು ಆಸಕ್ತಿ ತೋರಿದ್ದ ಸರ್ಕಾರದಿಂದ ಈ ಕೆಲಸ ಆಗಲೇ ಇಲ್ಲ. ಪ್ರವಾಸಿಗರ ಅನುಕೂಲಕ್ಕಾಗಿ ಶೌಚಾಲಯ, ಕುಡಿವ ನೀರಿನ ವ್ಯವಸ್ಥೆ, ಸಮುದಾಯ ಭವನದ ನವೀಕರಣ, ಕಲ್ಯಾಣಿಯ ಸ್ವಚ್ಛತೆ, ಗೋಪುರಗಳ ದುರಸ್ತಿ ಹಾಗೂ ಗಿಡಗಳನ್ನು ಬೆಳೆಸುವುದಕ್ಕೆ ಅರಣ್ಯ ಇಲಾಖೆ ಕೈಜೋಡಿಸಿದೆ. ಅಂತರಗಂಗೆ ಬೆಟ್ಟದಲ್ಲಿ ಪ್ರತಿವರ್ಷ ಟ್ರೆಕ್ಕಿಂಗ್ ಸಹ ನಡೆಸಲಾಗುತ್ತದೆ. ಎನ್‌ಎಸ್‌ಎಸ್ ಶಿಬಿರಗಳು ನಡೆಯುತ್ತವೆ. ಅಂತರಗಂಗೆ ಜಾತ್ರೆ ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ವೈಭವದಿಂದ ಜರುಗುತ್ತದೆ. ಶತಶೃಂಗ ಪರ್ವತಗಳ ಸಾಲಿನ ತೇರಹಳ್ಳಿ ಬೆಟ್ಟ ಸಹ ಪುರಾಣ ಪ್ರಸಿದ್ಧ ಪ್ರವಾಸಿ ತಾಣ.
ಮಾಹಿತಿಯ ಕೊರತೆ ಇರುವುದರಿಂದ ಪ್ರವಾಸೋದ್ಯಮ ಇಲಾಖೆ ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಅಂತರಗಂಗೆ ಬೆಟ್ಟದ ಸೊಬಗು ತಿಳಿಸುವ ಪ್ರಚಾರ ಫಲಕ ಅಳವಡಿಸಿ ಪ್ರವಾಸಿಗರನ್ನು ಸೆಳೆಯಬಹುದು. ಪ್ರವಾಸಿಗರ ಜಾತ್ರೆ, ರಾಜ್ಯ ಸರ್ಕಾರದಿಂದಲೇ ಚಾರಣ ಸ್ಪರ್ಧೆ, ಪ್ರವಾಸಿಗರು ತಂಗಲು ಬೇಕಾದ ಯಾತ್ರಿ ನಿವಾಸ್ ಮುಂತಾದ ಸೌಕರ್ಯ ಕಲ್ಪಿಸಿದರೆ ಮತ್ತಷ್ಟು ಖ್ಯಾತಿ ಹೊಂದಬಲ್ಲದು.
ಹೀಗೆ ಬನ್ನಿ
ಕೋಲಾರ ಜಿಲ್ಲೆಯ ಈ ಅಂತರಗಂಗೆ ಬೆಟ್ಟ ಬೆಂಗಳೂರಿನಿಂದ ಕೇವಲ 65 ರಿಂದ 68 ಕಿ.ಮೀ. ದೂರದಲ್ಲಿದೆ. ಕೋಲಾರ ನಗರದಿಂದ 4 ಕಿ.ಮೀ. ಬೆಂಗಳೂರ ಮತ್ತು ಕೋಲಾರದಿಂದ ಸೂಕ್ತ ಬಸ್ ವ್ಯವಸ್ಥೆ ಇದೆ.
-ಪಾ.ಶ್ರೀ. ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


