ಇಂದು ಬಸವವೇಶ್ವರ ಜಯಂತಿ, ಅಕ್ಷಯ ತೃತೀಯ: ಬಸವಣ್ಣನವರ ತತ್ವಗಳು ಅಕ್ಷಯವಾಗಲಿ
ಮೇ 9 ಹಿಂದೂ ಪಂಚಾಗದ ಪ್ರಕಾರ ವೈಶಾಖ ಶುದ್ಧ ತದಿಗೆ. ವೈಶಾಖ ಶುದ್ಧ ತದಿಗೆಯ ದಿನದಂದು ಬಸವ ಜಯಂತಿ ಹಾಗೂ ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ.

ಮೇ 9 ಹಿಂದೂ ಪಂಚಾಗದ ಪ್ರಕಾರ ವೈಶಾಖ ಶುದ್ಧ ತದಿಗೆ. ವೈಶಾಖ ಮಾಸದಲ್ಲಿ ಶಂಕರ, ರಾಮಾನುಜ, ಬಸವೇಶ್ವರಂತಹ ಗುರುಗಳ ಜಯಂತಿ ಆಚರಣೆ ನಡೆಯಲಿದ್ದು ನಾಡಿನಾದ್ಯಂತ, ವೈಶಾಖ ಶುದ್ಧ ತದಿಗೆಯ ದಿನದಂದು ಬಸವ ಜಯಂತಿ ಹಾಗೂ ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ.
ಬಸವಣ್ಣನವರು 12 ನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿಗೆ ಮುಂದಾದ ಉದಾತ್ತ ತತ್ವಗಳನ್ನು ಭೋಧಿಸಿದ ಮಹಾನ್ ವ್ಯಕ್ತಿ, ಅಂದಿನ ಕಾಲಕ್ಕೆ ಒಂದು ದೇಶದ ಪ್ರಧಾನಿಯಾಗಿದ್ದುಕೊಂಡು ಪ್ರಜಾಪ್ರಭುತ್ವ, ಕಾಯಕಕ್ಕೆ ಪ್ರಧಾನ ಆಧ್ಯತೆಯನ್ನು ನೀಡಿ ಭಕ್ತಿ ಮಾರ್ಗವನ್ನು ಪ್ರತಿಪಾದಿಸಿದ ಅಪರೂಪದ ಗುರು ಎಂದರೂ ತಪ್ಪಾಗುವುದಿಲ್ಲ. ಬಸವಣ್ಣನವರು ಕೇವಲ ಸಾಮಾಜಿಕ ಕ್ರಾಂತಿಗೆ ಮಾತ್ರ ಸೀಮಿತಗೊಳಿಸದೇ ಭಕ್ತಿ ಮತ್ತು ರಾಜತಂತ್ರವನ್ನು ಜೊತೆ ಜೊತೆಗೇ ನಡೆಸಲು ಪ್ರೇರಕ ಶಕ್ತಿಯಾದ ಮಾರ್ಗದರ್ಶಕ, ಚೈತನ್ಯವೂ ಹೌದು.
ಭಾರತೀಯ ಸನಾತನ ಧರ್ಮ ಹೇಳಿದ್ದ "ಭಗವಂತ ನಿನ್ನಲ್ಲೇ ಇದ್ದಾನೆ" ಎಂಬುದನ್ನು ಬಸವಣ್ಣನವರು ಶರೀರವೇ ದೇವಸ್ಥಾನ, ಶಿರವೇ ಹೊನ್ನ ಕಲಶ ಎಂದು ಸಾಮಾನ್ಯರಿಗೂ ವಚನಗಳ ಮೂಲಕ ಜಾಗೃತಿ ಮೂಡಿಸಿದ್ದರು. ಅಂದಿನ ಭಕ್ತಿ ಭಂಡಾರಿ ಬಸವಣ್ಣವರ ಆಚಾರ-ವಿಚಾರ ಎಂದೆಂದಿಗೂ ಪ್ರಸ್ತುತವಾದ ತತ್ವಗಳಾಗಿವೆ.12 ನೆಯ ಶತಮಾನದ ಭಾರತೀಯ ಸ್ತ್ರೀ ಪ್ರಮುಕಹವಾಗಿ ಕರ್ನಾಟಕದ ಸ್ತ್ರೀಯರ ಇತಿಹಾಸದಲ್ಲಿ ಮಹತ್ತರ ಬದಲಾವಣೆಯಾದ ಕಾಲಘಟ್ಟ ಎಂದರೆ ಅದಕ್ಕೆ ಬಸವಯುಗದ ಕಲ್ಯಾಣ ಕ್ರಾಂತಿಯ ಪ್ರಭಾವ ಹೆಚ್ಚಾಗಿತ್ತು. ಸ್ತ್ರೀಯರಿಗೆ ಸಮಾನ ಸ್ಥಾನ ನೀಡಿ ಪುರುಷರೆತ್ತರಕ್ಕೆ ಏರುವಂತಹ ವಾತಾವರಣ ಕಲ್ಪಿಸಿದ ಬಸವಣ್ಣನವರನ್ನು “ಸ್ತ್ರೀ ಉದ್ಧಾರಕ” ನೆಂದು ಅನೇಕರು ಹೊಗಳಿದ್ದಾರೆ.
ಬಸವಣ್ಣನವರು ಚಿಕ್ಕಂದಿನಿಂದಲೇ ಕ್ರಾಂತಿಕಾರಿ ಎಂದು ಸಾಬೀತು ಪಡಿಸಿದ್ದು ಅವರ ಉಪನಯನ ಸಂಸ್ಕಾರದ ಘಟನೆಯಿಂದಲೇ ಕ್ರಾಂತಿಗೆ ಮುಂದಾಗುತ್ತಾರೆ. ಅಕ್ಕ ನಾಗಮ್ಮನಿಗೆ ಉಪನಯನ ಸಂಸ್ಕಾರ ಇಲ್ಲವೆಂದಾಗ, ಬಸವ “ಅಕ್ಕನಿಗಿಲ್ಲದ ಜನಿವಾರ ನನಗೂ ಬೇಡ” ಎಂದು ಅದನ್ನು ನಿರಾಕರಿಸಿ ತನ್ನ ಸಹೋದರಿಗಿಲ್ಲದ್ದು ನನಗೂ ಬೇಡ, ಎಂತಹ ಆದರ್ಶ ಸಹೋದರ. ಅದರಂತೆ ಬಸವಣ್ಣ ಮನೆಯನ್ನು ತೊರೆದು ಹೊರಟಾಗ ಅಕ್ಕ ನಾಗಮ್ಮ “ಬಸವನಿಲ್ಲದ ಮನೆಯಲ್ಲಿ ನಾನೂ ಇರಲಾರೆ” ಅನ್ನುವಲ್ಲಿ ಸಹೋದರಿ ಪ್ರೀತಿ ಮಿಂಚುತ್ತಿದೆ. ಮೊದಲು ಸ್ತ್ರೀಯರಿಗೆ ಕೇವಲ ವಿವಾಹ ಒಂದೇ ಮುಖ್ಯ ಸಂಸ್ಕಾರವಾಗಿತ್ತು. ಪತಿಯ ಸಹಾಯವಿಲ್ಲದೇ ಯಾವುದೇ ಧಾರ್ಮಿಕ ಕಾರ್ಯಗಳನ್ನು ಸ್ತ್ರೀಯರಿಗೆ ಮಾಡುವ ಅಧಿಕಾರ ವಿರಲಿಲ್ಲ. ಆದರೆ ಬಸವಣ್ಣನವರು ಲಿಂಗದೀಕ್ಷೆ, ವಿಭೂತಿಧಾರಣ, ಮಂತ್ರ ಪಠಣ ಮೊದಲಾದ ಧಾರ್ಮಿಕ ವಿಧಿಗಳಲ್ಲಿ ಪುರುಷನಷ್ಟೇ ಅಧಿಕಾರವನ್ನು ಅವಳಿಗೂ ಕೊಟ್ಟರು. ಪ್ರಧಾನಿಯಾಗಿದ್ದ ಬಸವಣ್ಣನವರಲ್ಲಿ ರಾಜಕಳೆ ಹಾಗೂ ಗುರು ಬಸವೇಶ್ವರರಲ್ಲಿ ಸಾತ್ವಿಕ ಕಳೆ ಎರಡನ್ನೂ ಕಾಣಬಹುದು ಇಂದು ಸಮಾಜದ ಆರೋಗ್ಯಕರ ಬಳವಣಿಗಗೆ ದುಡಿದ ಕಾಯಕ ಯೋಗಿಯಾದ ಬಸವಣ್ಣನವರ ಜಯಂತಿ ಹಾಗೂ ಅಕ್ಷಯ ತೃತೀಯ ಅವರ ತತ್ವಗಳು ಸಾರ್ವಕಾಲಿಕವಾಗಿ ಅಕ್ಷಯವಾಗಲಿ ಎಂದು ಆಶಿಸೋಣ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


