ನಗರ ಸಂಕೀರ್ತನೆ ಎಂಬ ಪುಣ್ಯದ ಸುತ್ತು!
ನಸುಕು..ಪ್ರಾತಃಕಾಲ…ಬ್ರಹ್ಮ ಮುಹೂರ್ತ..ಎಂದೆಲ್ಲಾ ಉಲ್ಲೇಖಿತವಾಗಿರುವ ಮುಂಜಾವಿನ ಶ್ರೇಷ್ಟ ಸಮಯದಲ್ಲಿ ಒಂದು ಆಧ್ಯಾತ್ಮ ಮತ್ತು ಆರೋಗ್ಯ ಎರಡರ...

ನಸುಕು..ಪ್ರಾತಃಕಾಲ…ಬ್ರಹ್ಮ ಮುಹೂರ್ತ..ಎಂದೆಲ್ಲಾ ಉಲ್ಲೇಖಿತವಾಗಿರುವ ಮುಂಜಾವಿನ ಶ್ರೇಷ್ಟ ಸಮಯದಲ್ಲಿ ಒಂದು ಆಧ್ಯಾತ್ಮ ಮತ್ತು ಆರೋಗ್ಯ ಎರಡರ ಸಮನ್ವಯವಾದ ಹವ್ಯಾಸವೊಂದರ ಬಗ್ಗೆ ಬೆಳಕು ಚೆಲ್ಲುತ್ತಿದ್ದೇನೆ… ಬಾಲ್ಯದಿಂದಲೂ ಸತ್ಯಸಾಯಿ ಭಜನೆಗಳಲ್ಲಿ ಪಾಲ್ಗೊಳ್ಳುತ್ತಿರುವ ನಾವು ಮುಂಜಾವು ೫ ಗಂಟೆಗೆಲ್ಲಾ ಶುಚಿರ್ಭೂತರಾಗಿ ನಮ್ಮ ಸಾಯಿ ಮಂದಿರಗಳಿಂದ ನಗರ ಸಂಕೀರ್ತನೆ ಎಂಬ ಕಾರ್ಯಕ್ರಮಕ್ಕಾಗಿ ಸುತ್ತ ಮುತ್ತಲಿನ ಬೀದಿಯಲ್ಲಿ ಸುಮಾರು ಒಂದು ಗಂಟೆ ಭಗವಂತನ ನಾಮಸ್ಮರಣೆ ಮಾಡುತ್ತಾ ಸಾಗುವ ಅಭ್ಯಾಸವನ್ನಿಟ್ಟುಕೊಂಡೆದ್ದೇವೆ. ಈ ಸೇವೆಯನ್ನು ಕೆಲವು ಭಾನುವಾರಗಳು ಮತ್ತು ವಾರ್ಷಿಕ ಹಬ್ಬ ಹರಿದಿನಗಳಂದು ಪುಣ್ಯಕಾರ್ಯ ಮತ್ತು ಶುಭಾರಂಭವೆಂದು ಭಾವಿಸಿ ಏರ್ಪಡಿಸುತ್ತೇವೆ
ಇನ್ನೂ ಬೆಳಕು ಹರಿಯುವ ಮೊದಲೇ ಸುತ್ತಲಿನ ಜನರಿಗೆ ಸುಪ್ರಭಾತಪ್ರದವಾದ ಈ ಗೋಷ್ಟಿಯಲ್ಲಿ ಸುಶ್ರಾವ್ಯವಾದ ರಾಮ, ಕೃಷ್ಣ , ಈಶ್ವರ, ದೇವಿ ಅಲ್ಲದೇ ಸರ್ವಧರ್ಮ ಪ್ರಿಯನಾದ ದೇವರ ಹಲವು ನಾಮಗಳಾದ ಅಲ್ಲಾ, ಯೇಸು, ಝೋರಾಷ್ಟ್ರ, ಬುದ್ಧ, ಮಹಾವೀರ ಮತ್ತು ನಾನಕರನ್ನು ನೆನೆಯುತ್ತಾ ಸಂಗೀತ ಮತ್ತು ಉತ್ಸಾಹ ಭರಿತ ದನಿಗಳಲ್ಲಿ ಸ್ವರ ಹೊರಡಿಸುತ್ತಾ, ಪಕ್ಕ ವಾದ್ಯಗಳ ಮೇಳದೊಂದಿಗೆ ಸಾಗುವಾಗ ಅದೇನೋ ಅನುಪಮ ಆನಂದ ಮತ್ತು ತೃಪ್ತಿ ಉಂಟಾಗಿ ಕಣ್ಣಾಲಿಗಳಲ್ಲಿ ನೀರು ತುಂಬುವುದೇನೋ ನಮಗೆ ಸಹಜ.
ಇನ್ನು ಸುತ್ತಮುತ್ತಲಿನ ಜನರ ವೈವಿಧ್ಯಮಯ ಪ್ರತಿಕ್ರಿಯೆಯೂ ವಿವರಣಾರ್ಹವೇ!
ಬೆಳಿಗ್ಗೆ ಎದ್ದು ಕೆಲಸಕ್ಕೆ ಹೊರಟಿರುವ ಮನೆ ಕೆಲಸಗಾರರ ಅಚ್ಚರಿಯ ನೋಟ… ವಾಕಿಂಗ್, ಜಾಗಿಂಗ್ ಹೊರಟವರ ಮೆಚ್ಚುಗೆಯ ನೋಟ.
ಮುಂಜಾವಿನಲ್ಲಿ ಎದ್ದು ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ಚುರುಕಾದ ಮಕ್ಕಳ ಕೋಣೆಯ ಕಿಟಕಿಗಳಿಂದ ಇಣುಕುನೋಟ…ಬೇಗ ಏಳುವ ಅಭ್ಯಾಸವಿದ್ದು ಅಂಗಳದಲ್ಲಿ ತೋಟಗಾರಿಕೆ ಮಾಡುತ್ತಲೋ, ದೇವರ ಪೂಜೆಗೆ ಹೂ ಕಿತ್ತುತ್ತಲೋ ಇರುವ ನಿವೃತ್ತ ವೃದ್ಧರ ಭಕ್ತಿಯ ನೋಟ… ದೊಡ್ಡ ಬಂಗಲೆಗಳ ದ್ವಾರಪಾಲಕರ ಕಂಗಳಲ್ಲಿ ತಮ್ಮಂತೆ ಬೇರೆಯವರೂ ಎದ್ದಿದ್ದಾರಲ್ಲ ಎಂಬ ಆಶ್ಚರ್ಯ ಮಿಶ್ರಿತ ಸ್ವಾಗತದ ನೋಟ… ರಾತ್ರಿ ಪಾಳಿಯಲ್ಲಿ ಗಸ್ತು ಹೊಡೆಯುತ್ತಿರುವ ಪೋಲಿಸ್ ಜೀಪುಗಳ ಒಳಗಿನಿಂದ ಸಮವಸ್ತ್ರ ಧರಿಸಿದ ಸಿಬ್ಬಂದಿಯ ಕರ್ತವ್ಯ ನಿಷ್ಟ ನೋಟ.….ಹೀಗೆ ನಾವು ಭಜನೆ ಹಾಡುತ್ತಾ ಸಾಗಿದಂತೆಲ್ಲಾ ಮೆತ್ತಗೆ ಜಾಗೃತಗೊಳ್ಳುವ ಲೋಕದ ಹತ್ತು ಹಲವಾರು ಜನಜೀವನದ ದಿನಾರಂಭದ ದೃಶ್ಯಗಳು ನಮಗೆದುರಾಗುತ್ತವೆ... ಒಟ್ಟಾರೆ ಎಲ್ಲರಿಗೂ ಇದು ಸ್ವಾಗತಾರ್ಹ ಅನುಭವವೇ ಆಗಿದ್ದು, ಯಾರೂ ಶಾಂತಿಭಂಗವೆಂದು ಭಾವಿಸದ ಹವ್ಯಾಸ ಎಂದು ತಿಳಿದು ಬರುತ್ತದೆ.
ಈ ರೀತಿ ಒಂದು ಗಂಟೆ ಅವಧಿಯಲ್ಲಿ ನಾವು ಹಾಡಿ ನೆಡೆದು ತೃಪ್ತರಾಗಿ ಹಿಂತಿರುಗಿ ಬಂದ ನಂತರ ಇಡೀ ದಿನಾ ದೈಹಿಕವಾಗಿ ಲವಲವಿಕೆಯಿಂದಲೂ ಮಾನಸಿಕವಾಗಿ ಉಲ್ಲಾಸದಿಂದಲೂ ಇರುವುದು ಸಹಜವೇ ಆದ್ದರಿಂದ ಇದು ವ್ಯಾಯಾಮ ಮತ್ತು ಸದಾಚಾರದ ಉತ್ತಮ ಸಂಗಮ ಎನ್ನಬಹುದು.
-ನಾಗೇಶ್ ಕುಮಾರ್ ಸಿ ಎಸ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


