ನವತನ ಹೊತ್ತುತಂದ ನವರಾತ್ರಿ
ಒಂಬತ್ತು ದಿನಗಳ ಭಕ್ತಿಯ ಬುಗ್ಗೆ, ಪ್ರತಿವರ್ಷ ನವರಾತ್ರಿ ಬರುವುದು ಶರದೃತು...

ಒಂಬತ್ತು ದಿನಗಳ ಭಕ್ತಿಯ ಬುಗ್ಗೆ
ಪ್ರತಿವರ್ಷ ನವರಾತ್ರಿ ಬರುವುದು ಶರದೃತುವಿನಲ್ಲಿ. ಈ ಋತುವಿನಲ್ಲಿ ವಿಪರೀತ ಮಳೆ ಇಲ್ಲದೆ ಹಿತವಾದ ಕಾಲವಾಗಿರುವುದು. ನದಿ, ಕೆರೆಗಳು ತುಂಬಿ ತುಳುಕುತ್ತಿರುವುದು, ಎಲ್ಲ ಕಡೆಯಲ್ಲೂ ಹಸಿರ ಪೈರು ಕಂಗೊಳಿಸಿರುವುದು ಮತ್ತು ಈ ಹಸಿರಿನ ಹುಲ್ಲು ಭಾರತಾಂಬೆಗೆ ಉಡಿಸಿದ ಸೀರೆಯಂತೆ ತೋರುತ್ತಿರುತ್ತದೆ.
ಆಶ್ವಯುಜ ಮಾಸದ ಶುಕ್ಲ ಪಕ್ಷ ಪಾಡ್ಯ ದಿನದಿಂದ ನವಮಿಯವರೆಗೆ ನವರಾತ್ರಿ ಆಚರಿಸಲಾಗುವುದು. ಈ 9 ದಿನಗಳಲ್ಲಿ ದೇವಿಯನ್ನು ಮಹಾಕಾಳಿ, ಮಹಾಲಕ್ಷಿ ಮತ್ತು ಮಹಾಸರಸ್ವತಿ ರೂಪದಲ್ಲಿ ಆರಾಧಿಸಲಾಗುತ್ತದೆ. ಹಿಂದೂ ಪುರಾಣಗಳಲ್ಲಿ, ತಂತ್ರ ಶಾಸ್ತ್ರಗಳಲ್ಲಿ ಈ ಶಕ್ತಿಯನ್ನು ಸ್ತ್ರೀ ರೂಪವಾಗಿ, ದೇವಿಯಾಗಿ ಪುರುಷ ದೇವತೆಯ ಸಂಗಾತಿಯಾಗಿ ತೋರಿಸಿದ್ದಾರೆ. ತ್ರಿಮೂರ್ತಿಗಳು ಈ ಶಕ್ತಿ ಅಥವಾ ದೇವಿಯನ್ನು ತಮ್ಮ ಸಂಗಾತಿಯನ್ನಾಗಿಸಿಕೊಂಡಿದ್ದಾರೆ. ಬ್ರಹ್ಮನಿಗೆ ಸರಸ್ವತಿ, ವಿಷ್ಣುವಿಗೆ ಲಕ್ಷ್ಮಿ ಮತ್ತು ಶಿವನಿಗೆ ಪಾರ್ವತಿ. ಭಗವಂತನನ್ನು ತಾಯಿಯ (ದೇವಿಯ) ರೂಪದಲ್ಲಿ ಪೂಜಿಸುವುದು ಹೆಚ್ಚು. ಏಕೆಂದರೆ ತಾಯಿಯೊಂದಿಗೆ ಮಕ್ಕಳಿಗೆ ಸಲುಗೆ ಹೆಚ್ಚು. ತಮ್ಮ ನೋವು, ನಲಿವು, ಆಸೆ, ಆಪೇಕ್ಷೆಗಳನ್ನು ಮನಸ್ಸು ಮಾರ್ಮಿಕವಾಗಿ ಹೇಳಿಕೊಳ್ಳುತ್ತವೆ. ಅವನ್ನು ಅರ್ಥ ಮಾಡಿಕೊಳ್ಳುವುದು ಆ ತಾಯಿ ಮಾತ್ರ. ಪ್ರತಿಯೊಂದು ಜನ್ಮಕ್ಕೂ ಬೇರೆ ಬೇರೆ ತಾಯಿ ಇರುತ್ತಾಳೆ. ಆದರೆ ಎಲ್ಲಾ ಜೀವಜಂತುಗೂ ಜಗನ್ಮಾತೆಯೇ ಏಕೈಕ ತಾಯಿ.
ಶೈಲ ಪುತ್ರಿ ದೇವಿ
ಪ್ರಥಮ ದಿನ ಮಾತೆಯನ್ನು ಶೈಲಪುತ್ರಿ ರೂಪದಲ್ಲಿ ಪೂಜಿಸಲಾಗುತ್ತದೆ. ಈ ಮಾತೆಯ ರೂಪ ಭಕ್ತಿ ಮತ್ತು ದೃಢತೆಯ ಪ್ರತೀಕ. ಏಕೆಂದರೆ ಶೈಲ ಎಂದರೆ ಪರ್ವತ. ಅವಳು ಅಷ್ಟು ದೃಢ. ಆದ್ದರಿಂದ ಈ ದೇವಿಗೆ ಆ ಹೆಸರು ಬಂದಿದೆ. ನಮ್ಮ ಭಕ್ತಿಯಲ್ಲಿ ಇಂದು ದೃಢತೆ ಕಡಿಮೆಯಾಗಿದೆ. ಏಕೆಂದರೆ ಹಲವಾರು ಪೆಟ್ಟುಗಳಿಂದ ತಳಮಳಗೊಂಡಿರುತ್ತದೆ. ಈ ದೇವಿಯನ್ನು ಪೂಜಿಸಿದಾಗ ನಮಗೆ ದೃಢತೆ ಹೆಚ್ಚಾಗುತ್ತದೆ. ಪಾರ್ವತಿ ದೇವಿ ಶಿವನನ್ನು ಪಡೆಯಲು ಕಠೋರ ತಪಸ್ಸು ಮಾಡಿದ್ದಳು. ಈಕೆಯನ್ನು ಪರೀಕ್ಷೆ ಮಾಡಲು ಸಪ್ತ ಋಷಿಗಳು ಬಂದಿದ್ದರಂತೆ. ಆದರೆ ದೇವಿ ತನ್ನ ಸಂಕಲ್ಪದಂತೆ ಬೆಟ್ಟದಂತೆ ದೃಢವಾಗಿದ್ದಳು.
ಬ್ರಹ್ಮಚಾರಣಿ ದೇವಿ
ಎರಡನೇ ದಿನದಂದು ಬ್ರಹ್ಮಚಾರಿಣಿ ದೇವಿಯ ಆರಾಧನೆ. ಈಕೆ ಬಿಳಿವಸ್ತ್ರಧಾರಿ. ಒಂದು ಕೈಯಲ್ಲಿ ಕಮಂಡಲ ಇನ್ನೊಂದು ಕೈಯಲ್ಲಿ ಜಪಮಾಲೆ ಇರುತ್ತದೆ. ಈ ಮಾತೆಯ ಸ್ವರೂಪ ನಮಗೆ ಚಾರಿತ್ರ್ಯದ ಶ್ರೇಷ್ಠತೆ ಇಲ್ಲವೋ ಅವರು ದುರ್ಗತಿ ಹೊಂದಿರುತ್ತಾರೆ. ಇದನ್ನು ತಿಳಿಸುವುದಕ್ಕಾಗಿಯೇ ಈ ದೇವಿ ಬ್ರಹ್ಮಚಾರಿಣಿ ರೂಪದಲ್ಲಿ ಇದ್ದಾಳೆ. ಈ ದೇವಿಯನ್ನು ಆರಾಧಿಸಿದರೆ ಬ್ರಹ್ಮಜ್ಞಾನ ಸಿಗುತ್ತದೆ.
ಚಂದ್ರಘಂಟಾ ದೇವಿ
ನವರಾತ್ರಿಯ ಮೂರನೇ ದಿನ ಚಂದ್ರ ಘಂಟಾದೇವಿಯನ್ನು ಪೂಜಿಸಲಾಗುವುದು. ಈ ದೇವಿಗೆ 10 ಭುಜ. ಇವು 5 ಕರ್ಮೇಂದ್ರಿಯ ಮತ್ತು 5 ಜ್ಞಾನೇಂದ್ರಿಯಗಳ ಸಂಕೇತ. ಯಾರು ಈ ಇಂದ್ರಿಯಗಳ ಅಧೀನರಾಗಿದ್ದಾರೋ ಅವರು ಯಾವಾಗಲೂ ಬಂಧನದಲ್ಲೇ ಜೀವನವನ್ನು ಕಳೆಯುತ್ತಾರೆ. ಆದ್ದರಿಂದ ಈ ದೇಹ ಬಂಧನದಲ್ಲೇ ಜೀವನವನ್ನು ಕಳೆಯುತ್ತಾರೆ. ಆದ್ದರಿಂದ ಈ ದೇಹ ಬಂಧನಗಳಿಂದ ಮುಕ್ತರಾಗಲು ಈ ದೇವಿಯನ್ನು ಅತ್ಯಂತ ನಿರ್ಮಲ, ನಿರ್ಗುಣ ಪರಂಜ್ಯೋತಿ ಇಂದ್ರಿಯಾತೀತರಾಗಿ ಧ್ಯಾನಿಸಬೇಕು.
ಕೂಷ್ಮಾಂಡಾದೇವಿ
ನಾಲ್ಕನೇ ದಿನ ಕೂಷ್ಮಾಂಡಾ ದೇವಿಯ ಆರಾಧನೆ. ಕೂಷ್ಮಾಂಡಾ ಎಂದರೆ 'ಕು ಈಶತ್ ಉಷಯಾ ಅಂಡೇಶು ಬೀಜೇಷು ಜನ್ಯ' ಎಂದರೆ ಯಾವುದೇ ಬೀಜ ಅಥವಾ ಮೊಟ್ಟೆಯಿಂದ ಶಕ್ತಿಯನ್ನು ತೆಗೆದು ಗ್ರಹಿಸುತ್ತಾಳೆ ಎಂದು. ಅದನ್ನೇ ಕೂಷ್ಮಾಂಡ ಎನ್ನುತ್ತಾರೆ. ಪರಮಾತ್ಮನೆ ಈ ಸೃಷ್ಟಿಯ ಸಾರವೆಂದು, ಮಾತೆಯು ಈ ರೂಪದ ಮೂಲಕ ನಮ್ಮನ್ನು ನಮ್ಮ ಧೇಯದ ಕಡೆಗೆ ಸೂಚಿಸುತ್ತಾಳೆ. ಹೀಗೆ ಬೀಜದಲ್ಲಿ ವೃಕ್ಷ, ಮೊಟ್ಟೆಯಲ್ಲಿ ಜೀವ ಅಡಗಿದೆಯೇ ಹಾಗೆ ಈ ಸೃಷ್ಟಿಯ ಮೂಲದಲ್ಲಿ ಶಕ್ತಿ ಅಡಗಿದೆ.
ಸ್ಕಂದ ಮಾತೆ
5ನೇ ದಿನ ಸ್ಕಂದ ದೇವಿಯ ಆರಾಧನೆ. ಈ ದೇವಿ ಸಾತ್ವಿಕ ಶಕ್ತಿಯ ಪ್ರತೀಕ. ಈ ದೇವಿಯ ಮಡಿಲಲ್ಲಿ ಆಕೆಯ ಪುತ್ರ ಸ್ಕಂದನಿರುವನು. ಒಮ್ಮೆ ತಾರಕಾಸುರ ಎಂಬ ರಾಕ್ಷಸನಿಂದ ದೇವತೆಗಳು ಭಯಭೀತರಾಗಿದ್ದರು. ಇವರ ಭಯ ದೂರ ಮಾಡಲು ದೇವಿಯು ಸಾತ್ವಿಕ ಶಕ್ತಿಯ ರೂಪದಲ್ಲಿ ಸ್ಕಂದನೆಂಬ ಪುತ್ರನನ್ನು ಪ್ರಧಾನ ಮಾಡಿದಳು. ಅಸುರ ಎಂಬ ಪದದ ಅರ್ಥ ಅಂಧಕಾರ. ಸ್ಕಂದ ಎಂಬ ಪದದ ಅರ್ಥ ಪ್ರಕಾಶ. ದೇವಿಯು ಜ್ಞಾನ ಸ್ವರೂಪನಾದ ಸೇನಾಪತಿಗಳಾಗಿ ಜೀವನವನ್ನು ಗೆದ್ದು, ಮುಕ್ತರಾಗಿ ಎಂದು ಆಶೀರ್ವಾದ ಮಾಡುವಳು.
ಕಾತ್ಯಾಯಿನಿ ದೇವಿ
6ನೇ ದಿನ ಕಾತ್ಯಾಯಿನಿ ದೇವಿಯ ಆರಾಧನೆ. ಈ ದೇವಿ ಕಾತ್ಯಾಯಿನಿ ಋಷಿ ತಪಸ್ಸಿನ ಫಲ ಸ್ಪರೂಪವಾಗಿ ಅವರ ಪುತ್ರಿಯಾಗಿ ಪ್ರಕಟವಾದಳು. ಹಾಗೂ ಇದೇ ರೂಪದಲ್ಲಿ ದೇವಿ ಮಹಿಷಾಸುರ ಮರ್ದಿನಿಯಾದಳು. ಯಾವಾಗ ನಮ್ಮಲ್ಲಿ ಹಿಂಸೆ, ಪಾಪ ಹೆಚ್ಚಾಗುವುದೋ ಆಗ ಮಾತೆಯ ಅವಶ್ಯ ಇರುವುದು. ಈ ದೇವಿಯು ಚೇತನಾ ಸ್ವರೂಪಿಯಾಗಿ ವಿದ್ಯಾ ಮಾನಳಾಗಿದ್ದಾಳೆ.
ಸರಸ್ವತಿ ದೇವಿ
ಏಳನೇ ದಿನ ಸರಸ್ವತಿ ದೇವಿಯ ಆರಾಧನೆ. ಈ ದೇವಿ ಬ್ರಹ್ಮನ ಬಲ, ಶಕ್ತಿ ಹಾಗೂ ಸಂಗಾತಿ ಮತ್ತು ಸಮಸ್ತ ಸೃಷ್ಟಿಯ ಜನ್ಮದಾತೆ. ಸರಸ್ವತಿ ಎಂದರೆ ಹರಿಯುವವಳು ಎಂದು ಅರ್ಥ. ತನ್ನ ನಾಲ್ಕು ಕೈಗಳಲ್ಲಿ ವೀಣೆ, ಅಕ್ಷರ ಮಾಲೆ, ಪುಸ್ತಕಗಳನ್ನು ಹಿಡಿದಿದ್ದಾಳೆ. ಈಕೆಯ ವಾಹನ ಹಂಸ. ಈ ದೇವಿಯದು ಮೂಲಾ ನಕ್ಷತ್ರ. ನವರಾತ್ರಿಯ ಏಳನೇ ದಿನ ಮಕ್ಕಳಿಗೆ ವಿದ್ಯಾರಂಭ ಮಾಡಿಸಲು ವಿಶೇಷ ದಿನವಾಗಿದೆ.
ದುರ್ಗಾದೇವಿ
8ನೇ ದಿನ ದುರ್ಗಾ ದೇವಿಯನ್ನು ಪೂಜಿಸಲಾಗುತ್ತದೆ. ಈ ದೇವಿ ಅತ್ಯಂತ ಪ್ರಿಯ ಶಕ್ತಿದೇವಿ. ಈ ದೇವಿಯ ಹೆಸರಿನಲ್ಲಿ ದುರ್ಗಾ ಸಪ್ತಶತೀ ಎಂಬ ಕೃತಿಯೇ ರಚನೆಯಾಗಿದೆ. ಇದು ಮಾರ್ಕಂಡೇಯ ಪುರಾಣದ ಒಂದು ಅಂಗ. ಈ ದೇವಿ ಮೂರ್ತಿಯನ್ನು 4, 8, 10, 18 ಅಥವಾ 20 ಕೈಗಳಿರುವಂತೆ ರಚಿಸುತ್ತಾರೆ. ಈ ದೇವಿಯನ್ನು ಪೂಜಿಸುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ.
ಮಹಾಗೌರಿ ದೇವಿ
9ನೇ ದಿನ ಹಾಗೂ ಕೊನೆಯ ದಿನ ಮಹಾಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಈ ಮಾತೆಯ ವಾಹನ ವೃಷಭ. ದೇವಿಯ ಜೀವನ ಧರ್ಮದ ಅವಶ್ಯ ತಿಳಿಸುತ್ತಾಳೆ ಹಾಗೂ ಎಲ್ಲ ಆಯುಧಗಳಿಗೆ ಅಧಿದೇವತೆ. ಆದ್ದರಿಂದ ನವರಾತ್ರಿಯ 9ನೇ ದಿನ ಬಳಸುವ, ಎಲ್ಲ ಆಯುಧಗಳಿಗೆ ಪೂಜೆ, ಯಂತ್ರ ಮತ್ತು ವಾಹನಗಳಿಗೆ ಪೂಜೆ ಸಲ್ಲಿಸಿ-ಅವುಗಳಿಂದ ತೊಂದರೆ ಬರದಿರಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇವೆ. ರಾಹುಕಾಲದಲ್ಲಿ ದೇವಿಯನ್ನು ಪೂಜಿಸುವುದರಿಂದ ರಾಹು ದೋಷ ನಿವಾರಣೆಯಾಗುತ್ತದೆ. ರಾಹು ಗ್ರಹಕ್ಕೆ ದುರ್ಗೆ ಅಧಿಪತಿಯಾಗಿರುವಳು. ರಾಹುಕಾಲದ ಸಮಯದಲ್ಲಿ ಲಿಂಬೆ ಹಣ್ಣಿನ ದೀಪವನ್ನು ದೇವಿಗೆ ಬೆಳಗುವುದರಿಂದ ನಮ್ಮ ಗ್ರಹಚಾರಗಳು ನಿವಾರಣೆ ಆಗುವುದು. ದುರ್ಗೆ ಲಿಂಬಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದ್ದರಿಂದ ದೇವಿಗೆ ಲಿಂಬೆ ಹಣ್ಣು ಪ್ರಿಯವಾಗಿದೆ. ಹೆಚ್ಚಿನ ಮಾಹಿತಿಗೆ ಮೊ.9886013956.
-ಮಂಡಗದ್ದೆ ಪ್ರಕಾಶ ಬಾಬು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


