ಈ ವರ್ಷ ಮಳೆ ಹ್ಯಾಗೆ?

ಸಾಮಾನ್ಯವಾಗಿ ಮಳೆಯು ಮಹಾ ನಕ್ಷತ್ರವನ್ನು ಪ್ರವೇಶಿಸುವ ದಿನದ ನಕ್ಷತ್ರವನ್ನು ಹೊಂದಿಕೊಂಡು ಮಳೆ ಹೇಗೆ ಸುರಿಯುತ್ತದೆ ಎಂಬುದನ್ನು ಹೇಳಬಹುದು...
ಜಯನಾಮ ಸಂವತ್ಸರದಲ್ಲಿ ಚಂದ್ರನು ರಾಜನಾಗಿರುವುದರಿಂದ ಮಳೆ ಅಧಿಕವಾಗಿ ಸುರಿದು ಧಾನ್ಯ ಫಲ ಅಧಿಕವಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ ಮಳೆಯು ಮಹಾ ನಕ್ಷತ್ರವನ್ನು ಪ್ರವೇಶಿಸುವ ದಿನದ ನಕ್ಷತ್ರವನ್ನು ಹೊಂದಿಕೊಂಡು ಮಳೆ ಹೇಗೆ ಸುರಿಯುತ್ತದೆ ಎಂಬುದನ್ನು ಹೇಳಬಹುದು.
ಮೃಗಶಿರಾ ನಕ್ಷತ್ರದಿಂದ ಆರಂಭವಾಗುವ ಮಳೆ ಚಿತ್ತಾ ನಕ್ಷತ್ರದ ಬಳಿಕ ಕಡಿಮೆಯಾಗುತ್ತದೆ. ಎಲ್ಲಾ ನಕ್ಷತ್ರಗಳು ಮಳೆ ಕೊಡುತ್ತವೆ ಎನ್ನಲಾಗದು. ಕೆಲವು ನಕ್ಷತ್ರಗಳು ಉತ್ತಮ ಮಳೆ, ಕೆಲವು ನಕ್ಷತ್ರಗಳು ಮಧ್ಯಮ ಮಳೆ, ಕೆಲವು ನಕ್ಷತ್ರಗಳು ಕನಿಷ್ಠ ಮಳೆ ಕೊಡುತ್ತದೆ.
ಉತ್ತಮ, ಮಧ್ಯಮ, ಕನಿಷ್ಠ ಮಳೆ ಹೇಗೆ ಬರುತ್ತದೆ ಎಂದು ಜ್ಯೋತಿಷಿಗಳು ಕೆಲವು ಪ್ರಕೃತಿ ನಿಯಮವನ್ನು ಕಂಡುಕೊಂಡಿದ್ದಾರೆ. ಮಳೆ ನಕ್ಷತ್ರ ಪ್ರವೇಶಿಸುವ ಸಮಯ ನಿತ್ಯ ನಕ್ಷತ್ರವು ಪುರುಷ ಸಂಜ್ಞಕವೋ, ಸ್ತ್ರೀ ಸಂಜ್ಞಕವೋ, ನಪುಂಸಕ ಸಂಜ್ಞಕವೋ ಎಂಬುದನ್ನು ಮೊದಲು ಕಂಡುಹಿಡಿಯಬೇಕು.
ಮಳೆ ನಕ್ಷತ್ರದಿಂದ ನಿತ್ಯನಕ್ಷತ್ರದವರೆಗೆ ಲೆಕ್ಕಹಾಕಿ ಬಂದ ಸಂಖ್ಯೆಗೆ 9ರಿಂದ ಭಾಗಿಸಿದಾಗ ಬರುವ ಶೇಷವೇ ವಾಹನ ಸಂಜ್ಞಾ ಸಂಖ್ಯೆಯಾಗುತ್ತದೆ. ಮೂಷ, ಮಂಡೂಕ, ಜಂಬೂಕ, ಮೇಷ, ಮಯೂರ, ಮಹಿಷ, ಖರ, ಗಜ, ಅಶ್ವ ಹೀಗೆ 9 ಪ್ರಕಾರದ ವಾಹನಗಳಿವೆ.
ಅಶ್ವಿನಿ ನಕ್ಷತ್ರದಿಂದ ರೇವತಿವರೆಗೆ ಪುರುಷ, ಸ್ತ್ರೀ, ನಪುಂಸಕ ನಕ್ಷತ್ರಗಳೆಂದು ಮೂರು ಭಾಗಗಳಿವೆ. ಆರಿದ್ರಾ, ಪುನರ್ವಸು, ಪುಷ್ಯಾ, ಆಶ್ಲೇಷಾ, ಮಖ, ಹುಬ್ಬಾ, ಉತ್ತರಾ, ಹಸ್ತಾ, ಚಿತ್ತಾ, ಸ್ವಾತಿ ಈ ಹತ್ತು ನಕ್ಷತ್ರಗಳು ಸ್ತ್ರೀ ಸಂಜ್ಞಕಗಳು. ವಿಶಾಖಾ, ಅನುರಾಧಾ, ಜೇಷ್ಠ ಈ ಮೂರು ನಕ್ಷತ್ರಗಳು ನಪುಂಸಕ ಸಂಜ್ಞಕಗಳು. ಮೂಲಾ, ಪೂರ್ವಾಷಾಢಾ, ಉತ್ತರಾಷಾಢಾ, ಶ್ರವಣ, ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರ, ಉತ್ತರಭಾದ್ರ, ರೇವತಿ, ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ, ಮೃಗಶಿರಾ ಈ ನಕ್ಷತ್ರಗಳು ಪುರುಷ ಸಂಜ್ಞಕ ನಕ್ಷತ್ರಗಳು.
ಪ್ರವೇಶವಾಗುವ ಮಳೆ ನಕ್ಷತ್ರ ಮತ್ತು ನಿತ್ಯ ನಕ್ಷತ್ರಗಳನ್ನು ನೋಡಿದಾಗ ಒಂದು ಪುರುಷ ನಕ್ಷತ್ರ, ಇನ್ನೊಂದು ಸ್ತ್ರೀ ಯೋಗವಾದರೆ ಉತ್ತಮ ಮಳೆಯಾಗುವುದು. ಎರಡೂ ಸ್ತ್ರೀ ಯೋಗವಾದರೆ ಗಾಳಿಯಿಂದ ಕೂಡಿದ ಮಳೆ. ಎರಡೂ ನಪುಂಸಕಗಳಾದರೆ, ಗಾಳಿ ವಿಶೇಷದಿಂದ ಮಳೆ ಸುರಿಯುತ್ತದೆ. ಎರಡೂ ಪುರುಷ ನಕ್ಷತ್ರಗಳಾದರೆ ಮಳೆ ಕಡಿಮೆ ಸುರಿಯುವುದು. ಸ್ತ್ರೀ ಪುರುಷ- ನಪುಂಸಕ ಸ್ತ್ರೀ ನಪುಂಸಕ ಯೋಗವಾದರೆ ಮಧ್ಯಮ ವೃಷ್ಟಿಯಾಗುವುದು.
ಜಯನಾಮ ಸಂವತ್ಸರದಲ್ಲಿ ಸುರಿಯುವ ಮಳೆ ಹೀಗಿದೆ. ಜೂನ್ 8ರಂದು ಮೃಗಶಿರಾ ಮಳೆ ಪ್ರವೇಶ ಆಗುತ್ತದೆ. ಮೃಗಶಿರಾ ಪುರುಷ ಸಂಜ್ಞಕ. ಆ ದಿನದ ನಿತ್ಯ ನಕ್ಷತ್ರ ಹಸ್ತ. ಇದು ಸ್ತ್ರೀ ಸಂಜ್ಞಕ ನಕ್ಷತ್ರವಾಗಿರುವುದರಿಂದ ಉತ್ತಮ ಮಳೆ ಸುರಿಯತ್ತದೆ.
ಜೂನ್ 22ರಂದು ಆರಿದ್ರಾ ಮಹಾನಕ್ಷತ್ರ ಪ್ರವೇಶಿಸುವ ಸಮಯ. ನಿತ್ಯ ನಕ್ಷತ್ರ ಅಶ್ವಿನಿ. ಇದು ಪುರುಷ ಸಂಜ್ಞಕ ನಕ್ಷತ್ರ. ಮಹಾನಕ್ಷತ್ರ ಸ್ತ್ರೀ ಸಂಜ್ಞಕವಾಗಿರುವುದರಿಂದ ಉತ್ತಮ ಮಳೆ ಸುರಿಯುತ್ತದೆ. ಜುಲೈ 6ರಂದು ಮಹಾ ನಕ್ಷತ್ರ ಪುನರ್ವಸು ಪ್ರವೇಶ. ಆ ದಿನದ ನಿತ್ಯ ನಕ್ಷತ್ರ ಚಿತ್ತಾ. ಪುನರ್ವಸು ಸ್ತ್ರೀ ಸಂಜ್ಞಕ ನಕ್ಷತ್ರ. ಚಿತ್ತಾ ನಕ್ಷತ್ರವೂ ಸ್ತ್ರೀ ಸಂಜ್ಞಕ ನಕ್ಷತ್ರವಾಗಿ, ಮಹಾ ನಕ್ಷತ್ರ ಮತ್ತು ನಿತ್ಯ ನಕ್ಷತ್ರವು ಎರಡೂ ಸ್ತ್ರೀ ಸಂಜ್ಞಕ ನಕ್ಷತ್ರವಾಗಿರುವುದರಿಂದ ಗಾಳಿಯಿಂದ ಕೂಡಿದ ಕಡಿಮೆ ಮಳೆಯಾಗುತ್ತದೆ.
ಜುಲೈ 20ರಿಂದ ಪುಷ್ಯ ಮಹಾನಕ್ಷತ್ರ ಪ್ರವೇಶ. ಇದು ಸ್ತ್ರೀ ಸಂಜ್ಞಕ. ಆ ದಿನದ ನಕ್ಷತ್ರ ಭರಣಿ ಪುರುಷ ಸಂಜ್ಞಕ. ಇದರಿಂದ ಉತ್ತಮ ಮಳೆಯಾಗುತ್ತದೆ. ಆಗಸ್ಟ್ 3 ಸ್ತ್ರೀ ಸಂಜ್ಞಕ ಆಶ್ಲೇಷಾ ಮಹಾ ನಕ್ಷತ್ರ ಪ್ರವೇಶ. ನಿತ್ಯ ನಕ್ಷತ್ರ ಸ್ತ್ರೀ ಸಂಜ್ಞಕ ಚಿತ್ತಾ. ಇದರಿಂದ ಗಾಳಿಯಿಂದ ಕೂಡಿದ ಕಡಿಮೆ ಮಳೆಯಾಗುತ್ತದೆ.
ಆಗಸ್ಟ್ 16 ಸ್ತ್ರೀ ಸಂಜ್ಞಕ ಮಖ ಮಹಾನಕ್ಷತ್ರ. ನಿತ್ಯ ನಕ್ಷತ್ರ ಪುರಷ ಸಂಜ್ಞಕ ಭರಣಿ. ಇದರಿಂದ ಉತ್ತಮ ಮಳೆಯಾಗುತ್ತದೆ. ಆಗಸ್ಟ್ 30 ಸ್ತ್ರೀ ಸಂಜ್ಞಕ ಹುಬ್ಬಾ ಮಹಾನಕ್ಷತ್ರ ಪ್ರವೇಶ. ಆ ದಿನದ ನಿತ್ಯ ನಕ್ಷತ್ರ ಸ್ತ್ರೀ ಸಂಜ್ಞಕ ಸ್ವಾತಿ. ಎರಡೂ ಸ್ತ್ರೀ ನಕ್ಷತ್ರ ಅರುವುದರಿಂದ ಗಾಳಿಯಿಂದ ಕೂಡಿದ ಕಡಿಮೆ ಮಳೆಯಾಗುತ್ತದೆ.
ಸೆಪ್ಟೆಂಬರ್ 13ರಂದು ಪುರುಷ ಸಂಜ್ಞಕ ಉತ್ತರಾ ಮಹಾನಕ್ಷತ್ರ ಪ್ರವೇಶ. ನಿತ್ಯ ನಕ್ಷತ್ರ ಪುರಷ ಸಂಜ್ಞಕ ಕೃತ್ತಿಕಾ. ಎರಡೂ ಪುರುಷ ಸಂಜ್ಞಕ ನಕ್ಷತ್ರವಾಗಿರುವುದರಿಂದ ಮಳೆ ಕಡಿಮೆ. ಸೆ.27ರಂದು ಸ್ತ್ರೀ ಸಂಜ್ಞಕ ಹಸ್ತಾ ಮಹಾನಕ್ಷತ್ರ ಪ್ರವೇಶ. ಆ ದಿನದ ನಿತ್ಯ ನಕ್ಷತ್ರ ಸ್ತ್ರೀ ಸಂಜ್ಞಕ ಸ್ವಾತಿ. ಎರಡೂ ಸ್ತ್ರೀ ಸಂಜ್ಞಕ ನಕ್ಷತ್ರವಾಗಿರುವುದರಿಂದ ಗಾಳಿಯಿಂದ ಕೂಡಿದ ಕಡಿಮೆ ಮಳೆ ಬರುತ್ತದೆ. ಅಕ್ಟೋಬರ್ 10 ರಂದು ಸ್ತ್ರೀ ಸಂಜ್ಞಕ ಮಹಾ ನಕ್ಷತ್ರ ಚಿತ್ತಾ ಪ್ರವೇಶ. ನಿತ್ಯ ನಕ್ಷತ್ರ ಪುರುಷ ಸಂಜ್ಞಕ ಭರಣಿ. ಒಂದು ಸ್ತ್ರೀ ಇನ್ನೊಂದು ಪುರುಷ ಸಂಜ್ಞಕ ನಕ್ಷತ್ರವಾಗಿರುವುದರಿಂದ ಉತ್ತಮ ಮಳೆ ಸುರಿಯುತ್ತದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ, ಮೊ. 94484 90860.
ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


