ಭಕ್ತಿ-ಜ್ಯೋತಿಷ್ಯ

ಸರ್ಪ ಸುಗ್ಗಿ

ಸರ್ಪ ಸುಗ್ಗಿ
Published On :

ನಾಗಾರಾಧನೆ ಸುತ್ತ ಬೆಳೆದ ನಂಬಿಕೆಗಳ ಹುತ್ತ ದೊಡ್ಡದು. ಶುಭ- ಅಶುಭಗಳನ್ನು ನಿರ್ಧರಿಸಲು ನಾಗನನ್ನೇ ನಿಮಿತ್ತವಾಗಿ ಬಳಸುವ ಕ್ರಮ ರೂಢಿಯಲ್ಲಿತ್ತು. ನಾಗನ ಅನುಗ್ರಹದಿಂದ ಸಂತಾನ ಪ್ರಾಪ್ತಿಯಾಗುವುದೆಂಬ ವಿಶ್ವಾಸ ಅನೇಕರಲ್ಲಿದೆ. ನೀರಿಗೂ ನಾಗನಿಗೂ ವಿಜ್ಞಾನದಲ್ಲಿ ನೇರ ಸಂಬಂಧವಿಲ್ಲದಿದ್ದರೂ ಜನರ ನಂಬಿಕೆಯಲ್ಲಿ ಈ ಸಾಮೀಪ್ಯ ಕಾಣಬಹುದು.

ನಾಗಾರಾಧನೆ ಪ್ರಕೃತಿ ಪೂಜೆಯ ಒಂದು ಭಾಗ. ಆದರೆ ಆ ದಿವ್ಯ ಸಂಸ್ಕೃತಿಯಿಂದ ಶಿಷ್ಟ ಸಂಸ್ಕೃತಿಗೆ ಸೇರಿದಂತೆ ಈ ಪೂಜೆ ಔಪಚಾರಿವಾಗುತ್ತ ಬಂದಿದೆಯೇ ಹೊರತು ಪ್ರಾಮಾಣಿಕ ಭಯವಿಲ್ಲ. ಈಗಂತೂ ನಾಗಾರಾಧನೆ ಬಾಹ್ಯ ಆಚರಣೆಗಳೆಲ್ಲ ಅತ್ಯಂತ ಆಧುನಿಕವಾಗಿವೆ.

ತನಿ ಎರೆಯುವುದು...
ನಾಗಪಂಚಮಿ ಅಥವಾ ಗರುಡ ಪಂಚಮಿ ಶ್ರಾವಣ ಶುದ್ಧದಲ್ಲಿ ಬರುತ್ತದೆ. ಈ ದಿನ ಹಾವಿನ ಹುತ್ತಕ್ಕಾಗಲಿ ಅಥವಾ ನಾಗ ಪ್ರತಿಮೆಗಾಗಲೀ ತನಿ ಎರೆಯುವುದು ವಾಡಿಕೆ. ಅಂದು ಸಾಮಾನ್ಯವಾಗಿ ಎಣ್ಣೆಯಲ್ಲಾಗಲಿ, ತುಪ್ಪದಲ್ಲಿ ಆಗಲಿ ಕರಿದ ಭಕ್ಷ್ಯ ಮಾಡುವುದಿಲ್ಲ ಮತ್ತು ಈ ದಿನ ಒಡ ಹುಟ್ಟಿದವರ ದಿನ ಎಂದೂ ಕರೆಯುತ್ತಾರೆ.
ನಾಗಪೂಜೆ ಆದಿಕಾಲದಿಂದ ನಡೆದುಬಂದಿದೆ. ಋಗ್ವೇದದ ಮಹತ್ವಪೂರ್ಣ ದೇವತೆಗಳಲ್ಲಿ ಸರ್ಪವೂ ಒಂದೆನ್ನಲಾಗಿದೆ. ನಾಗನ ಕಲ್ಲುಗಳನ್ನು ಹೆಚ್ಚಾಗಿ ಅಶ್ವತ್ಥವೃಕ್ಷದ ಕೆಳಗೆ ನೆಟ್ಟಿರುತ್ತಾರೆ. ಈ ಭೂಮಿ ನಿಂತಿರುವುದೇ ಸರ್ಪರಾಜನ ಹೆಡೆಯ ಮೇಲೆ ಎಂದು ಪೌರಾಣಿಕರ ಮತ.

ಸರ್ಪ ಶಿವನ ಆಭರಣ, ವಿಷ್ಣುವಿನ ತಲ್ಪ, ಗಣೇಶನ ಉದರಬಂಧ, ಸುಬ್ರಹ್ಮಣ್ಯನ ಅನನ್ಯ ಸ್ವರೂಪ ಯೋಗ ಸಾಧನೆಯಲ್ಲಿ ಅದೇ ಕುಂಡಲಿನೀಶಕ್ತಿ. ಸುಬ್ರಹ್ಮಣ್ಯ, ಲಕ್ಷ್ಮಣ, ಬಲರಾಮರು ನಾಗರಾಜನ ಅವತಾರ ಎಂದೇ ಪರಿಗಣಿತರಾಗಿದ್ದಾರೆ.

ಸಂತಾನಾಪೇಕ್ಷೆ
ನಾಗಾರಾಧನೆಯಿಂದ ಗೋವು, ಧನ, ಧಾನ್ಯ, ಆಯುಷ್ಯ, ಸಂತಾನ ಸಮೃದ್ಧಿ ಆಗುವುದೆಂಬ ನಂಬಿಕೆಯಿದೆ. ಮುಖ್ಯವಾಗಿ ಸಂತಾನಾಪೇಕ್ಷೆಯಿಂದ ನಾಗಪೂಜೆ, ನಾಗಬಲಿಗಳನ್ನು ಆಚರಿಸುತ್ತಾರೆ. ನಾಗಾರಾಧನೆಯ ಹಬ್ಬವೇ ನಾಗರಪಂಚಮಿ. ಇದು ಶ್ರಾವಣ ಮಾಸದ ಶುದ್ಧಪಂಚಮಿಯಂದು ಆಚರಿಸುವಂಥದ್ದು. ಅದರ ಹಿಂದಿನ ದಿನ ನಾಗರಚೌತಿ ಆಚರಿಸುವ ಕ್ರಮವೂ ಇದೆ. ಇದಲ್ಲದೆ ಶುದ್ಧಷಷ್ಠಿಯ ದಿನವೂ ನಾಗಾರಾಧನೆ ನಡೆಸುವುದುಂಟು.
ಶ್ರಾವಣಮಾಸದಲ್ಲಿ ಎಲ್ಲೆಲ್ಲೂ ಹಸಿರು ಚಿಗುರಿರುತ್ತದೆ. ನಾಗನನ್ನು ಕ್ಷೇತ್ರಪಾಲಕನೆಂದೂ ಕರೆಯುತ್ತಾರೆ. ಸುಬ್ರಹ್ಮಣ್ಯನೇ, ಸರ್ಪಭೀತಿಯಿಂದ ಪಾರುಮಾಡು. ನಾಗನೇ, ತೊಂದರೆ ಕೊಡಬೇಡ. ನಿನ್ನನ್ನು ಇಗೋ ತೃಪ್ತಿ ಪಡಿಸುತ್ತಿದ್ದೇವೆ ಎಂಬ ಭಾವನೆಯಿಂದ ನಾಗಾರಾಧನೆ ರೂಢಿಗೆ ಬಂದಿರಬೇಕು. ನಾಗಗಳಿದ್ದ ಹೊಲದಲ್ಲಿ ಇತರ ಕೀಟಗಳಿಂದ, ಕಳ್ಳರಿಂದ ತೊಂದರೆ ಬರುವುದಿಲ್ಲ. ಈ ಕಾರಣದಿಂದಲೂ ನಾಗಪೂಜೆಗೆ ಔಚಿತ್ಯವಿದೆ.

ಹೆಣ್ಣುಮಕ್ಕಳ ಹಬ್ಬ
ನಾಗರಪಂಚಮಿ ಹೆಣ್ಣುಮಕ್ಕಳ ಹಬ್ಬ. ಅಂದು ಬೆಳಗ್ಗೆ ಎದ್ದು ಸ್ನಾನಮಾಡಿ ಮಡಿಯುಟ್ಟು ಕಲ್ಲು ನಾಗನಿಗೆ ಅಥವಾ ಮಣ್ಣಿನ ನಾಗನಿಗೆ ಅಥವಾ ಹುತ್ತಕ್ಕೆ ಪೂಜಿಸಿ, ಪ್ರಾರ್ಥನೆ ಸಲ್ಲಿಸುತ್ತಾರೆ. ಅರಳುಹಿಟ್ಟು, ತಂಬಿಟ್ಟು ಉಂಡೆ, ಉಸುಳಿಗಳನ್ನು ನೈವೇದ್ಯ ಮಾಡಿ ಒಬ್ಬೊಬ್ಬರಾಗಿ ಹಾಲೆರೆದು ವಂದಿಸುತ್ತಾರೆ.
ರಂಗೋಲಿಯಲ್ಲಿ ನಾಗನನ್ನು ಬಿಡಿಸಿ ಹುತ್ತದ ಮಣ್ಣು, ಗೋಧಿಹಿಟ್ಟು- ಇದನ್ನು ಕಲಸಿ ಸರ್ಪದ ಆಕೃತಿ ರಚಿಸಿ ತಟ್ಟೆಯಲ್ಲಿಟ್ಟು ಅದನ್ನು ರಂಗೋಲಿಯ ನಾಗನ ಮೇಲೆ ಇಟ್ಟು ಹಾಲು, ತುಪ್ಪ, ಅರಳು ಮುಂತಾದವುಗಳನ್ನು ನೈವೇದ್ಯ ಮಾಡಿ ಪೂಜಿಸುವುದು ಪದ್ಧತಿ. ನಾಗಪೂಜೆಯ ನಂತರ ಉಪಹಾರ ಸೇವಿಸಿ ಅಥವಾ ಊಟ ಮಾಡಿ ಉಯ್ಯಾಲೆಯಾಡಲು ಹೊರಡುತ್ತಾರೆ. ಈ ಹಬ್ಬಕ್ಕೆ ಹೆಣ್ಣುಮಕ್ಕಳು ತವರಿಗೆ ಬರುವುದು ವಾಡಿಕೆ.

ನಾಗರ ಪಂಚಮಿ
ಆಷಾಢ ಕಳೆದು ಶ್ರಾವಣ ಆರಂಭವಾಗುತ್ತಲೇ ನಾಗರಪಂಚಮಿ ಬರುವುದು. ಇದು ವಿಶೇಷವಾಗಿ ಹೆಣ್ಣು ಮಕ್ಕಳ ಸಡಗರ ಸಂಭ್ರಮದ ಹಬ್ಬ. ಊರಮುಂದಿನ ನಾಗರಕಟ್ಟೆಗೆ ಅಥವಾ ಮನೆಯಲ್ಲಿಯೇ ಮಣ್ಣಿನ, ಕಣಕದ, ಲೋಹದ ನಾಗಪ್ಪನಿಗೆ ಹಾಲೆರೆಯಲು ಮನೆಯವರೆಲ್ಲ ಒಂದೆಡೆ ಸೇರಿ, ಕೊಬ್ಬರಿ ಬಟ್ಟಲಲ್ಲಿ ಅರಳು, ಬೆಲ್ಲವನ್ನಿಟ್ಟು ಅದಕ್ಕೆ ಸ್ವಲ್ಪ ನೀರು ಸೇರಿಸಿ ಎಲ್ಲರೂ ಆ ಕೊಬ್ಬರಿ ಬಟ್ಟಲನ್ನು ನಾಗೇಶನ ತಲೆಯ ಮೇಲೆ ಹಿಡಿದು, 'ನಾಗಪ್ಪನ ಪಾಲ... ನನ್ನ ಪಾಲ... ನಮ್ಮವ್ವನ ಪಾಲ... ಅಣ್ಣ ತಮ್ಮರ ಪಾಲ...' ಮುಂತಾಗಿ ಹೇಳಿ ತನಿ ಎರೆಯುತ್ತಾರೆ. ನಂತರ ಸಜ್ಜೆಯ ಹಿಟ್ಟಿಗೆ ಬೆಲ್ಲದ ಅನ್ನಹಾಕಿ ಮಾಡಿದ ಅಳ್ಳಿಟ್ಟು ತಂಬಿಟ್ಟು, ನೆನಗಡಲೆ ಎಡೆ ನೈವೇದ್ಯ ಹಿಡಿಯುತ್ತಾರೆ.

ಕುಂಡಲಿನೀ
ಕುಂಡಲಿನಿಯೆಂಬುದು ಯೋಗಶಾಸ್ತ್ರ. ಅದನ್ನು ಒಂದು ಸರ್ಪಕ್ಕೆ ಸಮನ್ವಯ ಮಾಡಲಾಗಿದೆ. ಅದರ ದ್ಯೋತಕವಾಗಿ ನಮ್ಮ ಭವ್ಯ ಭಾರತೀಯ ಸಂಸ್ಕೃತಿಯಲ್ಲಿ ನಾಗಾರಾಧನೆ ಪದ್ಧತಿಯಾಗಿ ಬೆಳೆದು ಬಂದಿರಬಹುದು. ಮಾಹಿತಿಗಾಗಿ ಮೊ. 9739369621 ಸಂಪರ್ಕಿಸಬಹುದು.

-ಗುರುರಾಜ ಪೋಶೆಟ್ಟಿಹಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.