ಸೋದರತ್ವದ ಸವಿಗಾನ

ಪರಸ್ಪರರ ನಡುವೆ ಇರುವ ಪ್ರೀತಿ, ಸ್ನೇಹವನ್ನು ಗುರುತಿಸುವುದೇ ಮಾನವ ಸೋದರತೆ. ಎಲ್ಲ ಮನುಷ್ಯರಲ್ಲೂ ಹರಿಯುವುದು ಒಂದೇ ರೀತಿಯ ರಕ್ತ, ಉಸಿರಾಡುವ ಗಾಳಿ ಒಂದೇ, ಕುಡಿವ ನೀರು ಒಂದೇ, ನಡೆದಾಡುವ ನೆಲವೊಂದೇ, ನಂತರ ಲೀನವಾಗುವುದು ಒಂದೇ ಪಂಚಭೂತಗಳಲ್ಲಿ.... ಹೀಗಿದ್ದೂ ನಾವು ಪರಸ್ಪರರನ್ನು ನಂಬುವುದಿಲ್ಲ. ನನ್ನದೇ ಸರಿ ಎಂಬ ಧೋರಣೆ ಬಿಡುವುದಿಲ್ಲ.
ಸೋದರತೆ ಅಥವಾ ಭ್ರಾತೃತ್ವ ವ್ಯಕ್ತಿ ವಿಕಸನದ ಅತ್ಯುತ್ತಮ ಪಥ. ಭಗವದ್ಗೀತೆಯಲ್ಲಿ ಗೀತಾಚಾರ್ಯ ಯಾರು ದ್ವೇಷಕ್ಕೆ ಬದಲು ಪ್ರೀತಿಯನ್ನು ನೀಡುತ್ತಾರೋ ಅವರು ನನಗೆ ಹತ್ತಿರವಾಗುತ್ತಾರೆ ಎಂಬ ದಿವ್ಯ ಸಂದೇಶ ನೀಡುತ್ತಾನೆ. ಪ್ರೀತಿ ಎಂಬುದು ಮುಕ್ತಿಯ ಅತ್ಯುತ್ತಮ ಮಾರ್ಗ. ಬುದ್ಧನೂ ಮೋಕ್ಷವನ್ನರಸುತ್ತಾ ತಲುಪಿದ್ದು ಪ್ರೀತಿಯ ಪಥವನ್ನು.
ಧರ್ಮಗಳು ಬೋಧಿಸುವುದು ಸೋದರತೆಯನ್ನು. ಆದರೆ ಅವು ಬರಿಯ ಮತಗಳಾಗಿ ಮಾರ್ಪಾಡಾಗಿ ಸಂಕುಚಿತ ಮನೋಭಾವವನ್ನು ಜನರಲ್ಲಿ ಬಿತ್ತಿ, ಸೋದರತೆ, ಭ್ರಾತೃತ್ವದಿಂದ ದೂರ ಸರಿವಂತೆ ಮಾಡುತ್ತಿವೆ. ಸೋದರತೆಗೆ ಅತ್ಯಂತ ಅಗತ್ಯದ ಗುಣಗಳೆಂದರೆ ಸಹನೆ.
ಸಂಘಜೀವಿಯಾದ ಮಾನವನ ಮೂಲಭೂತ ಗುಣವೇ ಹೊಂದಾಣಿಕೆ. ನಮ್ಮಲ್ಲಿ ಸರಿಯಾದ ಪ್ರಮಾಣದಲ್ಲಿ ಸಹನೆ ಇದ್ದಾಗ ಹೊಂದಾಣಿಕೆ ಸಾಧ್ಯ. ಎಲ್ಲವನ್ನೂ ನಮ್ಮ ಮೂಗಿನ ನೇರಕ್ಕೆ, ನಮ್ಮ ಅನುಕೂಲಕ್ಕೆ ಅನುಗುಣವಾಗಿ ನೋಡತೊಡಗಿದಾಗ, ಬೇರೆಯವರ ಕುರಿತು ಅಸಹನೆ ಬೆಳೆಯಲಾರಂಭಿಸುತ್ತದೆ.
ಇದನ್ನು ಕಡಿಮೆ ಮಾಡಲು ಬೇರೆಯವರ ಸಮಸ್ಯೆಯನ್ನು ಅವರ ರೀತಿಯಲ್ಲಿ ನೋಡುವ ಸ್ವಭಾವವನ್ನು ರೂಢಿಸಿಕೊಳ್ಳಬೇಕು. ಪ್ರತಿಯೊಬ್ಬರ ಗುಣ, ಸ್ವಭಾವದಲ್ಲಿ ವ್ಯತ್ಯಾಸಗಳಿರುವುದರಿಂದ ವಿಷಯವನ್ನು ಅವಲೋಕಿಸುವ ರೀತಿಯೂ ಬೇರೆಯಾಗಿರುತ್ತದೆ. ಇನ್ನೊಬ್ಬರ ಅಭಿಪ್ರಾಯಕ್ಕೆ ಕಿವಿಗೊಡಲಾರಂಭಿಸಿದಾಗ, ಸ್ಪಂದಿಸಲಾರಂಭಿಸಿದಾಗ ನಮ್ಮಲ್ಲಿ ಇಂಥ ಭಾವನೆ ಮೂಡುತ್ತದೆ. ಬೇರೆಯವರ ಕುರಿತು ಸಹನೆ ಹುಟ್ಟುತ್ತದೆ. ತಾಳ್ಮೆಯಿಂದ ನಿರ್ಧಾರಕ್ಕೆ ಬರುವ ಸ್ವಭಾವ ನಮ್ಮದಾಗುತ್ತದೆ. ಇದೇ ಭ್ರಾತೃತ್ವದ ತಾಯಿಬೇರು.
ಸೋದರತೆಯ ಇನ್ನೊಂದು ಪ್ರಮುಖ ಅಗತ್ಯವೆಂದರೆ, ಪರಸ್ಪರರಲ್ಲಿ ನಂಬಿಕೆ- ವಿಶ್ವಾಸ.
ನಂಬದಿರ್ದನು ತಂದೆ ನಂಬಿದನು ಪ್ರಹ್ಲಾದ
ನಂಬಿಯೂ ನಂಬದಿರುವ ಇರ್ಬಂದಿ ನೀನು
ಕಂಬದಿನೋ ಬಿಂಬದಿನೋ ಮೋಕ್ಷವವರಿಂಗಾಯ್ತು
ಸಿಂಬಳದ ನೊಣ ನೀನು, ಮಂಕುತಿಮ್ಮ॥
ಎಂಬ ಡಿವಿಜಿ ಅವರ ನುಡಿಯಂತೆ, ನಾವು ಇಂದು ಯಾರನ್ನೂ ನಂಬದ ಸ್ಥಿತಿಯಲ್ಲಿದ್ದೇವೆ. ಬೇರೆಯವರ ಮೇಲೇಕೆ, ನಮ್ಮ ಮೇಲೇ ನಮಗೆ ನಂಬಿಕೆ ಇಲ್ಲ. ನನ್ನ ಧನಾತ್ಮಕ ಗುಣಗಳನ್ನು ನಂಬಲಾರಂಭಿಸಿ, ನನ್ನ ಸಾಮರ್ಥ್ಯದ ಮೇಲೆ ಆತ್ಮವಿಶ್ವಾಸ ಬೆಳೆಸಿಕೊಂಡಾಗ ನಾವು ಬೇರೆಯವರಲ್ಲಿರುವ ಚೇತನಾ ಶಕ್ತಿಯನ್ನು ಗುರುತಿಸಲಾರಂಭಿಸುತ್ತೇವೆ. ಎಲ್ಲವನ್ನೂ, ಎಲ್ಲರನ್ನೂ ಋಣಾತ್ಮಕವಾಗಿ ನೋಡುವವರಿಗೆ ತಮ್ಮ ಮೇಲೆ ವಿಶ್ವಾಸವಿರುವುದಿಲ್ಲ. ನಮ್ಮ ಚೇತನವನ್ನು ಗುರುತಿಸಿ ಗೌರವಿಸಲಾರಂಭಿಸಿದಾಗ, ನಮಗೆ ಬೇರೆಯವರ, ಪ್ರತಿಭೆ ಸಾಮರ್ಥ್ಯ ಗೋಚರಿಸಲಾರಂಭಿಸುತ್ತದೆ. ಇದೇ ಸೋದರತೆಯ ಸರಿಯಾದ ಮಾರ್ಗ.
ಸೋದರತೆ ಸಾಧ್ಯವಾಗುವುದು ನಮ್ಮಲ್ಲಿ ನಿಷ್ಕಳಂಕ ಪ್ರೀತಿಯಿದ್ದಾಗ. ಹೇಗೆ ತಾಯಿ ಮಕ್ಕಳಲ್ಲಿ ಯಾವುದೇ ರೀತಿಯ ಫಲಾಪೇಕ್ಷೆಯಿಲ್ಲದ ಪ್ರೀತಿ ಹೊಂದಿರುತ್ತಾಳೋ ಹಾಗೆಯೇ, ಸ್ನೇಹಿತರಲ್ಲಿ ನಾವು ಷರತ್ತುಗಳಿರದ ಪ್ರೀತಿ ಹೊಂದಬೇಕು. ಪ್ರೀತಿ ಎಂಬುದು ಸೋದರತೆಯ ತಾಯಿಬೇರು. 'ಮಾನವನೆದೆಯಲಿ ಆರದೆ ಉರಿಯಲಿ ದೇವರು ಹಚ್ಚಿದ ದೀಪ... ರೇಗುವ ದನಿಗೂ ರಾಗವು ಒಲಿಯಲಿ ಮೂಡಲಿ ಮಧುರಾಲಾಪ...' ಎಂಬ ಎನ್ಎಸ್ಎಲ್ರ ಅಪೂರ್ವ ಕವನದ ಸಾಲಿನಂತೆ, ನಮ್ಮ ಎದೆಯ ಪ್ರೀತಿಯ ದೀಪ ಸದಾ ಉರಿಯುತ್ತಿದ್ದಾಗ ಮಾತ್ರ ಸೋದರತೆಯ ಸವಿಯನ್ನು ಸವಿಯಲು ಸಾಧ್ಯ.
ಸೋದರತೆಯ ಇನ್ನೊಂದು ಪವಿತ್ರ ಸ್ವರೂಪ ವ್ಯಕ್ತವಾಗುವುದು ಅಣ್ಣ-ತಂಗಿ, ಅಕ್ಕ-ತಮ್ಮಂದಿರ ಸಂಬಂಧದಲ್ಲಿ. ಎಲ್ಲಿ ಸ್ತ್ರೀಯರಿಗೆ ಗೌರವ ನೀಡಲಾಗುತ್ತದೆಯೋ ಅಲ್ಲಿ ದೇವರು ನೆಲೆಸಿರುತ್ತಾನೆ ಎಂಬ ಮಾತಿದೆ. ಸ್ತ್ರೀಯನ್ನು ಕೇವಲ ಕಾಮದ ದೃಷ್ಟಿಯಿಂದ ನೋಡುವ ಬದಲು ಅಕ್ಕ- ತಂಗಿಯಾಗಿ ನೋಡಿ ಆಕೆಯ ನಿಸ್ವಾರ್ಥತೆಯನ್ನು ಸ್ಮರಿಸುವ ದೃಷ್ಟಿಯಿಂದಲೇ ರಕ್ಷಾಬಂಧನದಂಥ ಪವಿತ್ರ ಆಚರಣೆ ಇದೆ. ಇದು ಸಹೋದರತೆಯ ಭಾವಕ್ಕೆ ನಮ್ಮ ಸಂಸ್ಕೃತಿ ನೀಡಿರುವ ಉನ್ನತ ಸ್ಥಾನ. ಇದರ ಆಚರಣೆ ಕೇವಲ ಯಾಂತ್ರಿಕತೆಯಾಗದೇ ಮನದಾಳದ ಭಾವವಾಗಬೇಕು.
-ಎಚ್.ಎಸ್. ನವೀನ ಕುಮಾರ್ ಹೊಸದುರ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


