ಗೋನಮನ
ಉತ್ತರ ಕರ್ನಾಟಕದವರು ಈಗಷ್ಟೇ ಕಾರ ಹುಣ್ಣಿಮೆ ಆಚರಿಸಿದ ಖುಷಿಯಲ್ಲಿದ್ದಾರೆ. ಆ ಆಚರಣೆಯ ಸುತ್ತಮುತ್ತ ನಮ್ಮದೊಂದು ಸುತ್ತು...

ಮುಂಗಾರು ಕಾಲಿಟ್ಟಿದೆ. ಎಲ್ಲೆಲ್ಲೂ ಕೃಷಿ ಚಟುವಟಿಕೆಗಳು ಆರಂಭವಾಗುವ ಸಮಯ. ರೈತ ಬಿತ್ತನೆಗೆ ಕೈ ಹಾಕುವ ಮುನ್ನ ದೈವ ಸ್ಥಾನ ನೀಡುವ ಭೂ ತಾಯಿಗೆ, ಕೃಷಿಗೆ ಆಧಾರಸ್ತಂಭವಾಗಿರುವ ರಾಸುಗಳಿಗೆ ಪೂಜಿಸುವುದು ಸನಾತನ ಸಂಪ್ರದಾಯ. ಇದೇ ಕಾರ ಹುಣ್ಣಿಮೆಯ ಅರ್ಥ. ಇತ್ತೀಚಿಗಿದು ಉತ್ತರ ಕರ್ನಾಟಕದಲ್ಲಿ ಭರ್ಜರಿಯಾಗಿ ಆಚರಣೆಯಾಯಿತು. ಕಾರು ಅಂದರೆ ಚೆಲ್ಲು, ಸುರಿ ಎಂದರ್ಥ. ವರ್ಷಪೂರ್ತಿ ರೈತನ ಸೂಚನೆ, ಆಜ್ಞೆಗಳನ್ನು ಪಾಲಿಸುವ ಎತ್ತುಗಳು ಈ ಹಬ್ಬದಲ್ಲಿ ರೈತನಿಗೆ ಆರಾಧ್ಯ ದೈವ. ಈ ಆಚರಣೆಗೆ ಪೌರಾಣಿಕ ಐತಿಹ್ಯವೂ ಇದೆ. ಅಮೃತಕ್ಕಾಗಿ ಸುರಾಸುರರು ಸಮುದ್ರ ಮಂಥನಗೈಯ್ಯುವಾಗ, ಇತ್ತ ರಾಕ್ಷಸಿಯೊಬ್ಬಳು ಭೂಮಿಯನ್ನು ಬರಡಾಗಿಸಲು ಮುಂದಾಗುತ್ತಾಳೆ. ಇದನ್ನರಿತ ಶಿವನು ತನ್ನ ವಾಹನ ನಂದಿಗೆ ಆಕೆಯಿಂದ ಭೂಮಿಯನ್ನು ರಕ್ಷಿಸಲು ಸೂಚಿಸುತ್ತಾನೆ. ನಂದೀಶನು ರಾಕ್ಷಸಿಯನ್ನು ಮರ್ಧಿಸುತ್ತಾನೆ. ಇದರ ಸಂಕೇತವೇ ಕಾರ ಹುಣ್ಣಿಮೆ.
ಹಬ್ಬದ ತಯಾರಿ
ಈ ಸಂಭ್ರಮಕ್ಕೆ ವಾರದಿಂದ ಸಿದ್ಧತೆ ನಡೆಯುತ್ತದೆ. ಹಬ್ಬದಂದು ಕರಿ ಹರಿಯುತ್ತಾರೆ. ಎತ್ತುಗಳ ಓಟದ ಸ್ಪರ್ಧೆ ಇರುತ್ತದೆ. ಊರಿನ ಬುಡ್ಡೆಕಲ್ಲು ಬಳಿ ಹಾಲುಮತಸ್ಥರು ತೆಂಗಿನ ಗರಿಗಳಿಂದ ಚಪ್ಪರ ಹಾಕಿ ಸಿಂಗರಿಸುತ್ತಾರೆ. ಊರಿನ ರೈತರು ತಮ್ಮ ಹೋರಿಗಳನ್ನು ಅಲಂಕರಿಸಿ, ಕರಿ ಹರಿಯಲಿಕ್ಕೆ ಎತ್ತುಗಳನ್ನು ಜೋಡಿಯಾಗಿ ಸಾಲಾಗಿ ಬಿಡುತ್ತಾರೆ. ಇಲ್ಲಿ ಎರಡು ಗೂಟಗಳ ಸಿಂಗಾರಗೊಂಡ ಚಪ್ಪರಕ್ಕೆ ಜೋತು ಹಾಕಿರುವ ಸಿಪ್ಪೆ ತೆಂಗಿನಕಾಯಿ, ಹಪ್ಪಳ, ಕೇರು ಬೀಜ ಇತ್ಯಾದಿಗಳನ್ನು ಒಳಗೊಂಡ ಸರವನ್ನು ನೇತು ಹಾಕಿರುವುದನ್ನು ಯಾವ ಎತ್ತು ತನ್ನ ಕೊಂಬಿನಿಂದ ಛಿದ್ರಗೊಳಿಸುತ್ತದೆಯೋ ಆ ಎತ್ತು ವಿಜಯಶಾಲಿ.
ವಿಶೇಷ ಪೂಜೆ
ಮನೆಯ ದೇವರ ಕೋಣೆಯಲ್ಲಿ ರತ್ನ ಗಂಬಳಿಯ ಗದ್ದುಗೆ ಮೇಲೆ ಅಕ್ಕಿ ಅಥವಾ ಜೋಳದ ಸಾಸಿವೆಗಳ ಹಿಡಿಯಷ್ಟು ಗುಂಪು ಹಾಕಿದ ಮೇಲೆ ಅದರಲ್ಲಿ ಪೂರ್ವಾಭಿಮುಖವಾಗಿ ಜೋಡಿ ಎತ್ತುಗಳನ್ನು ನಿಲ್ಲಿಸಲಾಗುತ್ತದೆ. ಜೇಷ್ಠ ಮಾಸದ ಹುಣ್ಣಿಮೆಯ ಅನುರಾಧ ನಕ್ಷತ್ರದ ದಿನ ಈ ಹಬ್ಬಕ್ಕಾಗಿ ಎತ್ತುಗಳನ್ನು ಮೈತೊಳೆದು, ಬಣ್ಣ ಹಚ್ಚಿ, ಸಿಂಗರಿಸುತ್ತಾರೆ. ಹೀಗೆ ನಿಲ್ಲಿಸಿದ ಎತ್ತುಗಳಿಗೆ ಮುತ್ತೈದೆಯರು ಪೂಜೆ ಸಲ್ಲಿಸಿ, ಹಬ್ಬಕ್ಕಾಗಿಯೇ ಹೋಳಿಗೆ ಸೇರಿದಂತೆ ಇತ್ಯಾದಿ ವಿಶೇಷ ಖಾದ್ಯಗಳನ್ನು ಎಡೆ ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ ಎತ್ತುಗಳ ಮಾಲೀಕರು ಮುತ್ತೈದೆಯರಿಗೆ ಹುಡಿ ತುಂಬಿ ಕೃತಜ್ಞತೆ ಸಲ್ಲಿಸುತ್ತಾರೆ.
ಯಾವಾಗ ಆಚರಣೆ?
ಕಾರಹುಣ್ಣಿಮೆ ಹಬ್ಬವು 15 ದಿನಗಳವರೆಗೆ ಅಂದರೆ ಅಮವಾಸ್ಯೆ ನಡುವಿನ ಅವಧಿಯಲ್ಲಿ ರೈತರು ತಮಗೆ ಸಮಯ ಸಿಕ್ಕಾಗ ಇದನ್ನು ಆಚರಿಸುತ್ತಾರೆ. ಮುಖ್ಯವಾಗಿ ಗುರುವಾರ, ಸೋಮವಾರ ಕಾರ ಹುಣ್ಣಿಮೆ ಆಚರಿಸಲಾಗುತ್ತದೆ. ಮಣ್ಣೆತ್ತಿನ ಅಮವಾಸ್ಯೆಯಂದು ಕುಂಬಾರರ ಮನೆಗಳಲ್ಲಿ ಮಣ್ಣು ಮತ್ತು ದವಸಗಳಿಂದ ತಯಾರಿಸಿದ ಜೋಡೆತ್ತುಗಳ ಮೂರ್ತಿಗಳನ್ನು ತಂದು ವಿಧಿವತ್ತಾಗಿ ಪ್ರತಿಷ್ಠಾಪಿಸುತ್ತಾರೆ. ಇದಕ್ಕೆ ವಿಶೇಷ ಖಾದ್ಯಗಳನ್ನು ತಯಾರಿಸಿ ಎಡೆ ಮಾಡುತ್ತಾರೆ. ಹಬ್ಬ ಮುಗಿದ ಮರುದಿನವೇ ಮಣ್ಣೆತ್ತಿನ ಅಮವಾಸ್ಯೆ ನಡೆಯುತ್ತದೆ. ಈ ವೇಳೆ ರೈತರು ಇಷ್ಟ ದೇವರು, ಮನೆ ದೇವರು, ರಾಸುಗಳನ್ನು ಪೂಜಿಸುತ್ತಾರೆ. ಸಂಜೆ ಜೋಡೆತ್ತುಗಳನ್ನು ಸ್ಥಳೀಯ ಬಾವಿಯಲ್ಲಿ ವಿಧಿವತ್ತಾಗಿ ಹಾಕಿ ಮಣ್ಣೆತ್ತಿನ ಅಮವಾಸೆಗೆ ಮಂಗಳ ಹಾಡುತ್ತಾರೆ. ಜೋಡೆತ್ತಿಗೆ ಮಾಡಿದ ಎಡೆಯನ್ನು ನೀರಿನ ತಂಬಿಗೆಯಲ್ಲಿ ಹಾಕಿಕೊಂಡು ಹೊಲಗಳಿಗೆ ಪ್ರೋಕ್ಷಿಸುತ್ತಾರೆ. ಇದರಿಂದ ದುಷ್ಟಗ್ರಹಗಳ ಕಾಟ, ದುಷ್ಟ ಶಕ್ತಿಗಳ ದೃಷ್ಟಿ ರಾಸುಗಳ ಮೇಲೆ ಹಾಗೂ ಭೂಮಿ, ಬೆಳೆಗಳ ಮೇಲೆ ಬೀಳದಿರಲೆಂಬ ಆಶಯ ರೈತರದ್ದು.
ಕೃಷಿ ಪರಿಕರ ಖರೀದಿ
ಈ ದಿನದಂದು ರೈತರು ಹೊಸದಾಗಿ ರಾಸುಗಳನ್ನು, ಕೃಷಿ ಪರಿಕರಗಳನ್ನು ಖರೀದಿಸುವ ಪರಿಪಾಠವಿದೆ. ಕೆಲವೆಡೆಗಳಲ್ಲಿ ಸ್ಥಳೀಯ ಆರಾಧ್ಯ ದೈವಗಳ ರಥೋತ್ಸವ ಮಾಡಲಾಗುತ್ತದೆ. ಹಿರಿಯರ ಪೂಜೆ ಮಾಡಲಾಗುತ್ತೆ ಅಂದರೆ ಇಹಲೋಕ ತ್ಯೆಜಿಸಿರುವ ಪೂರ್ವಜರ ಆತ್ಮಕ್ಕೆ ಶಾಂತಿ ಕೋರುವ ಸಲಿವಾಗಿ ವಶೇಷ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತೆ. ಇದರಿಂದ ಅತೃಪ್ತ ಆತ್ಮಗಳಿದ್ದಲ್ಲಿ ಅವು ಸಂತೃಪ್ತಿ ಹೊಂದುವುವು ಎಂಬ ನಂಬುಗೆಯಿದೆ. ಕಾರಹುಣ್ಣೆಮೆಯಂದು ರಾಸುಗಳು ಮಾತ್ರವಲ್ಲದೇ ಬೆಕ್ಕು, ನಾಯಿ ಸೇರಿದಂತೆ ಇತರೆ ಸಾಕು ಪ್ರಾಣಿಗಳಿಗೂ ರೈತರು ನ್ಯಾಯ ಒದಗಿಸುತ್ತಾರೆ.
-ವಿ.ಜಿ. ವೃಷಭೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


