ಶುಭ ರಾತ್ರಿ

ಪ್ರಳಯವಾದ ಬಳಿಕ ಇಡೀ ವಿಶ್ವವೇ ಯಾರಲ್ಲಿ ಲೀನವಾಗಿ ನಿದ್ರಾವಸ್ಥೆಯಲ್ಲಿರುವುದೋ ಆತನೇ ಶಿವ. ಪ್ರಪಂಚದ ವಸ್ತುವೆಲ್ಲವೂ ಯಾವುದರೊಳಗೆ ವಿಲೀನವಾಗಿ ಬಿಡುವುದೋ ಅದೇ ಲಿಂಗ. ಶಿವನನ್ನು ಮಾನವ ರೂಪದಲ್ಲಿ ಮತ್ತು ಲಿಂಗದ ರೂಪದಲ್ಲಿ ಪೂಜಿಸುತ್ತೇವೆ. ಲಿಂಗದ ರೂಪದಲ್ಲಿ ಪೂಜಿಸುವುದೇ ಹೆಚ್ಚು ಆಚರಣೆಯಲ್ಲಿರುವುದು. ಲಿಂಗ ಎಂದರೆ ಚಿಹ್ನೆ ಅಥವಾ ಗುರುತು ಎಂದು ಈ ಲಿಂಗ ಸಾಕಾರದಿಂದ ನಿರಾಕಾರಕ್ಕೆ ಸಾಗಲು ನಮಗೆ ನೆರವಾಗುತ್ತದೆ ಮತ್ತು ಈ ಜಗತ್ತು ಒಂದು ಎನ್ನುವ ಭಾವನೆ ಮೂಡಿಸುತ್ತದೆ.
ಶಿವಲಿಂಗದಲ್ಲಿ ಎರಡು ವಿಧ. ಚರಲಿಂಗ ಮತ್ತು ಸ್ಥಿರಲಿಂಗ. ಮನೆಯಲ್ಲಿ ಪೂಜಿಸುವ ಲಿಂಗಕ್ಕೆ ಚರಲಿಂಗವೆಂದು ಕರೆಯುತ್ತಾರೆ. ಇದನ್ನು ನಾವು ಮಣ್ಣು ಅಥವಾ ಹಿಟ್ಟಿನಿಂದ ಮಾಡಿ ಪೂಜಿಸಿ ನಂತರ ವಿಸರ್ಜಿಸುತ್ತೇವೆ. ಇನ್ನು ಕೆಲವರು ಅಂದರೆ ವೀರಶೈವರು ಲಿಂಗವನ್ನು ಮೈಮೇಲೆ ಧರಿಸುತ್ತಾರೆ. ಈ ಲಿಂಗಗಳಿಗೂ ಚರಲಿಂಗವೆನ್ನುವರು. ದೇವಾಲಯಗಳಲ್ಲಿ ಸ್ಥಾಪಿಸಿರುವ ಲಿಂಗಗಳಿಗೆ ಸ್ಥಿರ ಲಿಂಗಗಳೆಂದು ಕರೆಯುತ್ತಾರೆ. ಅವುಗಳನ್ನು ಕಲ್ಲಿನಿಂದ ಮತ್ತು ಲೋಹಗಳಿಂದ ತಯಾರಿಸಿರುತ್ತಾರೆ. ಕೆಲವರು ಶಿವನನ್ನು ವಿವಿಧ ರೂಪದಲ್ಲಿ ಚಿತ್ರಿಸಿ ಪೂಜಿಸುತ್ತಾರೆ. ಅವು ಯಾವುವೆಂದರೆ ಹರಿಹರ ಮೂರ್ತಿ, ಉಗ್ರಮೂರ್ತಿ, ನೃತ್ಯಮೂರ್ತಿ, ದಕ್ಷಿಣಾಮೂರ್ತಿ, ಅರ್ಧನಾರೀಶ್ವರ ಮೂರ್ತಿ ಮತ್ತು ಭಿಕ್ಷಾಟನ ಮೂರ್ತಿ.
ಶಿವನ ವಿಶೇಷ ಮಂತ್ರ 'ನಮಃ ಶಿವಾಯ'. ಇದಕ್ಕೆ ಪಂಚಾಕ್ಷರಿ ಮಂತ್ರವೆನ್ನುವರು. ಈ ಮಂತ್ರದಲ್ಲಿ ಪೃಥ್ವಿ ಅಪ್, ತೇಜ, ವಾಯು ಮತ್ತು ಆಕಾಶ ಎಂಬ ಪಂಚಭೂತಗಳು ಮತ್ತು ಗಂಧರಸ, ರೂಪ, ಸ್ಪರ್ಶ ಮತ್ತು ಶಬ್ದವೆಂಬ ಪಂಚತನ್ಮಾತ್ರೆಯಗಳು ಸೇರಿವೆ. ಶಿವನ ದರ್ಶನ ಮಾಡಬೇಕಾದರೆ ನಂದೀಶ್ವರನ ಹಿಂಭಾಗವನ್ನು ಸ್ಪರ್ಶಿಸುತ್ತಾ ಅವರ ಶೃಂಗಗಳ ಮಧ್ಯದಿಂದ ಶಿವನನ್ನು ಕಾಣಬೇಕು. ಇದರ ಒಳಾರ್ಥ ಪ್ರಾಣಿಗಳಲ್ಲೂ ಶಿವನನ್ನು ಕಾಣು ಎಂದು.
ಮಹಾಶಿವರಾತ್ರಿ ಶಿವ ಭಕ್ತರಿಗೆ ಪವಿತ್ರವಾದ ದಿನ. ಒಂದು ಶಿವರಾತ್ರಿ ವ್ರತವನ್ನು ಆಚರಿಸಿದರೆ, ಸಾವಿರ ಏಕಾದಶಿ ವ್ರತಗಳು ಆಚರಿಸಿದಷ್ಟು ಫಲಗಳು ಮತ್ತು ಕಾಶಿಯಲ್ಲಿ ಮುಕ್ತಿ ಪಡೆದ ಪುಣ್ಯ ಫಲಗಳು ಸಿಗುವುವೆಂದು ಶಿವಪುರಾಣದಲ್ಲಿ ಹೇಳಿದೆ.
ಶಿವನಿಗೆ ಬಿಲ್ವಪತ್ರೆ ಬಹಳ ಪ್ರಿಯ. ಮಹಾಶಿವರಾತ್ರಿಯಂದು ಶಿವನನ್ನು 4 ಜಾವದ ರೀತಿಯಲ್ಲಿ ಪೂಜಿಸುವರು. ಒಂದು ಜಾವ ಎಂದರೆ 2 ಘಂಟೆ 30 ನಿಮಿಷ. ಶಿವರಾತ್ರಿಯಂದು ಶಿವನನ್ನು ಭಕ್ತಿ ಶ್ರದ್ದೆಗಳಿಂದ ಪೂಜಿಸಿದರೆ ನಮ್ಮ ದುಃಖವನ್ನು ನೀಗಿಸಿ ಸುಖದ ಫಲವನ್ನು ಶಿವನು ನೀಡುತ್ತಾನೆ.
ಮಹಾಶಿವರಾತ್ರಿ
ಶಿವನು ತ್ರಿಲೋಕ ಸಂಚಾರಿ ಮತ್ತು ಬ್ರಹ್ಮ ಸ್ವರೂಪ ಎಂದು ಈ ಜಗತ್ತಿಗೆ ತೋರಿಸಲು ಭೂಮಿಯಿಂದ ಆಕಾಶದವರೆಗೆ ಎತ್ತರವಾಗಿ ಶಿವಲಿಂಗದ ರೂಪದಲ್ಲಿ ಜ್ಯೋತಿಯಾಗಿ ನಿಂತ ದಿನವೇ ಶಿವರಾತ್ರಿ. ಶಿವರಾತ್ರಿಯಲ್ಲಿ 5 ಭಾಗಗಳಿವೆ.1) ನಿತ್ಯ ಶಿವರಾತ್ರಿ, 2) ಪಕ್ಷ ಶಿವರಾತ್ರಿ, 3) ಮಾಸ ಶಿವರಾತ್ರಿ, 4) ಯೋಗ ಶಿವರಾತ್ರಿ ಮತ್ತು 5) ಮಹಾ ಶಿವರಾತ್ರಿ. ಮಹಾ ಶಿವರಾತ್ರಿಯ ಮಾಘ ಮಾಸದ ಕೃಷ್ಣಪಕ್ಷದ ಚತುರ್ದಶಿ ದಿನ ಬರುತ್ತದೆ.
ಜಾಗರಣೆ ಏಕೆ?
ಶಿವರಾತ್ರಿಯ ದಿನ ಮಧ್ಯರಾತ್ರಿಯಲ್ಲಿ ಶಿವನಿಗೂ ಪಾರ್ವತಿಗೂ ಕಲ್ಯಾಣವಾಯಿತು. ಈ ವಿವಾಹಕ್ಕೆ ಮೂರು ಲೋಕಗಳೂ ಅಂದು ಜಾಗರಣೆ ಮಾಡಿರುತ್ತವೆ. ಈ ಕಾರಣದಿಂದ ನಾವು ಅಂದು ನಿದ್ರೆ ಮಾಡದೆ ಶಿವರಾತ್ರಿ ಜಾಗರಣೆ ಮಾಡಬೇಕು.
-ಮಂಡಗದ್ದೆ ಪ್ರಕಾಶ ಬಾಬು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


