ಭಕ್ತಿ-ಜ್ಯೋತಿಷ್ಯ

ಶಂಭೋ ಶಿವ ಶಂಭೋ

'ಓಂ ನಮಃ ಶಿವಾಯ...' ಮಾಘ ಮಾಸ ಕೃಷ್ಣ ಚತುರ್ದಶಿಯಂದು ಎಲ್ಲೆಡೆ ಕೇಳಿ ಬರುವ ಮಂತ್ರಘೋಷ. ಶಿವ...

ಶಂಭೋ ಶಿವ ಶಂಭೋ
Published On :

'ಓಂ ನಮಃ ಶಿವಾಯ...'
ಮಾಘ ಮಾಸ ಕೃಷ್ಣ ಚತುರ್ದಶಿಯಂದು ಎಲ್ಲೆಡೆ ಕೇಳಿ ಬರುವ ಮಂತ್ರಘೋಷ. ಶಿವ ಎಂಬ ಶಬ್ದಕ್ಕೆ ಮಂಗಳವೆಂಬ ಅರ್ಥವಿದೆ. ಅಂತೆಯೇ ಅಮರಕೋಶದಲ್ಲಿ  ಶ್ರೇಯಸ್ಸಮ್, ಭದ್ರಮ್, ಕಲ್ಯಾಣಮ್, ಶುಭಮ್ ಎಂಬ ಪರ್ಯಾಯ ಪದಗಳೂ ಇವೆ. ಶಿವನೆಂದರೆ ಪರಮ ಮಂಗಳ ಸ್ವರೂಪನೂ, ಜಗತ್ತಿಗೆಲ್ಲಾ ಏಕದೇವನೂ, ಸರ್ವಾತ್ಮನೂ, ಸರ್ವಶಕ್ತನೂ, ಸರ್ವೇಶನೂ ಆದ ಭಗವಂತನ ಅನೇಕ ನಾಮಧೇಯಗಳಾಗಿವೆ.
ನಮಃ ಎಂದರೆ, ನಮಸ್ಕಾರ ಎಂದರ್ಥ. ತನಗಿಂತ ಮತ್ತೊಂದು ವಸ್ತು ದೊಡ್ಡದು ಎಂಬ ಭಾವನೆಯುಂಟಾದಾಗ ಅದು ನಮಸ್ಕಾರಕ್ಕೆ ಅರ್ಹವಾಗುತ್ತದೆ. ಮಾನವನಿಗಿಂತ ಪರಮೇಶ್ವರನು ಎಲ್ಲಾ ವಿಷಯಗಳಲ್ಲೂ ದೊಡ್ಡವನಾದ್ದರಿಂದ ಅವನು ನಮಸ್ಕಾರಕ್ಕೆ ಅರ್ಹನಾಗುತ್ತಾನೆ.
ಇಂತಹ ಶಿವನನ್ನು ಕುರಿತಂತೆ ಹಲವು ಕವಿಗಳು, ವಿದ್ವಾಂಸರು, ಸಾಹಿತಿಗಳು ತಮ್ಮ ತಮ್ಮ ದೃಷ್ಟಿಕೋನದಲ್ಲಿ ವ್ಯಾಖ್ಯಾನಿಸಿದ್ದಾರೆ.
ಶಂಕರ ಭಗವತ್ಪಾದರು ತಮ್ಮ ಶಿವಾನಂದ ಲಹರಿಯಲ್ಲಿ ಪರಮಶಿವನಿಗಿಂತ ಹೆಚ್ಚು ಮಹಿಮಾನ್ವಿತರಾದ ದೇವತೆಗಳು ಯಾರೂ ಇಲ್ಲವೆಂದಿದ್ದಾರೆ. ಅವರು ತಮ್ಮ ಶ್ಲೋಕದಲ್ಲಿ ಶಿವನ ವಿಧವಿಧವಾದ ಗುಣಗಳನ್ನು ವರ್ಣಿಸುತ್ತಾ, ಶಿವನು ಸೃಷ್ಟಿ -ಸ್ಥಿತಿ-ಲಯಗಳನ್ನು ತಿಳಿದಿರುವವನು ಎಂದಿದ್ದಾರೆ.
ಚೆನ್ನಮಲ್ಲಿಕಾರ್ಜುನ ಎಂಬ ಅಂಕಿತನಾಮವನ್ನಿಟ್ಟುಕೊಂಡು ಬಂಧನದ ಗಿಳಿ ಬಂಧುಗಳ ನೆನೆವಂತೆ, ಸದಾಶಿವನನ್ನೇ ಕುರಿತು ತಪಸ್ಸನ್ನು ಮಾಡುವ ಅಕ್ಕಮಹಾದೇವಿ ಪರಮೇಶನನ್ನೇ ತನ್ನ ಪತಿಯೆಂದು ಪ್ರತಿ ವಚನದಲ್ಲಿಯೂ ಸಾರಿದ್ದಾರೆ.
ಡಿ.ವಿ.ಗುಂಡಪ್ಪನವರು 'ಮಂಕುತಿಮ್ಮನ ಕಗ್ಗ'ದಲ್ಲಿ ಶಿವಸೌಖ್ಯ ಸೌಂದರ್ಯಗಳ ಪೂರ್ಣರವಿ ಬೊಮ್ಮ ಎಂದು ವ್ಯಾಖ್ಯಾನಿಸಿದ್ದಾರೆ.
'ನಾದಪ್ರಿಯ ಶಿವನೆಂಬರು ನಾದಪ್ರಿಯ ಶಿವನಲ್ಲ, ವೇದಪ್ರಿಯ ಶಿವನೆಂಬರು ವೇದಪ್ರಿಯ ಶಿವನಲ್ಲ, ಭಕ್ತಿ ಪ್ರಿಯ ನಮ್ಮ ಕೂಡಲಸಂಗಮದೇವ' ಎಂದು ಬಸವಣ್ಣನವರು ಶಿವನನ್ನು ಕುರಿತು ಭಕ್ತಿಯಿಂದ ಪೂಜಿಸುವಂತೆ ಭಿನ್ನವಿಸಿದ್ದಾರೆ.
ಕನಕದಾಸರು ಸಕಲಾತ್ಮನೂ, ಸರ್ವಾತ್ಮನೂ, ಸಾಕ್ಷ್ಯಾತ್ಮನೂ ಆದ ಸರ್ವೇಶನನ್ನೂ ರಕ್ಷಿಸು ನಮ್ಮನನವರತ  ಎಂದು ಜಪಿಸಿದ್ದಾರೆ. 'ಜ್ಯೋತಿ ಬೆಳಗುತಿದೆ, ವಿಮಲ ಪರಂಜ್ಯೋತಿ ಬೆಳಗುತಿದೆ' ಎಂದು ನಿಜಗುಣ ಶಿವಯೋಗಿಗಳು ಗುಣಗಾನ ಮಾಡಿದರೆ, 'ಏಕಂ ಸತ್ ವಿಪ್ರಾ ಬಹುಧಾ ವದಂತಿ' ಎಂದು ಶಿವನನ್ನು ಕುರಿತು ಉಪನಿಷತ್ ಸಾರಿದೆ.
ಅಂಬಿಗರ ಚೌಡಯ್ಯನವರು, 'ಅಸುರ ಮಾಲೆಗಳಿಲ್ಲ, ತ್ರಿಶೂಲ ಢಮರುಗವಿಲ್ಲ, ಬ್ರಹ್ಮಕಪಾಲಿಯಲ್ಲ, ಭಸ್ಮ ಭೂಷಿತನಲ್ಲ, ವೃಷಭವಾಹನನಲ್ಲ, ಋಷಿಯ ಮಗಳೊಡನೆ ಇದ್ದು ತನಲ್ಲ ಎಸಗುವ ಸಂಸಾರದ ಕುರುಹಿಲ್ಲದಾತಂಗೆ ಹೆಸರಾವುದಯ್ಯ' ಎಂದು ಪ್ರಶ್ನಿಸಿದ್ದಾರೆ.
ಜಗದ್ಗುರು ಶಂಕರಾಚಾರ್ಯರು ಶಿವನನ್ನು ಈ ರೀತಿಯಾಗಿ ಧ್ಯಾನಿಸುತ್ತಾರೆ.
ಕರಚರಣ ಕೃತಂವಾ ವಾ ಕಾಯಜಂ, ಕರ್ಮಜಂ ವಾ
ಶ್ರವಣ ನಯನಜಂ ವಾ ಮಾನಸಂ ವಾಪರಾಧಂ
ವಿಹಿತ ಮಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯಜಯ ಕರುಣಾಬ್ದೇ ಶ್ರೀ ಮಹಾದೇವ ಶಂಭೋ.
ಎಂದರೆ,  ನಾನು ಕೈಯಿಂದ, ನನ್ನ ಕಾಲಿನಿಂದ, ಶರೀರದಿಂದ ಕೆಲಸಗಳಿಂದ, ಕೇಳುವುದರಿಂದ, ನೋಡುವುದರಿಂದ, ಮನಸ್ಸಿನಲ್ಲಿ ಚಿಂತಿಸುವುದರಿಂದ ಮಾಡಿದ ಅಪರಾಧಗಳನ್ನು ಅವು ವಿಹಿತವೋ ಅಹಿತವೋ ಏನೇ ಆಗಿರಲಿ ಕರುಣಾಸಾಗರ ಮಹಾದೇವ ಶಿವನೇ ಕ್ಷಮಿಸಿ ಪಾಲಿಸು ಎಂಬುದಾಗಿ ಸ್ತ್ರೋತ್ರದಲ್ಲಿ ವ್ಯಾಖ್ಯಾನಿಸಿದ್ದಾರೆ.
ಕವಿ ರಾಘವಾಂಕ ತನ್ನ ವಾರ್ಧ್ಯಕ್ಯ ಷಟ್ಪದಿಯಾದ ಹರಿಶ್ಚಂದ್ರ ಕಾವ್ಯದಲ್ಲಿ  ಕೈಯಲ್ಲಿ ಡಮರುಗ, ತಲೆಯಲ್ಲಿ ಬಾಲಚಂದ್ರ-ಗಂಗೆ, ಕೊರಳಿನಲ್ಲಿ ರುದ್ರಾಕ್ಷಿ ಸರ, ಶವಗಳ ರುಂಡ, ಹಣೆಯಲ್ಲಿ ಕಣ್ಣುಳ್ಳ ಹಣೆಗಣ್ಣ ಎಂಬೆಲ್ಲಾ ರೀತಿಯಲ್ಲಿ ಕಾವ್ಯಮಯವಾಗಿ ಶಿವನನ್ನು ವರ್ಣಿಸಿದ್ದಾರೆ.
ಷಡಕ್ಷರ ದೇವ ವಿರಚಿತ  ಶಬರಶಂಕರ ವಿಳಾಸಂ ಎಂಬ ಕಾವ್ಯದಲ್ಲಿ ಶಿವನ ಮಹಿಮಾತಿಶಯವನ್ನು ನಿರೂಪಿಸಿದ್ದಾರೆ. ಲೀಲಾಪ್ರಿಯನು, ಭಕ್ತಿಕಂಪಿತನು ಆದ ಶಿವನ ಕರುಣೆಯನ್ನು ಒಂದೆಡೆ ಸಾರುತ್ತಾ, ಶಿವ ಕಿರಾತನಾಗಿದ್ದರೂ ಆತನಲ್ಲೂ ಮಾನವೀಯ ಗುಣಗಳಿವೆ ಎಂಬುದನ್ನು ತನ್ನ ಕಾವ್ಯಭಾಗದಲ್ಲಿ ವಿವರಿಸಿದ್ದಾರೆ. ಈಶಾನ್ಯ ಸಂಹಿತೆಯಲ್ಲಿ ಶಿವನನ್ನು ಈ ರೀತಿಯಾಗಿ ವ್ಯಾಖ್ಯಾನಿಸಿದ್ದಾರೆ.
ಶಿವರಾತ್ರಿ ವ್ರತಾಮ್ನಾಯ ಸರ್ವಪಾಪ ಪ್ರಣಾಶನಂ
ಆ ಚಂಡಾಲ ಮನುಷ್ಯಾಣಾಂ ಭುಕ್ತಿ-ಮುಕ್ತಿ ಪ್ರದಾಯಕಂ
ಎಂದರೆ, ಸರ್ವ ಪಾಪವನ್ನು ದೂರ ಮಾಡುವ ಶಿವರಾತ್ರಿ ವ್ರತವನ್ನು ಯಾರು ನಿಷ್ಠೆಯಿಂದ ಮಾಡುತ್ತಾರೋ ಅವರಿಗೆ ಸದ್ಗತಿ ದೊರೆಯುತ್ತದೆ ಎಂದಿದೆ.
ಜಾನಪದದಲ್ಲಿ,  ಶಿವ ಶಿವ ಎಂದರೆ ಸಿಡಿಲೆಲ್ಲ ಬಯಲಾಗಿ
ಕಲ್ಲು ಬಂದೆರೆಗಿ ಕಡೆಗಾಗಿ, ಎಲೆ ಮನವೆ
ಶಿವನೆಂಬ ಶಬುದ ಬಿಡಬೇಡ
ಎಂದು ಶಿವನಾಮ ಕುರಿತಾಗಿ ವರ್ಣಿಸಿದ್ದಾರೆ.
ವಿಜಯದಾಸರ ಪ್ರಕಾರ,  ಕೈಲಾಸವಾಸ ಗೌರೀಶ ಈಶ, ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ .....ಎಂದು ವಿಷ್ಣುಭಕ್ತಿ ಕೊಡುವಂತೆ ಶಿವನನ್ನು ಬೇಡಿಕೊಂಡಿದ್ದಾರೆ.
ಶಿವಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ, ಎಂಬಂತೆ ಶಿವನನ್ನು ಸದಾ ಜಪಿಸುವುದರಿಂದ ಸಕಲವೂ ಸಿದ್ಧಿಸುತ್ತದೆ. ಶಿವನಾಮ ಸ್ಮರಣೆಯಿಂದ ಸಾಧಕನ ನರಮಂಡಲದಲ್ಲಿ ಒಂದು ರೀತಿಯ ಹಿತಕರವಾದ ಒಳಚಲನೆಯುಂಟಾಗಿ, ಕಷ್ಟಗಳು ನಿವಾರಣೆಯಾಗುತ್ತದೆ.
ಶಿವಸಮಯ
ಸಂಜೆಯೇ ಮಕ್ಕಳ ಆಟಕ್ಕೆ ಇದೇ ಸಮಯ ಸೂಕ್ತವೆನ್ನುತ್ತದೆ ಕ್ರೀಡಾಶಾಸ್ತ್ರ. ಶೃಂಗಾರ ಪ್ರಿಯರ ವಿಹಾರಕ್ಕೆ ಸಂಜೆಯೇ ಯೋಗ್ಯವೆನ್ನುತ್ತದೆ ಪ್ರೇಮಶಾಸ್ತ್ರ. ವಯೋವೃದ್ಧರಿಗೆ ಸಾಂಸಾರಿಕ ತಾಪಗಳ ಚರ್ಚೆಗೆ ಇದಕ್ಕಿಂತ ಒಳ್ಳೆಯ ಕಾಲ ಮತ್ತೊಂದಿಲ್ಲ. ಇವೆಲ್ಲವನ್ನು ಬಿಟ್ಟು ಸಂಧ್ಯಾ ವಂದನೆ ಮಾಡಿರಿ ಎನ್ನುತ್ತದೆ ಧರ್ಮಶಾಸ್ತ್ರ. ಏಕೆಂದರೆ ಸಂಜೆ ಶಿವ ಸಮಯ. ನಟರಾಜನಾಗಿ ಶಿವ ನರ್ತಿಸುವ ಸಮಯ. ತನ್ನ ಭೂತ ಗಣಗಳೊಂದಿಗೆ ಪೃಥ್ವಿಯನ್ನು ಸುತ್ತುವ ಸಮಯ.


-ಭಾಗ್ಯಾ ನಂಜುಂಡಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.