ಕೃಷಿ-ಪರಿಸರ

ತೆಂಗು... ನಿನಗಿಲ್ಲ ಹಂಗು!

ಕಲ್ಪವೃಕ್ಷ ಎಂದು ಕರೆಯಲ್ಪಡುವ ತೆಂಗಿನಕಾಯಿ ಯಾರಿಗೆ ಬೇಡ ಹೇಳಿ? ತಿನ್ನುವ ಆಹಾರದಿಂದ ಹಿಡಿದು ಧಾರ್ಮಿಕ ಆಚರಣೆಗಳಲ್ಲಿ, ಗೃಹೋಪಯೋಗಿಯಾಗಿ, ಔಷಧವಾಗಿ, ಉರುವಲಾಗಿ...

ತೆಂಗು... ನಿನಗಿಲ್ಲ ಹಂಗು!
ತೆಂಗಿನಕಾಯಿ
Published On :

ಕಲ್ಪವೃಕ್ಷ ಎಂದು ಕರೆಯಲ್ಪಡುವ ತೆಂಗಿನಕಾಯಿ ಯಾರಿಗೆ ಬೇಡ ಹೇಳಿ? ತಿನ್ನುವ ಆಹಾರದಿಂದ ಹಿಡಿದು ಧಾರ್ಮಿಕ ಆಚರಣೆಗಳಲ್ಲಿ, ಗೃಹೋಪಯೋಗಿಯಾಗಿ, ಔಷಧವಾಗಿ, ಉರುವಲಾಗಿ ಹೀಗೆ ಪಟ್ಟಿ ಮಾಡುತ್ತಾ ಹೋದರೆ ತೆಂಗಿನ ಉಪಯೋಗ ನೂರಾರು.

ಈ ತೆಂಗಿನ ಮಹತ್ವ, ಆರ್ಥಿಕವಾಗಿ ತೆಂಗಿನ ಬೆಳೆಯ ಲಾಭವನ್ನು ಸಾರಲು ಸೆಪ್ಟೆಂಬರ್ 2ನೇ ತಾರೀಖನ್ನು ವಿಶ್ವ ತೆಂಗು  ದಿನವೆಂದು ಆಚರಿಸಲಾಗುತ್ತದೆ.

ಈ ವರ್ಷ ನಮ್ಮ ದೇಶದಲ್ಲಿ ವಿಶ್ವ ತೆಂಗಿನಕಾಯಿ ದಿನಾಚರಣೆಯನ್ನು ತೆಂಗು ಅಭಿವೃದ್ಧಿ ಮಂಡಳಿ ಆಂಧ್ರಪ್ರದೇಶದ ವಿಜಯವಾಡಾದಲ್ಲಿ ಹಮ್ಮಿಕೊಂಡಿದೆ. ಈ ವರ್ಷದ ಘೋಷವಾಕ್ಯ ‘ ಕುಟುಂಬದ ಪೌಷ್ಠಿಕತೆ, ಆರೋಗ್ಯ ಮತ್ತು ಸುಸ್ಥಿತಿಯಲ್ಲಿ ತೆಂಗಿನಕಾಯಿ’ ಎಂಬುದಾಗಿದೆ. ತೆಂಗು ಬೆಳೆಯುವ ವಿವಿಧ ರಾಜ್ಯಗಳ ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ತೆಂಗಿನ ಬೆಳೆ, ಅದರಲ್ಲಿನ ತಾಂತ್ರಿಕತೆ, ಹೊಸ ಆವಿಷ್ಕಾರಗಳು ಇತ್ಯಾದಿಗಳನ್ನು ಇಲ್ಲಿ ರೈತರಿಗೆ ತೋರಿಸಲಾಗುತ್ತದೆ.

ಕೃಷಿ ಸಚಿವಾಲಯದ ಅಂಕಿಅಂಶ ಪ್ರಕಾರ, ಆಂಧ್ರಪ್ರದೇಶ ತೆಂಗಿನ ಬೆಳೆಯಲ್ಲಿ ಮೊದಲ ಸ್ಥಾನದಲ್ಲಿದ್ದು, ಪ್ರತಿ ಹೆಕ್ಟೇರ್ ಗೆ ಸರಾಸರಿ 14,997 ಕಾಯಿಗಳು ಬೆಳೆಯುತ್ತವೆ.

ಆಚರಣೆ ಹೇಗೆ ಬಂತು? ಏಷ್ಯಾ-ಫೆಸಿಫಿಕ್ ಪ್ರಾಂತ್ಯಗಳ ದೇಶಗಳಲ್ಲಿ ಆರ್ಥಿಕ ಬೆಳವಣಿಗೆಗೆ ತೆಂಗಿನಕಾಯಿ ಬೆಳೆಗಳನ್ನು ಹೆಚ್ಚು ಬೆಳೆಸುವಂತೆ ಮಾಡಲು ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ತೆಂಗಿನಕಾಯಿ ದಿನಾಚರಣೆ ಮೊದಲು ಆರಂಭಗೊಂಡಿತು. ಇದಕ್ಕಾಗಿ ಜಕಾರ್ತಾದಲ್ಲಿ ಏಷ್ಯಾ ಮತ್ತು ಫೆಸಿಫಿಕ್ ತೆಂಗಿನಕಾಯಿ ಸಮುದಾಯ ಮಂಡಳಿಯನ್ನು ರಚಿಸಲಾಯಿತು. ಈ ಮೂಲಕ ತೆಂಗಿನ ಕಾಯಿ ದಿನಾಚರಣೆಗೆ ನಾಂದಿ ಹಾಡಲಾಯಿತು. ಇಂದು ತೆಂಗಿನಕಾಯಿ ಬೆಳೆಯುವ ಪ್ರಮುಖ ರಾಷ್ಟ್ರಗಳು ಈ ದಿನಾಚರಣೆಯನ್ನು ಆಚರಿಸುತ್ತಿವೆ.

ತೆಂಗಿನಕಾಯಿ ಉಪಯೋಗ
ಎಳೆಯದಿದ್ದಾಗ ಎಳನೀರು, ಬಲಿತರೆ ತೆಂಗಿನಕಾಯಿ, ಒಣಗಿದರೆ ಕೊಬ್ಬರಿ ಮತ್ತೆ ಕೊಬ್ಬರಿ ಎಣ್ಣೆ. ಕಸಗುಡಿಸಲು ಪೊರಕೆ, ಮದುವೆಗೆ ಚಪ್ಪರ, ಛಾವಣಿಗೆ ಹೊದಿಕೆ, ಹೊಲ–ಗದ್ದೆಗಳಿಗೆ ಗೊಬ್ಬರ, ಮನೆಗಳಿಗೆ ಉರುವಲು... ಹೀಗೆ ತೆಂಗಿನ ಉಪಯೋಗಗಳು ಅನೇಕ. ತೆಂಗಿನ ನಾರೂ ಇದಕ್ಕೆ ಹೊರತಲ್ಲ.

ಅಲಂಕಾರಿಕ ಸಾಧನವಾಗಿ: ತೆಂಗಿನ ನಾರಿನಿಂದ ಬಗೆ ಬಗೆಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಪರಿಸರ ಸ್ನೇಹಿ ತೆಂಗಿನ ನಾರಿನ ಟ್ರೇ, ಫೋಟೊ ಫ್ರೇಮ್‌, ಮಂಚ ಹಾಗೂ ಶಾಲಾ ಡೆಸ್ಕ್‌ಗಳನ್ನು ಅಭಿವೃದ್ಧಿಪಡಿಸಿದೆ. ಇತರೆ ಸಂಸ್ಥೆಗಳ ಉತ್ಪನ್ನಗಳಾದ ಹ್ಯಾಂಗಿಂಗ್‌ ಪಾಟ್‌, ನರ್ಸರಿ ಪಾಟ್‌, ಹಕ್ಕಿಯ ಗೂಡುಗಳಿಗೆ, ಚಿಪ್ಪಿನಿಂದ ಗೃಹ ಅಲಂಕಾರ ವಸ್ತುಗಳನ್ನು ಮಾಡಲಾಗುತ್ತದೆ.ಅನೇಕರು ಇದನ್ನು ಉದ್ಯಮವನ್ನಾಗಿ ಮಾಡಿಕೊಂಡು ಉದ್ಯೋಗಕ್ಕೆ ರಹದಾರಿಯಾಗಿದೆ. ಶಾಲಾ ಮೇಜುಗಳು‌, ಮಂಚ, ಕಂಪ್ಯೂಟರ್‌ ಟೇಬಲ್‌ಗಳ ತಯಾರಿಕೆಯಲ್ಲೂ ತೆಂಗಿನ ನಾರು ಮಿಶ್ರಿತ ಬೋರ್ಡ್‌ಗಳನ್ನು ಬಳಸಲಾಗುತ್ತಿದೆ. ಪ್ರತಿ ಬೋರ್ಡ್‌ನಲ್ಲಿ ಶೇಕಡಾ 20ರಿಂದ 25ರಷ್ಟು ತೆಂಗಿನ ನಾರು ಬಳಸುವುದರಿಂದ ಬೇರೆ ಮರಗಳ ಅವಲಂಬನೆ  ಕಡಿಮೆಯಾಗಲಿದೆ.

ಗೊಬ್ಬರವಾಗಿ: ರಾಸಾಯನಿಕ ಗೊಬ್ಬರ ಹಾಕಿದರೆ ಪರಿಸರಕ್ಕೆ ಹಾನಿ. ಆದರೆ ತೆಂಗಿನ ನಾರಿನ ಗೊಬ್ಬರ ಪರಿಸರಸ್ನೇಹಿ. ಇದರ ಉತ್ಪನ್ನಗಳಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ.

ತೆಂಗಿನ ಮಡಲಿನಿಂದ ಕಸ ಗುಡಿಸಲು ಪೊರಕೆ, ಉರುವಲಾಗಿ, ಚಪ್ಪರ ಹಾಕಲು, ಸೂಟೆಯಾಗಿ ಹೀಗೆ ಹಳ್ಳಿಗಳಲ್ಲಿ ನೂರೆಂಟು ಉಪಯೋಗಗಳಿವೆ.

ಆಹಾರವಾಗಿ: ತೆಂಗಿನಕಾಯಿಯಿಂದ ಎಷ್ಟೊಂದು ಅಡಿಗೆ ತಯಾರಿಸುವುದಿಲ್ಲ ಹೇಳಿ? ಚಟ್ನಿ, ಸಾಂಬಾರ್, ಮಜ್ಜಿಗೆಹುಳಿ, ಪಾಯಸ, ಸಿಹಿತಿಂಡಿ ಇತ್ಯಾದಿ ಮಾಡಲು ತೆಂಗು ಅವಶ್ಯಕ. ಕೊಬ್ಬರಿಯಿಂದ  ಎಣ್ಣೆ ಸಿಗುತ್ತದೆ.

ಔಷಧವಾಗಿ: ತೆಂಗಿನ ಕರಟದಿಂದ ಎಣ್ಣೆ (ಇದು ಚರ್ಮರೋಗಕ್ಕೆ ರಾಮಬಾಣ), ಕಷಾಯ, ಇದ್ದಿಲು, (ಸಾರು ಅಡಿ ಹಿಡಿಯದೆ ಇರಲು ಸಾರಿನೊಳಗೆ ಕರಟ ಹಾಕುವುದನ್ನು ನೋಡಿದ್ದೇನೆ.), ಅದರ ಬೇರಿನಿಂದ ಎಣ್ಣೆ, ತೆಂಗಿನ ಹಾಲನ್ನು ಕಾಯಿಸಿ ಎಣ್ಣೆ ತೆಗೆಯುತ್ತಾರೆ. ಸೌಂದರ್ಯವರ್ಧಕವಾಗಿ ಅಪಾರವಾಗಿ ಬಳಸುತ್ತಾರೆ.

ಧಾರ್ಮಿಕ ಆಚರಣೆಗಳಲ್ಲಿ: ಶುಭ ಮತ್ತು ಅಶುಭ ಎರಡೂ ರೀತಿಯ ಧಾರ್ಮಿಕ ಆಚರಣೆಗಳಿಗೆ ತೆಂಗಿನಕಾಯಿಗಳನ್ನು ಒಡೆಯುವುದು ನಮ್ಮಲ್ಲಿರುವ ಪದ್ಧತಿ. ಹೆಚ್ಚು ಕಡಿಮೆ ಎಲ್ಲಾ ಹಿಂದೂ ಆಚರಣೆಗಳಲ್ಲಿ ತೆಂಗಿನ ಕಾಯಿಯು ಒಂದು ಅತ್ಯಾವಶ್ಯಕವಾದ ಸಮರ್ಪಣೆಯ ವಸ್ತುವಾಗಿರುತ್ತದೆ. ತೆಂಗಿನಕಾಯಿ ಎಂದರೆ ಅಜ್ಞಾನ ಮತ್ತು ಅಹಂಗಳ ಪ್ರತೀಕ ಎಂದರ್ಥ. ತೆಂಗಿನಕಾಯಿ ಚಿಪ್ಪು ತನ್ಮೂಲಕ ಅoತ:ಶುದ್ಧಿ ಹಾಗೂ ಜ್ಞಾನದ ಹೊoಬೆಳಕಿಗೆ ದಾರಿಮಾಡಿಕೊಡುವುದಾದರೆ, ಒಳಗಿನ ಬಿಳಿಪದರ ಜ್ಞಾನ ಹಾಗೂ ಆತ್ಮಶುದ್ಧಿ ಸಾಧಿಸಿದ್ದರ ದ್ಯೋತಕ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.