ರೈತರ ಮಾರ್ಗದರ್ಶಕ ಕಿಸಾನ್ ಟಿವಿ
ಕೇಂದ್ರ ಸರ್ಕಾರ ರೈತರಿಗೆ ದಿನದ 24 ಗಂಟೆಯೂ ಮಾಹಿತಿ ನೀಡುವ ಕಿಸಾನ್ ಟಿವಿ ಚಾನಲ್ ಆರಂಭಿಸಿದೆ.

ಭಾರತೀಯ ಆರ್ಥಿಕತೆಯ ಬೆನ್ನೆಲುಬೇ ಕೃಷಿ. ದೇಶದ ಮುಕ್ಕಾಲು ಭಾಗ ಜನರು ಕೃಷಿಯನ್ನೇ ತಮ್ಮ ಜೀವನವಾಗಿಸಿಕೊಂಡಿದ್ದಾರೆ. ಇಲ್ಲಿರುವ ರೈತನಿಗೆ ಕೃಷಿಗೆ ಪೂರಕವಾದ ಮಾಹಿತಿಯ ಅಗತ್ಯವಿತ್ತು. ಹೀಗಾಗಿ ಕೇಂದ್ರ ಸರ್ಕಾರ ರೈತರಿಗೆ ದಿನದ 24 ಗಂಟೆಯೂ ಮಾಹಿತಿ ನೀಡುವ ಟಿವಿ ಚಾನಲ್ ಆರಂಭಿಸಿದೆ.
ಕೇಂದ್ರ ಎನ್ ಡಿಎ ಸರ್ಕಾರ ತನ್ನ ಆಡಳಿತಾವಧಿಯ ಒಂದು ವರ್ಷ ಪೂರೈಸಿದ್ದರ ಹಿನ್ನೆಲೆಯಲ್ಲಿ ಮೇ, 26 2015 ರಲ್ಲಿ ಕಿಸಾನ್ ಟಿವಿಯನ್ನು ಲೋಕಾರ್ಪಣೆಗೊಳಿಸಿತು. ಅಂದಿನಿಂದ ದಿನದ 24 ಗಂಟೆಯೂ ಕಿಸಾನ್ ಚಾನೆಲ್ ಕೃಷಿಗೆ ಸಂಬಂಧಿಸಿದ ಹೊಸ ಹೊಸ ತಂತ್ರಜ್ಞಾನ, ಹವಾಮಾನ, ನೀರಿನ ಸಂರಕ್ಷಣೆ, ಮಣ್ಣು ಮತ್ತು ಕೃಷಿ ಸಂಬಂಧಿತ ಇತರ ಕ್ಷೇತ್ರಗಳ ಬಗ್ಗೆ ರೈತರಿಗೆ ಸಂಪೂರ್ಣ ಮಾಹಿತಿ ನೀಡುವಲ್ಲಿ ತನ್ನನ್ನು ಸಮರ್ಪಿಸಿಕೊಂಡಿದೆ.
2014 ರ ಲೋಕಸಭಾ ಚುನಾವಣೆ ವೇಳೆ , ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಭಾರತೀಯ ರೈತರಿಗೆ ದಿನದ 24 ಗಂಟೆಯೂ ಮಾಹಿತಿ ನೀಡಲು ಒಂದು ಚಾನೆಲ್ ಆರಂಭಿಸುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಅದರಂತೆ ಕಳೆದ ಬಾರಿಯ ಬಜೆಟ್ ನಲ್ಲಿ ಕಿಸಾನ್ ಟಿವಿಗಾಗಿ 100 ಕೋಟಿ ಅನುದಾನ ಕೂಡ ನೀಡಿದೆ. ಇನ್ನು ಎಲ್ಲಾ ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಕಿಸಾನ್ ಟಿವಿ ಕಾರ್ಯಕ್ರಮ ಕಡ್ಡಾಯವಾಗಿ ಪ್ರಸಾರವಾಗಿ, ಗ್ರಾಮೀಣ ಭಾಗದ ರೈತ ಸಮುದಾಯಕ್ಕೆ ತಲುಪಲು ಅನುಕೂಲವಾಗಿದೆ.
ಕೃಷಿಗೆ ಸಂಬಂಧಿಸಿದಂತ ಪ್ರಸಾರ ಭಾರತಿಯಲ್ಲಿ ಹಲವು ದಶಕಗಳಿಂದ ಅಂದರೆ ಜನವರಿ 26, 1967 ರಿಂದ ಕೃಷಿ ದರ್ಶನ್ ಎಂಬ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಭಾರತೀಯ ಹವಾಮಾನ ಇಲಾಖೆ, ರಾಷ್ಟ್ರೀಯ ಸರಕು ಉತ್ಪನ್ನ ಮತ್ತು ವಿನಿಮಯ, ಹಾಗೂ ಭಾರತೀಯ ಕೃಷಿ ಸಂಶೋಧನೆ ಮತ್ತು ಉತ್ಪಾದನಾ ಇಲಾಖೆಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಪ್ರಸಾರ ಭಾರತಿ, ಕಾಲ ಕಾಲಕ್ಕೆ ರೈತರಿಗೆ ಉಪಯುಕ್ತ ಮಾಹಿತಿ ನೀಡಲು ಮುಂದಾಗಿದೆ.
ರೈತರಿಗಾಗಿ ರಸಪ್ರಶ್ನೆ, ಸಾರ್ವಜನಿಕರಿಂದ ಮಾಹಿತಿ, ಕೃಷಿ ಅಧಿಕಾರಿಗಳಿಂದ ರೈತರಿಗೆ ಮಾಹಿತಿ, ಮಣ್ಣಿನ ಸಂರಕ್ಷಣೆ, ನೀರಿನ ಉಪಯೋಗದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಇನ್ನು ಕಿಸಾನ್ ಟಿವಿ ಬಗ್ಗೆ ರೈತರ ನಿರೀಕ್ಷೆಗಳು ಹೆಚ್ಚಿವೆ. ಕೃಷಿ ಬಗ್ಗೆ ತರಬೇತಿ, ಶಿಕ್ಷಣ, ತಂತ್ರಜ್ಞಾನದ ಗರಿಷ್ಠ ಉಪಯೋಗದ ಬಗ್ಗೆ ಮಾಹಿತಿ ನೀಡಬೇಕು ಎಂಬುದು ರೈತರ ಬಯಕೆ.
ಇನ್ನು ಜಮೀನುಗಳಲ್ಲಿ ರೈತರ ಬೆಳೆಗಳಿಗೆ ತಗಲುವ ರೋಗ, ಅದನ್ನು ತಡೆಗಟ್ಟುವ ಬಗ್ಗೆ, ಅದಕ್ಕೆ ಬಳಸಬೇಕಾದ ಔಷಧಿ ನಮೂನೆ ಮತ್ತು ಪ್ರಮಾಣದ ಬಳಕೆಯ ಬಗ್ಗೆ ಕಿಸಾನ್ ಟಿವಿಯಲ್ಲಿ ಮಾಹಿತಿ ನೀಡಬೇಕೆಂದು ರೈತರ ಅಪೇಕ್ಷೆ. ಮಾರುಕಟ್ಟೆ ಬಗ್ಗೆ ರೈತರಿಗೆ ಇರುವ ಮಾಹಿತಿ ಕೊರತೆ, ಪ್ರಸಕ್ತ ಇರುವ ದರ, ಅದರಲ್ಲಿರುವ ಅನುಕೂಲ, ಅನಾನುಕೂಲತೆಗಳ ಬಗ್ಗೆ ಮಾಹಿತಿ ನೀಡಲು ಚಾನೆಲ್ ಗಮನ ನೀಡಬೇಕು, ಕಿಸಾನ್ ಟಿವಿ ಆಯಾ ಪ್ರದೇಶದ ಭಾಷೆ, ಸ್ಥಳೀಯವಾಗಿ ಬೆಳೆಯುವ ಬೆಳೆಗಳ ಬಗ್ಗೆ ಮಾಹಿತಿ ನೀಡುವಲ್ಲಿ ಹೆಚ್ಚಿನ ಗಮನ ಕೇಂದ್ರೀಕರಿಸಬೇಕು.
ಫಾರ್ಮರ್ ಫ್ರಶ್ನಾ ಮಂಚ್, ಜೀವನ್ ದರ್ಶನ್, ಚೋಪಾಲ್ ಚರ್ಚ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿರುವ ಕಿಸಾನ್ ಟಿವಿ, ರೈತರಿಗೆ ಹೆಚ್ಚು ಉಪಯುಕ್ತ ಮಾಹಿತಿ ನೀಡುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


