ಕೃಷಿ-ಪರಿಸರ

ರೈತನ ಬದುಕನ್ನು ಹಸನಾಗಿಸುವ ಹಸಿರು ಬಂಗಾರ ವೀಳ್ಯದೆಲೆ

ಊಟದ ನಂತರ ಎಲೆ ಅಡಿಕೆ ಜಗಿಯುವುದು ಒಂದು ಸಂಪ್ರದಾಯ. ಎಲ್ಲ ಸಂಪ್ರದಾಯಸ್ಥ ಮನೆಗಳಲ್ಲಿ ಊಟದ ನಂತರ ಬಂದವರಿಗೆಲ್ಲ ಎಲೆ ಅಡಿಕೆ ಕೊಟ್ಟು ಗೌರವಿಸುತ್ತಾರೆ...

ರೈತನ ಬದುಕನ್ನು ಹಸನಾಗಿಸುವ ಹಸಿರು ಬಂಗಾರ ವೀಳ್ಯದೆಲೆ
ವೀಳ್ಯದೆಲೆ
Published On :

ಊಟದ ನಂತರ ಎಲೆ ಅಡಿಕೆ ಜಗಿಯುವುದು ಒಂದು ಸಂಪ್ರದಾಯ. ಎಲ್ಲ ಸಂಪ್ರದಾಯಸ್ಥ ಮನೆಗಳಲ್ಲಿ ಊಟದ ನಂತರ ಬಂದವರಿಗೆಲ್ಲ ಎಲೆ ಅಡಿಕೆ ಕೊಟ್ಟು ಗೌರವಿಸುತ್ತಾರೆ. ದಕ್ಷಿಣ ಭಾರತದಲ್ಲಿ ವೀಳ್ಯದೆಲೆಗೆ ವಿಶೇಷ ಸ್ಥಾನಮಾನ ಇದೆ. ಯಾವುದೇ ಶುಭ ಸಮಾರಂಭಗಳಿರಲಿ ಅಡಿಕೆ- ವೀಳ್ಯದೆಲೆ ಬೇಕೇ ಬೇಕು.

ಶುಭ ಸಮಾರಂಭ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲೂ ತಾಂಬೂಲದ ಬಳಕೆಯಾಗುತ್ತದೆ. ನಿಶ್ಚಿತಾರ್ಥ, ಮದುವೆ, ಮುಂಜಿ, ವ್ರತ ಹೀಗೆ ಏನೇ ಮಂಗಳ ಕಾರ್ಯಗಳಿದ್ದರೂ ವೀಳ್ಯದೆಲೆ ಬೇಕೇ ಬೇಕು. ಊಟದ ನಂತರ ತಾಂಬೂಲ ಹಾಕಿಕೊಳ್ಳಲಂತೂ ಈ ಎಲೆ ಅತ್ಯಗತ್ಯ.ಆದ್ದರಿಂದ ಮನೆ ಮುಂದಿನ ಸ್ವಲ್ಪ ಜಾಗದಲ್ಲಿಯೇ ಹೆಚ್ಚು ಖರ್ಚಿಲ್ಲದೆ ವೀಳ್ಯದೆಲೆ ಕೃಷಿ ಮಾಡಿ ಉತ್ತಮ ಆದಾಯ ಪಡೆಯಬಹುದು. ಮನೆಯ ಮುಂದಿನ ಸ್ವಲ್ಪ ಜಾಗದಲ್ಲಿ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ವೀಳ್ಯದೆಲೆಯ ಬೇಸಾಯ ಮಾಡಬಹುದು.

ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲಿ ವೀಳ್ಯದೆಲೆ ಬಳ್ಳಿಗಳನ್ನು ನಾಟಿ ಮಾಡಬೇಕು. ನಂತರ ಉತ್ತಮ ಮಣ್ಣು ಹಾಗು ಹಸಿರು ಸೊಪ್ಪನ್ನು ಬುಡಕ್ಕೆ ಹಾಕಿ ಬಳ್ಳಿ ಹಬ್ಬಲು ಆಧಾರ ಕೊಡಬೇಕು. ಅಡಿಕೆ ತೋಟ ಇಲ್ಲವೇ ವೀಳ್ಯದೆಲೆ ಹಬ್ಬಿಕೊಳ್ಳಲು ಅನುಕೂಲವಾದ ಮರಗಳನ್ನು ಬೆಳೆಸಿ ವೀಳ್ಯದೆಲೆ ಕೃಷಿ ನಡೆಸುವುದು ಎಲ್ಲೆಡೆ ಸಾಮಾನ್ಯ. ಹೊಲದಲ್ಲಿರುವ ಸಹಜ ಕಾಡಿನ ಮರಗಳಲ್ಲಿ ವೀಳ್ಯದೆಲೆ ಹಬ್ಬಿಸಿ ಸಮೃದ್ಧ ಎಲೆ ಬೆಳೆಯಬಹುದು. ಬಳ್ಳಿ ಹಬ್ಬಲು ಆಧಾರವಾಗಿ ಕೊಡುವ ಗೂಟಗಳು ಉತ್ತಮ ಜಾತಿಯ ಮರವಾಗಿದ್ದರೆ ಒಳ್ಳೆಯದು. ಬಳ್ಳಿ ಚೆನ್ನಾಗಿ ಹಬ್ಬಿ ಹಲವಾರು ವರ್ಷ ಬಾಳುತ್ತದೆ. ಒಮ್ಮೆ ನಾಟಿ ಮಾಡಿದ ವೀಳ್ಯದ ಬಳ್ಳಿಗೆ ಸರಿಯಾದ ಆರೈಕೆ ಹಾಗು ಬಲವಾದ ಗೂಟದ ಆಧಾರ ಕೊಟ್ಟರೆ ಎಂಟರಿಂದ ಹತ್ತು ವರ್ಷ ಇಳುವರಿ ಪಡೆಯಬಹುದು.

ಹೈನುಗಾರಿಕೆಯನ್ನು ಮಾಡುವವರು ಇಪ್ಪತ್ತು ದಿವಸಗಳಿಗೊಮ್ಮೆ ಸಗಣಿ ನೀರು, ಕಟ್ಟಿಗೆ ಬೂದಿ ಇತ್ಯಾದಿಗಳನ್ನು ಬಳ್ಳಿಗಳಿಗೆ ನೀಡವುದರಿಂದ ವೀಳ್ಯದೆಲೆ ಬಳ್ಳಿ ಸಮೃದ್ದವಾಗಿ ಬೆಳೆಯುತ್ತದೆ. ಇದರಿಂದ ಎಲೆಗಳು ಚೆನ್ನಾಗಿ ಚಿಗುರಿ ರೋಗಮುಕ್ತವಾಗುತ್ತವೆ. ಶೇಂಗಾ ಹಿಂಡಿಯನ್ನು ಹಾಗೂ ಬೇವಿನ ಹಿಂಡಿ ನೆನೆಸಿ ತೆಳ್ಳಗೆ ನೀರು ಮಾಡಿ ಹದಿನೈದು ದಿವಸಕ್ಕೊಮ್ಮೆ ಹಾಕುವುದರಿಂದ ಎಲೆಗಳು ಸಮದ್ಧವಾಗಿ ಬೆಳೆಯುತ್ತವೆ.  ಸಾವಯವ ಪದ್ಧತಿ ಅನುಸಕಿಸುವುದರಿಂದ ವೀಳ್ಯದೆಲೆಗೆ ರೋಗ ತಗಲುವ ಸಂಭವ ಕಡಿಮೆ. ನಾಟಿ ಮಾಡಿದ ನಾಲ್ಕು ತಿಂಗಳಲ್ಲೇ ವೀಳ್ಯದೆಲೆ ಕೊಯ್ಲಿಗೆ ಸಿಗುತ್ತದೆ. ಬಳ್ಳಿಗಳಿಗೆ ಬಿಸಿಲು ಜಾಸ್ತಿ ಆಗಬಾರದು. ಬಿಸಿಲು ಜಾಸ್ತಿ ಆದರೆ ಚಪ್ಪರ ಹಾಕಬೇಕಾಗುತ್ತದೆ. ಮಳೆಗಾಲದಲ್ಲಿ ಬಳ್ಳಿಯ ಬುಡದಲ್ಲಿ ನೀರು ಹರಿದು ಹೋಗುವಂತೆ ನೋಡಿಕೊಳ್ಳಬೇಕು.

ಮಾವು ಹಲಸು ಇನ್ನಿತರ ಮರಗಳಿಗೆ ಬುಡದಿಂದ ರೆಂಬೆ ರೆಂಬೆಗಳವರೆಗೆ ಚಿಗುರಿ ಹಬ್ಬಿ ನಿಂತಿರುವ ವೀಳ್ಯದೆಲೆ ಬಳ್ಳಿ ಹಬ್ಬಿಸಬಹುದು.  ಪ್ರತಿ 2 ತಿಂಗಳಿಗೆ ಒಮ್ಮೆಯಂತೆ ವರ್ಷಕ್ಕೆ 6 ಸಲ ಎಲೆ ಕೊಯ್ಲು ಮಾಡಬಹುದು. ತೋಟ ಅಥವಾ ಹೊಲದ ಸುತ್ತ ಇರುವ ಕಾಡು ಜಾತಿಯ ಮರ, ಮನೆ ಅಂಗಳ, ಬೇಲಿ ಸಾಲುಗಳಲ್ಲಿ ಇರುವ ಮಾವು ಹಲಸು ಇತ್ಯಾದಿ ಮರಗಳನ್ನು ಹಾಗೇಯೇ ಉಳಿಸುವುದಕ್ಕಿಂತ ವೀಳ್ಯದೆಲೆ, ಬೆಳೆಸಿ ಲಾಭ ಮಾಡಬಹುದು. ವೀಳ್ಯದೆಲೆ ಬಳ್ಳಿಯನ್ನು ಮರದ ಮೇಲೆ ಹಬ್ಬಿಸುವುದರಿಂದ ನೆಲಭಾಗದಲ್ಲಿ ಬೇರೊಂದು ಕೃಷಿ ಉತ್ಪನ್ನಗಳನ್ನು ಬೆಳೆಯಬಹುದು.

ವೀಳ್ಯದೆಲೆ ತೋಟಕ್ಕೆ ಹೆಚಿಚನ ನೀರಿನ ಅವಶ್ಯಕತೆಯಿದೆ. ನೆಲದ ಹಸಿ ಒಣಗಲು ಬಿಡದಂತೆ ನಿರಂತರವಾಗಿ ಎಲೆ ತೋಟಕ್ಕೆ ನೀರು ಹಾಯಿಸಬೇಕು. ಬರಗಾೀಲ ಮಳೆಯಿಲ್ಲದ ಸಂದರ್ಭದಲ್ಲಿ ಹನಿ ನೀರಾವರಿ ವೀಳ್ಯದೆಲೆ ಕೃಷಿಗೆ ತುಂಬಾ ಸಹಕಾರಿ. ಒಂದು ವೇಳೆ ನೀರು ಕಡಿಮೆಯಾದರೇ ಎಲ್ಲ ತೋಟಗಳಂತೆ ನೀರಿನ ಪ್ರಮಾಣ ಇಳಿಮುಖವಾಗುತ್ತಿದ್ದಂತೆ ಎಲೆತೋಟಗಳು ಹಾಳಾಗುವುದು ಸಹಜ.

ಒಟ್ಟಿನಲ್ಲಿ ಬಹು ಬೇಡಿಕೆಯಿರುವ ವೀಳ್ಯದೆಲೆ ಕೃಷಿಯನ್ನು ವಾಣಿಜ್ಯ ಉದ್ದೇಶಕ್ಕೂ ಮಾಡಬಹುದು. ಇಲ್ಲವೇ ಮನೆ ಬಳಕೆಗೆ ಬೇಕಾದ ವೀಳ್ಯದೆಲೆಯನ್ನು ನಿಮ್ಮ ಮನೆ ಮುಂದೆ ಇರುವ ಜಾಗದಲ್ಲೇ ಬೆಳೆಯಬಹುದಾಗಿದೆ.


- ಶಿಲ್ಪ.ಡಿ.ಚಕ್ಕೆರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.