ಭರ್ ಜರಿ ಸಿರಿ
ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರರ ಟಿಶರ್ಟಿನ ಮೇಲೆ ಮೀನಿನ ಮುಳ್ಳಿನ ರೀತಿಯ ಸಿಂಬಲ್ ಅನ್ನು ನೀವು ಕಂಡಿದ್ದೀರಾ?...

ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರರ ಟಿಶರ್ಟಿನ ಮೇಲೆ ಮೀನಿನ ಮುಳ್ಳಿನ ರೀತಿಯ ಸಿಂಬಲ್ ಅನ್ನು ನೀವು ಕಂಡಿದ್ದೀರಾ? ಅದು ಮೀನಿನ ಮುಳ್ಳಲ್ಲ. ಜರಿ ಗಿಡದ ಎಲೆ. ಸಾಧಾರಣ ಸಸ್ಯಗಳ ಗುಂಪಿಗೆ ಸೇರದ ಆ ಜರಿ ಗಿಡಕ್ಕೆ ಸೌಂದರ್ಯವನ್ನು ವೃದ್ಧಿಸುವುದೇ ಮುಖ್ಯ ಡ್ಯೂಟಿ. ಈ ಜರಿ ಸಸ್ಯಗಳು ಇನ್ನಿತರ ಗಿಡಗಳಿಗಿಂತ ಭಿನ್ನ. ಇದಕ್ಕೆ ಕಾಂಡ ಇಲ್ಲ . ಬದಲಾಗಿ ಗಿಡವು ಬುಡದಿಂದ ಒಡೆದುಕೊಂಡು ಬೆಳೆಯುತ್ತದೆ. ತಿಳಿ ಹಸಿರು ಅಥವಾ ದಟ್ಟ ಹಸಿರಿವ ಎಲೆಗಳು ಉದ್ದವಾಗಿ ಚಾಚಿಕೊಂಡು ಬಹಳ ಆಕರ್ಷಕವಾಗಿರುತ್ತವೆ.
ಕಣ್ಣಿಗೆ ಹಬ್ಬ
ಇಂಗ್ಲಿಷಿನಲ್ಲಿ ಈ ಗಿಡದ ಹೆಸರು ಪರ್ನ್. ಮಲೆನಾಡಿನಂಥ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಜರಿ ಗಿಡ ಕಂಡುಬರುತ್ತದೆ. ಪಶ್ಚಿಮ ಘಟ್ಟದ ತೇವಭರಿತ ಕಾಡುಗಳಲ್ಲಿ ಇವುಗಳ ವೈಯ್ಯಾರ ಕಣ್ಣಾರೆ ಕಾಣಬೇಕು. ಈ ಕಾಡುಗಳಲ್ಲಿ ಬೆಳೆಯುವ ಕೆಲವು ಜರಿ ಸಸ್ಯಗಳ ಚೆನ್ನಾಗಿ ಬೆಳೆದ ಅಥವಾ ಒಣಗುತ್ತಿರುವ ಎಲೆಯ ಹಿಂಭಾಗದಲ್ಲಿ ಸುಣ್ಣದಂಥ ಬಿಳಿಯ ಪುಡಿಯು ಅಂಟಿರುತ್ತದೆ. ಈ ಎಲೆಯನ್ನು ಕೈಮೇಲೆ ಒತ್ತಿಕೊಂಡರೆ ಅಂದವಾದ ಬಿಳಿ ಮುದ್ರೆ ಒತ್ತಿದಂತೆ ಕಾಣುತ್ತದೆ. ಇದೇ ಕಾಡುಗಳಲ್ಲಿ ಕಂಡುಬರುವ ಕೆಲವು ಜಾತಿಯ ಜರಿ ಗಿಡಗಳು ಬಹಳ ಎತ್ತರಕ್ಕೆ ಬೆಳೆಯುತ್ತವೆ. ಇವುಗಳಿಂದ ಹೊರಡುವ ಹೊಸ ಎಲೆಗಳು ಸಾಮಾನ್ಯವಾಗಿ ಬಿಗಿಯಾದ ದೊಡ್ಡ ಸುರುಳಿಯಾಕಾರದಲ್ಲಿದ್ದು, ಅವು ಸುರುಳಿಯಿಂದ ಬಿಚ್ಚಿಕೊಳ್ಳುವಾಗ ನೋಡಲು ಕಣ್ಣಿಗೆ ಹಬ್ಬ. ಆದರೆ, ಇವುಗಳು ಹೆಚ್ಚಿಗೆ ಮಳೆಗಾಲದಲ್ಲಿ ಮಾತ್ರ ಕಂಡುಬರುತ್ತವೆ.
ವಾಣಿಜ್ಯ ಬೆಳೆ
ಜರಿ ಸಸ್ಯಗಳು ಈಗ ಪ್ರಮುಖ ವಾಣಿಜ್ಯ ಬೆಳೆ. ಕೆಲವೊಂದು ಪ್ರಭೇದದ ಜರಿ ಸಸ್ಯಗಳ ಎಲೆಗಳನ್ನು ಹೂಗೊಂಚಲುಗಳ ನಡುವೆ ಅಲಂಕಾರಿಕವಾಗಿ ಬಳಸುತ್ತಾರೆ. ಎಲೆಗಳ ಹಸಿರು ಬಣ್ಣ ಹೂವಿನ ಅಂದ ಹೆಚ್ಚಿಸುತ್ತದೆ. ಈ ಎಲೆಗಳನ್ನು ಮದುವೆಯಂಥ ಶುಭ ಸಮಾರಂಭಗಳಲ್ಲಿ ಅಲಂಕಾರಕ್ಕಾಗಿ ಬಳಸುತ್ತಾರೆ. ಹೀಗಾಗಿ ರೈತರಿಗಿದು ವಾಣಿಜ್ಯ ಬೆಳೆ.
ಬೆಳೆಯುವ ಕ್ರಮ
ಇವುಗಳನ್ನು ಕುಂಡಗಳನ್ನೂ ನೆಡಬಹುದು, ಮನೆಯ ಹೊರಗಡೆಯೂ ಬೆಳೆಸಬಹುದು. ಕೆಲವೊಂದು ಜರಿಗಿಡಗಳು ಹಕ್ಕಿಗೂಡಿನ ಥರ ಕಾಣುತ್ತವೆ. ಇನ್ನು ಕೆಲವು ಗಿಡಗಳಲ್ಲಿ ಎಲೆಗಳು ಸಾರಂಗದ ಕೊಂಬಿನಂತೆ ಒಡೆದುಕೊಂಡು ಆಕರ್ಷಕವಾಗಿರುತ್ತದೆ.
ಜರಿ ಸಸ್ಯಗಳನ್ನು ಎರಡು ರೀತಿ ಬೆಳೆಸಬಹುದು. ಮೊದಲ ವಿಧಾನದಲ್ಲಿ ಗಿಡವನ್ನು ಕುಂಡದಿಂದ ಹೊರ ತೆಗೆದು ಮಣ್ಣಿನಿಂದ ಬೇರ್ಪಡಿಸಬೇಕು. ಬುಡದ ಗಡ್ಡೆಯನ್ನು ಒಂದೊಂದರಲ್ಲೂ ಹಲವು ಎಲೆಗಳಿರುವಂತೆ ವಿಭಜಿಸಬೇಕು. ನಂತರ ಕುಂಡದಲ್ಲಿ ನೆಟ್ಟು ಬೆಳಕು ಹಾಗೂ ತೇವಾಂಶ ಚೆನ್ನಾಗಿರುವ ಜಾಗದಲ್ಲಿಟ್ಟು ಬೆಳೆಸಬೇಕು. ಇನ್ನೊಂದು ವಿಧಾನದಲ್ಲಿ ಎಲೆಗಳ ಹಿಂಬದಿಯಲ್ಲಿರುವ ಸ್ಟೋರ್ಸ್ (ಬೀಜಾಣು) ಎಂದು ಕರೆಯಲ್ಪಡುವ ಕಂದು ಬಣ್ಣದ ಪುಡಿಯಿಂದಲೂ ಸಸಿಗಳನ್ನು ಬೆಳೆಸಬಹುದು. ಇದಕ್ಕೆ ಚೆನ್ನಾಗಿ ಬಲಿತಿರುವ ಎಲೆ ಅಥವಾ ಎಲೆಯ ಚೂರನ್ನು ತೆಗೆದುಕೊಂಡು ಎರಡು ಹಾಳೆಗಳ ಮಧ್ಯ ಇಡಬೇಕು. ಒಂದು ದಿನದ ನಂತರ ತೆಗೆದು ನೋಡಿದಲ್ಲಿ ಹಾಳೆಯ ಮೇಲೆ ಬೀಜಾಣು ಅಥವಾ ಕಂದುಬಣ್ಣದ ಪುಡಿಯು ಎಲೆಯ ಆಕಾರದಲ್ಲಿ ಅಚ್ಚಿನಂತೆ ಉದುರಿರುತ್ತದೆ. ಈ ಬೀಜಾಣುವನ್ನು ಹೂ ಕುಂಡಗಳಲ್ಲಿ ತುಂಬಿರುವ ಮಣ್ಣಿನ ಮೇಲೆ ತೆಳುವಾಗಿ ಉದುರಿಸಿ ಮುಚ್ಚಬೇಕು. ಆರೆಂಟು ವಾರಗಳಲ್ಲಿ ಚಿಕ್ಕ-ಚಿಕ್ಕ ಸಸಿಗಳು ಹುಟ್ಟಿಕೊಳ್ಳುತ್ತವೆ. ಸ್ವಲ್ಪ ಬೆಳೆದ ನಂತರ ಅವುಗಳನ್ನು ದೊಡ್ಡ ಕುಂಡಗಳಿಗೆ ವರ್ಗಾಯಿಸಬಹುದು.
ನಿರ್ಮಲ ಕೆ.ಎಸ್/ ಸುನೀತಾ ಸಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


