ಕೃಷಿ-ಪರಿಸರ

ಕೃಷಿ ಲಕ್ಷ್ಮಿ

ಕೈಹಿಡಿದ ಹವ್ಯಾಸದ ಉಪಕಸುಬು

ಕೃಷಿ ಲಕ್ಷ್ಮಿ
Published On :

ಕೃಷಿಕ ಮಹಿಳೆಯರು ಅತ್ಯಂತ ಕಡಿಮೆ ಬಂಡವಾಳದಿಂದ ಆದಾಯ ಗಳಿಸಲು ಇದೊಂದು ಮಾರ್ಗ ಎಂಬುದು ಲಕ್ಷ್ಮಿಯವರ ಅನಿಸಿಕೆ. ಮನಸ್ಸಿಗೂ ಆನಂದ ಸಿಗುತ್ತದೆ, ಖರ್ಚಿಗೆ ಆದಾಯವೂ ಬರುತ್ತದೆ...

ಇಲ್ಲಿಗೆ ನಾಲ್ಕು ವರ್ಷಗಳ ಹಿಂದೆ ಗುಬ್ಬಿ ತಾಲೂಕು ಬಿಲ್ಲೆಪಾಳ್ಯದ ಇಂದ್ರಕುಮಾರ್ ತಿನ್ನಲಿಕ್ಕೆಂದು ಎರಡು ಮೊಲ ತಂದರು. ನೋಡಲು ಮುದ್ದಾಗಿದ್ದವು, ಪಿಳಿ ಪಿಳಿ ಕಣ್ಣು ಬಿಡುತ್ತಾ ಪುಟು ಪುಟು ಓಡಾಡುತ್ತಿದ್ದವು. ಅವುಗಳ ಚಿನ್ನಾಟವನ್ನು ಕಂಡ ಮನೆಯೊಡತಿ ಲಕ್ಷ್ಮಿಗೆ ಕೊಲ್ಲಲು ಮನಸ್ಸಾಗಲಿಲ್ಲ, ಸಾಕೋಣ ಎಂದಳು, ಇಬ್ಬರು ಪುಟ್ಟ ಮಕ್ಕಳಿಗಂತೂ ಅದೇ ಬೇಕಿತ್ತು. ತಿನ್ನುವ ಬಯಕೆಗೆ ಕಡಿವಾಣ ಹಾಕಿಕೊಂಡ ಕುಮಾರ್ ಒಪ್ಪಲೇಬೇಕಾಯಿತು.
ಹಾಗಾಗಿ ಮಸಾಲೆ ಹಾಕಿಸಿಕೊಳ್ಳಬೇಕಾದ ಮರಿಗಳು ಮನೆ ಸದಸ್ಯರಾದವು. ಹಳ್ಳಿಯಾದ್ದರಿಂದ ಹಸಿ ಮೇವಿಗೆ ಕೊರತೆಯಿರಲಿಲ್ಲ. ಸುಖವಾಗಿ ಬೆಳೆದ ಆ ಗಂಡು- ಹೆಣ್ಣು ಮೊಲಗಳು ಸ್ವಲ್ಪ ದಿವಸಗಳಲ್ಲೇ ಐದು ಮರಿಗಳಿಗೆ ಸುಖ ಪ್ರಸವ ನೀಡಿದವು. ಈ ರೀತಿ ಹೆಚ್ಚುತ್ತಾ ಹೋದ ಮೊಲಗಳ ಕುಟುಂಬ ಕಳೆದವರ್ಷ 150 ದಾಟಿತ್ತು. ಅವುಗಳಿಗೆಂದೇ ಪ್ರತ್ಯೇಕ ಮನೆ, ಜಾಲರಿ ವ್ಯವಸ್ಥೆ ಮಾಡಿ ಸಾಕುವಷ್ಟರಮಟ್ಟಿಗೆ ಬೆಳೆಯಿತು.
ಹವ್ಯಾಸಕ್ಕಾಗಿ ಶುರುವಾದ ಇದು ಲಕ್ಷ್ಮಿಗೆ ಉಪಕಸುಬಾಗಿಯೇ ಬದಲಾಯಿತು. ದುಡಿಮೆಗೂ ದಾರಿಯಾಯಿತು. ಇವರಿಗೆ ಒಂದೆಕರೆ ಕೃಷಿ ಭೂಮಿ ಇದೆ. ಮಳೆಗಾಲದಲ್ಲಿ- ಅದೂ ಉತ್ತಮ ಮಳೆಯಾದರೆ ಮಾತ್ರ ರಾಗಿ, ಬತ್ತ ಬೆಳೆಯುತ್ತಾರೆ. ಇಲ್ಲವಾದರೆ ಇಲ್ಲ. ಹಾಗಾಗಿ ಕೃಷಿಯ ಮೇಲೆ ಸಂಪೂರ್ಣ ಅವಲಂಬಿಸದ ಇಂದ್ರಕುಮಾರ್ ಗಾರೆ ಕೆಲಸ ಮಾಡುತ್ತಾರೆ. ಮನೆಗೆಲಸ, ಮಕ್ಕಳ ಜವಾಬ್ದಾರಿ ಬಿಟ್ಟರೆ ಬೇರೇನೂ ಕೆಲಸವಿಲ್ಲದ ಲಕ್ಷ್ಮಿಗೆ ಮೊಲ ಸಾಕಣೆ ವರವಾಗಿ ಪರಿಣಮಿಸಿತು. ಗಂಡ ಬೆಳಗ್ಗೆ ಮನೆ ಬಿಟ್ಟರೆ ಸಂಜೆಯೇ ವಾಪಸ್ಸು. ಹಾಗಾಗಿ ಮೊಲ ಸಂಸಾರದ ಜವಾಬ್ದಾರಿ ಲಕ್ಷ್ಮಿ ಹೆಗಲಿಗೆ. ಅದನ್ನು ಪ್ರೀತಿಯಿಂದಲೇ ನಿಭಾಯಿಸುತ್ತಿದ್ದಾರೆ.
ಆರಂಭದಲ್ಲಿ ಕಂದು ಬಣ್ಣದ ಮೊಲಗಳು ಮಾತ್ರ ಇದ್ದವು. ಕೊಳ್ಳಲು ಬರುವವರು ಹೆಚ್ಚಾಗಿ ಬಿಳಿ ಮೊಲಗಳಿಗೆ ಬೇಡಿಕೆ ಇಡುತ್ತಿದ್ದರು. ಹಾಗಾಗಿ ನ್ಯೂಜಿಲೆಂಡ್ವೈಟ್, ಅಪ್ಪಟ ಕಪ್ಪು ಹಾಗೂ ಚಿಂಚಲ ತಳಿಯ ಮರಿಗಳನ್ನು ತಂದು ಸಾಕತೊಡಗಿದರು. ಗಾರೆ ಕೆಲಸಕ್ಕಾಗಿ ಇತರೆ ಊರುಗಳಿಗೆ ಹೋಗುತ್ತಿದ್ದ ಇಂದ್ರಕುಮಾರ್ ಲವ್ ಬರ್ಡ್ಸ್, ಗಿಳಿ ಹಾಗೂ ಪಾರಿವಾಳಗಳನ್ನೂ ತಂದು ಮೊಲಗಳಿಗೆ ಜೊತೆ ಮಾಡಿದರು. ದಿನಕ್ಕೆ ಮೂರರಿಂದ ನಾಲ್ಕು ಗಂಟೆ ಇವುಗಳ ಆರೈಕೆಗೆ ಬೇಕಾಗುತ್ತದೆ ಎನ್ನುತ್ತಾರೆ ಲಕ್ಷ್ಮಿ. ಮೊಲಗಳಿಗೆ ಕಡ್ಲೆಹಿಂಡಿ, ಬೂಸಾ, ಅಕ್ಕಿ ನುಚ್ಚು, ಗೋದಿ ನುಚ್ಚು ಅಥವಾ ಇತರೆ ಧಾನ್ಯಗಳ ಕಾಳನ್ನು ಒಂದು ಬಾರಿ ಕೊಡುತ್ತಾರೆ. ಉಳಿದಂತೆ ಹೊಲಗಳಿಗೆ ಹೋಗಿ ಹಸಿ ಮೇವು ತಂದು ಹಾಕುವುದು ರೂಢಿ, ಊರಿನ ಸುತ್ತಮುತ್ತ ಹೇರಳ ಅಡಕೆ- ತೆಂಗಿನ ತೋಟಗಳಿರುವುದರಿಂದ ಮೇವಿಗೆ ಕೊರತೆಯಿಲ್ಲ. ಪಕ್ಷಿಗಳಿಗೆ ಆಗಾಗ ಕಾಳು ಹಾಕಿದರೆ ಅಂದಿನ ಕೆಲಸ ಮುಗಿಯಿತು.
ಪಕ್ಷಿಗಳನ್ನು ಕೇವಲ ಹವ್ಯಾಸಕ್ಕಾಗಿ ಸಾಕಿದ್ದು, ಮೊಲಗಳನ್ನು ಮಾರುತ್ತಾರೆ. ಬಾಯಿ ಮಾತಿನ ಪ್ರಚಾರದಿಂದಾಗಿಯೇ ಸಾಕುವ ಇಚ್ಛೆಯುಳ್ಳವರು ಇವರ ಮನೆಗೇ ಬಂದು ಕೊಳ್ಳುತ್ತಾರೆ. ಒಂದು ಜತೆ ಮರಿಗಳಿಗೆ ರು. 250 ಹಾಗೂ ದೊಡ್ಡ ಮೊಲಗಳನ್ನು ಕಿಲೋ ಒಂದಕ್ಕೆ ರು. 250ನಂತೆ ಮಾರುತ್ತಾರೆ. ಕೆಲವು ತಿಂಗಳು ಹೆಚ್ಚಿನ ಬೇಡಿಕೆ ಇದ್ದರೆ ಕೆಲವು ತಿಂಗಳು ಕಡಿಮೆ. 2014ರ ಮೂರ್ನಾಲ್ಕು ತಿಂಗಳಲ್ಲಿ 20 ಮರಿಗಳು ಮಾರಾಟವಾಗಿದ್ದು, ಅಂದಾಜು ಮೂರು ಸಾವಿರ ಆದಾಯ. ಕಳೆದ ತಿಂಗಳು ಒಂದು ರೀತಿಯ ರೋಗಕ್ಕೆ ತುತ್ತಾಗಿ ಒಂದೆರಡು ದಿನದಲ್ಲೇ 40ಕ್ಕೂ ಹೆಚ್ಚು ಮರಿಗಳು ಸತ್ತು ಹೋದವು. ಮನೆಯವರೆಲ್ಲರಿಗೂ ಇದರಿಂದ ತುಂಬಾ ಬೇಸರವಾಗಿದೆ. ಈಗ ನಿಯಮಿತವಾಗಿ ಲಸಿಕೆ ಹಾಕುತ್ತಿದ್ದು, ರೋಗ ನಿಯಂತ್ರಣವಾಗಿದೆ.ಟಿ

-ಮಲ್ಲಿಕಾರ್ಜುನ ಹೊಸಪಾಳ್ಯ
krushikaimara@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.