ರಾಜ ಕರಬೂಜ

ಒಂದೆಡೆ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾಗಿ ಭೂಮಿ ಕಳೆದುಕೊಂಡು ಕಂಗಾಲಾಗಿ ಪರಿತಪಿಸುತ್ತಿದ್ದಾರೆ. ಇನ್ನೊಂದೆಡೆ ಬಾಗಲಕೋಟೆ ರೈತಾಪಿ ಜನರನ್ನು ಹುಬ್ಬೇರಿಸುವಂತೆ ರಾಜಸ್ಥಾನದ ರೈತರು ಅದೇ ಮುಳುಗಡೆ ಭೂಮಿಯಲ್ಲಿ ಭರ್ಜರಿ ಕಮಾಯಿ ಮಾಡುತ್ತಿದ್ದಾರೆ. ಇತ್ತ ಭೂಮಿ ಕೊಟ್ಟ ಮಾಲೀಕ ಅವರಿಂದ ಬಿಡುಗಾಸಿನ ಪರಿಹಾರ ಪಡೆಯುತ್ತಿದ್ದಾನೆ.
ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಜಿಲ್ಲೆಯ ಸಾವಿರಾರು ಎಕರೆ ಬಂಗಾರ ಬೆಳೆಯುವ ಭೂಮಿ ಕೃಷ್ಣಾರ್ಪಣೆಯಾಗಿದೆ. ಭೂಮಿ ಕಳೆದುಕೊಂಡವರಿಗೆ ಸರ್ಕಾರ ಅಲ್ಪಸ್ವಲ್ಪ ಪರಿಹಾರ ನೀಡಿದೆ. ಅಂದಿನಿಂದ ಇಂದಿನವರಗೆ ಜಲಾಶಯದಲ್ಲಿ ನೀರು ನಿಲ್ಲಿಸುತ್ತಿರುವ ಸರ್ಕಾರ ಮತ್ತೆ ರೈತರ ಕಡೆ ಮುಖ ಹಾಯಿಸಲಿಲ್ಲ. ಕೇವಲ ಭಾಷಣದಲ್ಲಿ ದೇಶಕ್ಕೆ ತ್ಯಾಗ ಮಾಡಿದ ಜಿಲ್ಲೆಯ ರೈತರ ಸಾಧನೆ ಎಂದು ಮರೆಯುವುದಕ್ಕೆ ಆಗುವುದಿಲ್ಲ ಎಂದು ಜನಪ್ರತಿನಿಧಿಗಳು ಬೊಬ್ಬೆ ಹಾಕುತ್ತಾರೆ. ಅದನ್ನು ಬಿಟ್ಟರೆ ಮುಳುಗಡೆಯಾದ ರೈತರಿಗೆ ಮತ್ತೇನೂ ಸಹಾಯ ಮಾಡಲಿಲ್ಲ. ಜಲಾಶಯದಲ್ಲಿ ವರ್ಷದಲ್ಲಿ ಕೇವಲ 6 ತಿಂಗಳು ಮಾತ್ರ ನೀರು ನಿಲ್ಲುತ್ತದೆ. ಉಳಿದ 6 ತಿಂಗಳು ನೀರಿನಿಂದ ಹದವಾದ ಭೂಮಿಯಲ್ಲಿ ರಾಜಸ್ಥಾನದ ರೈತರು ಹಣ್ಣು ಬೆಳೆದು ಭರ್ಜರಿ ಕಮಾಯಿ ಮಾಡುತ್ತಿದ್ದಾರೆ. ಬಿಡುಗಾಸು ಭೂಮಿ ಬಾಡಿಗೆ ಪಡೆದು ಜೀವನ ಸಾಗಿಸುವ ಬಾಗಲಕೋಟೆ ರೈತರು ಸರ್ಕಾರದ ಎದುರು ಸಹಾಯಹಸ್ತ ಚಾಚುವುದನ್ನು ನಿಲ್ಲಿಸಬೇಕಿದೆ.
ಎಕರೆಗೆ ರು. 500
ಮುಳುಗಡೆ ಭೂಮಿ ಮಾಲೀಕರಿಗೆ ಎಕರೆಗೆ ರು. 500ರಂತೆ ಬಾಡಿಗೆ ಪಡೆದು ಸಾವಿರಾರು ಎಕರೆ ಪ್ರದೇಶದಲ್ಲಿ ಹಣ್ಣು ಬೆಳೆದಿರುವ ರಾಜಸ್ಥಾನದ ವ್ಯಾಪಾರಿಗಳು ಹಣ್ಣು ಮಾರಾಟ ಮಾಡುತ್ತಿಲ್ಲ. ಬದಲಾಗಿ ಅದರಲ್ಲಿರುವ ಬೀಜವನ್ನು ಮಾತ್ರ ಮಾರಾಟ ಮಾಡುತ್ತಿದ್ದಾರೆ. ಹಿನ್ನೀರು ನಿಂತು ಸಾಕಷ್ಟು ಹದವಾಗಿರುವ ಭೂಮಿಯಲ್ಲಿ ಭರ್ಜರಿ ಬೆಳೆ ಬಂದಿದ್ದು, ಹಣ್ಣನ್ನು ಯಾರು ಬೇಕಾದರೂ ತಿನ್ನಬಹುದು. ಆದರೆ, ಅದರಲ್ಲಿನ ಬೀಜ ಮಾತ್ರ ಮಾಲೀಕರಿಗೆ ಕೊಡಬೇಕು.
ರು. 150 ಕೂಲಿ
ಇಲ್ಲಿ ಕೂಲಿಗಾಗಿ ಬರುವ ಕಾರ್ಮಿಕರಿಗೆ ದಿನಕ್ಕೆ ರಾಜಸ್ಥಾನದವರಿಗೆ ರು. 150, ಬಾಗಲಕೋಟೆ ಕೂಲಿಯವರಿಗೆ ರು. 120 ನೀಡುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೆ ಹೊಲದಲ್ಲಿ ಕೆಲಸ ಮಾಡುವ ರಾಜಸ್ಥಾನದ 15 ಜನರ ಕೂಲಿ ತಂಡ ಅಲ್ಲಿ ಕಾರ್ಯನಿರ್ವಹಿಸುತ್ತಿದೆ. ಇವರು ಹಣ್ಣುಗಳನ್ನು ಕಿತ್ತು ಅದರಲ್ಲಿರುವ ಬೀಜವನ್ನು ಬಕೆಟ್‌ನಲ್ಲಿ ಹಾಕಿ ನಂತರ ನದಿ ಪಕ್ಕ ಮಾಡಲಾಗಿರುವ ತಗ್ಗಿನಲ್ಲಿ ಹಾಕಿ ಅವುಗಳನ್ನು ಸ್ವಚ್ಛವಾಗಿ ನೀರಲ್ಲಿ ತೊಳೆದು ಬೀಜವನ್ನು ಬಿಸಿಲಿನಲ್ಲಿ ಒಣಗಿಸಲಾಗುತ್ತಿದೆ. ನಂತರ ಬೀಜವನ್ನು ರಾಜಸ್ಥಾನಕ್ಕೆ ಕಳುಹಿಸಲಾಗುತ್ತಿದೆ.
ಹಣ್ಣು ತಿನ್ನೋರಿಗೆ ಸುಗ್ಗಿ!
ರಾಜಸ್ಥಾನದ ಕರಬೂಜ ತಿನ್ನಲು ಯಾರು ಬೇಕಾದರು ಹೋಗಬಹುದು. ನದಿ ಆಚೆ ಇರುವ ಸುಮಾರು 8 ಗ್ರಾಮಗಳ ಕೆಲ ಗ್ರಾಮಸ್ಥರು ಹಣ್ಣು ತಿಂದು ಆರೋಗ್ಯ ಕೆಡಿಸಿಕೊಂಡವರೂ ಇದ್ದಾರೆ.
= ಚಂದ್ರು ಅಂಬಿಗೇರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


