ಕೃಷಿ-ಪರಿಸರ

ಮಣ್ಣೆಲ್ಲ ಹೊನ್ನು

ಮಣ್ಣೆಲ್ಲ ಹೊನ್ನು
Published On :

ರಾಸಾಯನಿಕ ಗೊಬ್ಬರದ ಹಿಂದೆ ಬಿದ್ದಿರುವ ರೈತ, ಅವೈಜ್ಞಾನಿಕ ಪದ್ಧತಿ ರೂಢಿಸಿಕೊಂಡಿದ್ದಾನೆ. ಇದರಿಂದ ಸರಿಯಾಗಿ ಬೆಳೆ ಬಾರದೆ ಕೃಷಿಯಿಂದ ವಿಮುಖನಾಗುತ್ತಿದ್ದಾನೆ. ಬೆಳೆ ಚೆನ್ನಾಗಿ ಬಾರದಿರಲು ಮಳೆಯೇ ಕಾರಣ ಎಂದು ತಿಳಿದಿದ್ದಾನೆ. ಮಣ್ಣಿನ ಫಲವತ್ತತೆ ಕುರಿತು ಅರಿವು ಹೆಚ್ಚಿನ ರೈತರಿಗೆ ಇದ್ದಂತಿಲ್ಲ.
ಮಣ್ಣಿನ ಫಲವತ್ತತೆ ಪರೀಕ್ಷಿಸಲು ಬೀಳುವ ಖರ್ಚು ಕೇವಲ ರು. 3. ರೈತ ಪ್ರತಿವರ್ಷ ಹಂಗಾಮು ಆರಂಭಕ್ಕೂ ಮುನ್ನ ತನ್ನ ಹೊಲಗಳ ಮಣ್ಣನ್ನು ಪರೀಕ್ಷಿಸಬೇಕು. ಯಾವ ಬೆಳೆ ಸೂಕ್ತ ಎಂಬ ತಜ್ಞರ ಸಲಹೆ ಆಧರಿಸಿ ಕೃಷಿ ಮಾಡಿದರೆ, ಹೊನ್ನು ಬೆಳೆಯಬಹುದು.
ಪೋಷಕಾಂಶ ಕೊರತೆ
ಧಾರವಾಡ ಜಿಲ್ಲಾದ್ಯಂತ ಲಘು ಪೋಷಕಾಂಶಗಳಾದ ಜಿಂಕ್, ಬೋರಾನ್, ಮೆಗ್ನೀಷಿಯಂ, ಸಲ್ಫರ್, ಕ್ಯಾಲ್ಸಿಯಂ ಕಡಿಮೆ ಪ್ರಮಾಣದಲ್ಲಿ ಇವೆ ಎಂಬುದು ಕೃಷಿ ಇಲಾಖೆ ಹೇಳುತ್ತದೆ. ಪೋಷಕಾಂಶ ಸಮತೋಲನದಲ್ಲಿ ಇರುವುದನ್ನು ಖಚಿತ ಮಾಡಿಕೊಳ್ಳಬೇಕು. ರೈತ ತನ್ನ ಭೂಮಿಯಲ್ಲಿ ಕಡಿಮೆ ಇರುವ ಪೋಷಕಾಂಶ ಒದಗಿಸಿದರೆ, ಫಲವತ್ತತೆ ಉಳಿಸಿಕೊಂಡು, ಉತ್ತಮ ಬೆಳೆ ತೆಗೆದು, ಆರ್ಥಿಕವಾಗಿ ಸದೃಢನಾಗಬಹುದು ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ಎಂ. ಗಡಾದ.
ತೀರಾ ಅವಶ್ಯ
ಭೂಮಿಯ ಫಲವತ್ತತೆ ಕುರಿತು ಸಹಾಯಕ ಕೃಷಿ ನಿರ್ದೇಶಕ (ಮಣ್ಣು ಆರೋಗ್ಯ ಕೇಂದ್ರ) ಎಫ್.ಎಸ್. ರಾಯನಗೌಡರ ಇನ್ನಷ್ಟು ಮಾಹಿತಿ ನೀಡುತ್ತಾರೆ, ಭೂಮಿಯಲ್ಲಿ ಲವಣಾಂಶ, ರಸಸಾರ, ಸಾವಯವ ಇಂಗಾಲ, ಪೋಟ್ಯಾಷ್, ಸತು, ತಾಮ್ರ, ಮ್ಯಾಂಗನೀಸ್, ಕಬ್ಬಿಣ ಅಂಶಗಳಿರುತ್ತವೆ. ಈ ಎಲ್ಲ ಪೋಷಕಾಂಶ ನಿರ್ದಿಷ್ಟ ಪ್ರಮಾಣದಲ್ಲಿರಬೇಕು. ಅಂದಾಗ ಮಾತ್ರ ಬೆಳೆ ಚೆನ್ನಾಗಿ ಬರುತ್ತದೆ. ರೈತ ಖರೀದಿಸುವ ಗೊಬ್ಬರದಲ್ಲಿ ಇವೆಲ್ಲ ಅಂಶಗಳಿರುತ್ತವೆ ಎನ್ನುತ್ತಾರೆ.
ಫಲವತ್ತತೆ ಹಾಳಾದೀತು...
ಮಣ್ಣಿನಲ್ಲಿ ರಸಸಾರ ಪ್ರಮಾಣ ಸರಿಯಾಗಿರಬೇಕು. ಅದು 7 ಪಿಎಚ್‌ವರೆಗೆ ಇರಬೇಕು. ಇದರ ಪ್ರಮಾಣ ಹೆಚ್ಚು ಹಾಗೂ ಕಡಿಮೆ ಇದ್ದರೆ ಭೂಮಿ ಜವುಳು ಹಿಡಿಯುತ್ತದೆ. ಇದಕ್ಕೆ ರೈತ ಸುಣ್ಣ ಹಾಗೂ ಗಂಧಕ ಸಿಂಪರಣೆ ಮಾಡಬೇಕಾಗುತ್ತದೆ. ಮಣ್ಣಿನಲ್ಲಿ ಲವಣಾಂಶ ಭೂಮಿಯಲ್ಲಿ 1 ಸೆಂ.ಮೀ.ಗಿಂತ ಕಡಿಮೆ ಇರಬೇಕು. ಹೆಚ್ಚಾಗಿದ್ದರೆ ಜಿಪ್ಸಂ, ಸುಣ್ಣ ಸಿಂಪರಣೆ ಮಾಡಬೇಕು. ಸಾವಯವ ಇಂಗಾಲ ಶೇ. 0.5ರಿಂದ 7.5 ಒಳಗಡೆ ಇರಬೇಕು. ಇಲ್ಲವಾದಲ್ಲಿ ರೈತರು ಕೊಟ್ಟಿಗೆ ಗೊಬ್ಬರ ಹಾಕಬೇಕು. ರಂಜಕ 9ರಿಂದ 22 ಕೆಜಿ ಒಳಗಡೆ ಇರಬೇಕು. ಈ ಆಧಾರದಲ್ಲಿ ಕೃಷಿ ಅಧಿಕಾರಿಗಳು ಡಿಎಪಿ ಗೊಬ್ಬರ ಹಾಕಬೇಕು. ಭೂಮಿಯಲ್ಲಿ ಪೋಷಕಾಂಶ ಹೇರಳ ಪ್ರಮಾಣದಲ್ಲಿದ್ದು, ರೈತ ಗೊಬ್ಬರದ ರೂಪದಲ್ಲಿ ಅದೇ ಪೋಷಕಾಂಶ ಮತ್ತೆ ಒದಗಿಸಿದರೆ ಭೂಮಿ ಫಲವತ್ತತೆ ಹಾಳಾಗುತ್ತದೆ, ಗೊಬ್ಬರವೇ ವಿಷವಾಗುತ್ತದೆ. ಬೆಳೆಯೂ ಸರಿಯಾಗಿ ಬಾರದು.
ಮಣ್ಣಿನ ಫಲವತ್ತತೆ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ರೈತರು ಅವೈಜ್ಞಾನಿಕವಾಗಿ ಭೂಮಿಗೆ ಗೊಬ್ಬರ, ನೀರು ಉಣಿಸಿ, ಭೂಮಿ ವಿಷಗೊಳಿಸಿ, ಅದರ ಫಲವತ್ತತೆ ಹಾಳು ಮಾಡಬಾರದು. ಮಣ್ಣು ಪರೀಕ್ಷಿಸಿ, ವೈಜ್ಞಾನಿಕ ರೈತನಾಗಿ ಅಭಿವೃದ್ಧಿ ಹೊಂದಬೇಕಿದೆ.

= ಹೊನ್ನಪ್ಪ ಲಕ್ಕಮ್ಮನವರ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.