ಕೃಷಿ-ಪರಿಸರ

ಭತ್ತದ ಘನಿ

ಭತ್ತದ ಘನಿ
Published On :

700 ತಳಿ ಸಂರಕ್ಷಕ
ಭತ್ತದ ಕೃಷಿಯ ಸಮೃದ್ಧಿಯ ದಿನಮಾನ ಅನುಭವಿಸಿದ ಹಿರಿಯರು ಮಾತಿಗೆ ಸಿಕ್ಕಾಗಲೆಲ್ಲ ಭತ್ತದ ಸಂಸ್ಕೃತಿಯ ಮಾಹಿತಿಗಳು ವಿನಿಮಯವಾಗುತ್ತವೆ. ಭತ್ತದ ಬೇಸಾಯವು ವರುಷಪೂರ್ತಿ ಹೊಟ್ಟೆ ತುಂಬಿಸುವ ಕಾಯಕ. ಲಾಭ- ನಷ್ಟದ ಲೆಕ್ಕಾಚಾರಕ್ಕಿಂತಲೂ, ಸಿಕ್ಕಿದ ಇಳುವರಿಯು ಮನೆಯ ಸದಸ್ಯರ ಹೊಟ್ಟೆ ತುಂಬಿಸಲು ಶಕ್ತವೇ ಎನ್ನುವ ಯೋಚನೆಗಳಿದ್ದವು. ಮನೆಯೊಳಗಿರುವ ಬತ್ತದ ಸಂಪತ್ತು ಶ್ರೀಮಂತಿಕೆಯ ಮಾನದಂಡ.
ಪ್ರಸ್ತುತ ಭತ್ತ ಬೆಳೆಯುವ ಗದ್ದೆಗಳು ಬಹುಮಹಡಿ ಕಟ್ಟಡಗಳ ಅಡಿಪಾಯವಾಗಿವೆ. ಭತ್ತದ ಬೇಸಾಯಕ್ಕೆ ನಷ್ಟದ ಹಣೆಪಟ್ಟಿ ಅಂಟಿಸಿ, ಅಂಗಡಿಯಿಂದ ಅಕ್ಕಿ ತರುವುದೇ ವಾಸಿ ಎನ್ನುವ ನಿಲುವನ್ನು ಸ್ವೀಕರಿಸಿದ ಬಹುತೇಕ ಕೃಷಿಕರ ಮಾತುಕತೆಯಲ್ಲಿ ವಿಷಾದದ ಸೊಲ್ಲಿದೆ. ಕಾರ್ಮಿಕರಿಲ್ಲ, ಬೆಲೆಯಿಲ್ಲ, ಲಾಭಕ್ಕಿಂತ ವೆಚ್ಚವೇ ಅಧಿಕ... ಮೊದಲಾದ ಸಮಸ್ಯೆಗಳು ಬತ್ತವಲ್ಲ, ಎಲ್ಲ ಕೃಷಿಯ ಮೇಲೂ ಬಾಧಿಸಿವೆ. ಈ ಮಧ್ಯ ಸರ್ಕಾರದ ಒಂದು ರುಪಾಯಿಗೆ ಒಂದು ಕಿಲೋ ಅಕ್ಕಿಯ ಕೊಡುಗೆ. ಬೆಳೆಯದಿದ್ದರೆ ತೊಂದರೆಯಿಲ್ಲ, ಬೇರೆ ರಾಜ್ಯಗಳಿಂದ ತರಿಸಿಕೊಂಡರಾಯಿತು ಎನ್ನುವ ವರಿಷ್ಠರ ಮಾತೊಂದು ಓದಿದ ನೆನಪು. ಯಾವುದೇ ಒಂದು ತಳಿ ಕೃಷಿಯು ಬೆಳೆದು ಬಳಸಿದಾಗಲೇ ಉಳಿಯುತ್ತದೆ ಎನ್ನುವ ಸತ್ಯದ ಪಾಠ ಎಲ್ಲೂ ಆಗುತ್ತಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಮೈ ದೇವರಾಯರು ಎಪ್ಪತ್ತಕ್ಕೂ ಮಿಕ್ಕಿದ ಭತ್ತದ ತಳಿ ಬೆಳೆಸಿ, ಬಳಸಿ ಉಳಿಸುತ್ತಿದ್ದಾರೆ. ಇತ್ತ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಸೈಯನ್ ಘನಿ ಖಾನ್ (37) ಏಳುನೂರು ವಿವಿಧ ಭತ್ತದ ತಳಿ ಬೆಳೆದು, ಬಳಸಿ, ಉಳಿಸುತ್ತಿದ್ದಾರೆ. ನಮ್ಮಲ್ಲಿ ಎಷ್ಟೋ ತಳಿಗಳಿದ್ದವು. ಉಳಿಸದೆ ಅವೆಲ್ಲ ನಾಶವಾಗಿವೆ. ಸಂಪನ್ಮೂಲ ಕಾಲಬುಡದಲ್ಲಿದ್ದರೂ ಅದನ್ನು ನೋಡುವ ಕಣ್ಣುಗಳಿಲ್ಲ, ದೇವರಾಯರು ಆಗಾಗ್ಗೆ ಚುಚ್ಚುತ್ತಾ ಇರುತ್ತಾರೆ.
ಘನಿ ಖಾನರ ತಂದೆ ಸೈಯದ್ ಮೊಹಮದ್. ಉತ್ತಮ ಕೃಷಿಕರು. ತಂದೆಯೊಂದಿಗೆ ಕೃಷಿ ಪಾಠ. ಕೃಷಿಯಲ್ಲಿ ಹೊಸದನ್ನು ಸಾಧಿಸುವ ಯೋಜನೆ- ಯೋಚನೆ. ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೀಜೋತ್ಪಾದನಾ ತರಬೇತಿ. ತನ್ನ ಹೊಲದಲ್ಲಿ ಅನುಷ್ಠಾನ. ಅರ್ಧ ಎಕರೆ ಗದ್ದೆಯಲ್ಲಿ ಮೂರು ಕ್ವಿಂಟಲ್ ಮೊದಲ ಇಳುವರಿ. ಉತ್ತೇಜಿತರಾದ ಘನಿ ಖಾನ್ ಮುಂದೆ ಏಳು ಎಕರೆ ಗದ್ದೆಯಲ್ಲಿ ಬೀಜೋತ್ಪಾದನೆಯ ಆರಂಭ.
2004ರಿಂದ ತಳಿ ಹುಡುಕಾಟ. ಆರಂಭದ ವರುಷ ಸಿಕ್ಕ ಭತ್ತದ ತಳಿ ಕೇವಲ ಎಂಟು. 2010ಕ್ಕಾಗುವಾಗ ನೂರೈವತ್ತು ಆಗಿತ್ತು. ಮುಂದಿನ ವರುಷ ಐನೂರು ಅರುವತ್ತೇಳು 2012ರಲ್ಲಿ ಆರುನೂರು, 2013ರಲ್ಲಿ ಏಳುನೂರಕ್ಕೆ ಏರಿತು ತಳಿ ಸಂಗ್ರಹಕ್ಕಾಗಿ ದೇಶಾದ್ಯಂತ ಓಡಾಡಿದರು. ಬತ್ತ ಸಂರಕ್ಷರೊಂದಿಗೆ ನಿರಂತರ ಸಂಪರ್ಕ. ಇವರ ಕೆಲಸಗಳಿಗೆ ಬೆಂಗಳೂರಿನ ಬತ್ತ ಉಳಿಸಿ ಆಂದೋಲನ, ಸಹಜ ಸಮೃದ್ಧ ಬಳಗದ ನೆರವು.
ಬಾಸ್ಮತಿಯ ಮೂಲ ತಳಿಯು ಘನಿ ಖಾನ್ ಹೊಲದಲ್ಲಿದೆ. ಕರಿಗಜಿವಿಲಿ, ಕಾಗಿಸಾಲೆ, ಘಂಗಡಲೆ, ರಸಕದಂ, ಮುಗದ ಸುಗಂಧ, ಜೀರಿಗೆ ಸಣ್ಣ... ಪರಿಮಳದ ಭತ್ತದ ತಳಿಗಳು. ಇಡ್ಲಿ, ಹಪ್ಪಳ, ಪಾಯಸ, ಬಿರಿಯಾನಿ, ಚಿತ್ರಾನ್ನ... ಹೀಗೆ ಒಂದೊಂದು ಖಾದ್ಯಕ್ಕೆ ಮಿಳಿತವಾಗಬಹುದಾದ ತಳಿಗಳ ಆಯ್ಕೆ. ಲಭ್ಯ ಬೀಜ ನಾಟಿ ಮಾಡಿ, ಇಳುವರಿ ಸಿಗುವಲ್ಲಿಯ ತನಕದ ದಾಖಲಾತಿ ಮಾಡುತ್ತಾರೆ. ಸಸ್ಯದ ಎತ್ತರ, ಪೈರಿನ ಬಣ್ಣ, ಇಳುವರಿ ಅವಧಿ, ಪ್ರಮಾಣ, ಕಾಳಿನ ಗಾತ್ರ... ಮೊದಲಾದ ಸೂಕ್ಷ್ಮ ವಿಚಾರಗಳ ದಾಖಲಾತಿಯಿದೆ.
ಒಂದೊಂದು ತಳಿಗೂ ಪ್ರತ್ಯಪ್ರತ್ಯೇಕ ವ್ಯವಸ್ಥೆ. ಇನ್ನೊಂದರ ಜತೆ ಸೇರಬಾರದೆನ್ನುವ ಜಾಗೃತೆ. ಕಾಳನ್ನು ಜೋಪಾನ ಮಾಡುವಾಗಲೂ ಆಸ್ಥೆ. ತಳಿ ಅಭಿವೃದ್ಧಿ ಮಾಡುವವರಿಗೆ ಘನಿ ನೆರವಾಗುತ್ತಾರೆ. ಬೀಜ ವಿನಿಮಯ, ಮಾರಾಟ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಭತ್ತ ಬೆಳೆಸಿ ಆಂದೋಲನದೊಂದಿಗೆ ಹೊಲದಲ್ಲಿ ಕ್ಷೇತ್ರೋತ್ಸವ ಏರ್ಪಡಿಸುತ್ತಾರೆ. ಭತ್ತದ ಬೀಜ ಪಡೆಯಲು ವರ್ಷವಿಡೀ ರೈತರು ಬರುತ್ತಲೇ ಇದ್ದಾರೆ.
ಧಾರವಾಡದ ಕೃಷಿ ಮಾಧ್ಯಮ ಕೇಂದ್ರವು ಘನಿ ಅವರ ಸಾಧನೆಯನ್ನು 700 ಭತ್ತ, 120 ಮಾವಿನ ತಳಿಗಳ ಸಂರಕ್ಷಕ ಸೈಯನ್ ಘನಿ ಖಾನ್ ಪುಸ್ತಿಕೆಯೊಂದರಲ್ಲಿ ಹಿಡಿದಿಟ್ಟಿದೆ. ಪತ್ರಕರ್ತ ಆನಂದತೀರ್ಥ ಪ್ಯಾಟಿ ಘನಿ ಹೊಲದಲ್ಲಿ ಓಡಾಡಿ, ಅವರ ಅನುಭವವನ್ನು ಅಕ್ಷರಕ್ಕಿಳಿಸಿದ್ದಾರೆ. ಕೃಷಿಕರಿಗೆ ಮಾದರಿಯಾಗಬಲ್ಲ, ಸಮಸ್ಯೆಗಳ ಸುಳಿಯಲ್ಲಿರುವ ಕೃಷಿರಂಗಕ್ಕೆ ಹೊಸ ದಿಕ್ಕು ತೋರಬಲ್ಲ ಕೃಷಿಕರ ಪ್ರಯತ್ನಗಳನ್ನು ದಾಖಲಿಸುತ್ತಿದ್ದೇವೆ, ಕೃಷಿ ಮಾಧ್ಯಮ ಕೇಂದ್ರದ ಅನಿತಾ ಪೈಲೂರು ಪ್ರಕಟಣೆಯ ಆಶಯವನ್ನು ಹೇಳುತ್ತಾರೆ. ಈಗಾಗಲೇ ಹದಿನೈದು ಪುಸ್ತಿಕೆಗಳನ್ನು ಮಾಧ್ಯಮ ಕೇಂದ್ರವು ಅಚ್ಚುಹಾಕಿದೆ.
ನೆಮ್ಮದಿ ಅರಸುವ ಮಂದಿಗೆ ಘನಿ ಕೃಷಿ ಜೀವನದಲ್ಲಿ ಬೆಳಕಿದೆ, ಸರಿಯಾದ ಲೆಕ್ಕಾಚಾರದೊಂದಿಗೆ ವ್ಯವಸಾಯ ಮಾಡಿದರೆ ಖರ್ಚು ವೆಚ್ಚ ಕಳೆದು ಒಂದಷ್ಟು ಹಣ ಖಂಡಿತವಾಗಿಯೂ ಸಿಗುತ್ತದೆ. ನಾನು ಅನುಸರಿಸುತ್ತಿರುವ ಸಾವಯವ ಕೃಷಿ ವಿಧಾನದಲ್ಲಿ ಖರ್ಚು ಜಾಸ್ತಿ ಇಲ್ಲ. ನನಗೆ ದೊಡ್ಡ ಪ್ರಮಾಣದ ಆದಾಯವೇನೂ ಸಿಗುತ್ತಿಲ್ಲ. ಆದರೆ, ಖರ್ಚು ಕಡಿಮೆ ಇರುವುದರಿಂದ ಸಿಗುವ ಆದಾಯ ಹೆಚ್ಚೇ ಎಂದು ಹೇಳಬಹುದು. ಇದೆಲ್ಲಕ್ಕೂ ಮಿಗಿಲಾಗಿ ಕೃಷಿಯಲ್ಲಿ ನೆಮ್ಮದಿ ಕಾಣುತ್ತಿದ್ದೇನೆ.

= ನಾ. ಕಾರಂತ ಪೆರಾಜೆ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.