ಆಮ್ ಆದ್ಮಿ!

ಇವರೇನು ಕೃಷಿ ತಜ್ಞರಲ್ಲ. ವಿಜ್ಞಾನಿಯೂ ಅಲ್ಲ. ಆದರೂ ಅತ್ಯದ್ಭುತ ಕೃಷಿಕರು. ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತಿ ಜೀವನದಲ್ಲೂ 'ಉತ್ತಮ ಸಾವಯವ ಕೃಷಿಕ' ಎಂದು ಸೈ ಎನಿಸಿಕೊಂಡಿದ್ದಾರೆ.
ಇವರೇ ಕೈಲಾಸಮೂರ್ತಿ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿಯಲ್ಲಿ 6 ಎಕರೆ ತೋಟದಲ್ಲಿ ಸಾವಯವ ಕೃಷಿ ಕೈಗೊಂಡಿದ್ದಾರೆ. ಮೂಲತಃ ಇವರು ಟಿ. ನರಸೀಪುರ ತಾಲೂಕಿನ ಮಾಡರಹಳ್ಳಿಯವರು.
ವಿಭಿನ್ನ ಹೆಜ್ಜೆ
ರಾಸಾಯನಿಕ ಬಳಸದೆ ಸಾವಯವ ಕೃಷಿ ಅವಲಂಬಿಸಿ ಲಾಭ ಗಳಿಸಬಹುದು. ಮುಂದಿನ ಪೀಳಿಗೆಗೆ ವಿಷರಹಿತ ಆಹಾರ ಒದಗಿಸಬಹುದು ಎಂಬ ಸತ್ಯ ಕಂಡುಕೊಂಡಿದ್ದಾರೆ. ಜತೆಗೆ ಮಕ್ಕಳಿಗೆ ಮಾವಿನಹಣ್ಣು ತಿನ್ನುವ ಸ್ಪರ್ಧೆ ಏರ್ಪಡಿಸುತ್ತಾರೆ. ಹಿತೈಷಿಗಳಿಗೆ ಉಚಿತವಾಗಿ ಹಣ್ಣು ನೀಡುತ್ತಾರೆ. ಇನ್ನು ಮಾವಿನಹಣ್ಣು, ಹೂವು ಬಿಡುವ ಸಂದರ್ಭದಲ್ಲಿ ಹರಡುವ ಕೀಟನಾಶಕಗಳ ಬಗ್ಗೆಯೂ ವಿವರಣೆ ನೀಡಿ ನೈಸರ್ಗಿಕ ಕೃಷಿ ತಜ್ಞರೆನಿಸಿಕೊಂಡಿದ್ದಾರೆ.
ನೈಸರ್ಗಿಕ ಕೃಷಿ ತಜ್ಞ
22 ವರ್ಷದಿಂದ ಸಾವಯವ ವಿಧಾನ ಅಳವಡಿಸಿಕೊಂಡಿದ್ದಾರೆ. ಇತರರಿಗೆ 'ಅಳವಡಿಸಿಕೊಳ್ಳಿ' ಎನ್ನುತ್ತಾರೆ. ಹಾಗಾಗಿಯೇ ಇವರಿಗೆ 'ನೈಸರ್ಗಿಕ ಕೃಷಿ ತಜ್ಞ' ಎಂಬ ಬಿರುದು ದೊರೆತಿದೆ. ಇವರ ಕಾರ್ಯವೈಖರಿಗೆ ಪರಿಸರ ರಾಜ್ಯ ಪ್ರಶಸ್ತಿ ಸೇರಿದಂತೆ ಇತರೆ ಗೌರವಗಳು ಲಭಿಸಿವೆ.
ರಾಸಾಯನಿಕ ಬಿಟ್ಟಿದ್ದು ಹೀಗೆ...
6 ಎಕರೆ ಜಮೀನಿನಲ್ಲಿ 18 ಮಾವಿನ ಮರ, ಹತ್ತಾರು ಸಪೋಟ ಸೇರಿದಂತೆ ಇತರೆ ಹಣ್ಣಿನ ಮರಗಳನ್ನು ಕೈಲಾಸಮೂರ್ತಿ ಬೆಳೆಸಿದ್ದಾರೆ. ಮಾವಿನ ಮರಗಳಿಗೆ ಬೂದಿ ರೋಗ, ಜಿಗಿಹುಳು, ಅಂತ್ರಾಕ್ನೋಸ್ ಮತ್ತಿತರ ಹುಳು, ರೋಗ ನಿಯಂತ್ರಣಕ್ಕೆ ಮೆಟಾಸಿಡ್, ಸೆವಿನ್, ಸಲ್ಫಾನ್ ಸೇರಿದಂತೆ ಇತರೆ ರಾಸಾಯನಿಕ ಸಿಂಪಡಿಸಿದ್ದರು. ಆದರೆ, ಒಂದು ಬಾರಿ ಕಡಿಮೆಯಾದ ಕೀಟ ಹಾವಳಿ ಹೆಚ್ಚಾಗುತ್ತಲೇ ಹೋಯಿತು. ಇದರಿಂದ ಬೇಸತ್ತ ಕೈಲಾಸಮೂರ್ತಿ 1990ರ ನಂತರ ಕೀಟನಾಶಕ ಬಳಸುವುದನ್ನು ನಿಲ್ಲಿಸಿದರು. ಬಳಿಕ ಸಾವಯವ ಕೃಷಿ ರೂಢಿಸಿಕೊಂಡರು. ಇಂದಿಗೂ ಅವರ ತೋಟದಲ್ಲಿ 18ಕ್ಕೂ ಹೆಚ್ಚು ಮಾವಿನ ಮರಗಳು ಸಮೃದ್ಧವಾಗಿ ಹಣ್ಣು ಬಿಡುತ್ತಲೇ ಇದೆ.
ಕೀಟನಾಶಕ ಬಳಕೆಯಿಂದ ಕೀಟಗಳ ಸಂಖ್ಯೆಯೂ ಹೆಚ್ಚುತ್ತದೆ. ಔಷಧ ಸಿಂಪಡಿಸಿದಾಗ ಸಸ್ಯದ ಎಲ್ಲ ಭಾಗ, ಕೊಂಬೆಗಳಿಗೂ ಹರಡುತ್ತವೆ, ತಮ್ಮನ್ನು ಕೊಲ್ಲುತ್ತಾರೆ ಎಂಬ ಭಯದಿಂದ ಕೀಟಗಳು ಸಂತಾನೋತ್ಪತ್ತಿ ಹೆಚ್ಚಿಸುತ್ತವೆ. ಕೀಟನಾಶಕ ಬಳಸದೆ ಇದ್ದರೆ ತಮಗೆ ವೈರಿಗಳಿಲ್ಲ ಎಂಬ ಕಾರಣಕ್ಕೆ ಕೀಟನಾಶಕಗಳು ಮರದ ರೆಂಬೆ ಇಲ್ಲವೆ ಕೊಂಬೆಗಳಲ್ಲಿ ಮಾತ್ರ ಇರುತ್ತವೆ ಎಂಬ ಸತ್ಯ ಕಂಡುಕೊಂಡರು. ಇಂದಿಗೂ ಕೀಟನಾಶಕ ಬಳಸದೆ ಸಾವಯವ ಹಣ್ಣು ನೀಡುತ್ತಿದ್ದಾರೆ ಕೈಲಾಸ ಮೂರ್ತಿ (ಮೊ. 9880185757).್ಙ
ಮಾವಿನ ಹಣ್ಣು ತಿನ್ನುವ ಸ್ಪರ್ಧೆ
ಮಾವಿನ ಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ, ಮಾವುಗಳನ್ನು ಕೊಡುಗೆಯಾಗಿ ನೀಡುತ್ತಾರೆ ಕೈಲಾಸಮೂರ್ತಿ. ಪ್ರತಿವರ್ಷ ಏಪ್ರಿಲ್‌ನಿಂದ ಮಾವಿನ ಹಣ್ಣುಗಳ ಸೀಜನ್ ಮುಗಿಯವವರೆಗೂ ಈ ಸ್ಪರ್ಧೆ ಏರ್ಪಡಿಸುತ್ತಾರೆ. ಮಾತ್ರವಲ್ಲ, ಇದು ವಿಷಮುಕ್ತ ಸಾವಯವ ಹಣ್ಣು ಎಂಬುದನ್ನು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ದೇಶ- ವಿದೇಶಗಳಿಂದ ಆಗಮಿಸುವ ವಿಜ್ಞಾನಿಗಳು, ಚಿಂತಕರಿಗೂ ಉಪನ್ಯಾಸ ನೀಡುವ ಇವರು, ವಿದೇಶಗಳಲ್ಲೂ ಸಾವಯವ ಕೃಷಿ ಬಗ್ಗೆ ಉಪನ್ಯಾಸ ನೀಡಿದ್ದಾರೆ.
-ಎನ್. ನಾಗೇಂದ್ರಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


