ಭೀಮಣ್ಣನ ಕೃಷಿ ಬಲ
ಈಗ್ಗೆ 3 ವರ್ಷದ ಮುಂಚೆ ಬೇರೆಯವರ ತೋಟಕ್ಕೋಗಿ ಮಾವಿನಹಣ್ಣು ಕಿತ್ಕೊಂಡು ಬರಬೇಕಿತ್ತು...

ಈಗ್ಗೆ 3 ವರ್ಷದ ಮುಂಚೆ ಬೇರೆಯವರ ತೋಟಕ್ಕೋಗಿ ಮಾವಿನಹಣ್ಣು ಕಿತ್ಕೊಂಡು ಬರಬೇಕಿತ್ತು. ಅವರು ಬೈದರೆ ಬೈಸ್ಕೋಬೇಕಿತ್ತು. ಕೊಟ್ರೆ ಕೊಡೋರು ಇಲ್ಲಾಂದ್ರೆ ಇಲ್ಲ, ಆದ್ರೆ ಇವತ್ತು ನಾವೇ ನಾಲ್ಕು ಜನಕ್ಕೆ ಕೊಡೋವಷ್ಟು ಮಾವಿನಣ್ಣು ಬೆಳೆದಿದ್ದೀವಿ, ಮಕ್ಳು ಮೊಮ್ಮಕ್ಕಳೆಲ್ಲ ಭಾಳಾ ಖುಷಿಪಡ್ತಾ ಅವ್ರೆ. ಚಳ್ಳಕೆರೆ ತಾಲೂಕು ಬೊಂಬೇರಹಳ್ಳಿಯ ಭೀಮಣ್ಣನ ನಡೆ- ನುಡಿಯಲ್ಲೆಲ್ಲ ಖುಷಿ ತುಳುಕಾಡುತ್ತಿತ್ತು. ತಾನೇ ನೀರು ಹೊತ್ತು ಹಾಕಿ ಬೆಳೆಸಿದ ಆಲ್ಫಾನ್ಸೋ, ಮಲ್ಲಿಕಾ ಮಾವಿನ ಸಸಿಗಳು ಫಸಲು ನೀಡಿದ್ದು ಅವರ ಸಂತೋಷಕ್ಕೆ ಒಂದು ಕಾರಣವಾದರೆ ಗ್ರಾಮದ ಜನ ಇವರು ತೋಟ ಬೆಳೆಸಿರುವ ಅಚ್ಚುಕಟ್ಟುತನಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಮತ್ತೊಂದು ಕಾರಣ.
ತಲೆಮಾರುಗಳಿಂದ ಭೀಮಣ್ಣನವರದು ಒಣಭೂಮಿ ಕೃಷಿಯೇ. ಈ ಭಾಗದ ಮುಖ್ಯ ಬೆಳೆಯಾದ ಶೇಂಗಾ ಜತೆಗೆ ಹಾರಕ, ಹುರುಳಿ, ಜೋಳ, ಕೊರಲೆ ಇತ್ಯಾದಿ ಬೆಳೆಯುತ್ತಿದ್ದರು. ಬಡ ಕುಟುಂಬವಾದ್ದರಿಂದ ತೋಟ ಬೆಳೆಸುವ ಖರ್ಚಿನ ಬಾಬತ್ತಿನ ಬಗ್ಗೆ ಗಮನಹರಿಸಿರಲಿಲ್ಲ. ಅಕ್ಕ-ಪಕ್ಕದೋರೆಲ್ಲ ತೋಟ ಬೆಳೆಸಿದ್ದು ನೋಡ್ದಾಗ ನಮ್ಗೂ ಒಳ್ಳೋಳ್ಗೆ ಆಸೆ ಆಗದು, ಆದರೆ ಬರೇಕೈಲಿ ಏನ್ ಮಾಡದು ಅಮ್ತ ಸುಮ್ಮಕಾಗ್ತಿದ್ವಿ ಎನ್ನುತ್ತಾರೆ ಭೀಮಣ್ಣ.
ಆದರೆ, 2010ರಲ್ಲಿ ಒಂದು ಅವಕಾಶ ಸಿಕ್ಕಿತು. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಅಡಿ ಇವರಿಗೆ ಒಂದು ಎಕರೆ ತೋಟ ಮಾಡಿಕೊಳ್ಳಲು ಅವಕಾಶ ಸಿಕ್ಕಿತು. ಆರಂಭದಲ್ಲಿ ಯೋಜನಾ ಸಿಬ್ಬಂದಿ ಈ ಬಗ್ಗೆ ತಿಳಿಸಿದಾಗ ಅನುಮಾನಪಟ್ಟರು. ನಿರಂತರ ಮನವೊಲಿಕೆ ನಂತರ ಅತ್ಯಂತ ಖುಷಿಯಿಂದ ಕಣ್ಣಿಗೊತ್ತಿಕೊಂಡು ಬಂದ ಅವಕಾಶ ಬಳಸಿಕೊಂಡರು. ಆದರೆ, ತೋಟ ಬೆಳೆಸುವ ಕೆಲಸ ಸುಲಭದ್ದಾಗಿರಲಿಲ್ಲ. ಮೊದಲನೆಯದಾಗಿ ನೀರಿನ ಸಮಸ್ಯೆ. ಹಾಗೆಂದು ಅವಕಾಶ ಬಿಡುವಂತೆಯೂ ಇರಲಿಲ್ಲ. ಹೆಗಲ ಮೇಲೆ ನೀರು ಹೊತ್ತು ತಂದು ತೋಟ ಬೆಳೆಸುವ ಸಂಕಲ್ಪ. ತಲಾ 20 ಮಾವು ಮತ್ತು ಸಪೋಟ ಸಸಿಗಳನ್ನು ಸೂಕ್ತ ಅಂತರದಲ್ಲಿ ಹೊಲದ ನಡುವೆ ನೆಟ್ಟರು. ಸುತ್ತಲೂ ಬದುಗಳ ಮೇಲೆ ತೇಗ, ಸಿಲ್ವರ್ ಓಕ್, ಗ್ಲಿರಿಸೀಡಿಯಾ, ಸುಬಾಬುಲ್, ಅಗಸೆ ಜತೆಗೆ ನೇರಳೆ, ಬೇವು, ನುಗ್ಗೆ, ತೆಂಗಿನ ಸಸಿಗಳನ್ನೂ ಅಲ್ಲಲ್ಲಿ ಹಾಕಿದರು. ಮಳೆಗಾಲದಲ್ಲಿ ಸಸಿಗಳ ನಡುವೆ ರಾಗಿ, ಈರುಳ್ಳಿ, ಮೆಕ್ಕೆಜೋಳ, ಕೊರಲೆ, ಶೇಂಗಾ ಮುಂತಾದ ಬೆಳೆಗಳಿಗೂ ಅವಕಾಶ.
ತೋಟ ಬೆಳೆಸುವ ಇವರ ಪ್ರೀತಿ ಹಾಗೂ ನೀರು ಹೊತ್ತು ತರಲು ಪಡುತ್ತಿದ್ದ ಪಡಿಪಾಟಲನ್ನು ಗಮನಿಸಿ ಯೋಜನೆಯಿಂದ ಎತ್ತಿನಗಾಡಿಯ ವ್ಯವಸ್ಥೆ ಮಾಡಿದರು. ಇವರಂಥ ಹಲವು ರೈತರಿಗೆ ಇದರಿಂದ ಉಪಯೋಗವಾಯಿತು. ಹತ್ತಿರದ ಕೆರೆ, ಕೊಳವೆ ಬಾವಿಗಳಿಂದ ನೀರು ತುಂಬಿಸಿ ತಂದು ಚಳ್ಳಕೆರೆಯ ಬಿರುಬೇಸಿಗೆಯಲ್ಲೂ ಗಿಡಗಳನ್ನು ಉಳಿಸಿಕೊಂಡರು. ಒಂದು ಸಸಿಯೂ ಒಣಗಲು ಅವಕಾಶ ನೀಡಲಿಲ್ಲ. ನೀರಿನ ಕೊರತೆಯಿಂದ ಹಲವು ರೈತರು ನಾವು ಕೊಟ್ಟ ಸಸಿಗಳನ್ನು ಒಣಗಿಸಿದರು. ಆದರೆ, ಭೀಮಣ್ಣ ಹಾಗೆ ಮಾಡಲಿಲ್ಲ. ಅವರ ಬದ್ಧತೆ ತುಂಬಾ ಇಷ್ಟವಾಯಿತು ಎನ್ನುತ್ತಾರೆ ಯೋಜನೆಯ ತಂಡದ ನಾಯಕ ಜುಂಜಣ್ಣ. 2012ರಲ್ಲಿ ಭೀಮಣ್ಣನವರ ಅಣ್ಣನ ಮಗ ಕೊಳವೆ ಬಾವಿಯೊಂದನ್ನು ಕೊರೆಸಿದರು. ಇವರ ಹೊಲಕ್ಕೆ ಹತ್ತಿರದಲ್ಲೇ ಇದ್ದುದರಿಂದ ಅಲ್ಲಿಂದ ಪೈಪುಗಳ ಮೂಲಕ ನೀರು ಪಡೆದರು. ಸಮೃದ್ಧ ನೀರನ್ನುಂಡ ಸಸಿಗಳು ಸೊಗಸಾಗಿ ಬೆಳೆದು ತೋಟದ ಸ್ವರೂಪ ಪಡೆದವು.
ಮೊದಲು ಹೆಗಲ ಮೇಲೆ, ನಂತರ ಎತ್ತಿನ ಗಾಡಿಯ ಮೂಲಕ, ಅದಾದ ಮೇಲೆ ಅಣ್ಣನ ಮಗನ ನೆರವಿನಿಂದ ಕೊಳವೆ ಬಾವಿ ನೀರು ಪಡೆದು ತೋಟ ಕಟ್ಟಿದ ಭೀಮಣ್ಣನವರಿಗೆ 2014ರಲ್ಲಿ ಸ್ವಂತ ಕೊಳವೆ ಬಾವಿ ಕೊರೆಸುವ ಉಮೇದು ಬಂದಿತು. ಬಾಡಿಗೆ ನೀರಿನಲ್ಲಿ ಈರುಳ್ಳಿ, ಹೂವು ಬೆಳೆದು ಸಂಪಾದಿಸಿ ಚೂರು ದುಡ್ಡು ಉಳಿಸಿದ್ದರು. ನೀರು ಸಿಗುತ್ತದೋ ಇಲ್ಲವೋ ಎಂಬ ಅಳುಕಿನಿಂದಲೇ ಕೊರೆಸಿದ ಬಾವಿಯಲ್ಲಿ 150 ಅಡಿಗೇ ನೀರು ಸಿಕ್ಕಿತು. ನನ್ನ ಪಾಟು ನೋಡಿ ಆ ಗಂಗಮ್ಮ ತಾಯಿ ಕಣ್ಣು ಬಿಟ್ಲು ಎನ್ನುವ ಭೀಮಣ್ಣ ಸಮೃದ್ಧ ನೀರು ಸಿಕ್ಕಿತೆಂದು ಪೋಲು ಮಾಡುತ್ತಿಲ್ಲ. ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ಹೊಲದ ಮೇಲ್ಭಾಗದಲ್ಲಿ ನೀರು ಸಂಗ್ರಹಣಾ ತೊಟ್ಟಿ ಕಟ್ಟಿದ್ದಾರೆ. ಅಲ್ಲಿ ನೀರು ನಿಲ್ಲಿಸುವುದರಿಂದ ಇಡೀ ತೋಟಕ್ಕೆ ತಂಪು ಸಿಗುತ್ತಿದೆ.
ಕೂಲಿಕಾರರ ಮೇಲೆ ಅವಲಂಬನೆಯಾಗದಿರುವುದು ಇವರ ಕೃಷಿಯ ವೈಶಿಷ್ಟ್ಯ. ಗುಂಡಿ ತೆಗೆಯುವುದರಿಂದ ಮೊದಲ್ಗೊಂಡು ಸಸಿ ನೆಡುವುದು, ನೀರು ಹಾಕುವುದು, ಉಳುಮೆ, ಇತರೆ ಬೆಳೆಗಳ ಬಿತ್ತನೆ, ನಾಟಿ ಹಾಕುವುದು, ಕಳೆ, ಕಟಾವು, ಒಕ್ಕಣೆ ಮುಂತಾದ ಎಲ್ಲ ಕೆಲಸಗಳನ್ನೂ ಮನೆಯವರೇ ಮಾಡಿಕೊಳ್ಳುತ್ತಾರೆ. ಹೆಚ್ಚಿನ ಕೆಲಸಗಳು ಏಕಕಾಲದಲ್ಲಿದ್ದಾಗ ಮಾತ್ರ ಕೂಲಿಕಾರರ ಅವಲಂಬನೆ. ಅದೂ ಕಡಿಮೆ ಸಂಖ್ಯೆಯಲ್ಲಿ ಮಾತ್ರ. ನಮ್ಮಂಥೋರು ಈ ಕಾಲದ ಕೂಲಿಯೋರನ್ನ ಸಂಭಾಳ್ಸಕ್ಕಾಗಲ್ಲ. ಅವರು ಕೇಳೋ ಕೂಲಿ ಕೊಡೋಕು ಆಗಲ್ಲ ಇದು ಇವರ ಅನುಭವ. ಮಗಳು, ಅಳಿಯ ಮತ್ತು ಇವರು ಸೇರಿ ಮೂರೇ ಜನ ಎಲ್ಲ ಕೆಲಸಗಳನ್ನೂ ನಿಭಾಯಿಸುತ್ತಾರೆ. ಈ ರೀತಿ ತೋಟಗಾರಿಕೆ ಮಾಡಿಕೊಂಡಾಗ ಫಸಲು ಬರುವವರೆಗೂ ಆದಾಯ ಇರುವುದಿಲ್ಲ. ಈ ಸಮಸ್ಯೆಗೆ ಕುರಿ ಸಾಕಣೆಯ ಉತ್ತರ ಕಂಡುಕೊಂಡಿದ್ದಾರೆ. ತೋಟದಲ್ಲಿ ಯಥೇಚ್ಛ ಮೇವು ಸಿಗುತ್ತಿರುವುದರಿಂದ ಮನೆಯಲ್ಲಿ ಕಟ್ಟಿ ಹಾಕಿಯೇ ಕುರಿ ಮೇಯಿಸುವುದು ಸಾಧ್ಯವಾಗಿದೆ. ಸಣ್ಣ ವಯಸ್ಸಿನ ಮೂರ್ನಾಲ್ಕು ಮರಿಗಳನ್ನು ಕೊಂಡು ತಂದು 3- 4 ತಿಂಗಳು ಮನೆಯಲ್ಲೇ ಕಟ್ಟಿ ಮೇಯಿಸಿ ಮಾರುತ್ತಿದ್ದಾರೆ. ನಿಯಮಿತ ಆದಾಯ, ಮೇವಿನ ಮತ್ತು ಸಮಯದ ಸದ್ಬಳಕೆ.
ಇವರ ಗ್ರಾಮದಲ್ಲಿ ಕೃಷಿಯ ಅನಿಶ್ಚಿತತೆಯಿಂದಾಗಿ ಹಲವು ಯುವಕರು, ಸಂಸಾರಗಳು ಕೆಲಸಕ್ಕಾಗಿ ನಗರಗಳತ್ತ ವಲಸೆ ಹೋಗಿದ್ದಾರೆ, ಇದರಿಂದಾಗಿ ಎಷ್ಟೋ ಹೊಲಗಳು ಬೀಳು ಬಿದ್ದಿವೆ, ನೀವೇಕೆ ಹೋಗಲಿಲ್ಲ ಎಂದು ಕೇಳಿದರೆ ಹೆಗ್ಗಣ ಕೈಲಾಸಕ್ಕೋದ್ರೂ ನೆಲ ಕೆರಿಯೋದು ತಪ್ಪಲ್ಲ, ಹಂಗಾಗಿ ಬೆಂಗಳೂರಿನಲ್ಲಿ ನೆಲ ಕೆರಿಯೋ ಬದಲು ನಮ್ಮೂರ್ನಲ್ಲೇ ಕೆರೆಯೋದು ಒಳ್ಳೆದಲ್ವೇ ಎಂಬ ಉತ್ತರ ನೀಡಿ ಬಾಯ್ತುಂಬಾ ನಗುತ್ತಾರೆ.
ಚಳ್ಳಕೆರೆ ತಾಲೂಕಿನ ಐದು ಹಳ್ಳಿಗಳಲ್ಲಿ ಈ ಯೋಜನೆಯನ್ನು ಐಡಿಎಫ್ ಸಂಸ್ಥೆ ಅನುಷ್ಠಾನಗೊಳಿಸುತ್ತಿದೆ. ಕಡಿಮೆ ಮಳೆ ಹಾಗೂ ಒಣಭೂಮಿ ಕೃಷಿ ಹೆಚ್ಚಾಗಿರುವ ಈ ಭಾಗದಲ್ಲಿ ಕೃಷಿ- ತೋಟಗಾರಿಕೆಯಿಂದ ಮಾತ್ರ ಸುಸ್ಥಿರ ಆದಾಯ ಸಾಧ್ಯ ಎಂಬ ಕಾರಣದಿಂದ ಈ ಮಾದರಿಯನ್ನು ಅಳವಡಿಸಿಕೊಳ್ಳಲಾಯಿತು, ಭೀಮಣ್ಣ ಹಾಗೂ ಅಂಥ ಅನೇಕ ರೈತರು ನಮ್ಮ ನಂಬಿಕೆಯನ್ನು ನಿಜವಾಗಿಸಿದ್ದಾರೆ ಎನ್ನುತ್ತಾರೆ ಸಂಸ್ಥೆಯ ಎಸ್.ಪಿ. ಶ್ರೀಕಾಂತ್.
- ಮಲ್ಲಿಕಾರ್ಜುನ ಹೊಸಪಾಳ್ಯ
krushikaimara@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


