ಪುದಿನಾ ಸುದಿನ
ಈ ರೈತ ಹದಿನೈದು ವರ್ಷದಿಂದ ಪುದಿನಾ ಸಾಗುವಳಿ ಮಾಡುತ್ತಿದ್ದಾರೆ. ಹಾಗಾಗಿ ಸುತ್ತಲಿನ ಗ್ರಾಮಗಳಲ್ಲಿ...

ಈ ರೈತ ಹದಿನೈದು ವರ್ಷದಿಂದ ಪುದಿನಾ ಸಾಗುವಳಿ ಮಾಡುತ್ತಿದ್ದಾರೆ. ಹಾಗಾಗಿ ಸುತ್ತಲಿನ ಗ್ರಾಮಗಳಲ್ಲಿ 'ಪುದಿನಾ ಯಮುನಪ್ಪ' ಅಂತಲೇ ಹೆಸರುವಾಸಿ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದ ಸಣ್ಣಯಮುನಪ್ಪ ರಾಜಾಪುರೆ ಎಂಬವರೇ ಇಂಥದ್ದೊಂದು ಸಾಧನೆಗೈದ ರೈತ.
ಸಾಗುವಳಿ ವಿಧಾನ
ಆಡು, ಎಮ್ಮೆಯ ಹಿಕ್ಕೆ, ಮೂತ್ರ ಹಾಗೂ ಸಗಣಿಯನ್ನು ಗೊಬ್ಬರವಾಗಿ ಬಳಸಿ ವರ್ಷಕ್ಕೆ ಎಕರೆ ಪ್ರದೇಶದಲ್ಲಿ ಸರಾಸರಿ 8ರಿಂದ 9 ಬಾರಿ 35ರಿಂದ 40 ದಿನಕ್ಕೊಮ್ಮೆ ಪುದಿನಾ ಕೊಯ್ಲು ಮಾಡುತ್ತಾರೆ. ಜೀವಸಾರ ಘಟಕ(ಬಯೋಡೈಜೆಸ್ಟರ್) ಸ್ಥಾಪಿಸಿದ್ದಾರೆ. ಅದರಲ್ಲಿ ಕೃಷಿ ತ್ಯಾಜ್ಯ ಕೊಳೆಸಿ, ದ್ರಾವಣವನ್ನು ಬೆಳೆಗೆ ನೀರಿನೊಂದಿಗೆ ಹಾಯಿಸುತ್ತಾರೆ. ತೇವಾಂಶ ಹೆಚ್ಚಾದಾಗ ಬುಡಕೊಳೆ ರೋಗದ ಬಾಧೆ ಹೆಚ್ಚಾಗುತ್ತದೆ. 20 ದಿನದ ಅವಧಿಯಲ್ಲಿ ರಸ ಹೀರುವ ಕೀಟ ಹಾಗೂ ಶಿಲೀಂದ್ರ ನಿರ್ವಹಣೆಗೆ ಕ್ಲೋರೋಪೈರಿಫಾಸ್, ಬಾವಿಸ್ಟಿನ್ ಸಿಂಪರಣೆ ಕೈಗೊಳ್ಳುತ್ತಾರೆ. ಸಾವಯವ ಗೊಬ್ಬರ, ಜೀವಸಾರ ದ್ರಾವಣ ಬಳಸಲು ಆರಂಭಿಸಿದ ಮೇಲೆ ಕೀಟ ರೋಗಗಳ ಬಾಧೆ ನಿಯಂತ್ರಣದಲ್ಲಿದೆ ಎನ್ನುತ್ತಾರೆ ಯಮುನಪ್ಪ.
ಕಟಾವು
ನೆಲದಿಂದ 1 ಇಂಚು ಬಿಟ್ಟು ಕೊಯ್ಲು ಮಾಡುತ್ತಾರೆ. 25ರಿಂದ 30 ಕಡ್ಡಿ ಸೇರಿಸಿ ಕಟ್ಟುವ ಸಿವುಡು ಅಥವಾ ಕಟ್ಟು ಕಟ್ಟಲು ಆಳುಗಳಿಗೆ 100 ಸಿವುಡಿಗೆ ರು. 10ರಂತೆ (1 ಸಿವುಡಿಗೆ 10 ಪೈಸೆ) ಕೂಲಿ ನೀಡುತ್ತಾರೆ. ದಿನವೊಂದಕ್ಕೆ 1400ರಿಂದ 1500 ಸಿವುಡುಗಳನ್ನು ಒಬ್ಬ ಕೂಲಿಯಾಳು ಕಟ್ಟುತ್ತಾರೆ. ತಿಂಗಳಿಗೊಮ್ಮೆ ಕಟಾವಿಗೆ ಅನುಕೂಲವಾಗುವಂತೆ ಚಿಕ್ಕ ಚಿಕ್ಕ ಮಡಿ ಮಾಡಿರುವುದರಿಂದ ಸತತ ಕೆಲಸವಿರುತ್ತದೆ ಎನ್ನುತ್ತಾರೆ ಯಮುನಪ್ಪ.
ಸ್ಥಳೀಯ ಮಾರುಕಟ್ಟೆಯಲ್ಲಿ 100 ಸಿವುಡುಗಳಿಗೆ ರು. 70ರಂತೆ ದರ ಸಾಮಾನ್ಯವಾಗಿ ಸಿಗುತ್ತದೆ. ಒಂದು ಬೀಡಿಗೆ (35ರಿಂದ 40 ದಿನಕ್ಕೆ) 70ರಿಂದ 80 ಸಾವಿರ ಕಟ್ಟುಗಳು ಮಾರಾಟವಾಗಿ ರು. 50 ಸಾವಿರ ಆದಾಯ ಸಿಗುತ್ತಿದೆ. ವರ್ಷಕ್ಕೆ 8 ಬಾರಿ ಕಟಾವು ಅಂದರೂ ಎಕರೆಗೆ ರು. 4 ಲಕ್ಷ. ಇದರಲ್ಲಿ ಇತರೆ ಎಲ್ಲ ಖರ್ಚು ತೆಗೆದರೂ ಕನಿಷ್ಠ ಮೂರರಿಂದ ಮೂರುವರೆ ಲಕ್ಷ ನಿವ್ವಳ ಆದಾಯ ಗ್ಯಾರಂಟಿ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.
ರಂಜಾನ್, ಈದ್ ಹಾಗೂ ಮುಖ್ಯ ಹಬ್ಬಗಳಲ್ಲಿ ಬೇಡಿಕೆ ಹೆಚ್ಚಿದ್ದು, ದರವೂ ಹೆಚ್ಚು ಸಿಗುತ್ತದೆ. ಕೊಯ್ಲು ಮಾಡಲು ಸಕಾಲಕ್ಕೆ ಆಳುಗಳ ಲಭ್ಯತೆ ಆಗದಿದ್ದಲ್ಲಿ ನಷ್ಟ ಖಂಡಿತ ಎನ್ನುವ ಮಾತನ್ನು ಒತ್ತಿ ಹೇಳುತ್ತಾರೆ.
ಇತರೆ ಬೆಳೆ
ಪುದಿನಾ ಮಧ್ಯ ಐದು ವರ್ಷದ ಹಿಂದೆ ಹಚ್ಚಿದ ತಾಳೆ ಬೆಳೆ ಈಗ ಫಸಲು ನೀಡುತ್ತಿದೆ. ಗೋದ್ರೇಜ್ ಕಂಪನಿಯೊಂದಿಗೆ ಒಪ್ಪಂದದ ಮೂಲಕ ಈ ಬೆಳೆ ಸಾಗುವಳಿ ಮಾಡಿದ್ದು, ಒಟ್ಟು 80 ಗಿಡಗಳಿಂದ ರು. 8.30ಕ್ಕೆ ಕೆಜಿಯಂತೆ 6100 ಕೆಜಿ ಇಳುವರಿಗೆ ರು. 50 ಸಾವಿರ ಆದಾಯ ಸಿಕ್ಕಿದೆ. ಇವರಲ್ಲಿರುವ 70 ತೇಗದ ಮರಗಳು, 10 ತೆಂಗಿನ ಮರಗಳೂ ಆದಾಯದ ಮೂಲಗಳಾಗಿವೆ. ಈಗಿರುವ 20 ಆಡುಗಳೊಂದಿಗೆ ಮುಂದಿನ ದಿನಗಳಲ್ಲಿ ವೈಜ್ಞಾನಿಕ ರೀತಿಯಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಡುಗಳನ್ನು ಸಾಕಣೆ ಮಾಡುವ ಆಲೋಚನೆ ಯಮನಪ್ಪ (ಮೊ. 9611378997) ಅವರದು.
ವಿಶೇಷತೆ ಏನು?
ಪುದಿನಾವನ್ನು ವರ್ಷದ ಎಲ್ಲ ದಿನಗಳಲ್ಲಿ ಬೆಳೆಯಬಹುದು. ಇದರಲ್ಲಿ ಮೆಂಥಾಲ್, ಪೆಪ್ಪರಮಿಂಟ್ ಎಣ್ಣೆ ಹೆಚ್ಚಿರುವುದರಿಂದ ಔಷಧಿ, ಸುಗಂಧ ದ್ರವ್ಯ ತಯಾರಿಕೆ, ಪ್ರಸಾದನಗಳ ಕೈಗಾರಿಕೆಯಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ. ಹೀಗಾಗಿ, ರೈತ ಇದನ್ನು ಪ್ರಯೋಗಿಸಲು ಅಡ್ಡಿಯಿಲ್ಲ ಎನ್ನುತ್ತಾರೆ ಅರಭಾವಿಯ ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಜಗದೀಶ ಹಿರೇಮಠ.
-ಶೈಲಜಾ ಬೆಳ್ಳಂಕಿಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


