ಕೃಷಿ-ಪರಿಸರ

ಕಾಯಿಪಲ್ಲೆ

ರಾಮಣ್ಣ ಗೌಡರದು ತರಕಾರಿ ಕೃಷಿಯ ಮಟ್ಟಿಗೆ ಪರಂಪರಾಗತ ಸಾಧನೆ. ನೂರು ವರ್ಷಗಳ ಹಿಂದಿನಿಂದಲೂ..

ಕಾಯಿಪಲ್ಲೆ
Published On :

ರಾಮಣ್ಣ ಗೌಡರದು ತರಕಾರಿ ಕೃಷಿಯ ಮಟ್ಟಿಗೆ ಪರಂಪರಾಗತ ಸಾಧನೆ. ನೂರು ವರ್ಷಗಳ ಹಿಂದಿನಿಂದಲೂ ಅವರ ಮನೆಯಲ್ಲಿ ವೈವಿಧ್ಯಮಯ ತರಕಾರಿ ಬೆಳೆಯದ ವರ್ಷವೇ ಇಲ್ಲ. ಗೌಡರು ಬೆಳ್ತಂಗಡಿ ತಾಲೂಕಿನ ಓಡಿಲ್ನಾಳದ ಉಬರಡ್ಕದವರು ಇಂಥದ್ದೊಂದು ಪ್ರಯೋಗ ಮಾಡಿ ಯಶಸ್ಸು ಕಂಡಿದ್ದಾರೆ.
ಮಳೆಗಾಲ ಮತ್ತು ಬೇಸಗೆಗೆ ಪ್ರತ್ಯೇಕವಾಗಿ ತರಕಾರಿ ಬೆಳೆದು ಸುಮಾರು ಐವತ್ತು ಸಾವಿರ ರುಪಾಯಿ ನಿವ್ವಳ ಲಾಭ ಸಂಪಾದಿಸುತ್ತಾರೆ.
ಮೀಟರ್ ಅಲಸಂದೆ!
ಗೌಡರು ಬೆಳೆಯುವ ಮೀಟರ್ ಅಲಸಂದೆ ಹೆಸರಿಗೆ ತಕ್ಕಂತೆ ಒಂದು ಮೀಟರ್ ಉದ್ದವಾಗಿದ್ದು, ತೀರಾ ಮೃದುವಾಗಿರುವುದರಿಂದ ಎಷ್ಟು ಬಲಿತರೂ ಊಟಕ್ಕೆ ರುಚಿಯೇ. ಹೀಗಾಗಿ ಬೇಡಿಕೆ ಅಧಿಕ, ಚಳಿಗಾಲದ ಹೊರತು ಎಲ್ಲ ಸಮಯದಲ್ಲೂ ಬೆಳೆಗಾರನ ಕಿಸೆ ತುಂಬುವ ಫಸಲು, ಅದರ ಕೃಷಿಗೆ ರಸಗೊಬ್ಬರ ಬೇಡ, ಸಾರಜನಕ ಕಡಿಮೆ. ಬೂದಿಯಂಥ ರಂಜಕಾಂಶ ಹೆಚ್ಚು. ಎರಡು ತಿಂಗಳು ನಿರಂತರ ಆದಾಯ. ಗೌಡರು ಈ ಅಲಸಂದೆಯ ಬೀಜಕ್ಕೆ ತುಂಬ ಬೇಡಿಕೆಯಿದೆ. ಇದರ ಮಾರಾಟದಿಂದಲೂ ಲಾಭ ಬರುತ್ತದೆ ಎನ್ನುತ್ತಾರೆ.
ಸಿಹಿಯಾದ ರುಚಿ
ಗೌಡರಲ್ಲಿ ವಿಶಿಷ್ಟ ಜಾತಿಯ ಹರಿವೆಯೂ ಇದೆ. ರೆಂಬೆ- ಕೊಂಬೆ ಹರಡಿ ಆಳೆತ್ತರ ಬೆಳೆಯುವ ಅದರ ಹೂವಿನ ಬಗೆಯೂ ವಿಭಿನ್ನವಾಗಿದೆ. ಎಷ್ಟು ಬಲಿತರೂ ಸುಕ್ಕಾಗದೆ ಸಿಹಿಯಾದ ರುಚಿ ಹೊಂದಿದೆ. ಎಲೆಗಳೂ ಪಲ್ಯಕ್ಕೆ ಯೋಗ್ಯವಾಗಿವೆ. ಬೀಜ ಮಾರಾಟದ ದೃಷ್ಟಿಯಿಂದ ಇದನ್ನು ಬೆಳೆದರೂ ಲಾಭವೆನ್ನುತ್ತಾರೆ. ಹರಿವೆಗೆ ಸಾರಜನಕವಿರುವ ಗೊಬ್ಬರ ಅಧಿಕ, ಒಂದಿಷ್ಟು ಸೆಗಣಿ ಸುಡುಮಣ್ಣು ಲಭ್ಯವಿದ್ದರೆ ಹರಿವೆ ಮಾರಾಟ ಆದಾಯಕ್ಕೆ ಮಾರ್ಗವೆಂಬ ಗುಟ್ಟು ಹೇಳುತ್ತಾರೆ.
ಬೇರೆ ಏನುಂಟು?
ಗೌಡರು ಬೆಳೆಯುವ ಇನ್ನೊಂದು ಸುಲಭ ಬೆಳೆ ಬೆಂಡೆ. ಸಿಹಿ ಕುಂಬಳಕಾಯಿ ಸೋರೆಗಳನ್ನು ಬೆಳೆದಿದ್ದಾರೆ. ಬಸಳೆಯ ವಿಶಾಲ ಚಪ್ಪರವಿದೆ. ವಾರಕ್ಕೊಮ್ಮೆ ಶೇಂಗಾ ಹಿಂಡಿಯಂಥ ಸಾರಜನಕವಿರುವ ಗೊಬ್ಬರ ಕೊಡುತ್ತಿದ್ದರೆ ವಾರದಲ್ಲಿ ಮೂರು ಸಲ ಬಸಳೆ ಮಾರಾಟಕ್ಕೆ ದೊರೆಯುತ್ತದೆ.  ಒಂದು ಕಟ್ಟು ಬಸಳೆಗೆ 10 ರುಪಾಯಿ ಸಿಗುತ್ತದೆ. ನಿತ್ಯ ಹಣ ಗಳಿಕೆ ಕಡಿಮೆ ಸ್ಥಳದಲ್ಲಿ ಬೆಳೆಯಲಾಗುವ ಅನುಕೂಲದ ಬೆಳೆ ಅದೊಂದೇ ಎಂಬ ಅನುಭವ ಅವರದು. ಇನ್ನೊಂದು ಲಾಭ ತರುವ ಬೆಳೆ ತೊಂಡೆಕಾಯಿ, ಹೈನುಗಾರಿಕೆಯೂ ಇರುವುದು ತರಕಾರಿ ಬೆಳೆಗೆ ಪೂರಕ. ವರ್ಷದಲ್ಲಿ ರು.  10ರಿಂದ 25 ಸಾವಿರ ತನಕ ಗೌಡರು ಹಣವೆಣಿಸುವ ಇನ್ನೊಂದು ಸುಲಭ ಕೃಷಿ ವೀಳ್ಯದೆಲೆ. ವಾರಕ್ಕೆ 80 ಎಲೆಗಳಿರುವ ನಲವತ್ತು ಸೂಡಿಗಳನ್ನು ಮಾರುವ ಅವರು ಸಗಣಿ ಗೊಬ್ಬರ ಧಾರಾಳವಿದ್ದರೆ ರೈತನಿಗೆ ಇದರಂತೆ ಲಾಭ ತರುವ ಬೆಳೆ ಬೇರೊಂದಿಲ್ಲ ಎನ್ನುತ್ತಾರೆ.
ಕಾಯಂ ಗ್ರಾಹಕರು
ಮಳೆಗಾಲದಲ್ಲಿ ಹಾಗಲಕಾಯಿ ಹಾಲುಬೆಂಡೆ, ಅಲಸಂದೆ ಮತ್ತು ಮುಳ್ಳುಸೌತೆ ಬೇಸಗೆಯಲ್ಲಿ ಸಾಂಬಾರು ಸೌತೆ ಬೆಳೆಯುವ ರಾಮಣ್ಣಗೌಡರು ತಮ್ಮ ಉತ್ಪನ್ನಗಳಿಗೆ ಕಾಯಂ ಗ್ರಾಹಕರನ್ನೂ ಹೊಂದಿದ್ದಾರೆ.
ಆತ್ಮವಿಶ್ವಾಸ
ಈ ಸಲ ಕೀಟಗಳು ದಾಳಿ ಮಾಡಿ ಗೌಡರ ಬಸಳೆ ಮತ್ತು ಹರಿವೆ ಕೃಷಿಗೆ ಸಾಕಷ್ಟು ಹಾನಿಯಾಗಿದೆ. ಕೃಷಿ ಇಲಾಖೆಯ ತಜ್ಞರು ಭೇಟಿ ಕೊಟ್ಟು ನೋಡಿ ಹೋದರು ಹೊರತು ತನಗಾವ ಲಾಭವೂ ಸಿಗಲಿಲ್ಲ. ತರಕಾರಿಯಲ್ಲಿ ಒಂದು ಸಲ ನಷ್ಟ ಬಂದರೂ ಮುಂದಿನ ಬೆಳೆಯಲ್ಲಿ ಲಾಭ ಬರಬಹುದೆಂಬ ಆತ್ಮವಿಶ್ವಾಸವೇ ನನ್ನನ್ನು ಮುನ್ನಡೆಸಿದೆ ಎನ್ನುತ್ತಾರವರು. (ಮೊ. 9008821696).

-ಪ. ರಾಮಕೃಷ್ಣ ಶಾಸ್ತ್ರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.