ನೈಸರ್ಗಿಕ ಸಾಬೂನು

ರೂಪದರ್ಶಿಯೊಬ್ಬರು ವಾಹಿನಿಯ ಜಾಹೀರಾತೊಂದರಲ್ಲಿ ಸ್ನಾನ ಮಾಡುವಾಗ ಬಳಸಿದ ಸಾಬೂನು ಯಾವುದು ಅದು ಮಾರುಕಟ್ಟೆಯಲ್ಲಿ ಕ್ಲಿಕ್ ಕಂಪನಿ ನಿರ್ಮಿತ ಸಾಬೂನುಗಳು ಬಣ್ಣ ಬಣ್ಣದ ಪ್ಯಾಕೆಟಿನಲ್ಲಿ ರಂಜಿಸುತ್ತವೆ, ಜನಾಕರ್ಷಿಸುತ್ತವೆ. ಯಾವ ಸಾಬೂನು ಹೆಚ್ಚು ಪ್ರಚಾರ ಗಿಟ್ಟಿಸುತ್ತದೋ ಅದು ಶ್ರೇಷ್ಠ ಎಂಬ ಭ್ರಮೆಯ ಸುತ್ತ ಸುತ್ತುತ್ತಿರುತ್ತೇವೆ.
ಯಾವುದೇ ಸದ್ದಿಲ್ಲದೆ ಪ್ರಕೃತಿಸ್ನೇಹಿಯಾಗಿ ನಡೆಸುವ ಸಾಬೂನಿನ ಗೃಹ ಉದ್ದಿಮೆ ದೇಶಾದ್ಯಂತ ಹರಡಿದೆ. ಅಂತಹುದಕ್ಕೆ ಸೀಮಿತ ಗ್ರಾಹಕ ವಲಯವೂ ರೂಪಿತವಾಗಿರುತ್ತದೆ. ಅದರ ಗುಣಮಟ್ಟ, ಆರೋಗ್ಯದತ್ತ ಬೀರುವ ಪರಿಣಾಮ, ಬಳಸಿದ ಒಳಸುರಿಗಳನ್ನು ಆಧರಿಸಿ ಜನರ ಆಯ್ಕೆ.
ಕೇರಳದ ಪಾಲಕ್ಕಾಡ್ ಮೂಲದ ಕನ್ನಡಿಗ ಶಿವಪ್ರಕಾಶ್ ಕಾಸರಗೋಡು- ಕನ್ನಾಡಿನ ಗಡಿಯಂಚಿನ ಉದ್ಯಾವರದಲ್ಲಿ ನೈಸರ್ಗಿಕ ಸಾಬೂನು ಉದ್ದಿಮೆ ಆರಂಭಿಸಿ ಎರಡು ವರುಷವಾಯಿತು. ಗ್ರೀನ್ ಹರ್ಬಲ್ ಬ್ರಾಂಡಿನಲ್ಲಿ ಹನ್ನೆರಡು ವಿಧದ ಸಾಬೂನು ತಯಾರಿಸುತ್ತಾರೆ. ಸ್ವಂತದ್ದದ ಫಾರ್ಮುಲಾ. ಆರಂಭದ ದಿವಸಗಳಲ್ಲಿ ಸಾಬೂನಿನ ಪಾಕ ಕೈವಶವಾಗಲು ಅನುಭವಿಸಿದ ನಾಶ- ನಷ್ಟಗಳು ಅಧಿಕ. ಈಗ ಕೈತುಂಬಾ ಕೆಲಸ. ತರಬೇತಿ ಕೊಡುವಷ್ಟು ಗಟ್ಟಿಗ.
ಮುಖ್ಯ ಒಳಸುರಿ ತೆಂಗಿನೆಣ್ಣೆ. ಕ್ಲಿನಿಂಗ್ ಏಜೆಂಟ್ ಆಗಿ ಕಾಸ್ಟಿಕ್ ಸೋಡಾ ಬಳಕೆ. ಸಾಬೂನು ಮೆದುವಾಗಲು ಅಕ್ಕಿಯ ತೌಡು ಮತ್ತು ಹರಳಿನ ಎಣ್ಣೆಯ ಮಿಶ್ರಣ. ನಲವತ್ತು ಕಿಲೋದ ಒಂದು ಬ್ಯಾಚಿನಲ್ಲಿ ಅರ್ಧ ಕಿಲೋ ಈ ಎಣ್ಣೆಯ ಬಳಕೆ. ಸ್ಥಳೀಯ ಮಿಲ್ಲುಗಳಿಂದ ತೆಂಗಿನೆಣ್ಣೆ ಖರೀದಿ.
ತುಳಸಿ ಮತ್ತು ಬೇವಿನ ಎಲೆಗಳು, ಕಸ್ತೂರಿ, ಅರಶಿನ, ನೆಲ್ಲಿಕಾಯಿ, ರಕ್ತಚಂದನ, ಲಾವಂಚ ಸೇರಿಸಿದ ಕಷಾಯ ಹೆಸರಿನ ಸಾಬೂನಿಗೆ ಕೊಳ್ಳುಗರು ಧಾರಾಳ. ಚರ್ಮ ಸಂಬಂಧಿ ತುರಿಕೆ, ಮೊಡವೆ, ಕಣ್ಣಿನ ಕಪ್ಪು ವರ್ತುಲಗಳು, ಕಪ್ಪುಕಲೆ, ಬಿಸಿಲಿನಿಂದಾಗುವ ತೊಂದರೆಗಳು, ಕಜ್ಜಿ, ಅಲರ್ಜಿಗಳು ಶಮನವಾಗಿವೆ. ಬಳಿಕ ಬೇವು, ಕಸ್ತೂರಿ ಅರಶಿನ, ತುಳಸಿ, ರಕ್ತಚಂದನ, ಲೋಳೆಸರ, ನೆಲ್ಲಿ, ಹೆಸರು, ಲಾವಂಚ ಹೀಗೆ ಪ್ರತ್ಯಪ್ರತ್ಯೇಕವಾದ ವನಸ್ಪತಿ ಸಾಬೂನುಗಳ ತಯಾರಿ.
ದಿವಸಕ್ಕೆ ನಲವತ್ತು ಕಿಲೋದ ಎರಡು ಯಾ ಮೂರು ಬ್ಯಾಚ್ಗಳಲ್ಲಿ ಸಾಬೂನು ತಯಾರಿ. ಒಂದು ಬ್ಯಾಚಿನಲ್ಲಿ ಸುಮಾರು ಐನೂರು ಸಾಬೂನು. ಬೇಡಿಕೆಯಂತೆ ಉತ್ಪನ್ನ ತಯಾರಿ. ಕಷಾಯ ಸಾಬೂನನ್ನು ಬಯಸುವ ಗ್ರಾಹಕರ ಸಂಖ್ಯೆ ದೊಡ್ಡದಿರುವುದರಿಂದ ಇದರದು ನಿರಂತರ ಉತ್ಪಾದನೆ. ಎಪ್ಪತ್ತೈದು ಗ್ರಾಮಿನ ಸಾಬೂನಿಗೆ ಮೂವತ್ತೈದು, ನೂರ ಇಪ್ಪತ್ತೈದು ಗ್ರಾಮಿನದಕ್ಕೆ ಐವತ್ತು ರುಪಾಯಿ ದರ. ಸಾದಾ ಪ್ಯಾಕಿಂಗ್. ಮೇಲೊಂದು ಗುರುತು ಸ್ಟಿಕ್ಕರ್. ಆರು ತಿಂಗಳ ತಾಳಿಕೆ. ಪರಿಮಳಕ್ಕಾಗಿ ರಾಸಾಯನಿಕ ಬಳಸದ ಕಾರಣ ಸಾಬೂನು ಮೃದು. ಸ್ನಾನದ ನಂತರವೂ ಹಿತವಾದ ಅನುಭವ ಮತ್ತು ಪರಿಮಳ.
ಗೋಮೂತ್ರ, ಗೋಮಯ, ಪಂಚಗವ್ಯ, ರಾಮಚ್ಚಂ, ಬೇವು, ರಕ್ತಚಂದನ, ನೆಲ್ಲಿ.. ಮೊದಲಾದ ವನಸ್ಪತಿಗಳು ಒಳಸುರಿ. ಮಂಗಳೂರಿನ ಇಸ್ಕಾನ್ ಅವರ ಒತ್ತಾಸೆಯಂತೆ ಶಿವಪ್ರಸಾದ್ ಗೋರಸ ಸಾಬೂನು ತಯಾರಿಸಿದ್ದಾರೆ. ನೂರು ಗ್ರಾಮಿನ ಸಾಬೂನಿಗೆ ಮೂವತ್ತು ರುಪಾಯಿ.
ಇಸ್ಕಾನಿನವರೇ ಫಾರ್ಮುಲಾ ನೀಡಿದ್ದರಿಂದ ಇದನ್ನು ನಾನು ಮಾರುಕಟ್ಟೆ ಮಾಡುವಂತಿಲ್ಲ. ಅದರ ಪೇಟೆಂಟ್ ಅವರದೇ. ಈಗಾಗಲೇ ಹದಿನೈದು ಸಾವಿರಕ್ಕೂ ಮಿಕ್ಕಿ ಸಾಬೂನು ತಯಾರಿಸಿ ನೀಡಿದ್ದೇನೆ. ಅವರ ಮಳಿಗೆಗಳಲ್ಲಿ ಗೋರಸ ಲಭ್ಯ, ಎನ್ನುತ್ತಾರೆ.
ಕಳೆದೊಂದು ದಶಕದಿಂದ ಹೇರ್ ಆಯಿಲ್, ಶ್ಯಾಂಪೂ.. ಮೊದಲಾದ ನಲವತ್ತು ಐಟಂಗಳನ್ನು ಆದಿತ್ಯ ಹರ್ಬಲ್ಸ್ ಸಂಸ್ಥೆ ಮೂಲಕ ಶಿವಪ್ರಕಾಶ್ ಮಾರುಕಟ್ಟೆ ಮಾಡುತ್ತಿದ್ದಾರೆ. ಇದರ ಮಾರುಕಟ್ಟೆ ಜಾಲವನ್ನು ಸಾಬೂನು ಬಿಕರಿಗೂ ಬಳಸಿಕೊಂಡಿದ್ದಾರೆ. ಸುಮಾರು ಮೂವತ್ತು ಹುಡುಗರು ಮನೆ ಮನೆಗೆ ತೆರಳಿ ಸಾಬೂನಿನ ಗುಣಮಟ್ಟ, ಪರಿಣಾಮಗಳನ್ನು ತಿಳಿಹೇಳುತ್ತಾರೆ. ಈ ಸಾಬೂನು ಅಮ್ಮಂದಿಗೆ ಹೆಚ್ಚು ಇಷ್ಟವಾಗಿದೆ ಎನ್ನುತ್ತಾರೆ ಶಿವಪ್ರಕಾಶ್.
ಮಾನಿನಿಯರ ಚರ್ಮಕಾಂತಿ ವೃದ್ಧಿಗೆ ಕಿತ್ತಳೆ, ನಿಂಬೆ, ಬಾದಾಮಿಗಳನ್ನು ಸೇರಿಸಿ ಮಾಡಿದ ಸಾಬೂನು ಹೊಸ ಪ್ರಯೋಗ. ಇದನ್ನು ಬಳಸಿ ಹಿಮ್ಮಾಹಿತಿ ನೀಡುವಂತೆ ಹಲವರಿಗೆ ಉಚಿತವಾಗಿ ನೀಡಿ ವಿನಂತಿಸಿದ್ದಾರೆ. ಉತ್ತಮ ಪ್ರತಿಕ್ರಿಯೆ ಪ್ರಾಪ್ತವಾಗುತ್ತಿದೆ. ಎಲ್ಲವೂ ಸರಿಹೋದರೆ ಶೀಘ್ರ ಹೊಸ ಸಾಬೂನು ಮಾರುಕಟ್ಟೆಗಿಳಿವ ಮುನ್ಸೂಚನೆ ನೀಡಿದರು ಶಿವಪ್ರಕಾಶ್.
ತನ್ನ ಉದ್ಯಮವನ್ನು ಕೇರಳದಿಂದ ಕನ್ನಾಡಿಗೆ ವರ್ಗಾಯಿಸುವ ಮಾನಸಿಕ ತಯಾರಿ ಮಾಡಿಕೊಂಡಿದ್ದಾರೆ. ಕಾರ್ಖಾನೆ ಮತ್ತು ಸಾಬೂನಿಗೆ ಬೇಕಾದ ತುಳಸಿ, ಬೇವು, ಲೋಳೆಸರ ಮೊದಲಾದ ಒಳಸುರಿಗಳನ್ನು ಬೆಳೆಸುವ ಯೋಜನೆಯೂ ರೂಪುಗೊಳ್ಳುತ್ತಿದೆ.
(ಶಿವಪ್ರಕಾಶ್ ಮೊ. 9845141565)
-ನಾ. ಕಾರಂತ ಪೆರಾಜೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


