ದಾಳಿಂಬೆ ನ್ಯಾಯ

ಚಿತ್ರದುರ್ಗ ಜಿಲ್ಲೆಗೆ ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿ. ಅಂಥ ನೆಲದಲ್ಲಿ ದಾಳಿಂಬೆ ಬೆಳೆದು ಭರ್ಜರಿ ಯಶಸ್ಸು ಕಂಡಿದ್ದಾರೆ ಈ ವಕೀಲ.
ಹೊಳಲ್ಕೆರೆ ತಾಲೂಕಿನ ಬಂಜರು ಭೂಮಿಯಲ್ಲಿ ದಾಳಿಂಬೆ ನಂಬಿ ಕಷ್ಟಪಟ್ಟು ಕೃಷಿ ಕೈಗೊಂಡ ವಕೀಲ ಗುಡ್ಡದಸಾಂತೇನಹಳ್ಳಿಯ ಎಸ್. ಮಹಲಿಂಗಪ್ಪ ಲಕ್ಷಾಂತರ ಹಣ ಸಂಪಾದಿಸಿ, ಯಶೋಗಾಥೆ ಹಾಡಿದ್ದಾರೆ.
ಸಮಗ್ರ ಮಾಹಿತಿ
ಹಲವು ವರ್ಷಗಳಿಂದ ತಾಲೂಕಿನಲ್ಲಿ ದಾಳಿಂಬೆ ಬೆಳೆದ ಸಾಮಾನ್ಯ ರೈತರು ಲಕ್ಷಾಂತರ ಹಣ ಸಂಪಾದನೆಯ ಸುದ್ದಿ ಅವರ ಕಿವಿಗೆ ಬಿತ್ತು. ಇದು ಸಾಧ್ಯವೇ ಎಂಬ ವಿಚಾರ ಅವರ ಮನಸ್ಸಿನಲ್ಲಿ ಕೊರೆಯುತ್ತಿತ್ತು. ದಾಳಿಂಬೆ ತೋಟಗಳಿಗೆ ಭೇಟಿ ನೀಡಿ ಬೆಳೆ ಹೇಗೆ ಬೆಳೆಯಬೇಕು ಎಂಬ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿದರು.
ಅಧಿಕ ಬಂಡವಾಳ
ತಾವೂ ಏಕೆ ಪ್ರಯತ್ನಿಸಬಾರದು ಎಂಬ ಪ್ರಶ್ನೆ ಅವರ ಮನಸ್ಸಿನಲ್ಲಿ ನಿರಂತರವಾಗಿತ್ತು. ಈ ಬೆಳೆಯನ್ನು ಎಂದೂ ಕಾಣದವರು ಜತೆಗೆ ಅಧಿಕ ಬಂಡವಾಳ ಹಾಕಬೇಕು. ಇದು ಸಾಧ್ಯವೇ ಎಂಬ ವಿಚಾರ ಪದೇಪದೆ ಮನಸ್ಸಿನಲ್ಲಿ ತುಮುಲ ಉಂಟುಮಾಡಿತ್ತು.
ವಕಾಲತ್ತು
ನ್ಯಾಯಾಲಯದ ವೇಳೆಯಲ್ಲಿ ವಕೀಲಿ ವೃತ್ತಿ ಮುಂದುವರಿಸಿಕೊಂಡು ಬೆಳಗ್ಗೆ ಸಂಜೆ ಹೊಳಲ್ಕೆರೆಗೆ 8 ಕಿ.ಮೀ. ದೂರವಿರುವ 3 ಎಕರೆ ಬಂಜರು ಭೂಮಿಯಲ್ಲಿ ದಾಳಿಂಬೆ ಬೆಳೆಯಲು ಮುಂದಾದರು. ವಿಶೇಷವಾಗಿ ಈ ಬೆಳೆ ಬೆಳೆಯಲು ಆರ್ಥಿಕ ಸ್ಥಿತಿ ಚೆನ್ನಾಗಿದ್ದವರಿಗೆ ಮಾತ್ರ ಸಾಧ್ಯ.
ಕಠಿಣ ಶ್ರಮ
ಆ ಕಲ್ಲು ಬಂಜರು ನೆಲದಲ್ಲಿ ದಾಳಿಂಬೆ ಬೆಳೆಯಲು ಕೊಳವೆಬಾವಿ ಕೊರೆಸಿದರು. ಸಾಕಷ್ಟು ನೀರು ಲಭ್ಯವಾಯಿತು. ಅವರ ಕನಸು ನನಸು ಮಾಡಲು ಹಗಲು- ರಾತ್ರಿ ಶ್ರಮಿಸಿದರು. ಜತೆಗೆ ಪತ್ನಿ ರಂಗಮ್ಮ, ಗಂಡು ಮಕ್ಕಳಾದ ಸಾಕ್ಷಿ ಸಹ ತಂದೆಗೆ ಸಂಪೂರ್ಣ ಸಹಕಾರ ನೀಡಿ ಉತ್ತಮ ಬೆಳೆ ತೆಗೆಯಬೇಕೆಂಬ ಛಲ ಅವರ ಮನಸ್ಸಿನಲ್ಲಿ ಬಂತು.
ಖರ್ಚು ಎಷ್ಟಾಗುತ್ತೆ?
ಇವರ ಪ್ರಕಾರ 1 ಗಿಡ ಕಾಯಿ ಬಿಟ್ಟು ಕೀಳುವವರೆಗೆ ತಲಾ 1 ಗಿಡಕ್ಕೆ ರು. 300 ರಿಂದ ರು. 400 ಖರ್ಚಾಗುತ್ತದೆ. ಪ್ರತಿಯೊಂದು ಸವಲತ್ತು ನೀಡಿದ ಬಗ್ಗೆ ನಿಖರವಾದ ಅಂಕಿ-ಅಂಶ ಇಟ್ಟಿದ್ದಾರೆ. ಸದ್ಯ 2ನೇ ಬೆಳೆ ತುಂಬಾ ಚೆನ್ನಾಗಿ ಇಳುವರಿ ಬಂದಿದೆ. ಮೊದಲ ವರ್ಷದ ಬೆಳೆಯ ಮಾರಾಟದಿಂದ ರು. 16.50 ಲಕ್ಷ ಬಂತು. ಅದಕ್ಕೆ ಮಾಡಿದ ಸಂಪೂರ್ಣ ವೆಚ್ಚ ಮೂರೂವರೆ ಲಕ್ಷ ಮಾತ್ರ. ಕೇವಲ 16 ತಿಂಗಳಲ್ಲಿ ಬರಡು ಭೂಮಿಯಲ್ಲಿ ಯಾವುದೇ ಬೆಳೆ ಬೆಳೆದರೂ ಲಕ್ಷ ರು. ಗಳಿಸುವುದು ಸಾಧ್ಯವೇ ಇಲ್ಲ ಅಂತಾರೆ ಮಹಾಲಿಂಗಪ್ಪ. ಎರಡನೇ ಬೆಳೆ ಕಟಾವು ಪ್ರಾರಂಭವಾಗಿದೆ. ಈ ರೀತಿಯ ಬೆಳೆ ಕಾಣಲು ಸಾಧ್ಯವಿಲ್ಲ. ಪ್ರತಿ ಗಿಡದಲ್ಲಿ 30 ರಿಂದ 50 ಕೆಜಿ ಹಣ್ಣು ಲಭ್ಯ. ಪ್ರತಿ ಹಣ್ಣು ಕನಿಷ್ಠ 500 ಗ್ರಾಂನಿಂದ 920 ಗ್ರಾಂ ತೂಕವಿದೆ. ಹಣ್ಣಿನ ಆಕಾರ, ಅದರ ಬಣ್ಣ ನೋಡಿದರೆ ಇದು ಹೊರದೇಶಗಳಿಗೆ ರಫ್ತಾಗುವ ಮಾಲು ಎಂದು ಹೇಳಬಹುದು. ಆದರೆ, ಅಂತಾರಾಷ್ತ್ರೀಯ ಮಾರುಕಟ್ಟೆಯಲ್ಲಿ ಭಾರತದ ಹಣ್ಣುಗಳು ಮತ್ತು ತರಕಾರಿಗಳ ಮಾರಾಟ ನಿಷೇಧವಾದ್ದರಿಂದ ವಕೀಲ ಮಹಾಲಿಂಗಪ್ಪ ಬೆಳೆದಿರುವ ಹಣ್ಣಿಗೆ ಬೆಲೆ ತೀರಾ ಕಡಿಮೆ. ಈಗ ದೇಶೀಯ ಮಾರುಕಟ್ಟೆಯಲ್ಲಿ ಇಂಥ ಉತ್ತಮ ಗುಣಮಟ್ಟದ ಹಣ್ಣನ್ನು ರಾಜ್ಯ ಹಾಪ್‌ಕಾಮ್ಸ್ ಕೆ.ಜಿ.ಗೆ ರು. 73ರಂತೆ ಖರೀದಿಸುತ್ತಿದೆ.
ಮಾರಾಟ
ರಾಜ್ಯದಲ್ಲಿರುವ ಖರೀದಿದಾರರು ದೇಶಿ ಮಾರುಕಟ್ಟೆಗಳಾದ ಕೇರಳ, ಚೆನ್ನೈ, ಆಂಧ್ರಪ್ರದೇಶ ಮತ್ತು ಮಂಗಳೂರು, ಬೆಂಗಳೂರು, ಹುಬ್ಬಳ್ಳಿ ಮುಂತಾದ ಸ್ಥಳಗಳಿಗೆ ರವಾನಿಸುತ್ತಿದ್ದಾರೆ. ನಿಷೇಧದ ಹಿನ್ನೆಲೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ರಫ್ತು ಮಾಡುತ್ತಿಲ್ಲ. ಇದರಿಂದ ಬೆಲೆ ಕಡಿಮೆ ಆಗಿದೆ ಎಂದು ಖರೀದಿದಾರರು ಹೇಳುತ್ತಾರೆ.
= ಬಿ. ಶಿವರುದ್ರಪ್ಪ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


