ಗೊಬ್ಬರ ಗತ್ತು

ರಾಸಾಯನಿಕ ಗೊಬ್ಬರದ ಅಡ್ಡ ಪರಿಣಾಮದಿಂದ ಬಹಳಷ್ಟು ರೈತರು ಬೇಸತ್ತಿದ್ದಾರೆ. ಹಾಗಾಗಿ ರೈತರು ಪರ್ಯಾಯ ಮತ್ತು ಪರಿಸರಸ್ನೇಹಿ ಗೊಬ್ಬರದತ್ತ ಮುಖ ಮಾಡುತ್ತಿದ್ದಾರೆ.
ಎರೆಹುಳು ಗೊಬ್ಬರ ರೈತರ ಮೊಗದಲ್ಲಿ ಆಶಾಭಾವ ಮೂಡಿಸಿದೆ. ಯಾಕೆಂದರೆ ಎರೆಹುಳು ಮಣ್ಣಿಗೆ, ಫಸಲಿಗೆ ಯಾವುದೇ ರೀತಿಯ ಹಾನಿ ಮಾಡದು. ಜತೆಗೆ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶ ಒದಗಿಸುತ್ತದೆ.
ಹಾಂ, ಅಂದಹಾಗೆ ಈ ಗೊಬ್ಬರವನ್ನು ಕೊಂಡು ತಂದು ಬಳಸಬೇಕೆಂದೇನಿಲ್ಲ. ಮನಸ್ಸು ಮಾಡಿದರೆ ರೈತರೇ ತಯಾರಿಸಬಹುದು.
ಹಾಗಾದರೆ ತಯಾರಿಕೆ ಹೇಗೆ, ಏನಿದರ ಕತೆ ಅಂತೀರಾ? ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಗ್ರಾಮದ ಶಿವಾನಂದ ಮೂರ್ತಿಯವರ ಮಗ ಶೈಲೇಂದ್ರ ಎಸ್. ಅವರು ಸ್ವತಃ ತಯಾರಿಕೆಯಲ್ಲಿ ನಿರತರಾಗಿ ಯಶಸ್ಸು ಕಂಡಿದ್ದಾರೆ. ಎಂಜಿನಿಯರಿಂಗ್ ಮಾಡಿರುವ ಅವರು ಸಾವಯವ ಕೃಷಿಯಲ್ಲಿ ಉತ್ಕೃಷ್ಟ ಬೆಳೆ ತೆಗೆಯುತ್ತಿದ್ದಾರೆ.
ರಾಸಾಯನಿಕಕ್ಕೆ ಬೈ
ಶೈಲೇಂದ್ರ ಅವರು ಮೂರು ವರ್ಷದಿಂದ ರಾಸಾಯನಿಕ ಗೊಬ್ಬರ ಮತ್ತು ಔಷಧಿ ಸಿಂಪಡಿಸಿದ್ದರು. ಇದರಿಂದ 20 ಎಕರೆ ಅಡಕೆ ತೋಟ, ಮಾವು ಹಲಸು, ಸಪೋಟಗಳಿಗೆ ಸುಳಿರೋಗ ಕೊಳೆರೋಗ, ಕೀಟ ಬಾಧೆಗೆ ತುತ್ತಾಗಿದ್ದನ್ನು ಗಮನಿಸಿದರು. ರಾಸಾಯನಿಕ ಗೊಬ್ಬರ, ಔಷಧ ಬಳಕೆಗೆ ಮಂಗಳ ಹಾಡಲು ನಿರ್ಧರಿಸಿದರು.
ನಂತರ ರೈತ ಸಂಪರ್ಕ ಕೇಂದ್ರದ ಸಲಹೆಯ ಮೇರೆಗೆ ಇವರ ಮನೆಯ ಹಿಂದಿನ ಖಾಲಿ ಜಾಗದಲ್ಲಿ ಎರೆಹುಳು ಗೊಬ್ಬರ ತಯಾರಿಕೆಗೆ ಶುರುಹಚ್ಚಿಕೊಂಡರು.
ಗೊಬ್ಬರ ತಯಾರಿಕೆ ಹೀಗೆ
4 ಅಡಿ ಅಗಲ, 12 ಅಡಿ ಉದ್ದ, 2 ಅಡಿ ಎತ್ತರದ 4 ತೊಟ್ಟಿ ನಿರ್ಮಿಸಬೇಕು. ತೋಟದಲ್ಲಿ ಅನುಪಯುಕ್ತ ಅಡಕೆ ಗರಿ, ಹೊಂಗೆ ಸೊಪ್ಪು ಪಾರ್ಥೇನಿಯಂ(ಕಾಂಗ್ರೆಸ್ ಗಿಡ), ಅಡಕೆ ಸಿಪ್ಪೆ, ಬೇವಿನ ಸೊಪ್ಪು, ಹುಲ್ಲನ್ನು ಚಿಕ್ಕದಾಗಿ ಕತ್ತರಿಸಿ ತೊಟ್ಟಿಯಲ್ಲಿ ಹಾಕಬೇಕು. ಅದನ್ನು 15 ದಿನ ನೀರಿನಿಂದ ನೆನೆಸಬೇಕು. ಬಳಿಕ ಎರೆಹುಳು ಬಿಡಬೇಕು. ಒಂದು ದಿನದ ನಂತರ ತೊಟ್ಟಿಗೆ ದಿನಕ್ಕೆ ಒಂದು ಬಾರಿ ನೀರು, ವಾರದಲ್ಲಿ ಎರಡು ಬಾರಿ 10 ಕೊಡ(ಬಿಂದಿಗೆ) ಸಗಣಿ ಅಥವಾ ಗಂಜಲನ್ನು ಹಾಕಬೇಕು. ಹಾಕಿದ 90 ದಿನಗಳಲ್ಲಿ ಅಂದರೆ 3 ತಿಂಗಳಲ್ಲಿ ಅದು ಗೊಬ್ಬರವಾಗಿ ಮಾರ್ಪಾಡಾಗುತ್ತದೆ.
ಗೊಬ್ಬರ ತಯಾರಾದ ನಂತರ ಅದನ್ನು ಹೊರತೆಗೆದು ಹುಳುಗಳನ್ನು ಬೇರ್ಪಡಿಸಿ ಅವುಗಳನ್ನು ಒಂದು ಕಡೆ ಸಂಗ್ರಹಿಸಬೇಕು. ನಂತರ ಹುಳುಗಳನ್ನು ಅದೇ ತೊಟ್ಟಿಯಲ್ಲಿ ಗೊಬ್ಬರ ತಯಾರಿಸಲು ಬಳಸಬಹುದು. ಹುಳುಗಳ ಸಂತತಿಯೂ ಹೆಚ್ಚಾಗುವುದರಿಂದ ಅಗತ್ಯ ತೊಟ್ಟಿ ನಿರ್ಮಿಸಿ ಹೆಚ್ಚಿನ ಗೊಬ್ಬರ ಉತ್ಪಾದಿಸಬಹುದು.
ಗೊಬ್ಬರ ಸಿಂಪಡಣೆ
ಹೊರತೆಗೆದ ಗೊಬ್ಬರವನ್ನು ಅಡಕೆ, ತೆಂಗು, ಮಾವು, ಕಿತ್ತಳೆ, ನಿಂಬೆ, ಹಲಸು, ದಾಳಿಂಬೆ, ಹೂವಿನ ಗಿಡ ಇನ್ನು ಮುಂತಾದ ಎಲ್ಲ ಗಿಡಗಳಿಗೂ ಹಾಕಬಹುದು. ಒಂದು ಗಿಡಕ್ಕೆ ಕನಿಷ್ಠ 5 ಕೆಜಿ ಗೊಬ್ಬರವನ್ನು 6 ತಿಂಗಳಿಗೆ ಒಂದು ಬಾರಿ ಅಥವಾ ವರ್ಷಕ್ಕೆ ಒಂದು ಸಲ ಹಾಕಿದ ನಂತರ ನೀರನ್ನು ಚೆನ್ನಾಗಿ ಹಾಯಿಸಬೇಕು. ಹೀಗೆ ಹಾಕುವುದರಿಂದ ಬೆಳೆಗಳಿಗೆ ಸಾಕಷ್ಟು ಪ್ರಮಾಣದ ಪೋಷಕಾಂಶ ಒದಗಿಸುತ್ತದೆ. ಇಳುವರಿ ಚೆನ್ನಾಗಿ ಬರುತ್ತದೆ ಮತ್ತು ಯಾವುದೆ ತರಹದ ರೋಗ ಸುಳಿಯದು. ಗಿಡಗಳು ಹಚ್ಚ ಹಸಿರಿನಿಂದ ಕೂಡಿ ನೋಡುಗರ ಮನಸೆಳೆಯುತ್ತದೆ ಎನ್ನುತ್ತಾರೆ ಕೆಲಸಗಾರ ರೇವಣಸಿದ್ದಪ್ಪ.
40 ಸಾವಿರ ಖರ್ಚಾಗುತ್ತೆ
ಗೊಬ್ಬರ ತಯಾರಿಕೆಗೆ ಹೆಚ್ಚಿನ ಆಸಕ್ತಿ ತೋರಿ ಉತ್ತಮ ಇಳುವರಿ ಪಡೆಯಲು ವೆರ್ಮಿ ಕಾಂಪೋಸ್ಟಿಂಗ್ (ಎರೆ ಹುಳು) ಗೊಬ್ಬರ ತುಂಬಾನೆ ಮುಖ್ಯ. ಇದನ್ನು ತಯಾರಿಸಲು 4 ತೊಟ್ಟಿಗೆ 35 ರಿಂದ 40 ಸಾವಿರ ಖರ್ಚಾಗುತ್ತದೆ. ಇದರಿಂದ 2 ಲಕ್ಷಕ್ಕಿಂತಲು ಹೆಚ್ಚಿನ ಲಾಭ ಪಡೆಯಬಹುದು. ಮಿಕ್ಕಿದ್ದನ್ನು ಮಾರಾಟ ಮಾಡಬಹುದು.
= ವೆಂಕಟೇಶ್ ಸಿ. ಭೀಮಸಮುದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


