ದನ ದಯಾಳು
ಹಸುಗಳು ಹಾಲು ಕೊಡುವ ತನಕ ಕಾಮಧೇನು. ಗೊಡ್ಡಾದ ಮೇಲೆ ಪ್ರಯೋಜನ ಅವುಗಳಿಂದೇನು...?

ಹಸುಗಳು ಹಾಲು ಕೊಡುವ ತನಕ ಕಾಮಧೇನು. ಗೊಡ್ಡಾದ ಮೇಲೆ ಪ್ರಯೋಜನ ಅವುಗಳಿಂದೇನು...? ಎಂದು ಕಟುಕರ ಕೈಗೊಪ್ಪಿಸುವ ಪದ್ಧತಿ ಬಹಳ ಹಿಂದಿನಿಂದಲೂ ನಡೆದು ಬಂದಿದೆ. ನಿತ್ಯವೂ ಗೋವುಗಳು ಒಂದಲ್ಲ ಒಂದು ರೀತಿಯಲ್ಲಿ ಕಸಾಯಿಖಾನೆ ಪಾಲಾಗುತ್ತಿವೆ. ಇದು ಗೋವು ಪ್ರಿಯರಿಗೆ ನೋವಾದರೆ, ರಾಸುಗಳಿಗೆ ಬಿಡಿ, ಹೇಳಿಕೊಳ್ಳಲಾಗದ ಸಂಕಟ.
ಹೆಗ್ಗಳಿಕೆ
ಗೋವುಗಳನ್ನು ರಕ್ಷಿಸುವ ಕಾರ್ಯ ನಮ್ಮ ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸದ್ದಿಲ್ಲದೆ ಸಾಗಿದೆ. ಹಾಲು ಕೊಡದ ರಾಸುಗಳು ಸೇರಿದಂತೆ ಅಶಕ್ತ ಅಂಗವಿಕಲ ಹಸುಗಳನ್ನು ರಕ್ಷಿಸುತ್ತಿರುವುದು ಸಂಸ್ಥೆಯ ಬಹುದೊಡ್ಡ ಹೆಗ್ಗಳಿಕೆ.
ಹೌದು, ಆ ದನ ದಯಾಳು ಸಂಸ್ಥೆಯೇ ಮೈಸೂರು ಪಿಂಜರಾಪೋಲ್ ಸೊಸೈಟಿ. 1938ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಇದಕ್ಕೆ ಭದ್ರ ಬುನಾದಿ ಹಾಕಿದರು. ಮಾನವರಂತೆಯೇ ಪ್ರಾಣಿ- ಪಕ್ಷಿಗಳು ಬದುಕಬೇಕೆಂಬ ಹೆಬ್ಬಯಕೆ ಒಡೆಯರ್ ಅವರಲ್ಲಿತ್ತು. ಈ ಹಿನ್ನೆಲೆಯಲ್ಲಿ ತಡ ಮಾಡದೆ ಚಾಮುಂಡಿ ಬೆಟ್ಟದ ತಪ್ಪಲನ್ನು ಆಯ್ಕೆ ಮಾಡಿಕೊಂಡರು. ಇದಕ್ಕೆಂದೇ 62 ಎಕರೆ ಜಾಗ ಮೀಸಲಿಟ್ಟರು. ಅಲ್ಲಿ ಜನ್ಮ ತಾಳಿತು 'ಪಿಂಜರಾಪೋಲ್ ಸೊಸೈಟಿ'.
ಸಕಲ ಪ್ರಾಣಿಗಳಿಗೂ ಲೇಸು
ಮೈಸೂರು ನಗರ ವ್ಯಾಪ್ತಿಯಲ್ಲಿ ಬರುವ ಅಶಕ್ತ, ಅಂಗವಿಕಲ ಪ್ರಾಣಿಗಳನ್ನು ಸಂರಕ್ಷಿಸಿ ಅವುಗಳನ್ನು ಪ್ರೀತಿಯಿಂದ ಸಾಕುವ ಕಾಯಕ ಈ ಸಂಸ್ಥೆಯದು. ದಕ್ಷಿಣ ಭಾರತದಲ್ಲೇ ಈ ರೀತಿ ಅಶಕ್ತ ಗೋವುಗಳನ್ನು ಒಂದೇ ಕಡೆ ಸಂರಕ್ಷಿಸುವ ನಿದರ್ಶನಗಳಿಲ್ಲ. ಇದು ಬಿಟ್ಟರೆ, ನಮ್ಮದೇ ಶಿವಮೊಗ್ಗ ಸಮೀಪದ ರಾಮಚಂದ್ರಪುರ ಮಠದಲ್ಲಿ ಗೋತಳಿ ಸಂರಕ್ಷಣೆ ಕಾಯಕ ನಡೆಯುತ್ತಿದೆ. ಆದರೆ, ಅಶಕ್ತ ಪ್ರಾಣಿಗಳ ವಿಸ್ತಾರವಾದ ಆಶ್ರಯ ತಾಣ ಎಂದರೆ 'ಪಿಂಜಾರಪೋಲ್ ಸೊಸೈಟಿ' ಮಾತ್ರ. ಯಾವುದೇ ಸರ್ಕಾರಿ ಅನುದಾನದ ಹಂಗಿಲ್ಲದೆ ನಡೆಯುತ್ತಿರುವ ಸೊಸೈಟಿಯಲ್ಲಿ 6 ಸಾವಿರಕ್ಕೂ ಹೆಚ್ಚು ಹಸುಗಳಿವೆ. ಮಾತ್ರವಲ್ಲ, ಗಾಯವಾದ ಕುದುರೆ, ಬೆಕ್ಕು, ಎಮ್ಮೆ, ಹಸು, ಗೂಳಿ ಮುಂತಾದ ಪ್ರಾಣಿಗಳನ್ನು ಯಾರೇ ತಂದು ಬಿಟ್ಟರೂ ಪೋಷಿಸುವುದು ಸಂಸ್ಥೆಯ ವಿಶೇಷ.
'ಮೂರು' ವಿಶೇಷ
ಪ್ರಾಣಿಗಳಿಗಾಗಿಯೇ ಇಲ್ಲಿ ತುರ್ತು ಚಿಕಿತ್ಸಾ ಕೇಂದ್ರ ಸ್ಥಾಪಿಸಲಾಗಿದೆ. ರಾಸುಗಳ ಆರೋಗ್ಯ ವಿಚಾರಿಸಲು ಪಶು ವೈದ್ಯರು ದಿನಕ್ಕೆ ಮೂರು ಬಾರಿ ಬಂದು ಹೋಗುತ್ತಾರೆ. ಒಂದು ದಿನಕ್ಕೆ ಮೂರು ಲಾರಿ ಹುಲ್ಲಿನ ಅವಶ್ಯವಿದೆ. ಜತೆಗೆ 50 ಮೂಟೆ ಹೊಟ್ಟು, ಹಿಂಡಿ, ಬೂಸಾ ಇಲ್ಲಿನ ನಿತ್ಯದ ಆಹಾರ. ಗೋವುಗಳು ಕೊಡುವ ಹಾಲು ಮತ್ತು ಗೊಬ್ಬರ ಮಾರಿ ಸ್ವಲ್ಪ ಮಟ್ಟಿನ ನಿರ್ವಹಣೆ ಮಾಡುತ್ತಾರೆ.
ಆರೈಕೆ
ಒಂದು ಶೆಡ್ಡಿನಲ್ಲಿ 30 ಹಸು ಸಾಕುತ್ತಾರೆ. ಅಂಗ ಊನಕ್ಕೆ ಒಳಗಾದ ಜಾನುವಾರುಗಳನ್ನು ಜತನದಿಂದ ಆರೈಕೆ ಮಾಡುತ್ತಾರೆ. ಮತ್ತೊಂದು ವಿಶೇಷವೆಂದರೆ, ಪೊಲೀಸ್ ಇಲಾಖೆಯು ಜಾನುವಾರು ಕಾಯುವ ಕಾಯಕಕ್ಕೆ ಕೈ ಜೋಡಿಸುತ್ತದೆ. ಈ ನಿಟ್ಟಿನಲ್ಲಿ ಕಸಾಯಿಖಾನೆಗೆ ಹೋಗುವ ಹಸುಗಳ ಮಾಹಿತಿ ಸಿಕ್ಕರೆ ಪೊಲೀಸರು ಅವುಗಳನ್ನು ಸಂರಕ್ಷಿಸಿ ಪಿಂಜರಾಪೋಲ್‌ಗೆ ಒಪ್ಪಿಸುತ್ತಾರೆ.
ತಟ್ಟಿದರೆ ಸಗಣಿಯಾದೆ...
ಪಿಂಜರಾಪೋಲ್ ಸೊಸೈಟಿಯಲ್ಲಿ ಕಳೆದ 25 ವರ್ಷಗಳಿಂದಲೂ ಜಾನುವಾರು ಸಗಣಿ ಬಳಸಿ ಗೊಬ್ಬರ, ಎರೆಹುಳು ಸಾವಯವ ಗೊಬ್ಬರ ತಯಾರಿಸುತ್ತಾರೆ. ಅದಕ್ಕೆಂದೇ ಇಲ್ಲಿ 150 ಎರೆಹುಳು ಗೊಬ್ಬರದ ತೊಟ್ಟಿಗಳಿವೆ. ಇದರ ಆದಾಯದಿಂದಲೇ ಇಲ್ಲಿ ಕೆಲಸ ಮಾಡುವವರ ಮಕ್ಕಳ ಎಸ್ಸೆಸ್ಸೆಲ್ಸಿವರೆಗಿನ ವಿದ್ಯಾಭ್ಯಾಸ ಖರ್ಚನ್ನು ಸಂಸ್ಥೆಯೇ ಭರಿಸುತ್ತದೆ. ಗೋವಿನ ಮೂತ್ರದಿಂದ ಫಿನಾಯಿಲ್, ಆರಕೆ ಮುಂತಾದ ಔಷಧೀಯ ವಸ್ತುಗಳನ್ನು ತಯಾರಿಸುತ್ತಾರೆ. ಪಿಂಜರಾಪೋಲ್ ಸೊಸೈಟಿಯು 2ನೇ ಘಟಕವನ್ನೂ ಹೊಂದಿದ್ದು, ಮೈಸೂರು- ಎಚ್.ಡಿ. ಕೋಟೆ ರಸ್ತೆಯ ಉದ್ಬೂರು ಮಾರ್ಗದಲ್ಲಿ ಇದು ಕಾರ್ಯ ನಿರ್ವಹಿಸುತ್ತಿದೆ.
-ಶ್ರುತಿ ಎಂ.ಪಿ. ಮಳೂರುಪಟ್ಟಣ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


