ಕೃಷಿ-ಪರಿಸರ

ಜೈವಿಕ ದುಸ್ಥಿತಿ

ಪರಿಸರ ಸ್ನೇಹಿ ಜೈವಿಕ ಗೊಬ್ಬರದ ಮೇಲೆ ರೈತನ ಒಲವಿಲ್ಲ. ಖರೀದಿಗೆ ಹಿಂದೇಟು ಹಾಕುತ್ತಲೇ ಇದ್ದಾನೆ...

ಜೈವಿಕ ದುಸ್ಥಿತಿ
Published On :

ಪರಿಸರ ಸ್ನೇಹಿ ಜೈವಿಕ ಗೊಬ್ಬರದ ಮೇಲೆ ರೈತನ ಒಲವಿಲ್ಲ. ಖರೀದಿಗೆ ಹಿಂದೇಟು ಹಾಕುತ್ತಲೇ ಇದ್ದಾನೆ. ಜೈವಿಕ ಗೊಬ್ಬರ ಬಗ್ಗೆ ಅರಿವು ಮೂಡಿಸುವಲ್ಲಿ ಅಧಿಕಾರಿಗಳ ವೈಫಲ್ಯವೂ ಈ ಹಿನ್ನಡೆಗೆ ಮತ್ತೊಂದು ಕಾರಣ. ಹುಳಿಮಾವು ಜೈವಿಕ ತಂತ್ರಜ್ಞಾನ ಸೇರಿದಂತೆ ರಾಜ್ಯದ ವಿವಿಧೆಡೆ ತೋಟಗಾರಿಕೆಗೆ ಅಗತ್ಯವಿರುವ ಜೈವಿಕ ಗೊಬ್ಬರ ತಯಾರಿಸಲಾಗುತ್ತಿದ್ದರೂ ಅದು ಯಾರಿಗೆ ಮುಟ್ಟುತ್ತಿದೆಯೋ ಗೊತ್ತಿಲ್ಲ.
ರೈತರ ಹಿಂದೇಟು
ಜೀವಾಣುಗಳನ್ನು ವೃದ್ಧಿಸಿ ಜೈವಿಕ ಗೊಬ್ಬರ ತಯಾರಿಸಲಾಗುತ್ತದೆ. ಗುಣಮಟ್ಟ ನಿಯಂತ್ರಣದೊಂದಿಗೆ ಪ್ರಮಾಣೀಕರಿಸಿದ ಗೊಬ್ಬರವನ್ನು ರೈತರಿಗೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. ಆದರೂ ಜೈವಿಕ ಗೊಬ್ಬರದ ಮೇಲೆ ರೈತರಿಗೆ ಆಸಕ್ತಿ ಇಲ್ಲ. ಹಾವೇರಿ, ತೀರ್ಥಹಳ್ಳಿ, ಶಿವಮೊಗ್ಗ, ಕೋಲಾರ, ಮಂಡ್ಯ, ಬೆಳಗಾವಿ, ಮೈಸೂರು, ಚಿಕ್ಕಮಂಗಳೂರು ಭಾಗದ ಕೆಲ ರೈತರು ಮಾತ್ರ ಈ ಗೊಬ್ಬರ ಬಳಸುತ್ತಾರೆ. ಉಳಿದಂತೆ ಯಾರೂ ಖರೀದಿಗೆ ಮುಂದಾಗುತ್ತಿಲ್ಲ.
3 ಸಾವಿರ ಟನ್
ಪ್ರತಿವರ್ಷ ಸರಾಸರಿ 3 ಸಾವಿರ ಟನ್ ಗೊಬ್ಬರ ಉತ್ಪಾದನೆ ಆಗುತ್ತದೆ. ಅದರಲ್ಲಿ ಶೇ.10ರಷ್ಟು ರೈತರು ಮಾತ್ರ ಜೈವಿಕ ಗೊಬ್ಬರ ಬಳಸುತ್ತಾರೆ. ಕಳೆದವರ್ಷಕ್ಕೆ ಹೋಲಿಸಿದರೆ ಈ ಬಾರಿ ರೈತರ ಇನ್ನಷ್ಟು ಕುಗ್ಗಿದೆ.
ಫಲವತ್ತೆಗೆ ಸಹಾಯ
ಮನುಷ್ಯ ಹಾಗೂ ಪ್ರಾಣಿಗಳಿಗೆ ಗಾಳಿ, ನೀರು, ಆಹಾರ ಹೇಗೆ ಮುಖ್ಯವೋ ಅದೇ ರೀತಿ ಸಸ್ಯಗಳಿಗೆ ರಂಜಕ, ಸಾರಜನಕ, ಪೊಟ್ಯಾಷಿಯಂನಂಥ ಕೆಲವು ಪ್ರಧಾನ ಪೋಷಕಾಂಶಗಳು ಅವಶ್ಯ. ಅಲ್ಲದೆ ಬೆಳೆಗೆ ರೋಗ ತಗುಲುವುದನ್ನು ತಡೆಯಲು ಬೋರಾನ್, ಸತುವಿನಂಥ ಸೂಕ್ಷ್ಮ ಪೋಷಕಾಂಶಗಳೂ ಅಷ್ಟೇ ಮುಖ್ಯ. ಈ ಗೊಬ್ಬರ ಬಳಸಿದರೆ ಬೂಸ್ಟ್ ಕಾಯಿಲೆ ಹಾಗೂ ಶಿಲೀಂಧ್ರದಿಂದ ಬರುವ ರೋಗವನ್ನು ನಿಯಂತ್ರಿಸಲು ಸಹಾಯಕ. ಆದರೆ, ಕನಿಷ್ಠ ಮೂರ್ನಾಲ್ಕು ವರ್ಷ ಈ ಗೊಬ್ಬರ ಬಳಸಿದಲ್ಲಿ ಮಾತ್ರ ಹೆಚ್ಚು ಪರಿಣಾಮಕಾರಿ.
ತೇವಾಂಶ ಅಗತ್ಯ
ಶೇ. 40ಕ್ಕಿಂತ ಹೆಚ್ಚು ಉಷ್ಣಾಂಶ ಇದ್ದಲ್ಲಿ ಗೊಬ್ಬರದಲ್ಲಿನ ಜೀವಾಣುಗಳು ಸಾಯುತ್ತವೆ. ಹಾಗಾಗಿ ಅದಕ್ಕೆ ನಿರಂತರ ನೀರು ಅಥವಾ ತೇವಾಂಶ ಅಗತ್ಯ. ಈ ಗೊಬ್ಬರವನ್ನು ಮೂರ್ನಾಲ್ಕು ವರ್ಷ ಬಳಸಿದರೆ ಭೂಮಿಯ ಆರ್ದ್ರತೆ ಕಾಪಾಡಲು ಮತ್ತು ಮಣ್ಣಿನ ಫಲವತ್ತತೆ ಕಾಪಾಡಬಹುದು.
ಪೋಷಕಾಂಶ
ಜೈವಿಕ ಗೊಬ್ಬರಗಳಾದ ಅಜಟೋಬ್ಯಾಕ್ಟರ್, ಅಜೋಸ್ಪೇರಿಲಂಗಳು ಸಸ್ಯಗಳಿಗೆ ಸಾರಜನಕ ಒದಗಿಸುತ್ತವೆ. ಜೈವಿಕ ಗೊಬ್ಬರ ನೋಡಲು ಮಣ್ಣಿನಂತೆಯೇ ಕಾಣುತ್ತದೆ. ರಂಜಕ, ಬೋರಾನ್, ಸತುವನ್ನು ಗಿಡಕ್ಕೆ ಅಗತ್ಯ ಪ್ರಮಾಣದಲ್ಲಿ ಒದಗಿಸುವುದು ಈ ಗೊಬ್ಬರದ ಗುಣ. ಈ ಎಲ್ಲ ಗೊಬ್ಬರಗಳ ಮೂಲ ಸಂಸ್ಕೃತಿ ಐಐಎಚ್‌ಆರ್ (ಇಂಡಿಯನ್ ಇನ್ಸ್‌ಟಿಟ್ಯೂಟ್ ಆಪ್ ಆರ್ಟಿಕಲ್ಚರಲ್ ರಿಸರ್ಚ್)ನದ್ದು. ಅಲ್ಲಿಂದ ತಂದು ಬೃಹತ್ ಮಟ್ಟದಲ್ಲಿ ತಯಾರಿಸುವ ಉಪಸಂಸ್ಕೃತಿ ಹೆಬ್ಬಾಳದ ಜಿಕೆವಿಕೆ ಹಾಗೂ ಹುಳಿಮಾವು ಜೈವಿಕ ಕೇಂದ್ರದಲ್ಲಿ ನಡೆಯುತ್ತದೆ.
ಗೊಬ್ಬರದ ಗುಣ
ರೈಜೋಬಿಯಂ, ಅಜಟೋಬ್ಯಾಕ್ಟರ್, ಅಜೋಸ್ಪೆರಿಲಂ ಎಂಬ ಜೈವಿಕ ಗೊಬ್ಬರದಲ್ಲಿರುವ ಸೂಕ್ಷ್ಮಜೀವಿಗಳು ಗಾಳಿಯಲ್ಲಿ ಅನಿಲ ರೂಪದಲ್ಲಿ ಸಾರಜನಕವನ್ನು ಘನರೂಪಕ್ಕೆ ಪರಿವರ್ತಿಸಿ ಬೆಳೆಗಳಿಗೆ ಒದಗಿಸುತ್ತವೆ. ಅದೇ ರೀತಿ ಪಿಎಸ್‌ಎಂ ಗೊಬ್ಬರದಲ್ಲಿರುವ ಸೂಕ್ಷ್ಮಜೀವಿಗಳು ಮಣ್ಣಿನಲ್ಲಿರುವ ಅಲಭ್ಯ ರಂಜಕ ಕರಗಿಸಿ ಬೆಳೆಗಳಿಗೆ ದೊರೆಯುವಂತೆ ಮಾಡುತ್ತವೆ. ವ್ಯಾಮ್ ಗೊಬ್ಬರವು ಮಣ್ಣಿನ ಗುಣಾತ್ಮಕತೆ, ಸೂಕ್ಷ್ಮಜೀವಿಗಳ ಶಕ್ತಿ, ನೀರುಣಿಸುವ ಶಕ್ತಿ ಹೆಚ್ಚಿಸಿ ಗಿಡಗಳಿಗೆ ಪೋಷಕಾಂಶ ಹಾಗೂ ಬೇರಿನಲ್ಲಿ ಉಂಟಾಗುವ ರೋಗ- ರುಜಿನಗಳನ್ನು ಜೈವಿಕವಾಗಿ ಹತೋಟಿಯಲ್ಲಿಡುತ್ತವೆ.
ಖರ್ಚು ಉಳಿಯುತ್ತೆ...
ನೈಸರ್ಗಿಕವಾಗಿ ಮಣ್ಣಿನಲ್ಲಿ ದೊರಕುವ ಪ್ರಯೋಜನಾಕಾರಿ ಸೂಕ್ಷ್ಮಜೀವಿಗಳನ್ನು ಪ್ರಯೋಗಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧಿಸಿ ನಂತರ ಅವುಗಳನ್ನು ಲಿಗ್ನೈಟ್ ಪೌಡರ್‌ಗೆ ಮಿಶ್ರಣ ಮಾಡಿ ಈ ಗೊಬ್ಬರವನ್ನು ತಯಾರಿಸಲಾಗುತ್ತದೆ. ಇದರ ಬಳಕೆಯಿಂದ ಬೇಸಾಯದ ಖರ್ಚೂ ಉಳಿಯುತ್ತದೆ. ಮಣ್ಣಿನ ಭೌತಿಕ ಹಾಗೂ ಜೈವಿಕ ಗುಣಗಳನ್ನೂ ಕಾಪಾಡಬಹುದು.

-  ಶಾಂತ ತಮ್ಮಯ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.