ಕಸ ಸಂಕಲನ

ನಮ್ಮ ಕೊಳಕುತನ ಅನೇಕ ಸಲ ಗಡಿ ದಾಟುತ್ತದೆ. ಭೂಮಿ ಮೇಲಿನ ಅತ್ಯಂತ 'ನಿರ್ಮಲ ದೇಶ' ಎಂಬ ಖ್ಯಾತಿಯಿರುವ ಸಿಂಗಾಪುರಕ್ಕೂ ನಮ್ಮತನ ರಫ್ತಾಗಿದೆ. ಅದೇ ಸಿಂಗಾಪುರದಲ್ಲಿ 'ಲಿಟ್ಲ್ ಇಂಡಿಯಾ ಸಿಂಗಾಪುರ' ಎಂಬ ಪ್ರದೇಶವಿದೆ. ಅಲ್ಲಿನ ರೆಸ್ಟೋರೆಂಟುಗಳಂತೂ ಚೆನ್ನೈ, ಬೆಂಗಳೂರು ದರ್ಶಿನಿಗಳ ಪ್ರತಿರೂಪ. ಅಲ್ಲಲ್ಲೇ ಬಿಸಾಡಿದ ಪ್ಲೇಟು- ಲೋಟಗಳು, ಪಾನ್ ಬೀಡಾದ ರಸವನ್ನು ಎದುರಿನ ಒಂದು ಗೋಡೆಯ ಮೇಲೆ ಅಥವಾ ನೆಲದ ಮೇಲೆ ಪಿಚ್ಚನೆ ಉಗಿದಿರುವ ದೃಶ್ಯ ಅಲ್ಲೂ ಲಭ್ಯ. ಅಲ್ಲೂ ಭಾರತದ ಛಾಪು ಮೂಡಿಸಿದ ಹೆ(ಅ)ಗ್ಗಳಿಕೆ ನಮ್ಮದು.
ಹಾಗಾದರೆ, ನಾವೇಕೆ ಹೀಗೆ? ಪರಿಸರವನ್ನು ಕ್ಲೀನಾಗಿಟ್ಟುಕೊಳ್ಳುವಲ್ಲಿ ನಮ್ಮ ಪಾತ್ರ ಬಹುಮುಖ್ಯ ಅಂತ ನಮಗೇಕೆ ಅನ್ನಿಸದು? ಆದರೀ, ಪ್ರಶ್ನೆ ಭಾರತದ ಎಲ್ಲ ನಾಗರಿಕರಿಗೂ ಹೋಲುವುದಿಲ್ಲ. ಅದರಲ್ಲೂ 'ಅಗ್ಲಿ ಇಂಡಿಯನ್'ಗೆ ಮ್ಯಾಚ್ ಆಗುವುದೇ ಇಲ್ಲ ಬಿಡಿ.
ಯಾರೀ ಅಗ್ಲಿ ಇಂಡಿಯನ್?
ಇದು ಅನಾಮಿಕ ನಾಗರಿಕ ಪಡೆ. ಇವರ ಸ್ಲೋಗನ್ 'ಬಾಯಿ ಮುಚ್ಕೋ, ಕೆಲಸ ಶುರು ಹಚ್ಕೊ'. ಇವರ ಹತ್ತು ಸೂತ್ರಗಳನ್ನು ಕೇಳಿದರೆ ಮೇಲ್ನೋಟದಲ್ಲೇ ಇವರ ಮೇಲೆ ಪ್ರೀತಿ ಉಕ್ಕುತ್ತದೆ. ಪ್ರತ್ಯಕ್ಷವಾಗಿ ಸದ್ದಿಲ್ಲದೆ ಕೆಲಸ ಮಾಡು, ಕ್ರಿಯಾವಾದ ಬೇಡ, ಮತ್ತೊಬ್ಬರ ಕಡೆಗೆ ಬೆರಳು ಮಾಡಬೇಡಿ, ಸಮಿತಿಗಳ ರಚನೆ ಬೇಡ, ಯಾರನ್ನು ಎದುರು ಹಾಕಿಕೊಳ್ಳಬೇಡಿ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ, ನಿಮ್ಮದೇ ಹಣವನ್ನು ಉಪಯೋಗಿಸಿ, ವ್ಯವಸ್ಥೆಯೊಂದಿಗೆ ಕೆಲಸ ಮಾಡಿ, ಇದು ನಿಮ್ಮ ಸಮಸ್ಯೆ ಎಂದೆಣಿಸಿ ಕೆಲಸ ಮಾಡಿ, ಅನಾಮಿಕರಾಗಿ ಉಳಿಯಿರಿ.
ನಿರ್ಮಲ ಸಂಕಲ್ಪ
ಇದುವರೆಗೂ ಈ ಪಡೆ ನಾನೂರಕ್ಕೂ ಹೆಚ್ಚು ಸ್ಥಳಗಳನ್ನು ಕಸದ ಕೊಂಪೆಯಿಂದ ಮುಕ್ತಗೊಳಿಸಿದೆ. ಇವರ ಸಕ್ಸಸ್ ರೇಟ್ ಶೇ.90ರಷ್ಟು. ಕಸದ ವಿಷಯದಲ್ಲಿ ಪ್ರತಿಯೊಬ್ಬ ನಾಗರಿಕನ ಕೈವಾಡವೂ ಇದೆ. ಹಾಗೆಯೇ ತ್ಯಾಜ್ಯವನ್ನು ಎಲ್ಲಿ ಹೇಗೆ ವಿಲೇವಾರಿ ಮಾಡಬೇಕೆಂಬುದರಲ್ಲೂ ಅವನ ಪಾತ್ರ ದೊಡ್ಡದು ಎಂದು ನಂಬಿರುವ ಈ ಗುಂಪಿನಲ್ಲಿ ಅನಾಮಿಕರು, ನಿವೃತ್ತರು, ಕಾರ್ಪೋರೇಟ್ ಉದ್ಯೋಗಿಗಳು ಹಾಗೂ ನಾವು ನೀವು ಸಹ ಇರಬಹುದು.
ಸ್ಪಾಟ್ ಫಿಕ್ಸಿಂಗ್
ಇವರ ಸ್ವಚ್ಛತಾ ಕ್ರಿಯೆಗಿರುವ ಹೆಸರು ಸ್ಪಾಟ್ ಫಿಕ್ಸಿಂಗ್. ವಾರಾಂತ್ಯದಲ್ಲಿ ಅಥವಾ ಬೆಳ್ಳಂಬೆಳಗ್ಗೆ ಹೋಗಿ ಸ್ಪಾಟ್ ಫಿಕ್ಸಿಂಗ್ ಮಾಡ್ತಾರೆ. ಗಮನಕ್ಕೆ ಬಂದ ಅಥವಾ ಸಿಕ್ಕ ಮಾಹಿತಿಯಂತೆ ಒಂದು ಸ್ಥಳಕ್ಕೆ ಭೇಟಿ ನೀಡಿ, ಕಾರ್ಯನಿರತರಾಗುತ್ತಾರೆ. ಕಸದ ರಾಶಿ ಬಾಚಿ ತೆಗೆದು, ನೀರು- ಫಿನಾಯಿಲ್‌ನಿಂದ ಸ್ಥಳವನ್ನು ಸ್ವಚ್ಛಗೊಳಿಸುತ್ತಾರೆ. ಅಲ್ಲಿನ ಗೋಡೆ- ಫುಟ್‌ಪಾತ್‌ಗಳಿಗೆ ಸೊಗಸಾಗಿ ಪೇಯಿಂಟ್ ಮಾಡುತ್ತಾರೆ. ಅಲ್ಲೇ ಇರುವ ಸೈಜುಗಲ್ಲುಗಳನ್ನು ಜೋಡಿಸಿಯೋ ಅಥವಾ ತಮ್ಮದೆ ಖರ್ಚಿನಲ್ಲಿ ಕುಳಿತುಕೊಳ್ಳಲು ಬೆಂಚುಕಲ್ಲನ್ನು ಸ್ಥಾಪಿಸುತ್ತಾರೆ. ಹೀಗೆ ಕೆಲವೇ ಗಂಟೆಗಳ ಕಾರ್ಯಾಚರಣೆಯಲ್ಲಿ ಆ ಇಡೀ ಸ್ಥಳಕ್ಕೆ ಫೇಸ್‌ಲಿಫ್ಟ್ ಕೊಡ್ತಾರೆ. ಹೀಗೆ ಸ್ವಚ್ಛ ಮಾಡುತ್ತಿರುವಾಗ ಅಗ್ಲಿ ಇಂಡಿಯನ್ನೊಂದಿಗೆ ಆ ಪ್ರದೇಶದ ಜನಸಾಮಾನ್ಯರಷ್ಟೇ ಅಲ್ಲ, ಅಲ್ಲಿನ ಕಾರ್ಪೋರೇಟರ್ ಹಾಗೂ ಅವರ ಸಿಬ್ಬಂದಿಯೂ ಸಾಥ್ ನೀಡಿದ ನಿದರ್ಶನಗಳಿವೆ.
ನಾಗರಿಕ ಪ್ರಜ್ಞೆ
ಅಗ್ಲಿ ಇಂಡಿಯನ್ ಮಾಡಿರುವ ಸ್ಪಾಟ್ ಫಿಕ್ಸಿಂಗ್ ಕೇಸ್‌ಗಳಲ್ಲಿ ಆಗಿರುವುದು ಹೀಗೆ. ಯಾವಾಗ ಅಪರಿಚಿತರು, ಅಬ್ಬರವಿಲ್ಲದೆ, ಸರ್ಕಾರದ ವಿರುದ್ಧ ಉದ್ದುದ್ದ ಭಾಷಣ ಮಾಡದೆ, ಸ್ಲೋಗನ್‌ಗಳನ್ನು ಕೂಗದೆ ತಮ್ಮ ಪಾಡಿಗೆ ತಾವು ತಮ್ಮದೇ ಖರ್ಚಿನಲ್ಲಿ ಒಂದು ಸ್ಥಳವನ್ನು ಸ್ವಚ್ಛ ಮಾಡುತ್ತಾರೋ ಅಲ್ಲೇ ನೆಲೆಸಿರುವ ಜನರಲ್ಲಿ ಆಗೊಂದು ನಾಗರಿಕ ಪ್ರಜ್ಞೆ ತಲೆಯೆತ್ತುತ್ತದೆ. ಇನ್ನು ಮುಂದಾದರೂ ಈ ಸ್ಥಳದ ಸ್ವಚ್ಛತೆ ಕಾಪಿಟ್ಟುಕೊಳ್ಳಬೇಕೆಂಬ ಹೊಣೆ ಹುಟ್ಟುತ್ತದೆ.
ಎಲ್ಲೆಲ್ಲಿ ಸಕ್ಸಸ್?
ಒಟ್ಟಾರೆ 400ಕ್ಕೂ ಹೆಚ್ಚು ಕಡೆ ಸ್ಪಾಟ್ ಫಿಕ್ಸಿಂಗ್ ಮಾಡಿರುವ ಈ ಪಡೆ, ಕೆಲವೆಡೆ ಮಾಡಿರುವ ಕೆಲಸವನ್ನು ಶ್ಲಾಘಿಸಲೇಬೇಕು. ವರನಟ ಡಾ. ರಾಜಕುಮಾರ್ ಅವರ ಸದಾಶಿವನಗರ ನಿವಾಸದ ಕಾಂಪೌಂಡ್‌ನ ಭಾಗ, ನಟ- ಸಚಿವ ಅಂಬರೀಷ್‌ರ ಮನೆ ಹೊರಗಿನ ಸ್ಪಾಟ್, ಕ್ರೈಸ್ಟ್ ಕಾಲೇಜಿನ ಬಳಿ, ಜ್ಯೋತಿನಿವಾಸ್ ಕಾಲೇಜು ಬಳಿ, ಕೋರಮಂಗಲ, ಬನಶಂಕರಿ, ಜಯನಗರ ಲೀಲಾ ಪ್ಯಾಲೇಸ್ ಬಳಿ ಇದ್ದ ಡೆತ್ ಟ್ರಾಪ್, ನೆಟ್ಕಲಪ್ಪ ಸರ್ಕಲ್, ಮಾರತಹಳ್ಳಿ... ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಅಗ್ಲಿ ಇಂಡಿಯನ್ ಬಗ್ಗೆ ಹೆಚ್ಚಿನ ಮಾಹಿತಿಗೆ www.facebook.comtheugl.yindian ಫೇಸ್‌ಬುಕ್ ತಾಣಕ್ಕೆ ಲಾಗಿನ್ ಆಗಿ. ಅಷ್ಟೇ ಅಲ್ಲ, ನಿಮ್ಮ ಮನೆ- ಕಚೇರಿಯ ಸುತ್ತಮುತ್ತ ಯಾವುದೇ ಪ್ರದೇಶ ನೈರ್ಮಲ್ಯದ ಕೊರತೆಯಿಂದ ನಿಮ್ಮನ್ನು ಸತತವಾಗಿ ಕಾಡುತಿದ್ದರೆ, ಅದನ್ನು ಆಗ್ಲಿ ಇಂಡಿಯನ್ ಗಮನಕ್ಕೆ ತನ್ನಿ. ಮಾರನೇ ದಿನ ನೀವು ಕಣ್ಣು ತೆರೆಯುವುದರಲ್ಲಿ ಅವರು ಆಗಲೇ ಕಾರ್ಯಾಚರಣೆ ಆರಂಭಿಸಿರುವುದಕ್ಕೂ ಸಾಕು... ಮತ್ತು ನೀವು ನಿಮಗೆ ಅರಿವಿಲ್ಲದೆ ನಿಮ್ಮ ಮನೆಯಿಂದ ನೀರು, ಪೊರಕೆ, ಫಿನಾಯಲ್, ಏಣಿಗಳನ್ನು ಸರಬರಾಜು ಮಾಡುತ್ತ ಅವರ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದು.
ಸಿಂಪಲ್ ಲಾಜಿಕ್
ಸರಿ, ಸ್ಥಳವೇನೋ ಕ್ಲೀನಾಯ್ತು. ಆದರೆ, ಅದು ಹಾಗೆ ಉಳಿಯಬೇಕಲ್ಲ? ಕೆಲವೇ ದಿನಗಳಲ್ಲಿ ಅದು ಮತ್ತೆ ಯಥಾಸ್ಥಿತಿಗೆ ಬರುವುದು ನಿಶ್ಚಿತ ಎಂಬ ಸಿನಿಕತೆ ನಮ್ಮನ್ನು ಕಾಡದಿರುವುದಿಲ್ಲ. ಆದರೆ, ಹೀಗಾಗುವ ಸಂಭವ ಶೇ.90ರಷ್ಟು ಕಡಿಮೆ. ಹೇಗೆ? ಸಿಂಪಲ್ ಲಾಜಿಕ್. ಒಂದು ಸಣ್ಣ ಉದಾಹರಣೆ ನೋಡೋಣ. ನಮ್ಮನೆಯಲ್ಲಿ ಒಂದು ಟೇಬಲ್ ಇದೆ. ಅದರ ಮೇಲೆ ಮನೆಯ ಸದಸ್ಯರೆಲ್ಲ ಬೇಕಾದ್ದು ಬೇಡವಾದ್ದು ತಂದು ತಂದು ಇಡುತ್ತಿದ್ದರೆ, ಟೇಬಲ್ಲಿನ ಆ ಸ್ಥಿತಿಗೆ ನಾವು ಅಕ್ಷರಶಃ ಭಾಗಿಯಾಗಿರುತ್ತೇವೆ. ಅಯ್ಯೋ ಬಿಡು, ಇಲ್ಲೀಗಾಗಲೇ ಎಷ್ಟೊಂದು ವಸ್ತುಗಳು ಇವೆ. ಇನ್ನು ನನ್ನದೊಂದು ಯಾವ ಮಹಾ? ಇಷ್ಟಕ್ಕೂ ಟೇಬಲ್ ಹೀಗಿರಲು ನಾನೊಬ್ಬಳೆ(ನೆ) ಕಾರಣವಲ್ಲವಲ್ಲ ಎಂದು ಕಾಂಪ್ರೋಮೈಸ್ ಮಾಡ್ಕೋತೀವಿ. ಹಾಗೆ ಕಸದ ವಿಷಯಾನು. ಒಂದೆಡೆ ಕಸದ ರಾಶಿ ಬಿದ್ದಿದ್ದರೆ, ಇಲ್ಲಿ ನಮ್ಮ ಮನೆಯ ಕಸವೊಂದು ಹಾಕಿದರೆ ಅಥವಾ ಹಾಕದಿದ್ದರೆ ಏನು ವ್ಯತ್ಯಾಸವಾಗುತ್ತದೆ ಎಂದು ಯಾವುದೇ ರೀತಿಯ ಹಿಂಜರಿಕೆ ಅಥವಾ ಸಂಕೋಚವಿಲ್ಲದೆ ಯಥಾಶಕ್ತಿ ನಮ್ಮ ಪಾಲು ಸೇರಿಸ್ತೇವೆ. ಆದರೆ, ಆ ಸ್ಥಳ ಸ್ವಚ್ಛವಾಗಿದ್ದರೆ, ಕಸ ಹಾಕಲು ಹೋದ ಕೈ ತಂತಾನೇ ಹಿಂದೆ ಬರುತ್ತೆ ಮತ್ತು ಆ ಕಸವನ್ನು ಎಲ್ಲಿ ಹೇಗೆ ವಿಸರ್ಜಿಸಬೇಕೆಂದು ಬೇರೆ ಮಾರ್ಗ ಕಂಡ್ಕೋತೀವಿ.
= ರಮಾ ಎಂ.ಎನ್.mnrama@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


