ಕೃಷಿ-ಪರಿಸರ

ಹಹ ಕೇಕ್

ಹಹ ಕೇಕ್
Published On :

ದಕ್ಷಿಣಕನ್ನಡದ ಪುಣಚದಲ್ಲಿ ಸಂಪನ್ನವಾದ ಹಲಸಿನ ಹಬ್ಬದ ಸಮಾಲೋಚನೆಗಾಗಿ 'ಹಲಸು ಸ್ನೇಹಿ ಕೂಟ'ದ ಸದಸ್ಯರು ಒಟ್ಟಾಗಿದ್ದರು. ಬಹುತೇಕರಲ್ಲಿ ಹಬ್ಬದ ಗುಂಗು ಆರಿರಲಿಲ್ಲ. ಮೇಳದಲ್ಲಿ ಗಮನ ಸೆಳೆದ ಜ್ಯಾಕ್ ಮಂಚೂರಿಯನ್, ಹಣ್ಣಿನಿಂದ ಮಾಡಿದ ಸಿಹಿ ಸಕ್ಕರೆ ಬೆರಟ್ಟಿಗಳು. ಒಂದಿಬ್ಬರ ಮನೆಗಳಲ್ಲಿ ಪ್ರಯೋಗವೂ ನಡೆದಿತ್ತು. ಪ್ರಯೋಗದ ಯಶ- ಸೋಲಿನ ಮಾತುಕತೆ ನಡೆಯುತ್ತಿತ್ತು.
ಅಷ್ಟರಲ್ಲಿ ಪೆರ್ಲದ ಶಿವಪ್ರಸಾದ್ ವರ್ಮಡಿಯವರು ಬಾಳೆಎಲೆ ಮುಚ್ಚಿಟ್ಟ ಬಟ್ಟಲೊಂದನ್ನು ತಂದಿಟ್ಟರು. ಎಲ್ಲರಲ್ಲೂ ಕುತೂಹಲ, ಏನಿರಬಹುದು ಹಲಸಿನ ಸೀಸನ್ ಅಲ್ವಾ, ಹಣ್ಣಿನ ಸೊಳೆ (ತೊಳೆ) ಇರಬಹುದು ಎಂದವರೇ ಅಧಿಕ. ಅತಿಥಿಯಾಗಿ ಆಗಮಿಸಿದ್ದ ಮಂಗಳೂರಿನ ನಿವೃತ್ತ ಅರಣ್ಯಾಧಿಕಾರಿ ಗೇಬ್ರಿಯಲ್ ಬಿ.ಎಸ್. ವೇಗಸ್ ಅವರು ನೋಡಿಯೇ ಬಿಡೋಣ ಎನ್ನುತ್ತಾ ಮುಚ್ಚಿದ ಎಲೆಯನ್ನು ತೆಗೆದಾಗ ಅಚ್ಚರಿ. ಬಿಸಿಯಾರದ ಹಲಸಿನ ಹಣ್ಣಿನ (ಹಹ) ಕೇಕ್ ಪರಿಮಳ ಸೂಸುತ್ತಿತ್ತು.
ಗೇಬ್ರಿಯಲ್ ತಡ ಮಾಡಲಿಲ್ಲ, ನಿರ್ವಾಹಕರ ಘೋಷಣೆಯ ಮೊದಲೇ ಚಾಕುವಿನಿಂದ ಕೇಕ್ ಕತ್ತರಿಸಿ, ಆತಿಥೇಯ ಮುಳಿಯ ವೆಂಕಟಕೃಷ್ಣ ಶರ್ಮರ ಬಾಯಿಗಿಟ್ಟಾಗ ಎಲ್ಲರ ಬಾಯಿ ನೀರೂರಿತ್ತು. ಕೇಕಿನ ಒಂದೊಂದೇ ತುಂಡುಗಳು ಉದರ ಸೇರಿದಾಗ ರೆಸಿಪಿಗಾಗಿ ಪೈಪೋಟಿ. ಹಹ ಉತ್ಪನ್ನಗಳ ಹತ್ತಾರು ಸವಿಯುಂಡವರಿಗೆ ಕೇಕ್ ಹೊಸತು. ಶಿವಪ್ರಸಾದರ ಗೃಹಮಂತ್ರಿಗಳಾದ ಶೈಲಜಾ ಅವರ ಕೈರುಚಿಯಲ್ಲಿ ಪಾಕಗೊಂಡ ಕೇಕ್ ಪುಣಚದ ಹಹ ಹಬ್ಬದಲ್ಲಿ ಬಹುಮಾನವನ್ನೂ ಪಡೆದಿತ್ತು.
ಹಲಸು ಸ್ನೇಹಿ ಕೂಟದ ಒಬ್ಬೊಬ್ಬ ಸದಸ್ಯರು ಬರುವಾಗ ಒಂದೊಂದು ಖಾದ್ಯಗಳನ್ನು ಮಾಡಿ ತಂದಿದ್ದರು. ಸಕ್ಕರೆ ಬೆರಟ್ಟಿ, ಚಿಪ್ಸ್, ಹಲ್ವ... ಹೀಗೆ. ಮತ್ತೊಂದೆಡೆ ಕರಾವಳಿಗೆ ಹೊಸ ನೆಂಟರಾದ ಸದಾನಂದ ಮತ್ತು ಬೈರಚಂದ್ರ ಹಲಸಿನ ಸರ್ಜರಿ ನಡೆಯುತ್ತಿತ್ತು. ಸದಾನಂದ ಹಣ್ಣು ಶರ್ಮರ ತೋಟದ್ದಾದರೆ, ಭೈರಚಂದ್ರವು ಕಸಿತಜ್ಞ ಆಲಂಕಾರಿನ ಕೃಷ್ಣ ಕೆದಿಲಾಯರ ಹಿತ್ತಿಲಿನದ್ದು. ರುಚಿ ವೈವಿಧ್ಯದಲ್ಲಿ ಇವೆರಡೂ ಇರುನೆಲೆಯಲ್ಲಿ ಮೇಲುಗೈ ಸಾಧಿಸಿದ್ದವು.
ಸದಾನಂದ ಹಣ್ಣಿನದು ಸೊಳೆ ಉದ್ದ. ದಪ್ಪ. ಹಳದಿ- ಬಿಳಿ ಬಣ್ಣ. ಭೈರಚಂದ್ರ ಸೊಳೆ ಸಣ್ಣ, ಕೆಂಪುಮಿಶ್ರಿತ ಬಣ್ಣ. ಫಲಿತಾಂಶ ಈಗಲೇ ಹೇಳುವಂತಿಲ್ಲ. ಒಂದೆರಡು ವರುಷ ಕಾಯಬೇಕು. ಮಳೆ ಬಂದ ಬಳಿಕ ಹಣ್ಣಾದುದರಿಂದ ಮೂಲ ರುಚಿಯಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಆದರೂ ನಿರಾಶೆ ಪಡಬೇಕಾಗಿಲ್ಲ, ಎಂದು ಪೋಸ್ಟ್‌ಮಾರ್ಟ ವರದಿ ಪ್ರಸ್ತುತಪಡಿಸಿದರು ಶರ್ಮ. ಅವರ ಹಲಸಿನ ತೋಟ ವೀಕ್ಷಿಸಿದಲ್ಲಿಗೆ ಕಲಾಪ ಅಂತ್ಯ. ಕೂಟದ ಕಾರ್ಯಕ್ರಮವೆಂದರೆ ಹೀಗೆನೇ. ಶಿಷ್ಟಾಚಾರಗಳಿಲ್ಲ. ಥಿಯರಿಗಿಂತ ಪ್ರಾಕ್ಟಿಕಲ್ಲಿಗೆ ಒತ್ತು.
ಬಿ.ಸಿ. ರೋಡಿನ ಹಲಸು ಪ್ರಿಯ ಮೌನೀಶ ಮಲ್ಯರ ತಲೆಯೊಳಗೆ ಕೇಕ್, ಹಲ್ವ ತುಂಬಿಕೊಂಡಿತ್ತು. ಬಂಟ್ವಾಳದಲ್ಲೂ ಹಲಸಿನ ಹಬ್ಬ ಏರ್ಪಡಿಸುವ ಅಜೆಂಡಾ ಮುಂದಿಟ್ಟರು. ವಿಚಾರ ವಿನಿಮಯ. ಮುಂದಿನ ವರುಷ ಹಬ್ಬ ಏರ್ಪಡಿಸುವ ನಿರ್ಧಾರ. ಈ ಎಲ್ಲ ಹಲಸಿನ ಅರಿವಿನ ಪ್ರಕ್ರಿಯೆಯ ಅನುಭವವನ್ನು ಸ್ನೇಹಿತರಾದ ಬಂಟ್ವಾಳದ ರಾಮದಾಸ ಭಟ್ಟರಲ್ಲಿ ಹಂಚಿಕೊಂಡರು. ತನ್ನ ಮಗನ ಹುಟ್ಟುಹಬ್ಬಕ್ಕೆ ಹಲಸಿನದ್ದೇ ಕೇಕ್, ಹಲ್ವ, ಚಿಪ್ಸ್ ಬೇಕೆಂಬ ಪಟ್ಟು. ಮಲ್ಯರ ಫಜೀತಿ. ಶರ್ಮರಿಗೆ ಬುಲಾವ್.
ಜುಲೈ 6. ರಾಮದಾಸ ಭಟ್ಟರ ಮಗ ವಿಷ್ಣುವಿನ ಹುಟ್ಟುಹಬ್ಬ. ನೂರಕ್ಕೂ ಮಿಕ್ಕಿ ಅತಿಥಿಗಳು. ಸಾಮಾನ್ಯವಾಗಿ ಬೇಕರಿಯಿಂದ ಮಾಡಿಸಿ ತಂದ ಕೇಕನ್ನು ತುಂಡರಿಸುವುದು ವಾಡಿಕೆ. ಅಂದು ಹಲಸಿನ ಹಣ್ಣಿನಿಂದ ಮಾಡಿದ ಕೇಕನ್ನು ಕತ್ತರಿಸಿದಾಗ ಎಲ್ಲರೂ ದಂಗು. ಹೊಸ ದೇಸಿ ಪರಂಪರೆಯೊಂದಕ್ಕೆ ರಾಮದಾಸರು ನಾಂದಿ ಹಾಡಿದ್ದರು. ಎಲ್ಲರ ಉದರಕ್ಕೂ ಕೇಕ್ ಸೇರಿದಾಗ ಮುನಿಸುಗೊಂಡವರು ಇಲ್ಲವೇ ಇಲ್ಲ. ಹಲ್ವದ ಸ್ವಾದ, ರುಚಿಗೆ ಮಾರುಹೋದವರಿಂದ ಬೇಡಿಕೆ.
ಮೌನೀಶ್ ಹೇಳುತ್ತಾರೆ, ಹಲಸಿನ ಸೊಳೆಯನ್ನು ತಿಂದು ಅನೇಕರಿಗೆ ಗೊತ್ತು. ಚಿಪ್ಸ್, ಹಪ್ಪಳ ಪರಿಚಯವಿದೆ. ಆದರೆ, ಹೊಸ ತಲೆಮಾರಿಗೆ ಹಲ್ವ, ಕೇಕ್ ಗೊತ್ತಿಲ್ಲ. ರೆಡಿ ಟು ಈಟ್ ರೂಪದಲ್ಲಿ ನೀಡಿದರೆ ಮಾರುಕಟ್ಟೆ ಧಾರಾಳವಿದೆ. ಇಂತಹ ಐಟಂಗಳು ಬೇಕರಿಯಲ್ಲಿ ಸಿಗಲಾರದು. ಹುಟ್ಟುಹಬ್ಬಕ್ಕೆ ಆಗಮಿಸಿದ ಹತ್ತಾರು ಮಂದಿ ಹಲ್ವ, ಕೇಕಿಗೆ ಆರ್ಡರ್ ಮಾಡುವ ರೀತಿ ನೋಡಿದರೆ ಇದನ್ನು ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಮಾಡುವ ಉದ್ದಿಮೆ ಬಂದರೆ ಖಂಡಿತ ಗೆಲ್ಲಬಹುದು.
ಮೌನೀಶ್ ಈ ದಾರಿಯಲ್ಲಿದ್ದಾರೆ. ಅವರ ತಲೆಯಲ್ಲಿ ಹತ್ತಲ್ಲ, ನೂರಾರು ನೀಲನಕ್ಷೆಗಳು ರೂಪುಗೊಳ್ಳುತ್ತಲೇ ಇರುತ್ತವೆ. ವರುಷ ಪೂರ್ತಿ ಹಲಸಿನ ಉತ್ಪನ್ನ ತಯಾರಿಸುವ ಉದ್ಯಮದತ್ತ ವಾಲುತ್ತಿದ್ದಾರೆ. ಮಾರುಕಟ್ಟೆ ಅಧ್ಯಯನ ಮಾಡುತ್ತಿದ್ದಾರೆ. ಅವರೆಲ್ಲಾ ಯೋಚನೆಗಳು ಅವರ ಅಡುಗೆ ಮನೆಯಲ್ಲೇ ಮೊದಲು ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತವೆ. ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಒಂದೆರಡು ತಿಂಗಳಿನಲ್ಲಿ ಮೌನೀಶ್ ಮಲ್ಯರಿಂದ ಶುಭ ಸುದ್ದಿ ಬರಬಹುದು.

= ನಾ. ಕಾರಂತ ಪೆರಾಜೆ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.