ಕೃಷಿ-ಪರಿಸರ

ಹನಿಯಿಂದ ಮನಿ

ಹನಿಯಿಂದ ಮನಿ
Published On :

ಬರೀ ಮಳೆಯನ್ನೇ ನೆಚ್ಚಿಕೊಂಡರೆ ಕೃಷಿ ಬದುಕಿನಲ್ಲಿ ಹೊಯ್ದಾಟ ಅನುಭವಿಸಬೇಕಾಗುತ್ತದೆ. ಜತೆಗೊಂದು ಉಪಕಸುಬು ಇದ್ದರೆ ಬದುಕಿಗೊಂದು ಊರುಗೋಲು ಸಿಕ್ಕಂತಾಗುತ್ತದೆ. ಹಾಗಾಗಿ ಮಲೆನಾಡಿನಲ್ಲಿ ಜಾಣ ರೈತರು ಅಡಕೆ, ತೆಂಗು, ಕಾಫಿ, ರಬ್ಬರ್ ಇತ್ಯಾದಿ ಕೃಷಿಯ ಜತೆಗೆ ಆದಾಯ ಗಳಿಸುವ ಹಲವು ಕಸುಬುಗಳಲ್ಲಿ ತೊಡಗಿಕೊಂಡಿದ್ದಾರೆ.
ಹೊಸನಗರ ತಾಲೂಕಿನ ಓತನಾಡಿಯ ಹಲಸಿನಕಟ್ಟೆ ರಾಘವೇಂದ್ರ 15 ವರ್ಷಗಳಿಂದ ಅಡಕೆ ಜತೆ ಉಪ ಕಸುಬಾಗಿ ಜೇನು ಸಾಕಣೆ ನಡೆಸುತ್ತಿದ್ದಾರೆ. ಮನೆಯ ಆವರಣದಲ್ಲೇ ಕಡಿಮೆ ಖರ್ಚಿನಲ್ಲಿ ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ.

ಜೇನು ಕೃಷಿ ಹೇಗೆ?
15 ವರ್ಷದ ಹಿಂದೆ ಸಾಗರದ ಜೇನು ಸಾಕಣೆ ಇಲಾಖೆಯಿಂದ 5 ದಿನಗಳ ತರಬೇತಿ ಪಡೆದು ಈ ಕಸುಬು ಆರಂಭಿಸಿದರು. ಆರಂಭದಲ್ಲಿ ರು. 500 ಕೊಟ್ಟು ಒಂದು ಜೇನುಪೆಟ್ಟಿಗೆ ಖರೀದಿಸಿ ಜೇನು ಸಾಕಲಾರಂಭಿಸಿದರು.

ಮೊದಲ ವರ್ಷವೇ 4 ಕೆಜಿ ಜೇನು!
ಮನೆಯ ಮುಂಭಾಗದ ಮಾವಿನ ಮರದ ಬುಡದ ಪೊಟರೆಯಲ್ಲಿರುವ ತುಡುವೆ ಜೇನನ್ನು ಹಿಡಿದು ಪಂಚೆಯಲ್ಲಿ ತುಂಬಿ ತಂದು ಪೆಟ್ಟಿಗೆಯಲ್ಲಿ ಹಾಕಿದರು. ಜೇನನ್ನು ಅಲ್ಲೇ ಉಳಿಯುವಂತೆ ಮಾಡಲು ಸಕ್ಕರೆ ನೀರನ್ನು ಇಟ್ಟರು. ಮೊದಲ ವರ್ಷ ಈ ಪೆಟ್ಟಿಗೆಯಿಂದ 4 ಕೆಜಿ ಜೇನು ತುಪ್ಪ ಸಂಗ್ರಹಿಸಿದರು.
ಜೇನು ತುಪ್ಪ ತೆಗೆಯುವ ಯಂತ್ರ ಬಳಸಿ ಜೇನಿನ ತೊಟ್ಟಿ ಹಾಳಾಗದಂತೆ ಎಚ್ಚರಿಕೆಯಿಂದ ಜೇನು ಸಾಕಿದರು. ಇದರಿಂದ ಉತ್ಸಾಹಿತರಾದ ಇವರು ಮರುವರ್ಷ ಒಟ್ಟು 3 ಜೇನು ಪೆಟ್ಟಿಗೆ ತಂದು ಸಾಕಣೆ ಮುಂದುವರಿಸಿದರು. ಹೀಗೆ ಪ್ರತಿವರ್ಷ ಒಂದೊಂದು ಪೆಟ್ಟಿಗೆಯಂತೆ ಈ ಕಸುಬು ಹೆಚ್ಚಿಸುತ್ತಾ ಒಟ್ಟು 12 ಜೇನು ಪೆಟ್ಟಿಗೆಯಲ್ಲಿ ಜೇನು ಸಾಕಣೆ ನಡೆಸಿ ಯಶಸ್ವಿ ಜೇನು ಕೃಷಿಕರಾದರು.
ಲಾಭ ಹೇಗೆ?
ಈ ವರ್ಷ ಇವರು ಒಟ್ಟು 10 ಜೇನು ಪೆಟ್ಟಿಗೆಯಲ್ಲಿ ಸಾಕಣೆ ಮಾಡಿದ್ದಾರೆ. ಫೆಬ್ರವರಿ 2ನೇ ವಾರದ ಸುಮಾರಿನಿಂದ ಜೇನು ಹುಳುಗಳು ತುಪ್ಪ ಮಾಡಲು ಆರಂಭಿಸುತ್ತವೆ. ಮೇ ಅಂತ್ಯದವರೆಗೂ ಜೇನು ತುಪ್ಪ ದೊರೆಯುತ್ತದೆ. ಸುತ್ತಮುತ್ತಲ ಪ್ರದೇಶದ ಗಿಡ- ಮರಗಳಲ್ಲಿನ ಹೂವಿನ ಪ್ರಮಾಣ ಆಧರಿಸಿ ಜೇನು ತುಪ್ಪದ ಇಳುವರಿ ಪ್ರಮಾಣ ನಿರ್ಧರಿತವಾಗುತ್ತದೆ. ಫೆಬ್ರವರಿ ಕೊನೆಯ 2ನೇ ವಾರದಿಂದ ವಾರಕ್ಕೊಮ್ಮೆ ತುಪ್ಪವನ್ನು ಯಂತ್ರದಿಂದ ತೆಗೆಯುತ್ತಾರೆ. ಪ್ರತಿ ಪೆಟ್ಟಿಗೆಯಿಂದ ವಾರಕ್ಕೆ ಸರಾಸರಿ 350 ಗ್ರಾಂನಂತೆ 10 ಪೆಟ್ಟಿಗೆಗಳಿಂದ 3.5 ಕೆಜಿ ಜೇನು ತುಪ್ಪ ದೊರೆಯುತ್ತದೆ.
4 ವಾರ ಈ ರೀತಿ ಸಂಗ್ರಹಿಸಿದ ಜೇನು ತುಪ್ಪ ಒಟ್ಟು 12 ಕೆಜಿ ಆಗುತ್ತದೆ. ಫೆಬ್ರವರಿ 2ನೇ ವಾರದಿಂದ ಮೇ ಆಂತ್ಯದವರೆಗೆ ಈ ವರ್ಷ ಒಟ್ಟು 40 ಕೆಜಿ ದೊರೆಯುತ್ತದೆ. ಪ್ರತಿವಾರ ಸಂಗ್ರಹಿಸಿದ ಜೇನು ತುಪ್ಪವನ್ನು ಪ್ಲಾಸ್ಟಿಕ್ ಕ್ಯಾನ್ ಮತ್ತು ಗಾಜಿನ ಬಾಟಲಿಗಳಲ್ಲಿ ಸಂಗ್ರಹಿಸುತ್ತಾರೆ. ಈ ವರ್ಷ ಜೇನು ತುಪ್ಪದ ಧಾರಣೆ ಕೆಜಿವೊಂದಕ್ಕೆ ರು. 300 ಇದೆ. ಈ ಜೇನು ಕಸುಬಿನಿಂದ 40 ಕೆಜಿಯಿಂದ ರು. 12,000 ಆದಾಯ ದೊರೆಯುತ್ತದೆ. ಇವರ ಬಳಿ ಪರಿಶುದ್ಧ ಜೇನು ತುಪ್ಪ ದೊರೆಯುತ್ತದೆ ಎಂಬ ವಿಚಾರ ಸುತ್ತಮುತ್ತಲಿನವರಿಗೆ ಪರಿಚಿತವಾದ ಕಾರಣ ದೂರದ ಊರಿನಲ್ಲಿರುವ ಸ್ನೇಹಿತರು, ಗ್ರಾಮಸ್ಥರು, ಬಂಧು- ಬಳಗದವರು ಇವರ ಮನೆಗೆ ಬಂದು ಜೇನು ತುಪ್ಪ ಖರೀದಿಸಿ ಒಯ್ಯುತ್ತಾರೆ. ಇದರಿಂದಾಗಿ ಇವರಿಗೆ ಜೇನುತುಪ್ಪ ಮಾರಾಟದ ಸಮಸ್ಯೆ ಇಲ್ಲ. ಹೆಚ್ಚಿನ ಮಾಹಿತಿಗಾಗಿ ದೂ. 08185-252740.

=  ಎನ್.ಡಿ. ಹೆಗಡೆ ಆನಂದಪುರಂ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.