ಕೃಷಿ-ಪರಿಸರ

ಸೈಟ್ ಗಾರ್ಡನ್

ಸೈಟ್ ಗಾರ್ಡನ್
Published On :

ಗರಗಳಲ್ಲಿ ಹೆಚ್ಚುತ್ತಿರುವ ಜನಸಂದಣಿಗೆ ಹೆದರಿ ದೂರದೂರದ ಏರಿಯಾಗಳಲ್ಲಿ ಮನೆ ಮಾಡಿಕೊಂಡಿರುವವರಿಗೆ ಕಾಲ ದೂಡಲು ಹವ್ಯಾಸಗಳೇ ಸ್ನೇಹಿ. ಸಿಕ್ಕ ಸೈಟ್ ಎಲ್ಲಿಯಾದರೇನು ಎಂದು ನಗರದ ಹೊರಗೂ ಅನಿವಾರ್ಯವಾಗಿ ಮನೆ ಮಾಡಿಕೊಂಡಿರುವವರಿಗೂ ನಗರದೊಳಗೆ ಹೋಗಿಬರುವುದೇ ಚಿಂತೆ.
ಹೀಗೆ ಹೊತ್ತು ಕಳೆಯಲು ಬಯಸಿದ ಕೆಲವು ಗೃಹಿಣಿಯರು ಮನೆ ಪಕ್ಕದ ಖಾಲಿ ಸೈಟ್‌ನಲ್ಲಿ ಕೆಸರು ಗುಂಡಿ ಮುಚ್ಚಿಸಿ ಸುಂದರ ಗಾರ್ಡನ್ ನಿರ್ಮಿಸಿಕೊಳ್ಳಲು ಮುಂದಾದರು. ಮನೆಯ ಸುತ್ತಲ ವಾತಾವರಣವೂ ಉತ್ತಮವಾಯಿತು, ಒಳ್ಳೆಯ ಆರೋಗ್ಯಕ್ಕೆ ದೈಹಿಕ ವ್ಯಾಯಾಮ ಜತೆಗೆ ವಾತಾಯನ ವ್ಯವಸ್ಥೆಯೂ ಸುಧಾರಿಸಿ, ಬಿಸಿಲಿನ ಬೇಗೆಯೂ ನೀಗಿದ ಅನುಭವ.
ರಾಜ್ಯ ಪೊಲೀಸ್ ಇಲಾಖೆಯ ಎಎಸ್‌ಐ ಹುದ್ದೆಯಿಂದ ನಿವೃತ್ತಿಯಾದ ನಂತರ ಧರ್ಮರಾಜ್ ದಂಪತಿ ಚಿಕ್ಕಮಗಳೂರಿನ ನಗರದಿಂದ ದೂರವಿರುವ ಸ್ಥಳದಲ್ಲಿ ಮನೆ ಕಟ್ಟಿಕೊಂಡರು. ಪ್ರತಿಯೊಂದು ವಸ್ತು ಬೇಕಾದರೂ ನಾಲ್ಕಾರು ಕಿ.ಮೀ. ದೂರದ ಸಿಟಿಗೇ ಹೋಗಿ ತರಬೇಕಾಗಿತ್ತು. ಏಕೆಂದರೆ ಬೈಪಾಸ್ ರಸ್ತೆಯಿಂದ ಕ್ರಮಿಸಲು ನಡುವಿನ ರಸ್ತೆಯ ಕಾಮಗಾರಿ ಸಮಸ್ಯೆಗಳು ಅಡ್ಡವಾಗಿ ತ್ರಾಸವಾಗುತ್ತಿತ್ತು.
ಸಮಸ್ಯೆಗೆ ಇತಿಶ್ರೀ
ಸರಿ, ಹೊಸ ಮನೆಗೆ ಬಂದೊಡನೆ ಪತ್ನಿ ಜಾನಕಿ ಧರ್ಮರಾಜ್ ತಮ್ಮ ಸಮಸ್ಯೆಗಳಿಗೆ ಇತಿಶ್ರೀ ಹಾಡಲು ಯೋಚಿಸಿ ಮನೆಯ ಮುಂದಲ ಖಾಲಿ ಜಾಗದಲ್ಲಿ ಬೇಕಾದ ತರಕಾರಿ, ಹೂವು ಗಿಡ, ಸೊಪ್ಪು ಸೆದೆ ಬೆಳೆಸಿಕೊಂಡರು. ಸತತ ಆರು ತಿಂಗಳ ಶ್ರಮದ ನಂತರ ಅವರ ಗಾರ್ಡನ್ ಈಗ ಪುಟ್ಟ ತರಕಾರಿ ತೋಟದಂತೆ ಕಂಗೊಳಿಸುತ್ತಿದೆ. ಅದರೊಂದಿಗೆ ನೀರಿಗೆ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಮನೆ ಮುಂದೆ ಲಭ್ಯ
ಮೊದಲಿನಂತೆ ಸಿಟಿಗೆ ಹೋಗುವ ಗೋಜಿಲ್ಲದಂತೆ ಕೊತ್ತಂಬರಿ, ಕರಿಬೇವು, ದೇವರ ಪೂಜೆಗೆ ಹೂವು ಮನೆಯ ಮುಂದೆ ಲಭ್ಯ. ಪಕೋಡಾ ಮಾಡಲು ವೈವಿಧ್ಯ ತರಕಾರಿ, ಬಾಯಿರುಚಿಗೆ ಹೊಟೇಲ್ ಕಡೆ ನೋಡದ ಹಾಗೆ ಬೇಕಾದ್ದನ್ನು ಮಾಡಿಕೊಳ್ಳಲು ಶ್ರೀಮತಿಯವರಿಗೆ ಪತಿಯ ಸಹಕಾರ ಸದಾ ಇದೆಯಂತೆ. ಜತೆಗೆ ಸಮಯದ ಸದುಪಯೋಗವಾಗುತ್ತಿದೆ. ಕೈತೋಟದಲ್ಲಿ ನೀರೊಡಿಸುವುದರೊಂದಿಗೆ ದಿನ ಆರಂಭಿಸುವ ದಂಪತಿ ತಾವು ಬೆಳೆದಿದ್ದನ್ನು ಹತ್ತಾರು ಜನರಿಗೆ ಕೊಟ್ಟು ಖುಷಿಪಟ್ಟಿದ್ದಾರಂತೆ. ಮುಂದೆ ಹಣ್ಣಿನ ತೋಟ ಮಾಡುವ ಯೋಚನೆ ಅವರದ್ದು.
ಒಂಟಿತನ ಕಾಡಲ್ಲ
ಬೆಂಗಳೂರಿನ ನಾಗರಭಾವಿಯ ಬಳಿಯಲ್ಲಿ ಮನೆ ಕಟ್ಟಿಕೊಂಡ ಗೋಪಾಲಯ್ಯ ದಂಪತಿಗೂ ವೃದ್ಧಾಪ್ಯದಿಂದಾಗಿ ಹೊರಗೆ ಹೋಗಿ ಬರುವುದೇ ಸಂಕಟ. ಜತೆಗೆ ಸಮಯ ಹೇಗೆ ಕಳೆಯುವುದೆಂಬ ಆತಂಕ. ಮಕ್ಕಳೆಲ್ಲ ವಿದೇಶಗಳಿಗೆ ಹೋಗಿ ನೆಲೆಸಿದ್ದರಿಂದ ಮನೆಯಲ್ಲಿ ಒಂಟಿ ಭಾವ ಕಾಡುತ್ತಿತ್ತು. ಆಗ ಹೊಳೆದದ್ದೇ ಗಾರ್ಡನಿಂಗ್. ಪಕ್ಕದ ಸೈಟ್ ಮಾಲೀಕರೊಂದಿಗೆ ಮಾತನಾಡಿ ಅವರ ಒಪ್ಪಿಗೆ ಪಡೆದು ಅದನ್ನು ಸ್ವಚ್ಛಗೊಳಿಸಿದರು. ತಮಗೆ ಬೇಕಾದ ಗಾರ್ಡನಿಂಗ್ ಗಿಡ ನೆಟ್ಟು ಬೆಳೆಸಲಾರಂಭಿಸಿದರು. ಮೊಮ್ಮಕ್ಕಳು ಮನೆಗೆ ವರ್ಷಕ್ಕೆ ಒಮ್ಮೆ ಬರುವುದು ಕಷ್ಟ. ಆದರೆ, ಗಾರ್ಡನ್ನಿನ ಹೂ- ಗಿಡಗಳು ಅವರಿಗೆ ದಿನವೂ ಮಕ್ಕಳೊಂದಿಗೆ ಇರುವ ಕೋಮಲ ಅನುಭೂತಿ ನೀಡುತ್ತಿದೆ ಎನ್ನುತ್ತಾರೆ ದಂಪತಿ.
ರಿಹಾನಾ ದಂಪತಿ ಯಶಸ್ಸು
ಸರ್ಕಾರಿ ನಲ್ಲಿಯ ನೀರು ಸಂಗ್ರಹಿಸಿ ಗಾರ್ಡನ್‌ಗೆ ಬಳಸಬಹುದೆನ್ನುತ್ತಾರೆ ಇವರು. ಹೊಸ ಮನೆ ಪಕ್ಕದಲ್ಲಿದ್ದ ತಿಪ್ಪೆ ವಾಸನೆಯಿಂದ ಬೇಸತ್ತ ಶಿಕ್ಷಕ ದಂಪತಿ ಯಾಕಾದರೂ ಕಟ್ಟಿದ ಮನೆ ಖರೀದಿಸಿದೆವೋ ಎಂದು ಹಪಹಪಿಸುತ್ತಿದ್ದರು. ಸೈಟ್ ಮಾಲೀಕರಿಗೆ ಮನೆ ಕಟ್ಟಿಕೊಳ್ಳಿ, ಇಲ್ಲವೇ ಗಲೀಜು ತೆಗೆಸಿ ಎಂಬ ತಾಕೀತು ಮಾಡಿದಾಗಲೂ ನಕಾರಾತ್ಮಕ ಪ್ರತಿಕ್ರಿಯೆ ಬಂತು. ಕೊನೆಗೆ ವಿಶ್ವಾಸದಿಂದ ಶ್ರಮ ವಹಿಸಿ ಸೈಟ್ ಮಾಲೀಕರನ್ನು ವಿನಂತಿ ಮಾಡಿಕೊಂಡು ಹಣ್ಣು, ಹೂವು ಗಿಡಗಳೊಂದಿಗೆ ನಾಲ್ಕಾರು ತರಕಾರಿ ಗಿಡಗಳಿರುವ ಗಾರ್ಡನ್ ನಿರ್ಮಿಸಲು ಯಶಸ್ವಿಯಾದರು ರಿಹಾನಾ ದಂಪತಿ.
ಬದಲಾದ ಪರಿಸರ
ಶಾಲೆಯಿಂದ ಮರಳಿದೊಡನೆ ಮಕ್ಕಳೊಂದಿಗೆ ಗಾರ್ಡನ್ ಮಾಡಲು ಶುರು ಮಾಡಿದರು. ಈಗ ಮನೆಯ ಪಕ್ಕ ಕಣ್ಣರಳಿಸಿ ನೋಡುವಂತೆ ಬದಲಾಗಿದೆ ಸುತ್ತಲ ಪರಿಸರ. ಮನೆಯಲ್ಲಿ ಬಳಸುವ ನೀರು ಉಳಿಸಿ ಗಾರ್ಡನ್‌ಗೆ ಎರಡು ದಿನಕ್ಕೊಮ್ಮೆ ಪೂರೈಕೆ ಮಾಡುತ್ತೇವೆ ಎನ್ನುತ್ತಾರೆ ಶಿಕ್ಷಕಿ ರಿಹಾನಾ.

=  ನಳಿನ ಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.