ನಾಲ್ಕು ತಿಂಗಳು ಬಾವಿಗೆ ರಜೆ

ಮೊನ್ನೆ ಮೊನ್ನೆ ಚುನಾವಣೆ ನಡೆಯಿತಲ್ಲಾ... ಬಾನುಲಿಯಲ್ಲಿ ಪ್ರಚಾರ ಭಾಷಣ. ರಾಷ್ಟ್ರೀಯ ಪಕ್ಷವೊಂದರ ಪ್ರತಿನಿಧಿ ಪ್ರಣಾಳಿಕೆ ವಿಶ್ಲೇಷಿಸುತ್ತಾ, ನಾಡಿನ ಜನಕೋಟಿಗೆ ವರುಷಪೂರ್ತಿ ಕುಡಿವ ನೀರು ದೊರಕುವ ವ್ಯವಸ್ಥೆ ಮಾಡ್ತೇವೆ. ನದಿಗಳಲ್ಲಿ ನೀರಿನ ಕೊರತೆಯಾದರೆ, ಅಂತರ್ಜಲದಿಂದ ತೆಗೆದು ನೀರಿನ ತೊಂದರೆಯಾಗದಂತೆ ಮಾಡುತ್ತೇವೆ, ಮಾತಿನ ಮಧ್ಯ ಉರುಳಿದ ಆಣಿಮುತ್ತುಗಳು. ಈ ಮಾತಿಗೆ ನಗಬೇಕೋ, ಅಳಬೇಕೋ? ಅಂತರ್ಜಲ ಶೇಖರಿಸಿಟ್ಟವರು ಯಾರು? ತನ್ನ ಪಕ್ಷವೋ, ತಾನೋ, ತನ್ನ ಕುಟುಂಬಿಕರೋ..? ಖಾರವಾಗಿ ಪ್ರಶ್ನಿಸಬೇಕಾದ ಸಮಯ. ಪ್ರಣಾಳಿಕೆ ಎಂದರೆ ಮತದಾರನ ಮೂಗಿಗೆ ತುಪ್ಪ ಸವರುವುದಲ್ಲ. ಅವಾಸ್ತವ ವಿಚಾರ ಬಿಂಬಿಸುವುದಲ್ಲ. ನೆಲ- ಜಲದ ರಕ್ಷಣೆ ನಾಡಿನ ನಾಯಕರಿಗೆ ಕಷ್ಟವಲ್ಲ. ಇಚ್ಛಾಶಕ್ತಿ ಬೇಕಷ್ಟೇ. ಒಂದು ಸಹಿಯಿಂದ ದೊಡ್ಡ ಹೆಜ್ಜೆ ಊರಬಹುದಾದಷ್ಟು ಶಕ್ತಿಯಿದೆ. ಆದರೆ, ಮಾಡಲಾರರು. ಯಾಕೆ ಹೇಳಿ- ನೆಲ ಅವರಿಗೆ ಬೇಕು. ಭೂ ಒಡಲಿಗೆ ಕಣ್ಣಿಕ್ಕಿದರೆ ಜಲ ಸಿಗುತ್ತೆ ಎಂಬ ಭ್ರಮೆ.
ಭ್ರಮೆ ಭ್ರಮನಿರಸನವಾಗುವ ದಿವಸಗಳು ಅಟ್ಟಿಸಿಕೊಂಡು ಬರುತ್ತಿವೆ. ಗಲಾಟೆಗಳು ಏನೇ ಇರಲಿ, ಕಾವೇರಿ ನದಿಯಲ್ಲಿ ನೀರು ಇಳಿಕೆಯಾದಾಗ ಬೆಂಗಳೂರಿನಲ್ಲಿ ನಡುಕ ಆರಂಭವಾಗುತ್ತದೆ. ಬಿಂದಿಗೆ ನೀರಿಗೆ ಒದ್ದಾಟ ಶುರು. ಸಂಬಂಧಿಕರ, ಸ್ನೇಹಿತರ ಬಾವಿಗಳಿಂದ ಫರ್ಲಾಂಗುಗಟ್ಟಲೆ ನೀರೆತ್ತಿ ತರುವ ದುಃಸ್ಥಿತಿ. ಪುರಸಭೆ ಆಗೊಮ್ಮೆ- ಈಗೊಮ್ಮೆ ತಂದಿಕ್ಕುವ ನೀರಿನ ಗುಣಮಟ್ಟ ಹೇಳುವಂತಿಲ್ಲ. ಉಳ್ಳವರಾದರೆ ಬಾಟಲ್ ನೀರು ಆಶ್ರಯಿಸಬಹುದು. ಅದೂ ಕುಡಿಯಲು ಮಾತ್ರ.
'ಸಾರ್, ಬಾವಿ ತೋಡಿದರೆ ನೀರು ಸಿಗೋದಿಲ್ಲ. ಸಿಟಿಯೊಳಗೆ ಬೋರ್ ಕೊರೆಯುವಂತಿಲ್ಲ. ಮುನ್ಸಿಪಾಲಿಟಿ ನೀಡಿದ ನೀರಲ್ಲಿ ಬದುಕು ಸಾಗಿಸ್ಬೇಕು. ಬದುಕು ಬರ್ಬರವಾಗುತ್ತಿದೆ. ಬೇಸಿಗೆಯಲ್ಲಿ ದಯವಿಟ್ಟು ನಮ್ಮನೆಗೆ ಬರ್ಬೇಡಿ. ಮಳೆಗಾಲದಲ್ಲಿ ಬನ್ನಿ' ಪತ್ರಕರ್ತ ಸ್ನೇಹಿತರೊಬ್ಬರು ಪ್ರೀತಿಯಿಂದ ಹೇಳಿದ ಮಾತು. ಈ ಸ್ಥಿತಿಗೆ ರಾಜಧಾನಿ ಯಾಕೆ? ಕನ್ನಾಡಿನಾದ್ಯಂತ ಇಂಥದ್ದೇ ಸ್ಥಿತಿಯ ಊರು ಎಷ್ಟಿಲ್ಲ?
ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಅಮ್ಮನಘಟ್ಟದ ಶಂಕರಪ್ಪ ಅವರಲ್ಲಿಗೆ ಕಳೆದ ವರುಷ ಭೇಟಿ ನೀಡಿದ್ದೆ. ಆ ಊರಲ್ಲಿ ಸಾಮಾನ್ಯ ಮಳೆ ಬರುತ್ತದೆ. ಮನೆ ನಿರ್ಮಿಸುವಾಗಲೇ ಚಾವಣಿ ನೀರಿನ ಸಂಗ್ರಹಕ್ಕಾಗಿ ನೆಲದೊಳಗೆ ದೊಡ್ಡ ಟ್ಯಾಂಕ್ ರಚಿಸಿದ್ದರು. ಮಳೆಗಾಲದಲ್ಲಿ ಸೂರಿನಲ್ಲಿ ಬಿದ್ದ ಮಳೆನೀರನ್ನು ಸೋಸಿ, ಟ್ಯಾಂಕಿಗೆ ಬಿಡುತ್ತಾರೆ. ಒಮ್ಮೆ ಟ್ಯಾಂಕ್ ತುಂಬಿದರೆ ಕುಡಿಯಲು, ಅಡುಗೆ ಮಾಡಲು 4 ತಿಂಗಳಿಗೆ ಸಲೀಸು.
'ಸಾರ್, 4 ತಿಂಗಳು ಬಾವಿಗೆ ವಿಶ್ರಾಂತಿ ಕೊಟ್ಟ ಹಾಗಾಯ್ತಲ್ಲ' ಎನ್ನುತ್ತಾ, ದೊಡ್ಡ ಲೋಟದಲ್ಲಿ ಸಂಗ್ರಹಿಸಿಟ್ಟ ಮಳೆನೀರನ್ನು ತಂದಿಟ್ಟರು. ತಂಪಾದ, ಆಗಷ್ಟೇ ಬಾವಿಯಿಂದ ಸೇದಿ ತಂದ ನೀರಿನಂತಿತ್ತು. ಅಂಗಡಿಗಳಲ್ಲಿ ಸಿಗುವ ಬಾಟಲಿ ನೀರಿಗಿಂತಲೂ ಗುಣಮಟ್ಟದಲ್ಲಿ ದುಪ್ಪಟ್ಟು ತುಮಕೂರಿನ ಬೈಫ್ ಸಂಸ್ಥೆಯು ದೊಡ್ಡ ಟ್ಯಾಂಕ್ ಮೂಲಕ ಮಳೆ ನೀರನ್ನು ಸಂಗ್ರಹಿಸುತ್ತಿದೆ. ಚಿಕ್ಕ- ಚಿಕ್ಕ ರಚನೆಗಳ ಮೂಲಕ ಸ್ವಬಳಕೆಗಾಗಿ ನೀರಿನರಿವಿನ ಮಂದಿ ಅನುಕರಣೀಯವಾದ ಕೆಲಸ ಮಾಡುತ್ತಿದ್ದಾರೆ. ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಸರಳ ವಿಧಾನ ಬ್ರಹ್ಮವಿದ್ಯೆಯಲ್ಲ. ಎಲ್ಲರೂ ಸುಲಭವಾಗಿ ಮಾಡಿಕೊಳ್ಳಬಹುದು. ಮನಸ್ಸು ಮತ್ತು ನೀರೆನೆಚ್ಚರ ಬೇಕಷ್ಟೇ.
ಮಳೆ ನೀರನ್ನು ಸಂಗ್ರಹಿಸಿ, ಬಳಸುವ ಅರಿವು ಮೂಡಿಸುವ ಕೆಲಸಗಳನ್ನು ವೈಯಕ್ತಿಕವಾಗಿ ಮತ್ತು ಅಲ್ಲೋ- ಇಲ್ಲೋ ಸರ್ಕಾರೇತರ ಸಂಸ್ಥೆಗಳು ಮಾಡುತ್ತಿವೆ. ಆದರೆ, ನಮ್ಮ ಆಡಳಿತ ವ್ಯವಸ್ಥೆ ಈ ದೆಸೆಯಲ್ಲಿ ಚಿಕ್ಕ ನೋಟ ಬೀರಿದರೂ ದೊಡ್ಡ ಪರಿಣಾಮವಾಗುತ್ತದೆ. ನಗರದಲ್ಲಿ ಹೊಸದಾಗಿ ಮನೆ ಕಟ್ಟುವವರು ಮಳೆಕೊಯ್ಲಿನ ವ್ಯವಸ್ಥೆ ಮಾಡಿಕೊಳ್ಳಬೇಕೆಂಬ ಕಾನೂನಿದ್ದರೂ ಪಾಲನೆಯಾಗುವ ಪ್ರಮಾಣ ಎಷ್ಟು?
ಈ ಕುರಿತು ಯೋಚಿಸುವ ಪ್ರಜ್ಞಾವಂತ, ವಿದ್ಯಾವಂತ ಜನನಾಯಕರ ಕೊರತೆ ಎಂದರೆ ಸೌಜನ್ಯ ಮೀರಿದ ಮಾತಾದಿತೇನೋ! ಮಾತೆತ್ತಿದರೆ ಸಬ್ಸಿಡಿ, ಪ್ರೋತ್ಸಾಹಧನ ಎನ್ನುವ ಉದಾರಿಗಳು ಮಳೆಕೊಯ್ಲಿಗೂ ಒಂದಷ್ಟು ವ್ಯವಸ್ಥೆ ಮಾಡಿಕೊಡಲಿ. ಆಗ ಮಾತ್ರ ಭೂ ಒಡಲಿಂದ ನೀರು ಕೊಡ್ತೇವೆ ಎನ್ನಲು ಅರ್ಹತೆ ಬರುತ್ತದೆ. ಮಳೆಗಾಲದ 4 ತಿಂಗಳು ಬಾವಿಗೆ ರಜೆ ಕೊಟ್ಟರೂ ಸಾಕು, ಅದುವೇ ದೊಡ್ಡ ಕೆಲಸ.
ಹೊಸ ಮನೆ ಕಟ್ಟುವಾಗ, ಸಭಾಭವನ ರಚಿಸುವಾಗ ಮಳೆ ನೀರು ಸಂಗ್ರಹದ ರಚನೆ ಮಾಡಿಕೊಳ್ಳಬೇಕು. ಇದಕ್ಕಾಗಿ ಕಟ್ಟುನಿಟ್ಟಿನ ಕಾನೂನುಗಳಿದ್ದರೂ, ಅನುಷ್ಠಾನಗೊಳಿಸುವ ಅಧಿಕಾರಿಗಳು ಬೇಕಾಗಿದ್ದಾರೆ.
- ನಾ. ಕಾರಂತ ಪೆರಾಜೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


