ಕುನ್ನೂರಲ್ಲಿ ಹೊನ್ನು
ಶಿಗ್ಗಾಂವಿ ತಾಲೂಕಿನ ಕುನ್ನೂರು ಬಳಿ ಸಾವಯುವ ಕೃಷಿಯಲ್ಲಿ ಸಾಧನೆ ಮಾಡಿರುವ ರೈತ ಜಯದೇವ ಅಗಡಿ, 25 ಎಕರೆಯಲ್ಲಿ ವಿವಿಧ...

ಶಿಗ್ಗಾಂವಿ ತಾಲೂಕಿನ ಕುನ್ನೂರು ಬಳಿ ಸಾವಯುವ ಕೃಷಿಯಲ್ಲಿ ಸಾಧನೆ ಮಾಡಿರುವ ರೈತ ಜಯದೇವ ಅಗಡಿ, 25 ಎಕರೆಯಲ್ಲಿ ವಿವಿಧ ಜಾತಿಯ 2500ಕ್ಕೂ ಹೆಚ್ಚು ಗಿಡ ಬೆಳೆಸಿ, ಕೃಷಿಯಿಂದ ವಿಮುಖರಾಗುತ್ತಿರುವ ರೈತ ಸಮುದಾಯಕ್ಕೆ ಹೊಸ ಆಶಾಕಿರಣ ಮೂಡಿಸಿದ್ದಾರೆ.
ಮೂಲತಃ ಹಾವೇರಿ ತಾಲೂಕಿನ ಅಗಡಿ ಗ್ರಾಮದ ಜಯದೇವ ನೆಲೆ ನಿಂತದ್ದು ಹುಬ್ಬಳ್ಳಿಯಲ್ಲಿ. ಕಲಿತದ್ದು ಎಂಕಾಂ, ಎಂಬಿಎ. ಆದರೆ, ಚಿಕ್ಕಂದಿನಿಂದಲೇ ಕೃಷಿ ಬಗ್ಗೆ ಅವರಿಗಿದ್ದ ಒಲವು ಅವರನ್ನು ಕುನ್ನೂರು ಗ್ರಾಮದತ್ತ ಸೆಳೆಯಿತು. ಗ್ರಾಮದ ಪಕ್ಕದ 25 ಎಕರೆ ಜವುಳು ಭೂಮಿಯನ್ನು 2002ರಲ್ಲಿ ಖರೀದಿಸಿದ ಜಯದೇವ ಅಗಡಿ, ಈಗ ಅದನ್ನು ನಂದನವನವನ್ನಾಗಿಸಿದ್ದಾರೆ.
ಜಯದೇವ ಗಡಿ ಅವರ ಕುಟುಂಬದ ಐವರು ಸಹೋದರರಲ್ಲಿ ಯಾರೊಬ್ಬರೂ ಮೂಲತಃ ಕೃಷಿಕರಲ್ಲ. ಅಗಡಿಯಲ್ಲಿರುವ ಇವರ 70 ಎಕರೆ ಜಮೀನನ್ನು ಸಂಬಂಧಿಯೊಬ್ಬರು ನೋಡಿಕೊಳ್ಳುತ್ತಾರೆ. ಹುಬ್ಬಳ್ಳಿಯಲ್ಲಿ ಆಟೋಮೊಬೈಲ್ ಡೀಲರ್ ಆಗಿರುವ ಜಯದೇವ ಅಗಡಿ ಅವರನ್ನು ಕೃಷಿ ಕೈ ಬೀಸಿ ಕರೆಯಿತು. ಕುನ್ನೂರಿನ ಪಕ್ಕ 25 ಎಕರೆ ಜಮೀನು ಖರೀದಿಸಿದ ಮೇಲೆ ಅವರು ಹಿಂತಿರುಗಿ ನೋಡಲಿಲ್ಲ. 'ಇಷ್ಟು ದುಡ್ಡು ಖರ್ಚುಮಾಡಿ ಇಲ್ಲೇನು ಬೆಳೆಯುತ್ತೀರಿ? ಇದು ಅತ್ತ ಪೂರ್ಣವಾಗಿ ಜವುಳು ಭೂಮಿಯೂ ಅಲ್ಲ, ಇತ್ತ ಒಣ ನೆಲವೂ ಅಲ್ಲ' ಎಂದು ಸ್ಥಳೀಯರು ಹೇಳಿದರೂ ಎದೆಗುಂದಲಿಲ್ಲ. ಇದೇ ಮಾತನ್ನು ಸವಾಲಾಗಿ ಸ್ವೀಕರಿಸಿ ಕೃಷಿಗೆ ಮುಂದಾದರು.
ಮೊದಲಿಗೆ ಮಾಡಿದ ಕೆಲಸವೆಂದರೆ, ಮೇಲ್ಭಾಗದ ಕೆರೆಯನ್ನು ಆಳವಾಗಿ ತೋಡಿಸಿ, ನೀರು ಹರಿದು ಹೋಗುವುದನ್ನು ತಡೆದಿದ್ದು. ಕೆಳಭಾಗದ ಜಮೀನಿನಲ್ಲೂ ನೀರು ಇಂಗುವಂತೆ ಮಾಡಿದ್ದು. 25 ಎಕರೆಯಲ್ಲೂ ಸಾವಯವ ಕೃಷಿ ಅಳವಡಿಸಿಕೊಂಡಿರುವ ಅಗಡಿ 2500ಕ್ಕೂ ಅಧಿಕ ಗಿಡ ಬೆಳೆಸಿದ್ದಾರೆ. ತೋಟಗಾರಿಕೆ ಅರಣ್ಯ, ಆಯುರ್ವೇದ ಹಾಗೂ ಸಾಂಬಾರ ಗಿಡ ಬೆಳೆಸಿದ್ದಾರೆ. 11 ವರ್ಷಗಳಿಂದ ಇಲ್ಲಿ ಬೆಳೆಸಿದ ಯಾವ ಗಿಡಕ್ಕೂ ರಸಗೊಬ್ಬರ ಹಾಕಿಲ್ಲ, ರಾಸಾಯನಿಕ ಔಷಧಿ ಸಿಂಪಡಿಸಿಲ್ಲ ಎಂದು ಜಯದೇವ ಅಗಡಿ ಹೆಮ್ಮೆಯಿಂದ ಹೇಳುತ್ತಾರೆ.
ವಿಶೇಷ ಅಥವಾ ಅಪೂರ್ವ ಗಿಡ ಕಂಡಾಗ ಅದನ್ನು ತಮ್ಮ ತೋಟದಲ್ಲಿ ತಂದು ನೆಟ್ಟಾಗಲೇ ಜಯದೇವರಿಗೆ ಸಮಾಧಾನ. ಗಿಡ ಬೆಳೆಸುವುದು ಮಾತ್ರವಲ್ಲ, ಅವುಗಳಿಂದ ವನಸ್ಪತಿ ತಯಾರಿಸುವುದಲ್ಲೂ ಇವರು ಸಿದ್ಧಹಸ್ತರು. ಗಿಡ, ಬೇರು. ಗಡ್ಡೆ ಇತ್ಯಾದಿಗಳನ್ನು ಬಳಸಿ ಔಷಧ ತಯಾರಿಸಿ, ಹಲವು ಕಾಯಿಲೆಗಳಿಗೆ ನೀಡುತ್ತಿದ್ದಾರೆ. ನಿತ್ಯ ಹತ್ತಾರು ರೈತರು ಇವರ ತೋಟಕ್ಕೆ ಭೇಟಿ ನೀಡಿ, ಇಲ್ಲಿನ ಪ್ರಯೋಗಗಳನ್ನು ತಮ್ಮ ಹೊಲಗಳಲ್ಲೂ ಅಳವಡಿಸುತ್ತಿರುವುದು ಜಯದೇವರ ಹೆಗ್ಗಳಿಕೆ.
ಕೃಷಿ ಕೇಂದ್ರದ ಕನಸು
ತಮ್ಮ ತೋಟದಲ್ಲಿ 50 ಜನರಿಗೆ ಅವರು ಕೆಲಸ ಕೊಟ್ಟಿದ್ದಾರೆ. ರೈತರ ಬಗೆಗೆ ಕಾಳಜಿ ಇರುವ ಕಾರಣ ಅಗಡಿ ಕೃಷಿ ಕೇಂದ್ರ ಸ್ಥಾಪಿಸುತ್ತಿದ್ದಾರೆ. ಇದರಲ್ಲಿ ಸಾವಯವ ಕೃಷಿ, ಸಾವಯವ ಕೀಟನಾಶಕ, ಸಾವಯವ ಸಸ್ಯ ಸಂರಕ್ಷಣೆ, ಜವುಳು ಭೂಮಿ ನಿರ್ವಹಣೆ, ಕೃಷಿ ತೋಟಗಾರಿಕೆ, ಅರಣ್ಯ ಉತ್ಪನ್ನಗಳ ಮೌಲ್ಯವರ್ಧನೆ ಕುರಿತು ರೈತರಿಗೆ ತಿಳಿವಳಿಕೆ ನೀಡುವ ಉದ್ದೇಶವಿದೆ. ಸದ್ಯದಲ್ಲೇ ಇದು ಕಾರ್ಯಾರಂಭ ಮಾಡಲಿದ್ದು, ಹೊಸ ತಂತ್ರಜ್ಞಾನಗಳ ಮಾಹಿತಿಯನ್ನು ಎಲ್ಲ ರೈತರೂ ಪಡೆದು, ಅಳವಡಿಸಿಕೊಂಡು ಯಶಸ್ವಿಯಾಗಲಿ ಎನ್ನುತ್ತಾರೆ ಅಗಡಿ.
-ಬಸವರಾಜ ಹಿರೇಮಠ ಶಿಗ್ಗಾಂವಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


