ಅಮೃತ ಮಹಾತ್ಮೆ
ಅಮೃತಬಳ್ಳಿಯು ಮನೆಯಂಗಳದಲ್ಲಿ ಸುಲಭವಾಗಿ ಬೆಳೆಯಬಹುದಾದ ಒಂದು ಔಷಧಿ ಸಸ್ಯ. ಇದುಬಹುವಾರ್ಷಿಕ ಸಸ್ಯ. ಮೆನಿಸ್ಪರ್ಮಿಯೆಸಿ ...

ಅಮೃತಬಳ್ಳಿಯು ಮನೆಯಂಗಳದಲ್ಲಿ ಸುಲಭವಾಗಿ ಬೆಳೆಯಬಹುದಾದ ಒಂದು ಔಷಧಿ ಸಸ್ಯ. ಇದುಬಹುವಾರ್ಷಿಕ ಸಸ್ಯ. ಮೆನಿಸ್ಪರ್ಮಿಯೆಸಿ ಕುಟುಂಬಕ್ಕೆ ಸೇರಿದೆ. ಸಸ್ಯನಾಮವು ಟನೋಸ್ಟೊರಿಯ ಕಾರ್ಡಿಪೋಲಿಯ. ಅಮೃತಬಳ್ಳಿ ಎಂಬ ಹೆಸರೇ ಸೂಚಿಸುವಂತೆ ಸಸ್ಯದ ಪ್ರತಿ ಭಾಗವು ಹಲವು ರೋಗಗಳಿಗೆ ರಾಮಬಾಣ. ಎಲೆ, ಹಣ್ಣು, ಕಾಂಡ ಮತ್ತು ಬೇರಿನ ತುಂಡುಗಳನ್ನು ಔಷಧಕ್ಕಾಗಿ ಬಳಸಬಹುದು. ಈ ಬಳ್ಳಿಯ ಔಷಧೀಯ ಗುಣಗಳಿಗೆ ಕಾರ್ಡಿಫಾಲ್, ಟಿನೋಸ್ಟೊರಿಡಿನ್, ಟಿನೋಸ್ಟೊರೈಡ್ ಎಂಬ ಸಂಯುಕ್ತ ವಸ್ತುಗಳು ಕಾರಣ.
ಹೇಗಿರುತ್ತೆ?
ಈ ಬಳ್ಳಿಯ ಕಾಂಡವು ಒರಟಾಗಿದ್ದು, ತಿಳಿಹಸಿರು ಬಣ್ಣ ಹೊಂದಿರುತ್ತದೆ. ಎಲೆಗಳು ಹೃದಯಾಕಾರದಲ್ಲಿದ್ದು, ಉದ್ದವಾದ ತೊಟ್ಟಿರುತ್ತದೆ. ಎಲೆಯ ತುದಿ ಚೂಪ. ಆಸರೆ ಸಿಕ್ಕರೆ ಧಾರಾಳವಾಗಿ ಕವಲೊಡೆದು ಬಹುಬೇಗ ಮೇಲಕ್ಕೆ ಏರಬಲ್ಲದು.
ಬೆಳೆಯುವ ಬಗೆ
ಅಮೃತಬಳ್ಳಿಯನ್ನು ಎಲ್ಲ ರೀತಿಯ ಮಣ್ಣು ಮತ್ತು ಹವಾಗುಣದಲ್ಲಿ ಬೆಳೆಯಬಹುದು. ಆದ್ರತೆಯಿಂದ ಕೂಡಿದ ಬೆಚ್ಚಗಿನ ಹವೆಯಿದ್ದರೆ ಇನ್ನೂ ಅನುಕೂಲ. ಬೀಜವನ್ನು ಬೆಳೆಸಿ ಸಸ್ಯಾಭಿವೃದ್ಧಿ ಮಾಡುವುದು ಕಷ್ಟಕರ. ಕಾಂಡದ ತುಂಡು ಬಳಸಿ ಅಭಿವೃದ್ಧಿ ಮಾಡುವುದು ಸುಲಭ. 2-3 ಗೆಣ್ಣು ಹೊಂದಿದ 6-7 ಇಂಚು ಕಾಂಡದ ತುಂಡು ಸಿದ್ಧಪಡಿಸಿದ ಮಣ್ಣಿನಲ್ಲಿ ಅಥವಾ ಕುಂಡಗಳಲ್ಲಿ ನೆಟ್ಟರೆ 8-10 ವಾರಗಳಲ್ಲಿ ಬೇರು ಬಿಟ್ಟ ಸದೃಢವಾಗಿ ಬೆಳೆಯುವುದು. ಬಳ್ಳಿಯ ಭಾಗಗಳು ಕಹಿಯಾಗಿರುವುದರಿಂದ ನೆಟ್ಟ 3- 4 ತಿಂಗಳ ಮಳೆಗಾಲಕ್ಕೆ ಮುನ್ನ ಅಥವಾ ನಂತರ ಎಲೆ ಮತ್ತು ಕಾಂಡದ ಭಾಗ ಕಿತ್ತು ಚೆನ್ನಾಗಿ ಒಣಗಿಸಿ ಪಾಲಿಥಿನ್ ಕವರ್‌ಗಳಲ್ಲಿ ಸಂಗ್ರಹಿಸಿಡಬಹುದು.
ರೋಗ ನಿವಾರಣೆ
ಸಾಮಾನ್ಯವಾಗಿ ಅಮೃತಬಳ್ಳಿಯನ್ನು ಕಾಮಾಲೆ, ಮಧುಮೇಹ ಚರ್ಮದ ತೊಂದರೆ, ಜ್ವರ ನಿವಾರಣೆಗೆ ಹಾಗೂ ರಕ್ತಹೀನತೆ ಹೋಗಲಾಡಿಸಲು ಬಳಸುತ್ತಾರೆ. ಅಮೃತಬಳ್ಳಿಯ ವಿವಿಧ ಭಾಗ ಬಳಸಿ ಮನೆಯಲ್ಲೇ ಮದ್ದನ್ನು ತಯಾರಿಸಬಹುದು. ರಕ್ತದೊತ್ತಡ ಕಡಿಮೆ ಮಾಡಲು ಬೆಳಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿ 1-2 ಎಲೆಗಳ ರಸ ತೆಗೆದು ಸಮ ಪ್ರಮಾಣದಲ್ಲಿ ಜೇನು ತುಪ್ಪ ಸೇರಿಸಿ ಸೇವಿಸಬಹುದು. 1- 2 ಹಸಿ ಎಲೆಗಳನ್ನು ಹಾಗೆಯೇ ಜಗಿದು ತಿನ್ನುವುದರಿಂದ ರಕ್ತದೊತ್ತಡ ಮತ್ತು ಮಧುಮೇಹ ತಡೆಗಟ್ಟಬಹುದು. ಅಮೃತಬಳ್ಳಿಯ ಕಾಂಡದ ತುಂಡುಗಳಿಂದ ಮಾಡಿದ ಕಷಾಯ ಮತ್ತು ಜೇನು ತುಪ್ಪದ ಮಿಶ್ರಣವು ಉತ್ತಮ ನೋವು ನಿವಾರಕ ಆರೋಗ್ಯವರ್ಧಕ ಮತ್ತು ರೋಗ ನಿರೋಧಕ ಟಾನಿಕ್‌ನಂತೆ ಕೆಲಸ ಮಾಡುವುದು. ಕಾಂಡದ ತುಂಡು ಮತ್ತು ಸುಗಂಧಿ ಬೇರಿನ ಕಷಾಯ ಯಕೃತ್ತಿನ ತೊಂದರೆಗೆ ಉಪಯೋಗ, ಚರ್ಮರೋಗ ನಿವಾರಣೆಗೆ ಸೂಕ್ತ.
ಕಾಂಡದ ತುಂಡು, ಸುಗಂಧಿ ಬೇರು, ಕಾಳುಮೆಣಸು ಕುದಿಸಿ ಜೇನುತುಪ್ಪ ಅಥವಾ ಬೆಲ್ಲದೊಂದಿಗೆ ಸೇವಿಸಿದರೆ ಜ್ವರ ಓಡಿಹೋಗುತ್ತದೆ. ತುಳಸಿ, ಅಮೃತಬಳ್ಳಿ ಕಷಾಯವು ಎಚ್1 ಎನ್1 ಜ್ವರಕ್ಕೂ ದಿವ್ಯೌಷದ. ಸಂಧಿವಾತ ರೋಗ ತಡೆಗಟ್ಟಲು ಹಾಗೂ ನಿವಾರಿಸಲು 2 ಇಂಚು ಕಾಂಡದ ತುಂಡನ್ನು (1-2 ಗ್ರಾಂ ಒಣ ಶುಂಠಿ ಪುಡಿಯೊಂದಿಗೆ ಕಷಾಯ ಮಾಡಿ ಕಲ್ಲುಸಕ್ಕರೆ ಅಥವಾ ಬೆಲ್ಲದೊಂದಿಗೆ ಸೇವಿಸಬೇಕು. ಕಾಂಡದ ತುಂಡನ್ನು ಜಜ್ಜಿ ರಾತ್ರಿಯಿಡೀ ನೆನೆಸಿಟ್ಟು ಬೆಳಗ್ಗೆ ಜೇನು ತುಪ್ಪದ ಮಿಶ್ರಣದೊಂದಿಗೆ ಸೇವಿಸಬಹುದು. (ಅತಿಯಾಗಿ ಸೇವಿಸುವುದರಿಂದ ವಾಂತಿ ಆಗಬಹುದು.)
ಪಿತ್ತ ನಿವಾರಕ
ಅಮೃತ ಸತ್ವವನ್ನು (ಅಮೃತ ಬಳ್ಳಿ ನೆನೆಸಿಟ್ಟು ಕಿವುಚಿ, ನೀರನ್ನು ಶೋಧಿಸಿ ಮಿಶ್ರಣ ತಿಳಿಯಾಗಲು ಬಿಟ್ಟಾಗ ತಳಭಾಗದಲ್ಲಿ ಹಿಟ್ಟಿನಂಥ ಪದಾರ್ಥ ದೊರಕುವುದು. ಇದನ್ನು ಬಿಸಿಲಲ್ಲಿ ಚೆನ್ನಾಗಿ ಒಣಗಿಸಿದಾಗ ಸಿಗುವ ಪುಡಿಯನ್ನು ಅಮೃತ ಸತ್ವ ಎನ್ನುತ್ತಾರೆ) ಜೇನುತುಪ್ಪ ಅಥವಾ ತುಪ್ಪದೊಡನೆ ಸೇರಿಸಿ ಮಕ್ಕಳು, ವಯಸ್ಸಾದ ಹಿರಿಯರಿಗೆ ಮತ್ತು ಗರ್ಭಿಣಿಯರಿಗೆ ಕೊಡಬಹುದು. ಇದರಿಂದಾಗಿ ಪಿತ್ತ ಕಡಿಮೆಯಾಗಿ ಬಲ ಹೆಚ್ಚುವುದು. ಅಮೃತಬಳ್ಳಿಯ ಹಣ್ಣನ್ನು ಕಿವುಚಿ ತಿರುಳನ್ನು ಚರ್ಮದ ತೊಂದರೆ ಮತ್ತು ಮಚ್ಚೆಗಳ ನಿವಾರಣೆಗೆ ಬಳಸಬಹುದು.
ಡಾ. ಸುನೀತಾ.ಸಿ, ಡಾ. ನಿರ್ಮಲ ಕೆ.ಎಸ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


