ಸುಗಂಧರಾಜ

ಮಲೆನಾಡು, ಅರೆಬಯಲು ಸೀಮೆಯ ಪ್ರದೇಶದಲ್ಲೂ ಇತ್ತೀಚೆಗೆ ಪುಷ್ಪ ಕೃಷಿ ಕಾಲಿಟ್ಟಿದೆ. ಪುಷ್ಪ ಕೃಷಿಯಿಂದ ಸಾಕಷ್ಟು ಆದಾಯ ಗಳಿಸಬಹುದು ಎಂಬುದನ್ನು ಹಲವು ರೈತರು ತೋರಿಸಿಕೊಟ್ಟಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಲವು ಪ್ರದೇಶದಲ್ಲಿ ಕಪ್ಪು ಮಣ್ಣಿನ ಫಲವತ್ತಾದ ಭೂಮಿ ಇದೆ. ಅಲ್ಪಸ್ವಲ್ಪ ನೀರಾವರಿ ಲಭ್ಯತೆಯಿದ್ದರೂ ಮೆಕ್ಕೆಜೋಳ, ಈರುಳ್ಳಿ, ಆಲೂಗಡ್ಡೆ, ಸೂರ್ಯಕಾಂತಿ ಇತ್ಯಾದಿ ಬೆಳೆಗಳನ್ನು ಹಲವು ವರ್ಷಗಳಿಂದ ಬೆಳೆಯುತ್ತಾರೆ. ಈಗ ಈ ಪ್ರದೇಶದಲ್ಲಿ ರೈತರು ಪುಷ್ಪ ಕೃಷಿಯತ್ತ ವಾಲುತ್ತಿದ್ದಾರೆ.
ಹೊನ್ನಾಳಿ ತಾಲೂಕಿನ ಸವಳಂಗ ಸಮೀಪದ ನುಗ್ಗೆಮಲ್ಲಾಪುರದ ರೈತ ಹಾಲೇಶ್ ಸುಗಂಧರಾಜ ಕೃಷಿಯಲ್ಲಿ ತೊಡಗಿ, ಯಶಸ್ಸು ಕಂಡಿದ್ದಾರೆ.
ಕೃಷಿ ವಿಧಾನ
ರಾಷ್ಟ್ರೀಯ ಹೆದ್ದಾರಿ 206ರ ಕುಂಸಿಯಿಂದ ಸವಳಂಗಕ್ಕೆ ಸಾಗುವ ರಸ್ತೆಯ ಸಮೀಪವೇ ಇವರ ಹೊಲವಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಸುಗಂಧರಾಜ ಕೃಷಿ ಆರಂಭ. ಮೊದಲು ಅರ್ಧ ಎಕರೆ ಜಮೀನನ್ನು ಟ್ರ್ಯಾಕ್ಟರ್‌ನಿಂದ ಹದಗೊಳಿಸಿದರು. ಬಳಿಕ 25 ಅಡಿ ಉದ್ದದ ಪಟ್ಟೆಸಾಲು ನಿರ್ಮಿಸಿದರು. ಸಾಲಿನಿಂದ ಸಾಲಿಗೆ ಎರಡೂವರೆ ಅಡಿ ಅಂತರ ಹಾಗೂ ಗಿಡದಿಂದ ಗಿಡಕ್ಕೆ ಅರ್ಧ ಅಡಿ ಅಂತರದಂತೆ ಸುಗಂಧರಾಜ ಗಿಡದ ಗಡ್ಡೆ ನಾಟಿ ಮಾಡಿದರು. ಭೂಮಿ ಉಳುಮೆ ಮಾಡುವಾಗಲೇ ಸಗಣಿ ಗೊಬ್ಬರ ನೀಡಿದ್ದರು.
3 ಕೆಜಿ ಹೂವು
ಒಂದು ಚೀಲಕ್ಕೆ 500 ರಂತೆ ಖರ್ಚು ಮಾಡಿ 12 ಚೀಲ ಗಡ್ಡೆ ಖರೀದಿಸಿ ಬಿತ್ತನೆ ಮಾಡಿದರು. ಬೀಜ ಮೊಳೆತು ಸಸಿಯಾಗಿ ಎಲೆ ಕಾಣಿಸಿ ತಿಂಗಳಾಗುತ್ತಿದ್ದಂತೆ ಕಾಂಪ್ಲೆಕ್ಸ್ ಗೊಬ್ಬರ ನೀಡಿದರು. ಕೊಳವೆ ಬಾವಿ ಮೂಲಕ ನೀರು ಹಾಯಿಸುವ ವ್ಯವಸ್ಥೆ ಮಾಡಿಕೊಂಡರು. ಸಸಿಗೆ ತಿಂಗಳಾಗುತ್ತಿದ್ದಂತೆ ಮೊಗ್ಗಾಗಿ ಹೂವು ಬಿಡಲಾರಂಭಿಸಿದವು. ಪ್ರತಿ ತಿಂಗಳು ಕೊಟ್ಟಿಗೆ ಗೊಬ್ಬರ ನೀಡಿದರು. ಈಗ ನಿತ್ಯ ಸರಾಸರಿ 3 ಕೆಜಿ ಹೂವು ದೊರೆಯುತ್ತಿದೆ.
ಲಾಭಕ್ಕೆ ಮೋಸವಿಲ್ಲ
ಪ್ರತಿ ಕೆಜಿಗೆ ಸರಾಸರಿ ರು. 50ರಂತೆ ಧಾರಣೆ ದೊರೆಯುತ್ತದೆ. ಅರ್ಧ ಎಕರೆ ಹೊಲದಿಂದ ತಿಂಗಳಿಗೆ ಸರಾಸರಿ 90 ಕೆಜಿ ಹೂವು ಮಾರುತ್ತಾರೆ. ಇದರಿಂದ ರು. 4500 ಆದಾಯ ದೊರೆಯುತ್ತದೆ. ಗೊಬ್ಬರ, ನೀರಾವರಿ, ಹೂವು ಕೀಳುವಿಕೆ ಹೀಗೆ ಎಲ್ಲ ಬಗೆಯಲ್ಲಿ ಲೆಕ್ಕ ಹಾಕಿದರೂ ತಿಂಗಳಿಗೆ ರು. 400ರಿಂದ ರು. 500 ಖರ್ಚು ಬರುತ್ತೆ. ತಿಂಗಳಿಗೆ ಸರಾಸರಿ 3500 ಲಾಭ ದೊರಕುತ್ತಿದೆ. ಹಾಲೇಶ್ (ಮೊ. 9741838951) ಉಳಿದ ಜಮೀನಿನಲ್ಲಿ ಮೆಕ್ಕೆಜೋಳ, ಸೌತೆ, ಬೆಂಡೆ ಬೆಳೆಯುತ್ತಾರೆ.
-ಎನ್.ಡಿ. ಹೆಗಡೆ ಆನಂದಪುರಂ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


