ಕೃಷಿ-ಪರಿಸರ

ಹುಣಸೆಗೆ ಜಲದೆಸೆ

ಹುಣಸೆಗೆ ಜಲದೆಸೆ
Published On :

2004ರಲ್ಲಿ ರಾಜ್ಯದೆಲ್ಲೆಡೆ ಬಿರು ಬರಗಾಲ. ಅದರ ಬಿಸಿ ತುಮಕೂರು ತಾಲೂಕಿನ ಹಲವು ಹಳ್ಳಿಗಳಿಗೆ ಜೋರಾಗಿಯೇ ತಟ್ಟಿತ್ತು. ಕುಸಿದ ಅಂತರ್ಜಲದಿಂದಾಗಿ ಅಡಕೆ, ತೆಂಗುಗಳು ಒಣಗಿದವು. ಅದು ಸಹಜವೇ ಆಗಿತ್ತು. ಆದರೆ, ಎಂಥ ಬರಕ್ಕೂ ತಡೆಯುತ್ತವೆ ಎನ್ನಲಾಗುವ ಹುಣಸೆ ಮರಗಳೂ ಬರಡಾದವು. ಎಲೆಯುದುರಿಸಿ ಬೋಳಾದವು. ಹೂ ಹಿಡಿಯಲಿಲ್ಲ, ಕಾಯಿ ಬಿಡಲಿಲ್ಲ. ಕಂಗಾಲಾದ ರೈತರು ಹುಣಸೆ ಮರ ಕಡಿದು ಮಾರಲಾರಂಭಿಸಿದರು.
ನಂದಿಹಳ್ಳಿಯ ರಂಗನಾಥ್ 150 ಹುಣಸೆಮರಗಳ ಒಡೆಯ. ಹಲವು ವರ್ಷ ಉತ್ತಮ ಫಸಲನ್ನೆ ನೀಡುತ್ತಿದವು. ಆದರೆ, 2004ರ ಬರಗಾಲದ ನಂತರ ಬಹುತೇಕ ಮರಗಳು ಎಲೆಯುದುರಿಸಿ ಮಂಕಾದವು. ಫಸಲು ತೀರಾ ಕೆಳಮಟ್ಟಕ್ಕಿಳಿಯಿತು. ಹಾಗಾಗಿ 70 ಮರಗಳನ್ನು ಮಾರಿಬಿಟ್ಟರು. ಉಳಿದ 80 ಮರಗಳು ಹಾಗೂ- ಹೀಗೂ ಜೀವ ಉಳಿಸಿಕೊಂಡಿದ್ದವು. 2007- 08ರ ನಂತರ ಈ ಗ್ರಾಮದಲ್ಲಿ ಅನುಷ್ಠಾನಗೊಳಿಸಿದ ಜಲಸಂರಕ್ಷಣೆ ಚಟುವಟಿಕೆಗಳು ಹುಣಸೆ ಮರಗಳ ಹಣೆಬರಹ ಬದಲಾಯಿಸಿವೆ. ಗ್ರಾಮದ ಎಲ್ಲರ ಹೊಲಗಳಲ್ಲಿ ಬದುಗಳು ಹಾಗೂ ಇಂಗುಹೊಂಡಗಳನ್ನು ಸರಣಿಯೋಪಾದಿಯಲ್ಲಿ ಮಾಡಿದ ಪರಿಣಾಮ 400 ಅಡಿಗಿಳಿದಿದ್ದ ಅಂತರ್ಜಲ 200 ಅಡಿ ಮೇಲಕ್ಕೇರಿತು. ಹುಣಸೆ ಮರಗಳ ಕೊಂಬೆ- ಕೊಂಬೆಗಳಲ್ಲೂ ಕಾಯಿಗಳು ತೊನೆದಾಡಿದವು. ಇನ್ನೊಂದ್ ವರ್ಷ ತಡ ಆಗಿದ್ರೂ ಎಲ್ಲ ಮರಗಳನ್ನ ಮಾರಾಕ್ತಿದ್ದೆ ಎನ್ನುವ ರಂಗನಾಥ್ 70 ಮರಗಳನ್ನು ಮಾರಿದ್ದರ ಬಗ್ಗೆ ಪಶ್ಚಾತ್ತಾಪ ಪಡುತ್ತಾರೆ. ಇದೇ ಗ್ರಾಮದ ಸಿದ್ದಮ್ಮನವರ ಮೂರು ಹುಣಸೆ ಮರಗಳೂ ಫಸಲು ನೀಡುತ್ತಿವೆ. ಇವುಗಳ ಮೇಲೇ ಅವಲಂಬಿತವಾಗಿರುವ ಈಕೆಯ ಬದುಕು ಈಗ ತುಸು ನಿರಾಳ. ಹಾಗೆಯೇ ಬಾದೆಪ್ಪನವರಿಗೆ 50 ಹುಣಸೆ ಮರಗಳಿದ್ದವು, ಅವು ಸರಿಯಾಗಿ ಫಸಲು ಬಿಡುತ್ತಿರಲಿಲ್ಲ. ಕೆಲವು ಎರಡು ವರ್ಷಕ್ಕೊಮ್ಮೆ ಫಸಲು ಬಿಟ್ಟರೆ ಇನ್ನು ಕೆಲವು ರೋಗಪೀಡಿತವಾಗಿದ್ದವು. ಹಾಗಾಗಿ 30 ಮರ ಕಡಿದು ಹಾಕಿದರು. ಆದರೆ, ನೀರಿನ ಸೆಲೆ ಅಧಿಕವಾದ ನಂತರ ಉಳಿದ ಹುಣಸೆ ಮರಗಳು ಪ್ರತಿವರ್ಷ ನಿರಂತರ ಫಸಲು ನೀಡುತ್ತಿವೆ.
ನಂದಿಹಳ್ಳಿಯ ಅಕ್ಕಪಕ್ಕದ ನಾಲ್ಕೈದು ಹಳ್ಳಿಗಳಲ್ಲೂ ಜಲಸಂರಕ್ಷಣೆ ಚಟುವಟಿಕೆಗಳು ನಡೆದಿದ್ದು, ಅಲ್ಲಿಯೂ ಇದೇ ರೀತಿಯ ಫಲಿತಾಂಶವಿದೆ. ಯಾವ ಹಳ್ಳಿಗೆ ಹೋದರೂ ಜನ ಹುಣಸೆ ಮರಗಳಲ್ಲಿ ಇಳುವರಿ ಹೆಚ್ಚಾಗಿರುವ ಬಗ್ಗೆ ಹೇಳಲು ಮರೆಯುವುದಿಲ್ಲ. ಗಿಡದಾಗಲಹಳ್ಳಿ, ಆವಿನಮಡು, ಗೊಲ್ಲರಹಟ್ಟಿ, ರಂಗಾಪುರ ಮುಂತಾದ ಅನೇಕ ಗ್ರಾಮಗಳಲ್ಲಿ ಇದನ್ನು ಗಮನಿಸಬಹುದು. ಕೆಲವು ರೈತರ ಪ್ರಕಾರ ಶೇ.30ರಷ್ಟು ಹುಣಸೆ ಫಸಲು ಅಧಿಕವಾಗಿದೆಯಂತೆ. ಹುಣಸೆ ಮರಗಳಿಗೆ ಈ ಪ್ರದೇಶ ಹೆಸರುವಾಸಿ. ಖುಷ್ಕಿ, ನೀರಾವರಿ, ರಸ್ತೆ ಬದಿ, ಕುರುಚಲು ಕಾಡು ಹಾಗೂ ಸರ್ಕಾರಿ ಜಮೀನುಗಳಲ್ಲೂ ಹುಣಸೆ ಮರಗಳಿವೆ. ರೈತರಿಗೆ ಯಾವ ಖರ್ಚೂ ಇಲ್ಲದೆ ಆದಾಯ.  
ಗೊಲ್ಲರಹಟ್ಟಿಯ ಯುವ ಕೃಷಿಕರಾದ ದೇವರಾಜು, ಕಲ್ಯಾಣ್‌ಕುಮಾರ್, ತಿಮ್ಮಣ್ಣ ಮುಂತಾದವರು ಹುಣಸೆ ಫಸಲು ಹೆಚ್ಚಿರುವುದನ್ನು ನಿಚ್ಚಳವಾಗಿ ಗುರುತಿಸಿದ್ದಾರೆ. ತಿಮಣ್ಣನವರಿಗೆ 50 ತಾತನ ಕಾಲದ ಮರಗಳಿವೆ. ಇವು ಮೊದಲೆಲ್ಲಾ ಎರಡು ವರ್ಷಕ್ಕೊಮ್ಮೆ ಮಾತ್ರ ಫಸಲು ನೀಡುತ್ತಿದ್ದವು. ಇದು ಹುಣಸೆ ಮರಗಳ ಗುಣಲಕ್ಷಣವೆಂದೇ ಇವರು ಭಾವಿಸಿದ್ದರು. ಆದರೆ, ಈ ಮೂರು ವರ್ಷಗಳಿಂದ ಪ್ರತಿವರ್ಷ ಫಸಲು ನೀಡುತ್ತಿವೆ. ಮೊದಲು 6- 7 ಕ್ವಿಂಟಲ್ ಹುಣಸೆ ಹಣ್ಣು ಇಳುವರಿ ಬರುತ್ತಿದ್ದರೆ ಈಗ ಆ ಪ್ರಮಾಣ 9-10 ಕ್ವಿಂಟಲ್‌ಗೆ ಏರಿದೆ. ಇದೇ ಗ್ರಾಮದ ದೊಡ್ಡರಾಮಯ್ಯ ಎಂಬವರು ಮುಂಚೆ 8- 10 ಕ್ವಿಂಟಲ್ ಇಳುವರಿ ಪಡೆಯುತ್ತಿದ್ದವರು ಈಗ 15- 20 ಕ್ವಿಂಟಲ್ ಪಡೆಯುತ್ತಿದ್ದಾರೆ. ತಮ್ಮ ಮರಗಳನ್ನು ಮುಂಚೆ ಇವರು 20- 30 ಸಾವಿರಗಳಿಗೆ ಪಚ್ಚ ಮಾರಿಗೆ (ಲೀಸ್) ಕೊಟ್ಟುಬಿಡುತ್ತಿದ್ದರು. ಯಾವಾಗ ಇಳುವರಿ ಜಾಸ್ತಿಯಾಯಿತೋ ಈಗ ಅವರೇ ಕಾಯಿ ಕೀಳಿಸಿ ಹಣ್ಣು-ಬೀಜ ಪ್ರತ್ಯೇಕಗೊಳಿಸಿ ಮಾರುತ್ತಿದ್ದಾರೆ. 'ಮದ್ಲೆಲ್ಲಾ ನಮ್ಗೆ ಒಂದ್ ಕ್ವಿಂಟಲ್ ಬಂದ್ರೆ ಹೆಚ್ಚು, ಈಗ ಇಳುವರಿ ಡಬ್ಬಲ್ಲಾಗಿದೆ' ಎನ್ನುತ್ತಾರೆ ಕಲ್ಯಾಣ್‌ಕುಮಾರ್.
ಹುಣಸೆ ಫಸಲು ಜಾಸ್ತಿಯಾಗಿದ್ದರಿಂದ ಹಳ್ಳಿ ಜನರಿಗೆ ಕೆಲಸವೂ ಲಭ್ಯವಾದಂತಾಗಿದೆ. ಕಾಯಿ ಕೆಡವುವುದು, ಸಿಪ್ಪೆ ಬೇರ್ಪಡಿಸುವುದು, ಹಣ್ಣನ್ನು ಕುಟ್ಟಿ ಬೀಜ ಬೇರ್ಪಡಿಸುವುದು, ಬಿಳಿಹುಣಸೆ ಹಣ್ಣನ್ನಾಗಿ ಪರಿವರ್ತಿಸುವುದು, ಬಿಲ್ಲೆಗಳನ್ನಾಗಿ ಮಾಡುವುದು ಮುಂತಾದ ಅನೇಕ ಹಂತಗಳಲ್ಲಿ ಯಥೇಚ್ಛ ಕೆಲಸಗಳು ಲಭ್ಯವಾಗುತ್ತಿವೆ. ಎರಡರಿಂದ ಮೂರು ತಿಂಗಳು ಈ ಕೆಲಸಗಳು ಲಭ್ಯ. ಹೆಣ್ಣುಮಕ್ಕಳಿಗಂತೂ ತುಂಬಾ ಅನುಕೂಲವಾಗಿದೆ.

= ಮಲ್ಲಿಕಾರ್ಜುನ ಹೊಸಪಾಳ್ಯ
krushikaimara@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.