ಜಲಧೀರ

ಕೊಪ್ಪಳವನ್ನು ರಾಜ್ಯ ಸರ್ಕಾರ 'ಬರಪೀಡಿತ ಜಿಲ್ಲೆ' ಎಂದು ಘೋಷಿಸಿದೆ. ಮಳೆ ಅಭಾವದಿಂದ ಹಿಂಗಾರು ಬೆಳೆಯೂ ಅಷ್ಟು ಹುಲುಸಾಗಿ ಬಂದಿಲ್ಲ. ವಿದ್ಯುತ್ ಕ್ಷಾಮ ಹಾಗೂ ನೀರಿನ ಅಭಾವದಿಂದ ಪಂಪ್‌ಸೆಟ್ ಆಧಾರಿತ ನೀರಾವರಿ ಪ್ರದೇಶವೂ ಬಹುತೇಕ ಪಡಾ ಬಿದ್ದಿದೆ. ಆದರೆ, ಇಲ್ಲೊಬ್ಬರು ಬಿರು ಬೇಸಿಗೆಯಲ್ಲೂ ಸಮಸ್ಯೆ ಆಗದಂತೆ ನೀರಾವರಿ ಮಾಡಿಕೊಂಡಿದ್ದಾರೆ!
ಈ ಸಾಧನೆಯ ಸಾಹಸಿ, ಸಿ.ಎಚ್. ನಾಗರಾಜ್. ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ನಿವಾಸಿಯಾಗಿರುವ ನಾಗರಾಜ್ ಮೂಲತಃ ಆಂಧ್ರದವರು. ಇಲ್ಲಿ ನೆಲೆ ಕಂಡುಕೊಂಡು ಸಾಕಷ್ಟು ವರ್ಷಗಳೇ ಆಗಿರುವುದರಿಂದ ಸ್ಥಳೀಯರೇ ಆಗಿದ್ದಾರೆ. ನಾಗರಾಜ್ ಪರಿಶ್ರಮ ಸುತ್ತಲಿನ ನೂರಾರು ಎಕರೆ ಪ್ರದೇಶದ ರೈತರ ಪಂಪ್‌ಸೆಟ್‌ಗಳಿಗೂ ಗಂಗೆಯನ್ನು ಕರುಣಿಸಿದ್ದಾರೆ. ಬಾವಿ, ಕೊಳವೆ ಬಾವಿಗಳಲ್ಲಿ ಅಂತರ್ಜಲ ಉಕ್ಕಿರುವುದರಿಂದ ಪಾಳು ಬಿದ್ದಿದ್ದ ಪಂಪ್‌ಸೆಟ್‌ಗಳೂ ಮತ್ತೆ ನೀರು ಮೊಗೆದು ಬೆಳೆಗಳಿಗೆ ಉಣಿಸುತ್ತಿವೆ.
ಹಿರೇಸಿಂದೋಗಿ ಬಳಿ ಹಿರೇಹಳ್ಳ ದಡದಲ್ಲಿ ಗುತ್ತಿಗೆ ಆಧಾರದ ಮೇಲೆ ಭೂಮಿ ಉಳುಮೆ ಮಾಡುತ್ತಿರುವ ನಾಗರಾಜ್, ಕಳೆದ ವರ್ಷ ನೀರಿನ ಅಭಾವದಿಂದ ರು. 40 ಲಕ್ಷ ನಷ್ಟ ಅನುಭವಿಸಿದರು. ಆದರೂ ಎದೆಗುಂದದೆ ಪರಿಹಾರಕ್ಕಾಗಿ ಚಿಂತನೆ ನಡೆಸಿದರು. ಹಿರೇಹಳ್ಳದಲ್ಲಿ ಮಳೆಗಾಲ ಮುಗಿಯುವ ಹೊತ್ತಿಗೆ ತಾತ್ಕಾಲಿಕ ಚೆಕ್ ಡ್ಯಾಂ ನಿರ್ಮಿಸಿದರು. ಮರಳು ಚೀಲ ತುಂಬಿ, ತಡೆಗೋಡೆ ಕಟ್ಟಿ, ಹರಿದು ಹೋಗುವ ನೀರನ್ನು ಹಿಡಿದಿಟ್ಟಿದ್ದಾರೆ. ಈಗ ಅಲ್ಲಿ 1.5 ಕಿ.ಮೀ. ನೀರು ನಿಂತಿದೆ. ಇಲ್ಲಿಂದ ಹೊಲಕ್ಕೆ ಪಂಪ್‌ಸೆಟ್ ಮೂಲಕ ನೀರು ಪೂರೈಸುತ್ತಿದ್ದಾರೆ. ಈ ವರ್ಷ ನೀರಿನ ಸಮಸ್ಯೆ ಆಗುವುದಿಲ್ಲ. ಬಿರು ಬೇಸಿಗೆಯಲ್ಲೂ ಯಾವುದೇ ಸಮಸ್ಯೆ ಇಲ್ಲದೆ ಬೆಳೆ ತೆಗೆಯಬಹುದು ಎಂದು ವಿಶ್ವಾಸದಿಂದ ಹೇಳುತ್ತಾರೆ. ಚೆಕ್ ಡ್ಯಾಂಗಾಗಿ ಅವರು ರು. 35 ಸಾವಿರ ಖರ್ಚು ಮಾಡಿದರು. ಒಂದೆರಡು ಬಾರಿ ನೀರಿನ ರಭಸಕ್ಕೆ ಕಟ್ಟೆ ಒಡೆಯದಿದ್ದರೆ ಖರ್ಚು ಇನ್ನೂ ಸಾಕಷ್ಟು ಕಮ್ಮಿಯಾಗಿರುತ್ತಿತ್ತು. ಹರಿದು ಹೋಗುವ ನೀರನ್ನು ತಡೆದು ನಿಲ್ಲಿಸಿದರೆ ಎಷ್ಟು ಅನುಕೂಲ ಎಂಬುದು ಸುತ್ತಲಿನ ರೈತರಿಗೂ ಅರಿವಾಗಿದೆ. ಕೇವಲ ತಮ್ಮ ಹೊಲಕ್ಕೆಂದು ನಾಗರಾಜ್ ಮಾಡಿಕೊಂಡ ವ್ಯವಸ್ಥೆ ಹಿರೇಸಿಂದೋಗಿ, ಬಿಸರಳ್ಳಿ, ಬೂದಿಹಾಳ, ಗೊಂಡಬಾಳ ಗ್ರಾಮಗಳಲ್ಲೂ ಫಲ ನೀಡಿದೆ ಎಂದು ಸ್ಥಳೀಯರು ಹೇಳುತ್ತಾರೆ. <
ಚಿಂತನೆಯ ಚಮತ್ಕಾರ
ಕಳೆದವರ್ಷ ನೀರಿನ ಅಭಾವವಾಗಿ 40 ಲಕ್ಷದ ಬೆಳೆ ಕೈಗೆ ಬರದಂತೆ ಆಯಿತು. ಈ ಬಾರಿ ಅದರಿಂದ ಹೇಗಾದರೂ ಪಾರಾಗಬೇಕು ಎಂದು ಚಿಂತನೆ ಮಾಡಿದಾಗ ತಾತ್ಕಾಲಿಕ ಚೆಕ್ ಡ್ಯಾಂ ಯೋಚನೆ ಹೊಳೆಯಿತು. ಧೈರ್ಯ ಮಾಡಿ, ಹಿರೇಹಳ್ಳಕ್ಕೆ ತಡೆಗೋಡೆ ನಿರ್ಮಾಣ ಮಾಡಿದೆ. ಪರಿಣಾಮ, ನಮಗೆ ಈ ಸಲ ಬೇಸಿಗೆಯಲ್ಲೂ ಸಮಸ್ಯೆಯಾಗದಂತೆ ನೀರು ನಿಂತಿದೆ. ಇದರಿಂದ ಇತರ ರೈತರಿಗೂ ಅನುಕೂಲವಾಗಿದ್ದು ಖುಷಿ ತಂದಿದೆ.
= ಸಿ.ಎಚ್. ನಾಗಾರಾಜ
ಭಾರಿ ಅನುಕೂಲವಾಗಿದೆ
ನಾಗರಾಜ್ ನಿರ್ಮಿಸಿದ ತಡೆಗೋಡೆ ಅವರ ಹೊಲಕ್ಕೆ ಮಾತ್ರವಲ್ಲದೆ, ಇತರರಿಗೂ ಅನುಕೂಲ ಮಾಡಿಕೊಟ್ಟಿದೆ. ನಾಲ್ಕಾರು ಗ್ರಾಮಗಳ ಕುಡಿವ ನೀರಿನ ಸಮಸ್ಯೆಯನ್ನೂ ನೀಗಿಸಿದೆ. ಇದು ನಿಜಕ್ಕೂ ಶ್ಲಾಘನೀಯ ಕಾರ್ಯ. ಇತರ ರೈತರೂ ಇದೇ ಮಾದರಿಯಲ್ಲಿ ಚಿಂತಿಸಿ, ಕಾರ್ಯಗತಗೊಳಿಸಿದರೆ ಸಮೃದ್ಧಿ ಖಂಡಿತ.
= ಮಹಾಂತೇಶ ಮೈನಳ್ಳಿ ರೈತ
= ಸೋಮರಡ್ಡಿ ಅಳವಂಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


