ಮುಂಡಿಗೆಸರ

ಕೇದಿಗೆ ಹೂವಿನ ಪರಿಮಳ ಯಾರಿಗೆ ಗೊತ್ತಿಲ್ಲ?
ಹೌದು, ತನ್ನ ವಿಶಿಷ್ಟವಾದ ಪರಿಮಳದಿಂದ ಎಲ್ಲರನ್ನೂ ಗಮನಸೆಳೆಯುವ ತಾಕತ್ತು ಇದಕ್ಕಿದೆ. ಹಾಗಾಗಿಯೇ ಅಗರಬತ್ತಿ, ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ.
ಈ ಸಸ್ಯ Pandanus (ಪಂಡಾನಸ್) ಪ್ರಭೇದಕ್ಕೆ ಸೇರಿದೆ. ಪರಿಮಳವಿಲ್ಲದ ಹೂಗೊಂಚಲು ಬಿಡುವ ಕೇದಿಗೆಯಂತೆ ಬೆಳೆಯುವ ಸಹೋದರ ಸಸ್ಯವೇ ಮುಂಡಿಗೆ. ಸಸ್ಯಶಾಸ್ತ್ರೀಯವಾಗಿ Pandanaceae(ಪಂಡಾನಸೆ) ಎಂಬುದು ಇದರ ಕುಟುಂಬದ ಹೆಸರು. ಗಿಡವು 5ರಿಂದ 7 ಮೀ. ಎತ್ತರಕ್ಕೆ ಬೆಳೆಯುತ್ತದೆ. ಇದರ ಎಲೆಗಳು 1 ರಿಂದ 1.5 ಮೀಟರ್‌ನಷ್ಟು ಉದ್ದವಾಗಿದ್ದು, ಅನಾನಸ್ ಗಿಡದ ಎಲೆಯನ್ನೇ ಹೋಲುತ್ತದೆ.
ಎಲ್ಲಿವೆ ಕೇದಿಗೆಯ ಹಿಂಡು?
ಗದ್ದೆಯ ಬದುವಿನ ಮೇಲೆ, ಹಳ್ಳದ ಇಕ್ಕೆಲಗಳಲ್ಲಿ, ನದಿಯ ದಡ, ಮರಳಿನಿಂದ ಆವೃತವಾದ ಸಮುದ್ರ ತಟ, ನದಿ ಅಥವಾ ಸಮುದ್ರದಲ್ಲಿನ ದ್ವೀಪದ ಸುತ್ತ, ಕಾಂಡ್ಲಾ ವನಗಳ ನಡುವೆ, ಕೇದಿಗೆ ಮತ್ತು ಮುಂಡಿಗೆ ಗಿಡಗಳು ಬೆಳೆಯುತ್ತವೆ. ಹೆಚ್ಚಾಗಿ ನೀರಿನ ಮೂಲಗಳ ಬಳಿ ಇದು ಚೆನ್ನಾಗಿ ಬೆಳೆಯುತ್ತದೆ. ಕೇವಲ ಸಿಹಿ ನೀರಿನಲ್ಲದೆ ಉಪ್ಪು ನೀರಲ್ಲೂ ಕಂಡುಬರುತ್ತವೆ.
ಮಣ್ಣಿನ ಸವಕಳಿ ತಡೆ
ಅತ್ಯಂತ ವೇಗವಾಗಿ ಬೆಳೆಯುವ ಈ ಸಸ್ಯದ ಬೇರುಗಳು ಕಾಂಡದ ಕೆಳಭಾಗದಿಂದ ಬಂದು ಬಲಿಷ್ಠವಾಗಿ ಬೆಳೆಯುತ್ತದೆ. ಈ ಬೇರುಗಳು ಸ್ವಲ್ಪ ವಕ್ರವಾಗಿ ಬೆಳೆಯುವುದರಿಂದ ಇದನ್ನು stilt root (ಸ್ಟಿಲ್ಟ್ ರೂಟ್)ಗಳು ಎಂದು ಕರೆಯುತ್ತಾರೆ. ಬೇರು ಮಣ್ಣಿನಲ್ಲಿ ಬಲೆಯಂತೆ ಹರಡಿ ಮಣ್ಣಿನ ಸವಕಳಿ ತಪ್ಪಿಸುತ್ತವೆ. ಸಮುದ್ರ ದಡದಲ್ಲಿ ಇದನ್ನು ಹೆಚ್ಚಾಗಿ ಬೆಳೆದರೆ ಮಳೆಗಾಲದಲ್ಲಿ ಉಂಟಾಗುವ ಕಡಲ್ಕೊರೆತ ತಡೆಯಬಹುದು. 15- 20 ವರ್ಷಗಳ ಹಿಂದೆ ಕೇದಿಗೆ ಅಥವಾ ಮುಂಡಿಗೆ ಗಿಡದ ಬೆಳೆದ ಎಲೆ ಕತ್ತರಿಸಿ ಒಣಗಿಸಿ ಅದರಿಂದ ಚಾಪೆ, ಬುಟ್ಟಿ ತಯಾರಿಸುತ್ತಿದ್ದರು. ಆದರೆ, ಈಗೀಗ ಪ್ಲಾಸ್ಟಿಕ್ ಚಾಪೆಯ ಬಳಕೆಯಿಂದ, ನುರಿತ ಕುಶಲಕರ್ಮಿಗಳ ಕೊರತೆಯಿಂದ ಇದರ ಎಲೆಯಿಂದ ತಯಾರಿಸಿದ ಬುಟ್ಟಿ, ಚಾಪೆಗಳು ಕಣ್ಮರೆಯಾಗಿವೆ.
ಕೀಟ ನಿಯಂತ್ರಣ
ಹಲವು ಕಡೆ ಸಂಕ್ರಾಂತಿಯ ದಿನ ಕೇದಿಗೆ, ಮುಂಡಿಗೆ ಗಿಡದ ಕಾಂಡವನ್ನು ಬತ್ತದ ಗದ್ದೆ, ಗೊಬ್ಬರ ಗುಂಡಿಯಲ್ಲಿ ನೆಡುವ ಸಂಪ್ರದಾಯವಿದೆ. ಇದು ಕೇವಲ ಧಾರ್ಮಿಕ ಹಿನ್ನೆಲೆ ಹೊಂದಿರದೆ ವೈಜ್ಞಾನಿಕ ಮಹತ್ವ ಪಡೆದಿದೆ. ಏಕೆಂದರೆ ಈ ಸಮಯದಲ್ಲಿ ಬತ್ತದ ಗದ್ದೆಗಳಿಗೆ ಕೀಟ ಹಾವಳಿ ಜಾಸ್ತಿ. ಕೀಟ ತಿನ್ನಲು ಬರುವ ಪಕ್ಷಿಗಳು ಕೇದಿಗೆ ಅಥವಾ ಮುಂಡಿಗೆ ಗಿಡಗಳ ಮೇಲೆ ಕುಳಿತು ಕೀಟ ತಿನ್ನುತ್ತವೆ.
ಜೀವಿಗಳ ಆವಾಸ ಸ್ಥಾನ
ಕೇದಿಗೆ, ಮುಂಡಿಗೆಯ ಹೂಗೊಂಚಲು ಬಿಟ್ಟಾಗ ಕೀಟಗಳು ಅದನ್ನು ಮುತ್ತುತ್ತವೆ. ಅವನ್ನು ತಿನ್ನಲು ಬರುವ ಪಕ್ಷಿಗಳು ಸಂತಾನಾಭಿವೃದ್ಧಿಗಾಗಿ ಗಿಡದ ಮೇಲೆ ಗೂಡು ಕಟ್ಟುತ್ತವೆ. ಅವುಗಳ ಮೊಟ್ಟೆ ತಿನ್ನಲು ಸರ್ಪ, ಕೇರೆ, ಮರಗೌರಿ ಹಾವು ಬರುತ್ತವೆ. ಮುಂಗುಸಿ ಮತ್ತು ಕೆಲವು ದೊಡ್ಡ ಪಕ್ಷಿಗಳು ಹಾವುಗಳನ್ನು ಬೇಟೆಯಾಡುತ್ತವೆ. ಆದ್ದರಿಂದ ಕೇದಿಗೆ, ಮುಂಡಿಗೆ ಗಿಡಗಳಲ್ಲಿ ಆಹಾರ ಸರಪಳಿಯೇ ಇದೆ. ಇದರ ಜತೆಗೆ ಹುಂಡಗೋಳಿ, ಜಕಾನಾ, ವಿವಿಧ ಬಗೆಯ ಕೊಕ್ಕರೆಗಳು, ಪಿಟ್ ವೈಪರ್, ರಸಲ್ ವೈಪರ್, ಹಾರುವ ಹಾವುಗಳು ಈ ಆವಾಸ ಸ್ಥಾನಗಳಲ್ಲಿ ಕಾಣಸಿಗುತ್ತವೆ. ಹೀಗೆ ಕೇದಿಗೆ ಮತ್ತು ಮುಂಡಿಗೆಯ ಹಿಂಡು ವಿವಿಧ ಜೀವಿಗಳ ಆವಾಸ ಸ್ಥಾನವಾಗಿಯೂ ಪ್ರಾಮುಖ್ಯತೆ ಹೊಂದಿವೆ.
= ಪ್ರೊ. ಶಿವಾನಂದ ಎಸ್. ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


